ತ.ಸು. ಶಾಮರಾವ್

Home/Birthday/ತ.ಸು. ಶಾಮರಾವ್
Loading Events
This event has passed.

೧೨-೬-೧೯೦೬ ೨೧-೮-೧೯೯೮ ಮಾನವತಾವಾದಿ, ಉತ್ತಮ ಅಧ್ಯಾಪಕರೆಂದು ಹೆಸರು ಗಳಿಸಿದ್ದ ಶಾಮರಾಯರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ತಂದೆ ಸುಬ್ಬಣ್ಣ, ತಾಯಿ ಲಕ್ಷ್ಮೀದೇವಮ್ಮ. ತಂದೆತಾಯಿಗಳು ಅತಿಥಿ ಸತ್ಕಾರಕ್ಕೆ ಎಂದೂ ಬೇಸರಿಸದವರು. ತ.ಸು.ಶಾ. ಕೂಡಾ ಇದನ್ನೇ ಪಾಲಿಸಿಕೊಂಡು ಬಂದವರು. ಪ್ರಾಥಮಿಕ ಶಿಕ್ಷಣ ಚೆಳ್ಳೆಕೆರೆ, ಮೂಲ್ಕಿ ಪರೀಕ್ಷೆ ಮಲೆ ಬೆನ್ನೂರಿನಲ್ಲಿ ಪಾಸು ಮಾಡಿ ಪ್ರೈಮರಿಶಾಲಾ ಅಧ್ಯಾಪಕರಾದರು. ಪುನಃ ಮಾಧ್ಯಮಿಕ ಶಿಕ್ಷಣ ಚಿತ್ರದುರ್ಗ ಮತ್ತು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಿಂದ ಮ್ಯಾಟ್ರಿಕ್ ಪರೀಕ್ಷೆ ಪಾಸು ಮಾಡಿ ದಾವಣಗೆರೆ ಹತ್ತಿರದ ಆಲೂರು ಎಂಬಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದರು. ಓದಿನ ಕಡೆ ವಿಪರೀತ ಹಂಬಲ. ಪುನಃ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್‌ನಲ್ಲಿ ರ‍್ಯಾಂಕ್ ಗಳಿಸಿ ಚಿತ್ರದುರ್ಗದ ಮಾಧ್ಯಮಿಕ ಶಾಲಾ ಶಿಕ್ಷಕರಾದರು. ಕೆಲಕಾಲದ ನಂತರ ಮತ್ತೆ ಮೈಸೂರಿಗೆ ಬಂದು ಬಿ.ಎಂ.ಶ್ರೀ, ಡಿ.ಎಲ್.ಎನ್, ಕುವೆಂಪು, ತೀನಂಶ್ರೀಯವರ ಶಿಷ್ಯರಾಗಿ ಬಿ.ಎ. (ಆನರ್ಸ್) ಪದವಿಯನ್ನು ಸ್ವರ್ಣಪದಕದೊಂದಿಗೆ ಪಡೆದು ಕಾಲೇಜು ಅಧ್ಯಾಪಕರಾಗಿ ಕೆಲಸ ಮಾಡುತ್ತಾ ೧೯೪೪ರಲ್ಲಿ ಕುವೆಂಪು ಮಾರ್ಗದರ್ಶನದಲ್ಲಿ ‘ಕನ್ನಡ ನಾಟಕ’ ಪ್ರಬಂಧ ಮಂಡಿಸಿ ಎಂ.ಎ. ಪದವಿಗಳಿಸಿ ಪ್ರಾಧ್ಯಾಪಕರಾದರು. ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕರಾಗಿ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಬಿ.ಎ. ವಿದ್ಯಾರ್ಥಿಯಾಗಿದ್ದಾಗಲೇ ಕೃತಿ ರಚನೆ. ವ್ಯಾಕರಣ-ಕೋಶಕ್ಕೆ ಸಂಬಂಸಿದ ಐದು ಕೃತಿಗಳು. ಕನ್ನಡ ನಾಟಕ, ಕನ್ನಡ ಸಾಹಿತ್ಯ ಚರಿತ್ರೆ, ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ, ಪಂಪ, ಮುದ್ದಣ, ರತ್ನಾಕರವರ್ಣಿ ಮುಂತಾದ ಸಾಹಿತ್ಯ ಚರಿತ್ರೆ, ವಿಮರ್ಶಾ ಗ್ರಂಥಗಳು. ಅಜಿತ ಪುರಾಣ ಸಂಗ್ರಹ, ಅರಣ್ಯಪರ್ವ ಸಂಗ್ರಹ ಮೊದಲಾದ ಹನ್ನೊಂದು ಕಾವ್ಯ ಸಂಗ್ರಹಗಳು. ಮಂಕನ ಮಡದಿ-ಕಾದಂಬರಿ. ಕಥಾವಲ್ಲರಿ, ಮಹಾವೀರ, ಶಿವಶರಣ ಕಥಾ ರತ್ನಕೋಶ-ಕಥಾ ಸಂಕಲನಗಳೂ ಸೇರಿ ೫೦ ಕೃತಿ ಪ್ರಕಟಿತ. ತಳುಕಿನ ವೆಂಕಣ್ಣಯ್ಯನವರ ಹೆಸರಿನಲ್ಲಿ ಗೆಳೆಯ ಶಂಕರನಾರಾಯಣರೊಡನೆ ಪ್ರಾರಂಭಿಸಿದ್ದು ಗ್ರಂಥ ಪ್ರಕಟಣೆ. ಜಿ.ಎಸ್.ಎಸ್.ರವರ ‘ಸಾಮಗಾನ’ ಮೊದಲ ಪ್ರಕಟಿತ ಕೃತಿ. ವಿದ್ಯಾರ್ಥಿಗಳೆಂದರೆ ತುಂಬಾ ಪ್ರೀತಿ. ಹಲವಾರು ಬಾರಿ ಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಗೆ ಹಣ ಸಹಾಯ. ಸಮಾಜದ ವಿವಿಧ ಸ್ತರಗಳ ವಿದ್ಯಾರ್ಥಿಗಳಿಗೂ ಸಂದ ಸಹಾಯ. ಆಕಾಶದಗಲದಷ್ಟು ಔದಾರ‍್ಯ, ಸಾಗರದಷ್ಟು ಅಗಲದ ಪ್ರೀತಿ ತ.ಸು.ಶಾ. ಮಾನವೀಯತೆ ತುಂಬಿದ ಜೀವ. ಪ್ರಶಸ್ತಿಗಾಗಿ ಇವರೆಂದೂ ಹುಡುಕಿಕೊಂಡು ಹೋದವರಲ್ಲ. ಬಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎನ್.ಎಸ್. ನಾರಾಯಣಶಾಸ್ತ್ರಿ – ೧೯೦೨-೫.೯.೫೫ ಸಿ.ಕೆ. ನಾಗರಾಜರಾವ್ – ೧೯೧೫-೧೦.೪.೯೮ ಎಂ.ಜಿ. ರೇಣುಕಾಪ್ರಸಾದ್ – ೧೯೪೪ ನೆಲೆಮನೆ ದೇವೇಗೌಡ – ೧೯೪೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top