ದಯಾನಂದ ತೊರ್ಕೆ

Home/Birthday/ದಯಾನಂದ ತೊರ್ಕೆ
Loading Events
This event has passed.

೦೮..೧೯೩೮ ಪ್ರಸಿದ್ಧ ಕತೆಗಾರರು, ಕಾದಂಬರಿಕಾರರೂ ಆದ ದಯಾನಂದ ತೊರ್ಕೆಯವರು ಹುಟ್ಟಿದ್ದು ಧಾರವಾಡದಲ್ಲಿ ೧೯೩೮ರ ಜೂನ್‌ ೮ ರಂದು. ತಂದೆ ಪಾಂಡುರಂಗ, ತಾಯಿ ಲಕ್ಷ್ಮೀ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ತೊರ್ಕೆ ಇವರ ಪೂರ್ವಜರ ಸ್ಥಳ. ಇವರ ಹೆಸರಿನ ಜೊತೆಗೂ ಸೇರಿಕೊಂಡಿದೆ. ಪ್ರಾರಂಭಿಕ ಶಿಕ್ಷಣ ಸಿದ್ಧಾಪುರದಲ್ಲಿ. ಬಿ.ಎ. ಪದವಿ ಪಡೆದದ್ದು ಹುಬ್ಬಳ್ಳಿಯ ಕಾಡ ಸಿದ್ದೇಶ್ವರ ಕಾಲೇಜಿನಿಂದ. ಉದ್ಯೋಗಕ್ಕಾಗಿ ಸೇರಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ ಸಹಾಯಕರಾಗಿ. ಸಹಾಯಕ ಕುಲ ಸಚಿವರ ಹುದ್ದೆಗೇರಿ (ASST. REGISTARAR) ೧೯೯೭ ರಲ್ಲಿ ನಿವೃತ್ತಿ. ಹೈಸ್ಕೂಲಿನಲ್ಲಿದ್ದಾಗಲೇ ಅ.ನ.ಕೃ, ತ.ರಾ.ಸು, ಕಟ್ಟೀಮನಿ ಮುಂತಾದವರ ಕಾದಂಬರಿಗಳನ್ನು ಓದಿ ಪಡೆದ ಪ್ರೇರಣೆಯಿಂದ ರಚಿಸಿದ ಹಲವಾರು ಸಣ್ಣಕಥೆ, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಾಗ ಅಚ್ಚರಿ, ಸಂತಸ. ಹಲವಾರು ಸಾಹಿತ್ಯ ಪ್ರಿಯರ ಒತ್ತಾಸೆಯಿಂದ ಬರವಣಿಗೆಯ ಮುಂದುವರಿಕೆ. ಮೊದಲ ಕಾದಂಬರಿ ವಿಮುಕ್ತಿ ಪ್ರಕಟವಾದುದು ೧೯೬೬ ರಲ್ಲಿ. ಆಗ ಕುಲಸಚಿವರಾಗಿದ್ದ ಸದಾಶಿವ ಒಡೆಯರಿಂದ ದೊರೆತ ನಿರಂತರ ಪ್ರೋತ್ಸಾಹದಿಂದ ಬರೆದ ಹಲವಾರು ಕಾದಂಬರಿಗಳು. ಇವರ ಕಾದಂಬರಿಗಳಲ್ಲಿ ತಮ್ಮ ಬದುಕಿನಲ್ಲಿ ಕಂಡುಂಡ ಜೀವನದ ಅನುಭವಗಳೇ ಪಾತ್ರಗಳಾಗಿ ಮೈದಳೆದಿವೆ. ಜೊತೆಗೆ ಪುಣೆಯ ಸೆಂಟ್ರಲ್‌ ಎಕ್ಸೈಸ್‌ನಲ್ಲಿ ಉದ್ಯೋಗಿಯಾಗಿದ್ದ ತಂದೆಯವರ ಅಕಾಲ ಮರಣವೂ ಇವರನ್ನು ಧೃತಿಗೆಡಿಸಿತು. ಆದರೂ ಜೀವನಕ್ಕೆ ಹೆದರದ ಇವರ ತಾಯಿ ನರ್ಸ್ ಟ್ರಯನಿಂಗ್‌ ಪಡೆದು ಸಿದ್ಧಾಪುರ ಸರಕಾರಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿ ಸೇರಿ ಸಂಸಾರವನ್ನೂ ನಿಭಾಯಿಸಿದರು. ತಾಯಿಯು ತಮ್ಮ ಬದುಕಿನಲ್ಲಿ ಅನುಭವಿಸಿದ ಯಾತನೆಗಳು, ತೆಗೆದುಕೊಂಡ ದಿಟ್ಟ ನಿರ್ಧಾರಗಳು, ಜೀವನದಲ್ಲಿ ಎದುರಾದ ಸನ್ನಿವೇಶಗಳನ್ನು ದಿಟ್ಟತನದಿಂದ ಎದುರಿಸಿದ ರೀತಿ, ಇವೆಲ್ಲವೂ ತೊರ್ಕೆಯವರ ಕಾದಂಬರಿಗಳ ಮೂಲದ್ರವ್ಯವಾಗಿ, ತಾಯಿಯು ಅನುಭವಿಸಿದ ಕಷ್ಟ ಸುಖಗಳೇ ಕಾದಂಬರಿಯ ಪಾತ್ರಗಳಾಗಿ ಬಂದಿವೆ. ಇವರ ಕಾದಂಬರಿಗಳಲ್ಲಿ ಜೀವನದ ಘಟನೆಗಳೇ ಪ್ರತಿಫಲಿತವಾಗಿ ನೈಜತೆಗೆ ಹತ್ತಿರವಾಗಿರುವುದರಿಂದ ಓದುಗರ ಪ್ರಶಂಸೆಗೆ ಪಾತ್ರವಾಗಿವೆ. ಇವರು ಬರೆದ ಸುಮಾರು ಇನ್ನೂರಕ್ಕೂ ಹೆಚ್ಚು ಕಥೆಗಳು ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ‘ಉಡುಗೊರೆ’, ‘ಚೇತನ’, ‘ದಯಾನಂದ ತೊರ್ಕೆಯವರ ಕಥೆಗಳು’ , ‘ಭೂಮಿಗೆ ಬಂದ ಭಗವಂತ’, ‘ಗೌರಿ’ ಮುಂತಾದ ಸಂಕಲನಗಳಲ್ಲಿ ಸೇರಿವೆ. ಇತರ ಕೃತಿಗಳೆಂದರೆ ಧಾರವಾಡ ಜಿಲ್ಲಾ ದರ್ಶನ (೧೯೭೫), ಉತ್ತರ ಕನ್ನಡ ಜಿಲ್ಲಾ ದರ್ಶನ (೧೯೭೬), ಮೈಸೂರು ಒಡೆಯರು (೧೯೭೬) ಮೂರು ಕೃತಿಗಳು ಪ್ರಕಟವಾಗಿವೆ. ರೇಡಿಯೋ ನಾಟಕಗಳಾದ ಕಳಂಕ, ಪ್ರತಿಫಲ, ರಾಜನರ್ತಕಿ, ದೈವಸಂಕಲ್ಪ, ಬುದ್ಧಂ ಶರಣಂ ಗಚ್ಛಾಮಿ, ಮಹಾಪುರುಷ, ಬಂಧನ, ಶಿವಾಜಿ (ವಿಜಯೀಭವ) ಮುಂತಾದ ನಾಟಕಗಳು ರಂಗದ ಮೇಲೂ ಪ್ರದರ್ಶಿಸಲ್ಪಟ್ಟಿವೆ. ರಚಿಸಿದ ಕಾದಂಬರಿಗಳೆಂದರೆ ವಿಮುಕ್ತಿ, ಗೆಜ್ಜೆನಾದ, ಕಲಾನಿಧಿ, ಸೆಳೆತ, ದೇವಗಂಗೆ, ಬಂಧನ, ಅಗ್ನಿಕುಂಡ, ವರ್ತುಲ, ಸೀಮಾ, ದೇವಿ, ಹೊಂಗಿರಣ ಮುಂತಾದ ಎಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದು ಹಲವಾರು ಕಾದಂಬರಿಗಳು ಪತ್ರಿಕೆಗಳಲ್ಲಿ ಧಾರಾವಾಹಿಯಾಗಿಯೂ ಪ್ರಕಟವಾಗಿವೆ. ವರ್ತುಲ ಕಾದಂಬರಿಯು ೧೯೭೩ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪಿ.ಯು. ತರಗತಿಗಳಿಗೆ ಪಠ್ಯಪುಸ್ತಕವಾಗಿಯೂ ಆಯ್ಕೆಯಾಗಿತ್ತು. ಬೆಳಗಾವಿ ಕಾಲೇಜಿನ ಉಪನ್ಯಾಸಕರೊಬ್ಬರು ‘ದಯಾನಂದ ತೊರ್ಕೆಯವರ ಸಾಹಿತ್ಯ ಸಮೀಕ್ಷೆ’ ಎಂಬ ಪ್ರೌಢ ಪ್ರಬಂಧವನ್ನೂ ರಚಿಸಿ ಎಂ.ಫಿಲ್‌. ಪದವಿ ಪಡೆದಿದ್ದಾರೆ. ಹಲವಾರು ಸಾಹಿತ್ಯ ಸಮಾರಂಭಗಳ ಅಧ್ಯಕ್ಷರಾಗಿ, ಮುಖ್ಯ ಅತಿಥಿಯಾಗಿ, ಗೋಷ್ಠಿಗಳಲ್ಲಿ-ಕಮ್ಮಟಗಳಲ್ಲಿ ಭಾಷಣಕಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. ಕುಮಟಾ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ತೊರ್ಕೆಯವರ ಕಾದಂಬರಿಗಳ ಸಮೀಕ್ಷೆ ಮತ್ತು ಸನ್ಮಾನ, ಧಾರವಾಡದ ಗಳಗನಾಥ ಪ್ರತಿಷ್ಠಾನದಿಂದ ಕಾದಂಬರಿ ಪ್ರಶಸ್ತಿ ಮತ್ತು ಸನ್ಮಾನ ದೊರೆತಿದೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top