
- This event has passed.
ದಾನಪ್ಪ ಜತ್ತಿ ಶಾಸ್ತ್ರಿ
August 31
೩೧-೮-೧೯೩೮ ೧೦-೧೨-೨೦೦೫ ಸಾಹಿತಿ, ಪ್ರವಚನಕಾರ, ಕೀರ್ತನಕಾರರಾದ ದಾನಪ್ಪ ಜತ್ತಿಶಾಸ್ತ್ರಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ತಿಕೋಟದಲ್ಲಿ. ತಂದೆ ಸಿದ್ರಾಮಪ್ಪ ಜತ್ತಿ, ತಾಯಿ ದೊಡ್ಡಮ್ಮ. ಪ್ರಾರಂಭಿಕ ಶಿಕ್ಷಣ ತಿಕೋಟದಲ್ಲಿ. ಓದು ಮುಂದುವರೆಸಲಾಗದ ಪರಿಸ್ಥಿತಿಯಿಂದ ಬಂದ ಅಡೆ-ತಡೆ. ಆದರೆ ಪ್ರವಚನ, ಕೀರ್ತನೆ ಹೇಳುವ ಕಲೆ ಬಾಲ್ಯದಿಂದಲೇ ಸಿದ್ಧಿಸಿದ ವಿದ್ಯೆ. ಚಿಕ್ಕ ವಯಸ್ಸಿನಿಂದಲೇ ರಂಗಭೂಮಿಯಿಂದ ಆಕರ್ಷಿತರು. ಸ್ತ್ರೀ ಪಾತ್ರದಲ್ಲಿ ಪಡೆದ ಜನ ಮೆಚ್ಚುಗೆ. ಧಾರವಾಡದ ಆಕಾಶವಾಣಿ ಕೇಂದ್ರದಿಂದ ಬಿತ್ತರಗೊಂಡ ಹಲವಾರು ನಾಟಕಗಳು. ವಿಜಾಪುರ, ಬೆಳಗಾವಿ, ಧಾರವಾಡ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಗದಗ ಮುಂತಾದ ಕಡೆಗಳಲ್ಲಿ, ಮಹಾರಾಷ್ಟ್ರದ ಕೆಲವು ಪಟ್ಟಣಗಳಲ್ಲಿ ಕರ್ನಾಟಕ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಾಗೂ ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡಮಿಯ ವತಿಯಿಂದ ಕಾರ‍್ಯಕ್ರಮಗಳ ಏರ‍್ಪಾಡು. ಬಸವಾದಿ ಪ್ರಥಮರ ಚರಿತ್ರೆ, ದಾಸ ಸಾಹಿತ್ಯ, ವಚನ ಸಾಹಿತ್ಯಗಳ ದಾರ್ಶನಿಕ ತತ್ತ್ವ ನಿರೂಪಣೆ, ಸಂಗೀತದೊಂದಿಗೆ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಭಾವೈಕ್ಯತೆಯ ಮತ್ತು ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಜನಸಮುದಾಯಕ್ಕೆ ಮುಟ್ಟಿಸುವಲ್ಲಿ ಅದ್ವಿತೀಯರು. ಹಲವಾರು ಸಾಹಿತ್ಯ ಕೃತಿಗಳ ರಚನೆ. ಕಥಾಸಂಕಲನ-ಅಮೂಲ್ಯ ಕಾಣಿಕೆ, ಕವನ ಸಂಕಲನ- ಭಾವ ಸೌರಭ, ಹನಿಗವನ ಸಂಕಲನ-ಭಾವತರಂಗ, ಸಂಪಾದಿತ-ಬಸವತತ್ತ್ವ ದರ್ಶನ, ವಚನ ಸಂಕಲನ-ವಚನಾಮೃತ. ಉಪನ್ಯಾಸಮಾಲಿಕೆ ಕೃತಿ-ಶರಣರು ನಕ್ಕಾಗ. ಹಲವಾರು ಕಥೆ, ಕವಿತೆ, ಹನಿಗವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟ. ನಾಡಿನ ಹಲವಾರು ಕವಿಗಳು ಇವರನ್ನು ಕುರಿತು ಬರೆದ ಕವಿತಾ ಸಂಕಲನ “ಬೆಳ್ಳಿ ಸಿರಿ” ಮತ್ತು “ಗುಮ್ಮಟ ನಾಡಿನ ಕೀರ್ತನಕಾರ” ಎಂಬ ಹೆಸರಿನಿಂದ ಪ್ರಕಟಿತ. ಕರ್ನಾಟಕ ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡಮಿಯ ವತಿಯಿಂದ ಕಥಾ ಕೀರ್ತನಕ್ಕಾಗಿ ‘ಕರ್ನಾಟಕ ಕಲಾತಿಲಕ’ ಎಂಬ ಬಿರುದಿನೊಂದಿಗೆ ಪ್ರಶಸ್ತಿ, ಸನ್ಮಾನ, ಇವರ ಐವತ್ತೈದನೆಯ ವಯಸ್ಸಿನಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ದಾನಸಿರಿ.’ ಇದೇ ದಿನ ಹುಟ್ಟಿದ ಸಾಹಿತಿಗಳು : ಕೆ. ಜಯಪ್ರಕಾಶರಾವ್ – ೧೯೫೨ ಪಿ. ಕಾಳಿಂಗರಾವ್ – ೧೯೧೪-೨೧.೯.೧೯೮೧