ದಾಶರಥಿ ದೀಕ್ಷಿತ್

Home/Birthday/ದಾಶರಥಿ ದೀಕ್ಷಿತ್
Loading Events
This event has passed.

೧೮..೧೯೨೧ ೨೮..೧೯೮೬ ಗಾಂಪರಗಾಥೆಯ ಸೃಷ್ಟಿಕರ್ತ, ಹಾಸ್ಯನಾಟಕಕಾರ ದಾಶರಥಿ ದೀಕ್ಷಿತ್‌ರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ೧೮ರ ಜನವರಿ ೧೯೨೧ರಲ್ಲಿ. ತಂದೆ ಬಾಲಾಜಿ ದೀಕ್ಷಿತ್‌, ತಾಯಿ ಗಂಗೂಬಾಯಿ. ತಂದೆ ಶಿರಸ್ತೇದಾರರಾಗಿದ್ದುದರಿಂದ ವರ್ಗವಾಗುತ್ತಿದ್ದ ದಾವಣಗೆರೆ, ಮೊಳಕಾಲ್ಮೂರು, ಚಿತ್ರದುರ್ಗ ಮುಂತಾದೆಡೆಗಳಲ್ಲಿ ಪ್ರಾರಂಭಿಕಶಿಕ್ಷಣ. ಬೆಂಗಳೂರಿನ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್‌. ಅನಿವಾರ್ಯ ಕಾರಣದಿಂದ ಕಾಲೇಜಿಗೆ ಶರಣು ಹೊಡೆದು ಉದ್ಯೋಗಕ್ಕೆ ಸೇರಿದ್ದು ಬೆಂಗಳೂರಿನ ವಿಮಾನ ಕಾರ್ಖಾನೆ. ಬಾಲ್ಯದಿಂದಲೂ ಸಾಹಿತ್ಯದ ಬಗ್ಗೆ ಇದ್ದ ಒಲವಿನಿಂದ ರೂಢಿಸಿಕೊಂಡಿದ್ದು ಬರವಣಿಗೆ. ಅಭಿಪ್ರಾಯ ಕೇಳಲು ಬರೆದ ಕಥೆಯೊಂದನ್ನು ನಾಡಿಗೇರ್ ಕೃಷ್ಣರಾಯರಿಗೆ ನೀಡಿದಾಗ, ನಾಡಿಗೇರರು ತಾವು ಕಾರ್ಯನಿರ್ವಹಿಸುತ್ತಿದ್ದ ಪ್ರಜಾಮತ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಇವರಿಗಾದ ಸಂತಸ ಅಷ್ಟಿಷ್ಟಲ್ಲ. ಇದೇ ಹುಮ್ಮಸ್ಸಿನಿಂದ ಬರೆದ ಕಥೆಗಳು ‘ಕಥೆಗಾರ’ ಪತ್ರಿಕೆಯಲ್ಲೂ ಪ್ರಕಟಗೊಂಡವು. ಇವರ ಕಥೆಗಳನ್ನು ಓದುತ್ತಾ, ಗಮನಿಸುತ್ತಾ ಬಂದ ಕಾದಂಬರಿಕಾರರಾದ ತ.ರಾ. ಸುಬ್ಬರಾಯರು ಒಮ್ಮೆ ‘ಗಂಭೀರ ಸಾಹಿತ್ಯ ರಚಿಸಲು ಜನರಿದ್ದಾರೆ. ನೀನು ಲಘು ಬರಹವನ್ನು ರೂಢಿಸಿಕೋ’ ಎಂದು ಸಲಹೆ ನೀಡಿದಾಗ ಲಘುಬರಹದ ಬರವಣಿಗೆಯನ್ನು ಪ್ರಾರಂಭಿಸಿದರು. ನಾಟಕದ ಹುಟ್ಟಿಗೆ ಒಳಗಾಗಿದ್ದು ಹರಿಹರ, ದಾವಣಗೆರೆಗಳಲ್ಲಿ ನೋಡುತ್ತಿದ್ದ ನಾಟಕಗಳ ಪ್ರಭಾವದಿಂದ. ಬೆಂಗಳೂರಿಗೆ ಬಂದನಂತರ ಪ್ರಾರಂಭಿಸಿದ್ದು ‘ಚಿತ್ರಕಲಾವಿದರು’. ಎಸ್.ರಾಮನಾಥ್‌, ಎಸ್‌. ಶಿವರಾಂ (ಸಹೋದರರು), ಎ.ಎಸ್‌.ಮೂರ್ತಿ ಎ.ಎಮ್‌. ಶ್ರೀನಿವಾಸಮೂರ್ತಿ ಮುಂತಾದವರೆಲ್ಲರೂ ಕೈ ಜೋಡಿಸಿದರು. ಇವರು ಬರೆದ ಮೊದಲ ನಾಟಕ ‘ಅಜ್ಜಿ ಆಸ್ತಿ’ (೧೯೫೨) ಪ್ರಯೋಗಗೊಂಡು ಪ್ರೇಕ್ಷಕರಿಂದ ದೊರೆತ ಪ್ರೋತ್ಸಾಹದಿಂದ ಬರೆದದ್ದು ‘ಅಳಿಯದೇವರು’, ‘ಲಂಬೋದರ’ ಮುಂತಾದ ನಾಟಕಗಳು, ಒಂದು ಕಾಲದಲ್ಲಿ ಇವರ ನಾಟಕಗಳು ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಂದರ್ಭದ ಮೆಚ್ಚಿನ ನಾಟಕಗಳಾಗಿದ್ದವು. ಲಘು ಬರಹಗಳನ್ನು ಬರೆಯಲು ಪ್ರಾರಂಭಿಸಿ, ಅ.ನ.ಕೃ. ಮುನ್ನುಡಿಯೊಡನೆ ಪ್ರಕಟಗೊಂಡ ಲಘುಬರೆಹಗಳ ಸಂಗ್ರಹ ‘ಪ್ರೇತ ಸಂಹಾರ’ವನ್ನು ಓದಲು ಕೊರವಂಜಿ ಹಾಸ್ಯ ಪತ್ರಿಕೆಯ ಸಂಪಾದಕರಾದ ಎಂ. ಶಿವರಾಂ (ರಾಶಿ) ಯವರಿಗೆ ನೀಡಿದರು. ಓದಿ ಮೆಚ್ಚಿದ ರಾಶಿಯವರು ಕೊರವಂಜಿ ಪತ್ರಿಕೆಗೂ ಬರೆಯಲು ಪ್ರೇರೇಪಿಸಿದರು. ಹೀಗೆ ಬರೆದ ಲಘುಲೇಖನಗಳ ಸಂಗ್ರಹ ‘ಪಕೋಡಪ್ರಿಯದಫೇದಾರ್ ದೇರಣ್ಣ’ ಪುಸ್ತಕಕ್ಕೆ ಡಿ.ವಿ.ಜಿ. ಯವರು ಮುನ್ನುಡಿ ಬರೆದು ಹಾರೈಸಿದರು. ಕಥೆ, ಲಘುಬರಹಗಳು, ನಗೆ ನಾಟಕಗಳ ಜೊತೆಗೆ ಇವರು ಬರೆದ ಮೊದಲ ಕಾದಂಬರಿ ‘ಬಾಳ ಬಂಧನ’. ನಂತರ ಬರೆದ ಹಾಸ್ಯ ಕಾದಂಬರಿಗಳು ಮಾವನ  ಮನೆ, ‘ಗಂಡಾಗಿ ಕಾಡಿದ್ದ ಗುಂಡ’ ಮತ್ತು ‘ಮರಳಿ ಮಠಕ್ಕೆ’. ತಾವು ಕಾರ್ಯ ನಿರ್ವಹಿಸುತ್ತಿದ್ದ ವಿಮಾನ ಕಾರ್ಖಾನೆಯಿಂದ ಅನಿರೀಕ್ಷಿತವಾಗಿ ಇಂಗ್ಲೆಂಡ್‌ ಪ್ರವಾಸದ ಅವಕಾಶ ದೊರೆತಾಗ ಪ್ರವಾಸಾನುಭವದಿಂದ ಸೃಷ್ಟಿಯಾದದ್ದು ‘ಗಾಂಪರ ಗುಂಪು’ ಎಂಬ ನಗೆ ನಾಟಕ. ಹೀಗೆ ಇವರು ಬರೆದ ಕೃತಿಗಳು ಸುಮಾರು ಮೂವತ್ತು. ಅಳಿಯದೇವರು, ಅಜ್ಜಿ ಆಸ್ತಿ, ಲಂಬೋಧರ, ಸಿಡ್ಲುಮರಿ, ಗಾಂಪರ ಗುಂಪು, ಡಾ|| ಬ್ರಹ್ಮಚಾರಿ, ತಂಬೂರಿ ತಮ್ಮಯ್ಯ, ಅಜ್ಜನ ಅವಾಂತರ ಮೊದಲಾದ ಎಂಟು ನಾಟಕಗಳು; ಮಾವನ ಮನೆ, ಮಾವನ ಮಗಳು, ಬೆಡಗಿನ ಬಲೆ, ಪಂಕಜಿ ಪರಿಣಯ, ಬಾಳಬಂಧನ, ಗಂಡಾಗಿ ಕಾಡಿದ್ದ ಗುಂಡ, ಅನುರಾಗ ಸುಧಾ, ಮದುವೆ ಉಡುಗೊರೆ, ಮರಳಿ ಮಠಕ್ಕೆ ಮುಂತಾದ ಕಾದಂಬರಿಗಳು; ಪ್ರೇತಸಂಹಾರ, ಗಾಂಪರಗಾಡಿ, ಗಂಡನ ಪೂಜನೆ, ಪಕೋಡ ಪ್ರಿಯ ದಫೆದಾರ್ ದೇರಣ್ಣ, ಇಂದ್ರಿ-ಸುಂದ್ರಿ, ಬೆದರುಬೊಂಬೆ, ಗಾಂಪಾಯಣ, ಕಾಮಣ್ಣನ ಕೋಟು, ಕನ್ನಡದ ಗಾಡಿ, ವೈದ್ಯನ ವಿವಾಹ, ಬೊಂಬೆ ಕೊಂಡಳು. ಮೊದಲಾದ ೧೨ ನಗೆಬರಹಗಳ ಸಂಕಲನಗಳು ಪ್ರಕಟಗೊಂಡಿವೆ. ಇವರ ಹವ್ಯಾಸದ ಮತ್ತೊಂದು ಕ್ಷೇತ್ರವೆಂದರೆ ಸೂತ್ರದ ಬೊಂಬೆಯಾಟ. ‘ಮೈಸೂರು ಪಪೆಟಿಯರ್ಸ್’ ಎಂಬ ಸಂಸ್ಥೆ ಸ್ಥಾಪಿಸಿ ಭಾರತದ ಉದ್ದಗಲಕ್ಕೂ ಸಂಚರಿಸಿ ಹಲವಾರು ಪ್ರದರ್ಶನಗಳನ್ನು ನೀಡಿದರು. ನಾಟಕ, ನಟನೆ, ಬರೆಹ ಮುಂತಾದವುಗಳ ಕ್ರಿಯಾಶೀಲತೆಯಿಂದ ಚಲನ ಚಿತ್ರರಂಗವನ್ನೂ ಪ್ರವೇಶಿಸಿ ‘ಸಂಸ್ಕಾರ’, ‘ಅಬಚೂರಿನ ಪೋಸ್ಟಾಫೀಸು’, ‘ಮುಯ್ಯೀ’, ‘ಫಣಿಯಮ್ಮ’, ‘ಭಾಗ್ಯದಲಕ್ಷ್ಮೀಬಾರಮ್ಮ’ ಮುಂತಾದ ಚಿತ್ರಗಳಲ್ಲೂ ಅಭಿನಯಿಸಿದರು. ನಗೆಬರಹಗಾರ, ಕಾದಂಬರಿಕಾರ, ನಟ, ಸೂತ್ರದ ಬೊಂಬೆಯಾಟಗಾರರಾಗಿ ಹೀಗೆ ನಾನಾ ಪ್ರಕಾರಗಳಲ್ಲಿ ಮೂಲಕ ಪ್ರೇಕ್ಷಕರನ್ನು ನಗೆಲೋಕಕ್ಕೆ ಕರೆದೊಯ್ಯುತ್ತಿದ್ದ ದೀಕ್ಷಿತರು ಹಾಸ್ಯಲೋಕದಿಂದ ಮರೆಯಾದದ್ದು’ ೧೯೮೬ರ ಆಗಸ್ಟ್ ೨೮ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top