ದೇವಕಿ ಮೂರ್ತಿ

Home/Birthday/ದೇವಕಿ ಮೂರ್ತಿ
Loading Events

೨೨..೧೯೩೧ ಪ್ರಸಿದ್ಧ ಕಾದಂಬರಿಗಾರ್ತಿ, ಸಂಗೀತಜ್ಞ, ವಾಗ್ಗೇಯಕಾರರ ಕುಟುಂಬದ ಸೊಸೆಯಾದ ದೇವಕಿಯವರು ಹುಟ್ಟಿದ್ದು ಸಂಗೀತ, ಸಂಸ್ಕೃತಿಗೆ ತವರೂರಾದ ಮೈಸೂರಿನಲ್ಲಿ ೧೯೩೧ರ ಮೇ ೨೨ರಂದು. ತಂದೆ ಆನಂದರಾಯರು, ಮೈಸೂರು ರಾಜ್ಯದ ರೆವಿನ್ಯೂ ಇಲಾಖೆಯಲ್ಲಿ ಅಮಲ್ದಾರರಾಗಿದ್ದವರು, ತಾಯಿ ಕಮಲಮ್ಮ. ತಂದೆಗೆ ಆಗಾಗ್ಗೆ ವರ್ಗವಾಗುತ್ತಿದ್ದುದರಿಂದ ನಾನಾ ಕಡೆಗಳಲ್ಲಿ ಪ್ರಾರಂಭಿಕ ಹಾಗೂ ಪ್ರೌಢಶಾಲಾಭ್ಯಾಸ. ಕಾಲೇಜಿಗೆ ಸೇರಿದ್ದು ಚಿಕ್ಕಮಗಳೂರಿನ ಇಂಟರ್ ಮೀಡಿಯೆಟ್‌ ಕಾಲೇಜು. ಗುರುಗಳಾಗಿ ಬಂದವರು ಪ್ರೊ. ವಿ.ಸೀ.ಯವರು. ಇವರ ಬೋಧನ ಕ್ರಮದ ವೈಶಿಷ್ಟ್ಯವೆಂದರೆ ಪಠ್ಯಪುಸ್ತಕಗಳ ಜೊತೆಗೆ ಪಠ್ಯೇತರ ಪುಸ್ತಕ, ಪ್ರಚಲಿತ ವಿದ್ಯಮಾನಗಳ  ಬೋಧನೆ. ಹೆಸರಾಂತ ಲೇಖಕರ ಶ್ರೇಷ್ಠ ಕೃತಿಗಳನ್ನೂ ಓದಲು ಪ್ರೇರೇಪಿಸುತ್ತಿದ್ದರು. ಇಂಟರ್ ಮೀಡಿಯೆಟ್‌ ನಂತರ ಕರ್ನಾಟಕ ವಿ.ವಿ. ದಿಂದ ಬಿ.ಎ. ಪದವಿ, ಹಿಂದಿ ಪ್ರವೇಶಿಕ, ಸಂಗೀತದಲ್ಲಿ ವಯೊಲಿನ್‌ ಶಿಕ್ಷಣ. ಚಿಕ್ಕಂದಿನಿಂದಲೂ ಕತೆ ಕೇಳುವ ಹುಚ್ಚು. ಗೆಳತಿಯ ಮನೆಯಲ್ಲಿದ್ದ ಅಜ್ಜಿಯನ್ನು ಕಾಡಿಸಿ, ಪೀಡಿಸಿ ಕೇಳುತ್ತಿದ್ದ ಕತೆಗಳು. ಮನೆಪಕ್ಕದ ರಾಮಮಂದಿರದಲ್ಲಿ ನಡೆಯುತ್ತಿದ್ದ ಹರಿಕಥೆ ಕೇಳುವುದು ನಿತ್ಯದ ಪರಿಪಾಠ. ದಾಸರು ಗೆಜ್ಜೆಕಟ್ಟಿ, ಚಿಟಿಕೆ ಹಾಕಿ ಹರಿಕತೆ ಹೇಳುತ್ತಿದ್ದರೆ, ಕೇಳುತ್ತ ಕೇಳುತ್ತ ತನ್ಮಯರಾಗಿ ಬಿಡುತ್ತಿದ್ದರು. ಊರೂರು ಸುತ್ತುತ್ತಾ ಹೆಚ್ಚಿಗೆ ಓದಿರದಿದ್ದರೂ ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಂಡು, ಮಾತಿಗೊಂದು ಗಾದೆ ಹೇಳುವ, ಜನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ, ಬದುಕಿನಲ್ಲಿ ಕಂಡುಂಡ ಘಟನೆಗಳನ್ನು ರಸವತ್ತಾಗಿ ಬಣ್ಣಿಸುವ ತಾಯಿಯಿಂದಲೂ ಕಥಾ ಪ್ರಪಂಚ ಪ್ರವೇಶ. ಜೊತೆಗೆ ಕಾಲೇಜಿನ ಗ್ರಂಥ ಭಂಡಾರದಲ್ಲಿದ್ದ ಶ್ರೇಷ್ಠ ಸಾಹಿತ್ಯ ಗ್ರಂಥಗಳ ಪರಿಚಯ. ಹಿಂದಿ ಕಲಿತದ್ದರಿಂದ ಪ್ರೇಮಚಂದರ್ ರವರ ಕಥೆ, ಕಾದಂಬರಿಗಳ ಓದು. ಬರೆಯಬೇಕೆಂಬ ಒತ್ತಾಸೆ ಮನಸ್ಸಿನಲ್ಲಿ ಪ್ರಬಲವಾದಾಗ ಗಿರಿಬಾಲೆ ಕಾವ್ಯನಾಮದ ಸರಸ್ವತೀಬಾಯಿ ರಾಜವಾಡೆಯವರು ಪ್ರಕಟಿಸುತ್ತಿದ್ದ ‘ಸುಪ್ರಭಾತ’ ಮತ್ತು ಓಲೇಟಿ ವಿ. ಗುಪ್ತ ಮತ್ತು ಡಿ.ಎಸ್‌. ರಾಮಕೃಷ್ಣರಾವ್‌ರವರು ಸಂಪಾದಿಸುತ್ತಿದ್ದ ‘ಕಥಾವಳಿ’ ಪತ್ರಿಕೆಗಳಿಗೆ ಕವನ, ಸಣ್ಣಕತೆಗಳನ್ನು ಬರೆಯತೊಡಗಿದರು. ಪತ್ರಿಕೆಗಳಲ್ಲಿ ಪ್ರಕಟಗೊಂಡಾಗ ಇವರಿಗಾದ ಸಂತಸ ಅಷ್ಟಿಷ್ಟಲ್ಲ. ಪ್ರಸಿದ್ಧ ವಾಗ್ಗೇಯಕಾರರಾದ ವಾಸುದೇವಾಚಾರ್ಯರ ಮಗನ ಸೊಸೆಯಾಗಿ (ವಾಸುದೇವಾಚಾರ್ಯರ ಮೊಮ್ಮಗ ಎಸ್‌. ಕೃಷ್ಣಮೂರ್ತಿಯವರ ಮಡದಿ) ಬಂದನಂತರ ಸಂಗೀತದಲ್ಲೂ ಬೆಳೆದ ಆಸ್ಥೆ. ಸಂಗೀತ ಕಲಿತದಷ್ಟೇ ಅಲ್ಲದೆ ‘ಸಂಗೀತ ಕ್ಷೇತ್ರವೂ ಏಕೆ ಪುರುಷ ಪ್ರಧಾನ ಕ್ಷೇತ್ರವಾಗಿದೆ ? ತಮಿಳುನಾಡಿನ ಸುಬ್ಬುಲಕ್ಷ್ಮೀ, ಪಟ್ಟಮ್ಮಾಳ್‌, ವಸಂತಕುಮಾರಿ ಮತ್ತು ಮೈಸೂರಿನವರಾದ ನೀಲಮ್ಮ ಕಡಾಂಬಿ, ಚೊಕ್ಕಮ್ಮ ಹೀಗೆ ಕೆಲವರನ್ನೂ ಬಿಟ್ಟರೆ ಮತ್ತಾರು ಏಕೆ ಮುಂದೆ ಬರುತ್ತಿಲ್ಲ? ಎಂದು ಯೋಚಿಸಿ ವಾಸುದೇವಾಚಾರ್ಯರೊಡನೆ ಚರ್ಚಿಸಿದಾಗ, ಸಂಪ್ರದಾಯಸ್ಥ ಪುರುಷರಿಗೇ ಈ ಕ್ಷೇತ್ರವನ್ನು ಪ್ರವೇಶಿಸಲು ಕಷ್ಟವಾಗಿದ್ದ ಕಾಲದಲ್ಲಿ ಮಹಿಳೆಯರು ಮುಂದುವರೆಯುವುದಾದರೂ ಹೇಗೆ?’ ಎಂದು ತಮ್ಮ ಅನುಭವವನ್ನೂ ವಿವರಿಸಿದರು. ಹೀಗೆ ಚರ್ಚಿಸಿದ ವಿಷಯವೇ ಇವರ ಮನಸ್ಸಿನ ತುಂಬಾ ತುಂಬಿಕೊಂಡು, ಸಂಗೀತ ಕಲಾವಿದೆಯೊಬ್ಬಳ ಜೀವನ ಹಾಗೂ ಕಲಾ ಸಾಧನೆಯ ಹಾದಿಯಲ್ಲಿ ಅಡ್ಡಿ-ಆತಂಕಗಳು ಹೇಗೆ ಎದುರಾಗುತ್ತದೆ ಎಂಬುದನ್ನೇ ವಸ್ತುವಾಗಿಸಿ ಬರೆದ ಮೊಟ್ಟ ಮೊದಲ ಕಾದಂಬರಿ ‘ಉಪಾಸನೆ’. ಈ ಕಾದಂಬರಿಯು ಕನ್ನಡ ಪ್ರಭ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದಲ್ಲದೆ ಮೈಸೂರಿನ ಕಾವ್ಯಾಲಯ ಪ್ರಕಾಶನದ ಕೂಡಲಿ ಚಿದಂಬರಂರವರು ಪುಸ್ತಕ ರೂಪದಲ್ಲೂ ಹೊರತಂದರು. ಸುಪ್ರಸಿದ್ಧ ಕಾದಂಬರಿಗಳನ್ನೇ ತೆರೆಯ ಮೇಲೆ ತರಬೇಕೆಂಬ ಹಂಬಲದಿಂದ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿದ್ದ ಪುಟ್ಟಣ ಕಣಗಾಲರ ದೃಷ್ಟಿಗೆ ಬಿದ್ದು ಅದೇ ಹೆಸರಿನಿಂದಲೇ ಚಲನಚಿತ್ರವಾಗಿಯೂ ಪ್ರಖ್ಯಾತಿ ಪಡೆಯಿತು. ಹಲವಾರು ಸಣ್ಣ ಕತೆಗಳು, ಲೇಖನಗಳು, ವಾರಪತ್ರಿಕೆ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರ ಮೆಚ್ಚುಗೆಗೆ ಪಾತ್ರವಾದವು. ನಂತರ ಬರೆದ ಕಾದಂಬರಿ ‘ಬಳ್ಳಿ ಚಿಗುರಿತು’ ಪ್ರಜಾಮತ ವಾರ ಪತ್ರಿಕೆಯಲ್ಲಿ, ‘ಶಿಶಿರ ವಸಂತ’ ಕಾದಂಬರಿಯು ತುಷಾರ ಮಾಸಪತ್ರಿಕೆಯಲ್ಲಿ, ‘ಎರಡುದಾರಿ’ ಕಾದಂಬರಿಯು ಪ್ರಜಾಮತ ವಾರಪತ್ರಿಕೆಯಲ್ಲಿ, ‘ಚಂಡಮಾರುತ’ ಕಾದಂಬರಿಯು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ, ‘ಒಡಕುದೋಣು’ ಮತ್ತು ‘ಆಹುತಿ’ ಕಾದಂಬರಿಗಳು ವನಿತಾ ಮಾಸ ಪತ್ರಿಕೆಯಲ್ಲಿ, ‘ಬಿರುಕು’ ಮತ್ತು ‘ಬಂದಿ’ ಕಾದಂಬರಿಗಳು ಮಂಗಳ ವಾರಪತ್ರಿಕೆಯಲ್ಲಿ, ‘ನಿರೀಕ್ಷೆ’ ಕಾದಂಬರಿಯು ಸುಧಾ ವಾರ ಪತ್ರಿಕೆಯಲ್ಲಿ, ‘ಶೋಧ’ ಕಾದಂಬರಿಯು ತರಂಗ ವಾರ ಪತ್ರಿಕೆಯಲ್ಲೂ ಧಾರಾವಾಹಿಯಾಗಿ ಪ್ರಕಟವಾದವು. ‘ಒಡಕು ದೋಣಿ’ ಮತ್ತು ‘ಆಹುತಿ’ ಕಾದಂಬರಿಗಳು ವನಿತಾ ಮಾಸ ಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಾದಂಬರಿಗಳಾದರೆ ನಿರೀಕ್ಷೆ ಕಾದಂಬರಿ ಮತ್ತು ಕೆಂಪು ಗುಲಾಬಿ ಕಥಾ ಸಂಕಲನಗಳು ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ ಪಡೆದಿವೆ. ಇವರ ಕಾದಂಬರಿಗಳಲ್ಲಿ ಬಹುವಾಗಿ ಚರ್ಚಿತವಾಗುವ ವಿಷಯಗಳೆಂದರೆ ಹೆಣ್ಣಿನ ಬದುಕು-ಬವಣೆಗಳು, ಅವಳ ಸಮಸ್ಯೆಗಳು, ಮಾನಸಿಕ ತುಮಲಗಳು, ವರದಕ್ಷಿಣೆಯ ಪಿಡುಗು, ವಿಧವಾ ವಿವಾಹ, ಅಂತರ್ಜಾತೀಯ ವಿವಾಹ, ಉದ್ಯೋಗಸ್ಥ ಮಹಿಳೆಯ ಕಷ್ಟಕಾರ್ಪಣ್ಯಗಳು, ಸಾಂಸ್ಕೃತಿಕ ಜಗತ್ತಿನ ಕಲಾವಿದೆಯರ ಹೋರಾಟದ ಬದುಕು ಮುಂತಾದ ವಿಷಯಗಳು. ರಾಮಾಯಣದಲ್ಲಿ ಖಳನಾಯಕಿಯಾಗಿ ಚಿತ್ರಿತವಾಗಿರುವ ಕೈಕೇಯಿ ಪಾತ್ರಕ್ಕೆ ನ್ಯಾಯ ಒದಗಿಸಲು ಹೊಸ ಆಯಾಮ ಸೃಷ್ಟಿಸಿ, ಕೈಕೇಯಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪದಿಂದ ಬೆಂದು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಆಕೆಯ ಮಾನಸಿಕ ತೊಳಲಾಟವನ್ನು ಚಿತ್ರಿಸಿರುವ ಕಾದಂಬರಿ ‘ನಿರೀಕ್ಷೆ’ ಹಾಗೂ ಮಹಾಭಾರತದ ಸ್ತ್ರೀ ಪಾತ್ರಗಳಲ್ಲಿ ಅತಿ ಪ್ರಮುಖವಾಗಿರುವ ಕುಂತಿಯ ಮಾನಸಿಕ ತುಮಲವನ್ನೂ ಚಿತ್ರಿಸಿರುವ ‘ಕುಂತಿ’ ಕಾದಂಬರಿ ಮತ್ತು ರಾಮಾಯಣದ ‘ವೈದೇಹಿ’ ಕಾದಂಬರಿಗಳು ಓದುಗರ ಮೆಚ್ಚುಗೆ ಪಡೆದ ಕಾದಂಬರಿಗಳೆನಿಸಿದೆ. ಬರೆದ ಹಲವಾರು ಕತೆಗಳು ‘ಅವನ ನೆರಳು’ ಹಾಗೂ ‘ಕೆಂಪು ಗುಲಾಬಿ’ ಸಂಕಲನಗಳಲ್ಲಿ ಪ್ರಕಟಗೊಂಡಿವೆ. ಹಲವಾರು ಹಾಸ್ಯಲೇಖನಗಳನ್ನೂ ಬರೆದಿದ್ದು ಅವು ‘ನಮ್ಮೂರು….ನಮ್ಮಜನ’ ಸಂಗ್ರಹದಲ್ಲಿ  (೨೦೦೯ ) ಸೇರಿದೆ. ದೇಶ-ವಿದೇಶಗಳ ಜನಜೀವನ, ಆಚಾರ-ವಿಚಾರ, ಪ್ರಗತಿ-ವಿಗತಿ ಮುಂತಾದವುಗಳನ್ನು ಅರಿತು ತಮ್ಮ ಜ್ಞಾನ ಕೋಶವನ್ನು ವಿಸ್ತರಿಸಿಕೊಳ್ಳಲು ಯುರೋಪ್‌ ಮತ್ತು ಅಮೆರಿಕಾ ಪ್ರವಾಸಮಾಡಿದ ತಮ್ಮ ಅನುಭವಗಳನ್ನು ದಾಖಲಿಸಿರುವ ಕೃತಿ ‘ಯುರೋಪ್‌ ಅಮೆರಿಕದ ಇಣುಕು ನೋಟ’. ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳ ಬರವಣಿಗೆಯಲ್ಲಿ ತೊಡಗಿಸಿಕೊಂಡ ದೇವಕಿ ಮೂರ್ತಿಯವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top