೨೫-೧-೧೯೩೯ ೨೬-೪-೧೯೯೦ ರಂಗಭೂಮಿಯ ಪ್ರಖ್ಯಾತ ನಟ, ಚಲನಚಿತ್ರದ ಖಳನಾಯಕ ದಿನೇಶ್ ರವರು ಹುಟ್ಟಿದ್ದು ಬೆಂಗಳೂರು. ವಿದ್ಯಾಭ್ಯಾಸ ಬೆಂಗಳೂರು. ಶಾಲಾ ನಾಟಕಗಳಲ್ಲಿ ಅಭಿನಯಿಸಿ ಪಡೆದ ಅನುಭವ, ಕೆಲಕಾಲ ಹೈಸ್ಕೂಲು ಉಪಾಧ್ಯಾಯ ವೃತ್ತಿ. ೧೯೫೨ರಲ್ಲಿ ಜ್ಞಾನ ಜ್ಯೋತಿ ಕಲಾಮಂದಿರ, ಫ್ರೆಂಡ್ಸ್ ಯೂನಿಯನ್ ಮೊದಲಾದ ಹವ್ಯಾಸಿ ನಾಟಕ ರಂಗಗಳಲ್ಲಿ ಪಡೆದ ಪಾತ್ರ. ವೃತ್ತಿ ರಂಗಭೂಮಿಯ ಕಡೆಗೆ ವಾಲಿದ ಮನಸ್ಸಿನಿಂದ ೧೯೫೬ರಲ್ಲಿ ‘ಶ್ರೀ ಗುಬ್ಬಿ ಚನ್ನಬಸವೇಶ್ವರ ನಾಟ್ಯ ಸಂಘ’ದ ಪ್ರವೇಶ. ಬಹುಬೇಗ ಬಂದ ಪ್ರಸಿದ್ಧಿ. ಸದಾರಮೆ, ಸಾಹುಕಾರ, ಅಣ್ಣ-ತಮ್ಮ, ಕುರುಕ್ಷೇತ್ರ ಮೊದಲಾದ ನಾಟಕಗಳಲ್ಲಿ ದೊರೆತ ವೈವಿಧ್ಯಮಯ ಪಾತ್ರ. ಗುಬ್ಬಿ ವೀರಣ್ಣ ಮತ್ತು ಜಯಮ್ಮ ನವರಿಂದ ದೊರೆತ ಪ್ರೀತಿ. ಮೈಸೂರಿನ ಲಕ್ಷ್ಮೀನರಸಿಂಹಸ್ವಾಮಿ ಥಿಯೇಟರ್ಸ್ನಲ್ಲೂ ಮಾಸ್ಟರ್ ಹಿರಣ್ಣಯ್ಯನವರೊಂದಿಗೆ ಅನೇಕ ಸಾಮಾಜಿಕ ನಾಟಕಗಳಲ್ಲಿ ವಹಿಸಿದ ಮುಖ್ಯ ಪಾತ್ರ. ಹೆಣ್ ಹರಾಜ್, ಲಂಚಾವತಾರ, ಮಕ್ಮಲ್ ಟೋಪಿ, ದೇವದಾಸಿ ಇವುಗಳು ಹೆಸರು ತಂದುಕೊಟ್ಟ ನಾಟಕಗಳು. ಉಮಾಮಹೇಶ್ವರ ನಾಟ್ಯ ಸಂಘದಲ್ಲಿ ಕೆಲಕಾಲ ಹೊನ್ನಪ್ಪ ಭಾಗವತರೊಂದಿಗೆ ‘ರಾಮಾಯಣ, ಬಸವೇಶ್ವರ, ಬ್ರೋಕರ್ ಭೀಷ್ಮಾಚಾರಿ ಮೊದಲಾದ ನಾಟಕಗಳಲ್ಲಿ ಪ್ರಮುಖ ಪಾತ್ರ. ಬಳ್ಳಾರಿ ಲಲಿತಕಲಾ ಸಂಘದ ನಾಟಕ ಕಂಪನಿಯಲ್ಲಿ ‘ಮದುವೆ ಮಾರ್ಕೆಟ್’, ‘ಟಿಪ್ಪುಸುಲ್ತಾನ್’, ಎಚ್ಚಮನಾಯಕ ಮುಂತಾದ ನಾಟಕಗಳ ಪಾತ್ರಕ್ಕೆ ದೊರೆತ ಮೆಚ್ಚುಗೆ. ೧೯೬೪ರಲ್ಲಿ ನಾಂದಿ ಚಿತ್ರದಲ್ಲಿ ಉಪಾಧ್ಯಾಯನ ಪಾತ್ರದ ಮೂಲಕ ಚಿತ್ರರಂಗ ಪ್ರವೇಶ. ಸಿ.ಐ.ಡಿ. ರಾಜಣ್ಣ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡರು. ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವಾರು ಭಾಷೆಗಳ ಚಲನಚಿತ್ರಗಳಲ್ಲೂ ಅಭಿನಯ. ಚಿತ್ರರಂಗದ ಒತ್ತಡಕ್ಕೆ ಸೇರಿ ಹೋದ ನಂತರ ನಾಟಕಗಳಲ್ಲಿ ಅಭಿನಯಿಸಿದ್ದು ಕಡಿಮೆ. ಆದರೂ ಖಳನಾಯಕನ ಪಾತ್ರಕ್ಕೆ ಪ್ರತಿಷ್ಠೆ ತಂದು ಕೊಟ್ಟ ಮಹಾನ್ ನಟ. ವಿಮಲ ಕಲಾ ಸಂಘ, ದಿನೇಶ್ ಮಿತ್ರಮಂಡಲಿ ಎಂಬ ನಾಟಕ ಸಂಘಗಳನ್ನು ಕಟ್ಟಿ ರಾಜ್ಯಾದ್ಯಂತ ಸಂಚಾರ. ಲಕ್ಷಾಧೀಶ್ವರ ಹಾಸ್ಯಮಯ ನಾಟಕದಿಂದ ಗಳಿಸಿದ ಅತ್ಯಂತ ಜನಪ್ರಿಯತೆ.
* * *