೨೫.೦೨.೧೯೫೩ ಸಲಾಖೆಗೊಂಬೆಯಾಟದ ಕಲೆಗೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟ ದತ್ತಾತ್ರೇಯ ರವರು ಹುಟ್ಟಿದ್ದು ಶೃಂಗೇರಿ ಸಮೀಪದ ಅರಳೀಕಟ್ಟೆ ಎಂಬ ಸ್ಥಳದಲ್ಲಿ. ತಂದೆ ಅರಳೀಕಟ್ಟೆ ರಾಮರಾಯರು, ತಾಯಿ ಲಲಿತಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ., ಬಿ.ಎಡ್., ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ., ಎಂ.ಎಡ್. ಪದವಿ. ವಿದ್ಯಾರ್ಥಿ ದೆಸೆಯಿಂದಲೇ ರಂಗಭೂಮಿಯ ನಂಟು, ಗೊಂಬೆಯಾಟದ ಕಲೆಯ ಬಗ್ಗೆ ಬೆಳೆದ ಆಸಕ್ತಿ. ಸುಮಾರು ೮-೧೦ ಕೆ.ಜಿ. ತೂಗುವ ಗೊಂಬೆಗಳಿಗೆ ಸಲಾಖೆಯಿಂದ ಹತೋಟಿಗೊಳಪಡಿಸಿ ಪೌರಾಣಿಕ ಪ್ರಸಂಗಗಳಿಗೆ ಕರ್ನಾಟಕ ಸಂಗೀತ, ನೃತ್ಯ, ನಾಟಕದ ಲೇಪಹಚ್ಚಿ ಸರಳ ಮಾತುಗಾರಿಕೆಯ ಮೂಲಕ ನೋಡುಗರಿಗೆ ಕಥಾನಕವನ್ನು ಬಿಂಬಿಸುವ ಕಲೆಯಲ್ಲಿ ಅದ್ವಿತೀಯ ಸಾಧನೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಂಪ್ರದಾಯಕ ಕಲೆಗೆ ಸಂದ ಗೌರವ. ಗೊಂಬೆಯಾಟ ಕಲೆಯ ಬಗ್ಗೆ ಅಧಿಕಾರ ಯುತವಾಗಿ ಮಾತನಾಡಬಲ್ಲ ಎಂ.ಆರ್. ರಂಗನಾಥ್ರಾವ್ ರವರಿಂದ ಪ್ರಾಯೋಗಿಕ ಶಿಕ್ಷಣ, ಶ್ರೀರಂಗ ಮಹಾಗುರುವಿನ ಮಾರ್ಗದರ್ಶನದಲ್ಲಿ ಗೊಂಬೆಯಾಟದ ಅಂತರಂಗದ ಸಂಶೋಧನೆ. ಸ್ಥಾಪಿಸಿದ್ದು ‘ಪುತ್ಥಲಿ’ ಕಲಾರಂಗ. ಗೊಂಬೆಯಾಟಕ್ಕೆ ದೇಶ ವಿದೇಶಗಳಿಂದ ಬಂದ ಆಹ್ವಾನ. ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಇಲಾಖಾ ಪ್ರಶಸ್ತಿ, ೨೦೦೩ರಲ್ಲಿ ಸಂದ ರಾಷ್ಟ್ರ ಪ್ರಶಸ್ತಿ, ಶಿಕ್ಷಕರತ್ನ, ಕಲಾರತ್ನ, ಪುತ್ಥಲಿ ಚಕ್ರವರ್ತಿ ಬಿರುದು, ರಾಜ್ಯ ಜಾನಪದ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಅಮೆರಿಕನ್ ಬಯಾಗ್ರಫಿಕಲ್ ಇನ್ಸ್ಟಿಟ್ಯೂಟಿನ ವರ್ಷದ ವ್ಯಕ್ತಿ ಪ್ರಶಸ್ತಿ, ಇಂಟರ್ ನ್ಯಾಷನಲ್ ಬಯಾಗ್ರಫಿಕಲ್ ಸೆಂಟರ್ನ ಮ್ಯಾನ್ ಆಫ್ ದಿ ಮಿಲೇನಿಯಂ, ಮ್ಯಾನ್ ಆಫ್ ದಿ ಇಯರ್ ೧೯೯೯ ಪ್ರಶಸ್ತಿ, ಏಷಿಯಾದ ಹೂ ಈಸ್ ಹೂ, ಜನರಲ್ ನಾಲೆಡ್ಜ್ನಲ್ಲಿ ಹೆಸರು ಸೇರ್ಪಡೆ, ಪೆಸಿಫಿಕ್ ಮ್ಯಾನ್ ಆಫ್ ಆರ್ಟ್ ಅಂಡ್ ಕಲ್ಚರ್ ಮುಂತಾದ ಪ್ರಶಸ್ತಿಗಳು. ಪ್ರಪಂಚದ ಗೊಂಬೆಯಾಟ ಕಲಾವಿದರ ವಿಶ್ವಕೋಶಕ್ಕೆ ಸೇರ್ಪಡೆಯಾದ ಭಾರತೀಯ ಕಲಾವಿದನೆಂಬ ಹೆಗ್ಗಳಿಕೆ. ಸ್ಟಾರ್, ಸ್ಟಾರ್ಪ್ಲಸ್, ಡಿ.ಡಿ., ಇಂಟರ್ ನ್ಯಾಷನಲ್ ಹೋಂ ಟಿ.ವಿ., ನ್ಯಾಷನಲ್, ಇಂಟರ್ ನ್ಯಾಷನಲ್ ನೆಟ್ವರ್ಕ್ಗಳಲ್ಲಿ ಇವರ ಬಗ್ಗೆ ಸಂದರ್ಶನ, ಸಾಕ್ಷ್ಯ ಚಿತ್ರ ಪ್ರಸಾರ. ಗೊಂಬೆಯಾಟ ಕಲೆಗೆ ಸಂದ ಗೌರವ.
* * *