ದೇವನೂರ ಮಹಾದೇವ

Home/Birthday/ದೇವನೂರ ಮಹಾದೇವ
Loading Events
This event has passed.

೧೦.೦೬.೧೯೪೮ ಬರೆದದ್ದು ಕಡಿಮೆ ಎನಿಸಿದರೂ ಕನ್ನಡ ಸಾಹಿತ್ಯದ ಮೇಲೆ ಅಪಾರ ಪ್ರಭಾವ ಬೀರಿ ಚರ್ಚೆಗೆ ಒಳಗಾಗಿ, ದಲಿತರ ನೋವು-ನಲಿವು, ಬದುಕು-ಬವಣೆಗಳ ಬಗ್ಗೆ ಮೇಲ್ವರ್ಗದ ಸಾಹಿತಿಗಳು ಸಾಹಿತ್ಯ ರಚಿಸಿದ್ದರೂ, ದಲಿತ ವರ್ಗದವರಿಂದಲೇ ತಮ್ಮ ದುಃಖ ದುಮ್ಮಾನಗಳಿಗೆ ಸಾಹಿತ್ಯದ ಅಭಿವ್ಯಕ್ತಿ ನೀಡಲಾರಂಭಿಸಿದ ಎನ್. ಮಹಾದೇವಯ್ಯನವರು ಹುಟ್ಟಿದ್ದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ. ತಂದೆ ನಂಜಯ್ಯ, ತಾಯಿ ನಂಜಮ್ಮ, ತಂದೆ ಕಾನ್‌ಸ್ಟೇಬಲ್ ಹುದ್ದೆಯಲ್ಲಿದ್ದವರು. ಪ್ರಾರಂಭಿಕ ಶಿಕ್ಣಣ ಚಿಕ್ಕಕವಲಂದೆ, ಹಂಪಾಪುರ, ಸಾಲಿಗ್ರಾಮ ಮುಂತಾದ ಕಡೆಗಳಲ್ಲಿ ಪ್ರೌಢ ಶಿಕ್ಷಣ ಮೈಸೂರು. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ, ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಿಂದ ಪಡೆದ ಎಂ.ಎ. ಪದವಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಕೆಲ ವರ್ಷಗಳು ಅಧ್ಯಾಪಕರಾಗಿ ಸೇವೆ ಸಲ್ಲಿಸಿ ರಾಜೀನಾಮೆ ನೀಡಿ, ಮೈಸೂರು ಸಮೀಪ ಹುಯಿಲಾಳು ಗ್ರಾಮದ ಜಮೀನಿನಲ್ಲಿ ವ್ಯವಸಾಯದಲ್ಲಿ ನಿರತರು. ಹೈಸ್ಕೂಲು ಓದುತ್ತಿದ್ದಾಲೇ ಇವರ ಮೇಲೆ ಪ್ರಭಾವ ಬೀರಿದ ಕೃತಿ – ‘ನೊಂದ ಜೀವಿ’ (ಲೇ. ಮಿಸರಬಲ್ – ವಿಕ್ಟರ್ ಹ್ಯೂಗೋ) ಇವರನ್ನು ಚಿಂತನೆಗೆ ಹಚ್ಚಿ ಬಹಳಷ್ಟು ದಿವಸ ಕಾಡಿದ ಕೃತಿ. ಇವರ ಮೇಲೆ ಪ್ರಭಾವ ಬೀರಿದ ಸಾಹಿತಿಗಳೆಂದರೆ ಬೇಂದ್ರೆ, ಕುವೆಂಪು, ಯು.ಆರ್. ಅನಂತಮೂರ್ತಿ, ಲಂಕೇಶ್, ಚಂದ್ರಶೇಖರ ಕಂಬಾರ, ಪೂರ್ಣ ಚಂದ್ರ ತೇಜಸ್ವಿ, ಕೃಷ್ಣ ಆಲನಹಳ್ಳಿ ಮುಂತಾದವರುಗಳು. ವಿದ್ಯಾರ್ಥಿಯಾಗಿದ್ದಾಗಲೇ ಸಮಾಜವಾದಿ ಯುವಜನ ಸಭಾದ ಕಾರ್ಯಕರ್ತರಾಗಿದ್ದರು. ಕೆಲವು ಗೆಳೆಯರೊಂದಿಗೆ ಸೇರಿ ವಿದ್ಯಾರ್ಥಿ ಸಮುದಾಯಕ್ಕೆ ‘ನರ’ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದ ‘ಮಾನವ’ ಪತ್ರಿಕೆಯ ಸಂಪಾದಕ ಮಂಡಲಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು ಬರೆದ ಕಥೆಗಳು ಆಂದೋಲನ, ಪ್ರಜಾವಾಣಿ, ಉದಯವಾಣಿ, ಸಾಕ್ಷಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ‘ದ್ಯಾವನೂರು’ ಎಂಬ ಕಥಾ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದ ವಿಮರ್ಶಕರ, ಸಾಹಿತ್ಯಭಾಸಿಗಳ, ಸಾಹಿತ್ಯಾಸಕ್ತರ ಗಮನ ಸೆಳೆದರು. ದಲಿತ ಸಮಾಜದ ಒಳ ಜೀವನದ ತುಡಿತ-ಮಿಡಿತಗಳನ್ನು ಸಶಕ್ತವಾಗಿ, ಸಮಾಜದ ಎಲ್ಲ ಸಂಕೀರ್ಣತೆಗಳೊಂದಿಗೆ ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಕಲಾತ್ಮಕವಾಗಿ, ಕಥನಗಾರಿಕೆಯನ್ನು ತಮ್ಮ ಕಥೆಗಳಲ್ಲಿ ಪ್ರಕಟಿಸಿದರು. ನಂಜನಗೂಡಿನ ಕಡೆಯ ತಮ್ಮ ಜನರ ಆಡುಮಾತಿನ ಶೈಲಿ ಬಳಸುವ ದೇವನೂರರ ಕಥೆಗಳಲ್ಲಿ ಭಾಷೆ, ನುಡಿಗಟ್ಟುಗಳ ಪಾತ್ರ ಮಹತ್ವಪೂರ್ಣವಾದದ್ದು. ನಂಜನಗೂಡಿನ ಮಹಿಳಾ ವಿದ್ಯಾಪೀಠದಲ್ಲಿ ವಯಸ್ಕರ ಶಿಕ್ಷಣ ಸಮಿತಿಯವರು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಬರೆದ ಕಿರು ಹೊತ್ತಿಗೆ ‘ನಂಬಿಕೆಯ ನೆಂಟ’. ನಂತರ ಮೊದಲ ಕಥೆ ಬರೆದದ್ದು ಪಿ.ಯು. ತರಗತಿಯಲ್ಲಿದ್ದಾಗ ೧೯೬೭-೬೮ರ ಸುಮಾರಿನಲ್ಲಿ. ಇವರ ಮೊದಲ ಕಥಾ ಸಂಕಲನ ‘ದ್ಯಾವನೂರು’ ವಿನಲ್ಲಿ ಮಾರಿಕೊಂಡವರು, ಗ್ರಸ್ತರು, ಒಂದು ದಹನದ ಕಥೆ, ದತ್ತ, ಡಾಂಬರು ಬಂದುದು, ಮೂಡಲ ಸೀಮೆಯಲ್ಲಿ ಕೊಲೆಗಿಲೆ ಮುಂತಾಗಿ, ಅಮಾಸ ಮೊದಲಾದ ಏಳು ಕಥೆಗಳಿವೆ. ಈ ಕಥಾಸಂಕಲನವು ಪ್ರಕಟವಾದುದು ೧೯೭೩ರಲ್ಲಿ. ನಂತರ ೧೯೭೯ರಲ್ಲಿ ‘ಒಡಲಾಳ’, ೧೯೮೪ರಲ್ಲಿ ‘ಕುಸುಮಬಾಲೆ’ ಕಿರು ಕಾದಂಬರಿಗಳು ಪ್ರಕಟಗೊಂಡವು. ಒಡಳಾಳ ಕೃತಿಯು ಮೊದಲು ಪ್ರಕಟವಾದುದು ಪ್ರಜಾವಾಣಿಯ ದೀಪಾವಳಿಯ ವಿಶೇಷ ಸಂಚಿಕೆಯಲ್ಲಿ. ಕೆಳವರ್ಗದ ಜನರ ಬದುಕು, ಅವರಲ್ಲಿ ಮಡುಕಟ್ಟಿರುವ ಆಸೆ, ಅಭಿಮಾನ, ಅಸಹಾಯಕತೆಗಳೇ ಕಾದಂಬರಿಯ ವಸ್ತು. ಇದು ಕಾದಂಬರಿಯಾಗಿ ಅಲ್ಲದೆ ನಾಟಕ ರೂಪಾಂತರವಾಗಿಯೂ ಬಹಳಷ್ಟು ಯಶಸ್ಸು ಕಂಡ ಕೃತಿ. ಈ ಕೃತಿಗೆ ಕಲ್ಕತ್ತೆಯ ಭಾರತೀಯ ಭಾಷಾ ಪರಿಷತ್ತಿನ ಎಚ್.ಇ.ಜಿ. ಭಿಲ್ವಾರ ಪ್ರಶಸ್ತಿಯನ್ನು (೧೯೮೪) ಪಡೆದುಕೊಂಡಿದೆ. ನಂತರ ಪ್ರಕಟಗೊಂಡ ಕೃತಿ ಕುಸುಮಬಾಲೆ (೧೯೮೪), ಅಕ್ಕ ಮಹಾದೇವಮ್ಮ ಅವಳ ಮಗ ಯಾಡ, ಅವನ ಮಗ ಸೋಮಪ್ಪ, ಅವನ ಮಗಳು ಕುಸುಮ- ಹೀಗೆ ನಾಲ್ಕು ತಲೆಮಾರುಗಳ ಕಿರು ಕಾದಂಬರಿಯ ಹರವು ೭೭ ಪುಟಗಳಲ್ಲಿ ಪ್ರವಹಿಸುತ್ತದೆ. ಇದು ರಂಗದ ಮೇಲೆಯೂ ಹಲವಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿತು. ಕುಸುಮಬಾಲೆಯಲ್ಲಿ ಬಳಸಿರುವ ಭಾಷಿ ವಿಶಿಷ್ಟ ಬಗೆಯದು. ನಂಜನಗೂಡಿನ ಪರಿಸರದ ದಲಿತರ ಉಪಭಾಷೆಯಲ್ಲಿ ಇಡೀ ವೃತ್ತಾಂತವನ್ನು ನಿರೂಪಿಸಿದ್ದಾರೆ. ಈ ಕೃತಿಯು ೧೯೯೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಗೂ ಪಾತ್ರವಾಯಿತು. ೧೯೯೨ರಲ್ಲಿ ಸಮಗ್ರ ಕೃತಿಗಳು ಪ್ರಕಟಗೊಂಡು ೧೯೯೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವಕ್ಕೂ ಪಾತ್ರರಾದರು. ಇವರ ಇತ್ತೀಚಿನ ಕೃತಿ ‘ಎದೆಗೆ ಬಿದ್ದ ಅಕ್ಷರ’. ಅಮೆರಿಕದ ಅಯೋವ ವಿಶ್ವವಿದ್ಯಾಲಯದಲ್ಲಿ ನಡೆದ ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂನಲ್ಲಿ (೧೯೮೯) ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಅಮೆರಿಕ ಫೋರ್ಡ್ ಫೌಂಡೇಷನ್ನಿನವರು ನೀಡಿದ ಫೆಲೋಷಿಪ್ಪನ್ನು ನಿರಾಕರಿಸಿದರಾದರೂ ಭಿಲ್ವಾರ ಪ್ರಶಸ್ತಿಯ ಮೊತ್ತವನ್ನು ದಲಿತ ನಿಧಿಗೆ ನೀಡಿದರು. ೧೯೭೯ರಲ್ಲಿ ರಾಜ್ಯ ಬಂಡಾಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿದ್ದರು. ರಾಜಕೀಯದಲ್ಲೂ ಗುರುತಿಸಿಕೊಳ್ಳಲು ಅಪೇಕ್ಷಿಸಿ ಕಟ್ಟಿದ ಪಕ್ಷ ಸರ್ವೋದಯ ಕರ್ನಾಟಕ. ಇವರನ್ನು ಹುಡುಕಿಕೊಂಡು ಬಂದ ಇತರ ಪ್ರಶಸ್ತಿಗಳೆಂದರೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೭), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ನೃಪತುಂಗ ಪ್ರಶಸ್ತಿ – ೨೦೧೦ರಲ್ಲಿ [ಈ ಪ್ರಶಸ್ತಿಯನ್ನು ಪ್ರಖ್ಯಾತ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಕನ್ನಡ ಸಮ್ಮೇಳನಾಧ್ಯಕ್ಷರಾಗಿದ್ದ (ಗಂಗಾವತಿ- ೨೦೧೧) ಸಿಪಿ.ಕೆ ಯವರೊಂದಿಗೆ ಹಂಚಿಕೊಂಡಿದ್ದಾರೆ] ಮತ್ತು ೨೦೧೧ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ (೨೦೧೩) ಗೌರವಕ್ಕೂ ಪಾತ್ರರಾಗಿದ್ದಾರೆ. ದೇವನೂರರ ಕೃತಿ ಮತ್ತು ಇವರ ಬಗ್ಗೆ ಸಾಹಿತಿಗಳು, ಮಿತ್ರರು, ಕುಟುಂಬದವರು ಬರೆದಿರುವ, ಹೇಳಿರುವ ನೆನಪುಗಳು: ಕೃತಿಗಳ ಬಗ್ಗೆ – ಹಿರಿಯ ಸಾಹಿತಿಗಳ ಅನಿಸಿಕೆಗಳು, ಸ್ನೇಹಿತರು ಬರೆದಿರುವ ಪತ್ರಗಳು, ಛಾಯಾಚಿತ್ರಗಳಿಂದ ಕೂಡಿದ್ದು, ಒಂದು ರೀತಿಯ ಅಭಿನಂದನಾ ಗ್ರಂಥವೆನಿಸುವಂತಹ ‘ಯಾರ ಜಪ್ತಿಗೂ ಸಿಗದ ನವಿಲುಗಳು’ ೨೦೦೦ದಲ್ಲಿ ಪ್ರಕಟವಾಗಿದೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top