ದು.ನಿಂ. ಬೆಳಗಲಿ

Home/Birthday/ದು.ನಿಂ. ಬೆಳಗಲಿ
Loading Events
This event has passed.

೩೦.೩.೧೯೩೧ ೮.೧.೨೦೦೦ ಪ್ರಾದೇಶಿಕ ಸೊಗಡಿನ ಬರಹದ ಕಾದಂಬರಿಕಾರರಾದ ದು.ನಿಂ. ಬೆಳಗಲಿಯವರು ಹುಟ್ಟಿದ್ದು ಬನಹಟ್ಟಿಯಲ್ಲಿ. ತಾಯಿ ಚೆನ್ನಮ್ಮ, ತಂದೆ ನಿಂಗಪ್ಪ. ಇವರ ವಂಶಸ್ಥರು ಅಥಣಿ ತಾಲ್ಲೂಕಿನ ಐನಾಪುರದಿಂದ ಬನಹಟ್ಟಿಗೆ ವಲಸೆ ಬಂದು ನಿಂತವರು. ಬೆಳಗಲಿ ಅಡ್ಡ ಹೆಸರು ಬಂದ ಕತೆ-ಒಣಬಾಳೇ ದಿಂಡುಸುಟ್ಟು ಕರೇ ಬಣ್ಣ ತಯಾರಿಸುತ್ತಿದ್ದು, ಬಾಳೇ ಬೂದಿ ಮನೆತನವೆಂದದ್ದು ಬೆಳಗಲಿ ಎಂದಾಯಿತು. ಅರಭಾವಿಮಠದ ದುರದುಂಡೇಶ್ವರ ಸ್ವಾಮಿಗಳ ಆಶೀರ‍್ವಾದದಿಂದ ಹುಟ್ಟಿದವರೇ ದುರದುಂಡೇಶ್ವರ ನಿಂಗಪ್ಪ ಬೆಳಗಲಿ. ನಾಲ್ಕು ಹೆಣ್ಣಿನ ನಂತರ ಹುಟ್ಟಿದ ಗಂಡು, ತಾಯಿಗೆ ವಿಶೇಷ ಮಮತೆ. ಅವ್ವ ಜಾನಪದ ಕಥೆಗಳ ಹಾಡುಗಳ ಭಂಡಾರ. ಮಗುವಿನಿಂದ ಕಥೆ ಹಾಡುಗಳಿಗೆ ಸೆಳೆತ. ದೊಡ್ಡವರಾದ ಮೇಲೆ ಸಂಗ್ರಹಿಸಿದ್ದು ಜಾನಪದ ಕಥೆಗಳು. ಎಸ್.ಎಸ್.ಎಲ್.ಸಿ. ಪಾಸು ಮಾಡಿ ಓದಿದ ಸ್ಕೂಲಿನಲ್ಲೇ ಮಾಸ್ತರಿಕೆ. ೧೯೫೧-೫೫ರವರೆಗೆ. ನಂತರ ಬನಹಟ್ಟಿ ಆರ್.ಎಸ್.ಎ. ಹೈಸ್ಕೂಲು ಶಿಕ್ಷಕರ ಹುದ್ದೆ. ಬರೆದ ಕಥೆಗಳು ಪ್ರಕಟ. ೧೯೫೭ರಲ್ಲಿ ಬೆನ್ನ ಹಿಂದಿನ ಕಣ್ಣು ಪ್ರಥಮ ಕಥಾಸಂಕಲನ ಪ್ರಕಟ. ನಂತರ ಬೆಟಗೇರಿ ಕೃಷ್ಣಶರ್ಮರ ಜಯಂತಿ ಪತ್ರಿಕೆಗೆ ಮತ್ತು ಪ್ರಪಂಚ, ಜೀವನ ಪತ್ರಿಕೆಗಳಿಗೆ ಬರೆದದ್ದು ಹಲವಾರು ಕತೆ, ಕವಿತೆ, ಏಕಾಂಕ, ವಿನೋದ ಬರಹಗಳು. ಮೊದಲ ಕಾದಂಬರಿ ಮುಳ್ಳು ಮತ್ತು ಮಲ್ಲಿಗೆ  ೧೯೬೦ರಲ್ಲಿ  ಪ್ರಕಟ. ಮುಂದೆ ರಚಿಸಿದ್ದು ಸಾಹಿತ್ಯದ ಸುಗ್ಗಿ . ಸಿಟ್ಟ್ಯಾಕೋರಾಯ, ಮಾಸ್ತರನ ಹೆಂಡತಿ, ಗೌಡರ ಮಗಳು ಗೌರಿ, ಮುತ್ತಿನ ತೆನೆಗಳು ಮುಂತಾದ ಎಂಟು ಕಥಾ ಸಂಕಲನಗಳು. ಹತ್ತು ಹೆಡೆಯ ಹಾವು, ತಿರುಗಣಿಮಡು, ಹಡೆದವರು, ಕಾತ್ರಾಳ ರತ್ನಿ ಚಾದಂಗಡಿ ಮೊದಲಾದ ೧೫ ಕಾದಂಬರಿಗಳು. ಸರ್ವಜ್ಞ, ಬದುಕುವ ಬಯಕೆ, ಬೀರಬಲ್ಲ, ಜಾದುಪಕ್ಷಿ ಮುಂತಾದ ೧೨ ಮಕ್ಕಳ ಸಾಹಿತ್ಯ ಕೃತಿ. ಚಿಕ್ಕೋಡಿ ಪಂಡಿತಪ್ಪನವರು, ಪ್ರೇಮಚಂದರ ಬದುಕು ಬರೆಹ, ನನ್ನ ಬಣ್ಣದ ಬದುಕು, ಆನಂದಕಂದ ಮುಂತಾದ ಆರು ಜೀವನ ಚರಿತ್ರೆಗಳು, ಹೆಂಡತಿ ಮತ್ತು ಟ್ರಾನ್ಸಿಸ್ಟರ್, ಗಂಡ-ಹೆಂಡತಿ-ಲಗ್ಗೇಜ್ ಮೊದಲಾದ ನಗೆ ಬರಹಗಳ ಸಂಕಲನ. ಐದು ಅನುವಾದ, ನಾಲ್ಕು ಪ್ರಬಂಧ ಸಂಕಲನ, ಐದು ಸಂಪಾದಿತ ಕೃತಿಗಳು ಸೇರಿ ರಚಿಸಿದ್ದು ೬೦ ಕೃತಿಗಳಿಗೂ ಮಿಕ್ಕು ಪ್ರಕಟಿತ. ಆದರ್ಶ ಶಿಕ್ಷಕ ಪ್ರಶಸ್ತಿ, ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗಂಗಾಧರ ಸಾಹಿತ್ಯ ಪುರಸ್ಕಾರ, ವಿಶ್ವಭಾರತಿ ಸಾಹಿತ್ಯ ಪುರಸ್ಕಾರ, ಬಿ.ಎಚ್. ಶ್ರೀಧರ ಪ್ರಶಸ್ತಿ. ಸರ್.ಎಂ.ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಸಿರಿವಾರ ಚುಕ್ಕಿ ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ಸಂದಿವೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಶ್ರೀನಿವಾಸ ವಿ. ಸುತ್ರಾವೆ – ೧೯೪೨ ಸಂಡೂರು ವೆಂಕಟೇಶ್ – ೧೯೫೫ ರಾಜಪ್ಪ ದಳವಾಯಿ – ೧೯೬೨

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top