Loading Events

« All Events

  • This event has passed.

ತ್ರಿವೇಣಿ

September 1

೦೧..೧೯೨೮ ೨೯..೧೯೬೩ ಮನುಷ್ಯನ ಆಂತರಿಕ ಸ್ತರದಲ್ಲಿ ನಡೆಯುವ ಮನೋವಿಶ್ಲೇಷಣೆಯ ಕ್ರಿಯೆಗಳನ್ನು ವೈಜ್ಞಾನಿಕವಾಗಿ ಚರ್ಚಿಸಿ, ಅದಕ್ಕೊಂದು ಕಥಾರೂಪ ನೀಡಿ, ವಿಭಿನ್ನ ರೀತಿಯ ಕಾದಂಬರಿಗಳನ್ನು ರಚಿಸಿ ಸಾಹಿತ್ಯಲೋಕದಲ್ಲಿ ವಿಶಿಷ್ಟವಾದುದನ್ನೂ ಸಾಧಿಸಿ ತೋರಿಸಿದ ತ್ರಿವೇಣಿ ಕಾವ್ಯನಾಮದ (ಮನೆಯವರು ನಾಮಕರಣ ಮಾಡಿದ್ದು ಭಾಗೀರಥಿ, ಶಾಲೆಗೆ ಸೇರುವಾಗ ಆದದ್ದು ಅನಸೂಯ, ಮನೆಯವರಿಗೆ ಪ್ರೀತಿಯ ‘ಅಂಚು’) ಕಾದಂಬರಿಕಾರ್ತಿಯವರು ಹುಟ್ಟಿದ್ದು ಮೈಸೂರಿನಲ್ಲಿ ೧೯೨೮ ರ ಸೆಪ್ಟಂಬರ್ ೧ ರಂದು. ತಂದೆ ಬಿ.ಎಂ. ಕೃಷ್ಣಸ್ವಾಮಿಯವರು ಮಂಡ್ಯದಲ್ಲಿ ಪ್ರಸಿದ್ಧ ವಕೀಲರು, ತಾಯಿ ತಂಗಮ್ಮ. ಇವರ ಸಾಹಿತ್ಯದ ವಂಶವೂ ಬಹುದೊಡ್ಡದೆ, ಬಿ.ಎಂ.ಶ್ರೀಯವರು ತ್ರಿವೇಣಿಯವರ ದೊಡ್ಡಪ್ಪ, ಹೆಸರಾಂತ ಕಾದಂಬರಿಕಾರ್ತಿ ಆರ್ಯಾಂಬ ಪಟ್ಟಾಭಿ ಇವರ ತಂಗಿ. ಪ್ರಖ್ಯಾತ ಕಾದಂಬರಿಕಾರ್ತಿ ವಾಣಿ (ಬಿ.ಎನ್‌. ಸುಬ್ಬಮ್ಮ)  ಇವರ ಚಿಕ್ಕಮ್ಮ. ಶ್ರೇಷ್ಠ ಕತೆಗಾರ ಅಶ್ವತ್ಥರವರು, ಪತಿ ಶಂಕರ್ ರವರ ಭಾವ. ಹೀಗೆ ವಂಶದ ಹಲವಾರು ಮಂದಿ ಸಾಹಿತ್ಯಕ್ಕೆ ವಿಶಿಷ್ಟ ರೀತಿಯ ಕೊಡುಗೆ ನೀಡಿದವರೆ. ಪ್ರಾರಂಭಿಕ ಶಿಕ್ಷಣ ಮಂಡ್ಯದಲ್ಲಿ. ಮೈಸೂರಿನಲ್ಲಿ ಕಾಲೇಜಿಗೆ ಸೇರಿ ಪಡೆದ ಬಿ.ಎ. ಪದವಿ. ಪದವಿಯ ನಂತರ ಮಂಡ್ಯದ ಮಾಧ್ಯಮಿಕ ಶಾಲೆಯಲ್ಲಿ ಕೆಲಕಾಲ ಅಧ್ಯಾಪಕಿಯಾಗಿ. ಇದೂ ಬೇಸರವೆನಿಸಿ ರಾಜೀನಾಮೆ ನೀಡಿ, ಚಿಕ್ಕಂದಿನಿಂದಲೂ ರೂಢಿಸಿಕೊಂಡಿದ್ದ ಓದಿನ ಹವ್ಯಾಸದ ಕಡೆಗೆ ಬೆಳೆದ ಒಲವು-ಬರೆದದ್ದು ಹಲವಾರು ಕಥೆಗಳಾದರೂ ತಾಯಿಯ ದೃಷ್ಟಿಗೆ ಬೀಳುವವರೆವಿಗೂ ಅಜ್ಞಾತವಾಗಿದ್ದು, ತಾಯಿಯ ಒತ್ತಾಸೆಯಿಂದ. ಪತ್ರಿಕೆಗೆ ಕಳುಹಿಸಿದ ಕಥೆಗಳು ಪ್ರಕಟಗೊಂಡಾಗ ಹೇಳತೀರದ ಆನಂದ. ಮೈಸೂರಿನ ಶಾರದಾ ವಿಲಾಸ್‌ ಕಾಲೇಜಿನ ಇಂಗ್ಲಿಷ್‌ ಅಧ್ಯಾಪಕರಾಗಿದ್ದ ಎನ್‌.ಎಸ್‌. ಶಂಕರ್ ರವರನ್ನೂ ವಿವಾಹವಾದ ನಂತರ ಇವರ ಸಾಹಿತ್ಯರಚನೆಯ ಎರಡನೆಯ ಘಟ್ಟ. ಪತಿಯ ಪ್ರೇರಣೆ, ಪ್ರೋತ್ಸಾಹ, ಸಹಕಾರದಿಂದ ಬರೆಯತೊಡಗಿದ್ದು ಕಾದಂಬರಿಗಳನ್ನು. ಮನಸ್ಸಿನಾಳದಲ್ಲಿ ಮೂಡುವ ತಾಕಲಾಟದ ಭಾವನೆಗಳನ್ನೂ ನವಿರಾಗಿ ಚಿತ್ರಿಸಿ ಬರೆದ ಮೊದಲ ಕಾದಂಬರಿ ಹೂವು ಹಣ್ಣು. ನಂತರ ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರದಿಂದ ಹಿಡಿದು ಬೆಳ್ಳಿಮೋಡದವರೆಗೆ ಬರೆದದ್ದು ೨೧ ಕಾದಂಬರಿಗಳು. ಕಾದಂಬರಿ ಎಂದರೆ ಮನರಂಕವಾಗಿರುವುದರ ಜೊತೆಗೆ ಸಾಮಾಜಿಕ ಶಿಕ್ಷಣವನ್ನೂ ಒಳಗೊಂಡಿರಬೇಕೆಂಬ ಅಪೇಕ್ಷೆಯಿಂದ ರಚಿತವಾದವುಗಳು. ಬರೆದ ನಲವತ್ತೊಂದು ಕಥೆಗಳು ‘ಹೆಂಡತಿಯ ಹೆಸರು’ ‘ಎರಡು ಮನಸ್ಸು’ ಮತ್ತು ‘ಸಮಸ್ಯೆಯ ಮಗು’ ಮುಂತಾದ ಸಂಕಲನಗಳಲ್ಲಿ ಸೇರಿವೆ. ಹುಡುಗಿಯಾಗಿದ್ದಾಗಿನಿಂದಲೂ ಅಸ್ತಮಾ ಖಾಯಿಲೆಯಿಂದ ನರಳುತಿದ್ದ ತ್ರಿವೇಣಿಯವರಿಗೆ ಮದುವೆಯಾಗಿ ಹತ್ತು ವರುಷಗಳಾದರೂ ಸಂತಾನ ಭಾಗ್ಯವಿಲ್ಲದ್ದು ಮತ್ತೊಂದು ಕೊರಗಾಗಿತ್ತು. ತನ್ನದೇ ಮಗು ಹೊಂದಬೇಕು, ತಾಯಿಯಾಗಿ ಎಲ್ಲ ಸುಖವನ್ನೂ ಅನುಭವಿಸಬೇಕು, ವಿದೇಶ ಪ್ರವಾಸ ಮಾಡಿದ ಅನುಭವದಿಂದ ಕೃತಿ ರಚಿಸಬೇಕು ಮುಂತಾದ ಆಸೆಗಳನ್ನೂ ಮನಸ್ಸಿನಲ್ಲಿ ತುಂಬಿಕೊಂಡಿದ್ದರು. ಹನ್ನೊಂದು ವರ್ಷಗಳ ಬಳಿಕ ಇವರ ತಾಯ್ತನದ ಬಯಕೆ ಈಡೇರಿದರೂ ಹತ್ತು ದಿವಸಗಳ ಕಾಲ ತಾಯ್ತನವನ್ನನುಭವಿಸಿ, ಅಪಾರವಾದ ಸ್ನೇಹಿತರು , ಓದುಗರು, ಬಂಧುಬಳಗವನ್ನೆಲ್ಲಾ ತೊರೆದು ಹೊರಟೇ ಹೋದರು. ಅವರು ಬರೆದ ಬೆಳ್ಳಿಮೋಡ, ಶರಪಂಜರ, ಹಣ್ಣಲೆ ಚಿಗುರಿದಾಗ ಕಾದಂಬರಿಗಳು ಓದುಗರನ್ನೂ ಆಕರ್ಷಿಸಿದ್ದಲ್ಲದೆ ಚಲನಚಿತ್ರವಾಗಿಯೂ ಅಪಾರ ಜನಮನ್ನಣೆ ಗಳಿಸಿತು. ತ್ರಿವೇಣಿಯವರ ಕಾದಂಬರಿಗಳು ಎಂದಿಗೂ ಹಳತಾಗಿಲ್ಲವೆನ್ನುವುದಕ್ಕೆ ಹಲವಾರು ಮುದ್ರಣ ಕಂಡು ಮಾರಾಟದ ದಾಖಲೆಯನ್ನು ನಿರ್ಮಿಸುತ್ತಿರುವುದೇ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Details

Date:
September 1
Event Category: