Loading Events

« All Events

  • This event has passed.

ದೇವುಡು ನರಸಿಂಹಶಾಸ್ತ್ರಿ

December 29, 2023

೨೯.೧೨.೧೮೯೬ ೨೭.೧೦.೧೯೬೨ ಸೃಜನ ಶೀಲ ಸಾಹಿತ್ಯರಚನೆ, ಸಂಪಾದನೆ, ಸಂಶೋಧನೆ, ಶಿಶು ಸಾಹಿತ್ಯ, ವಯಸ್ಕರ ಶಿಕ್ಷಣ, ರಂಗಭೂಮಿ ಮತ್ತು ಚಲನಚಿತ್ರ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ದೇವುಡುರವರು ಹುಟ್ಟಿದ್ದು ಮೈಸೂರಿನಲ್ಲಿ ೧೮೯೬ರ ಡಿಸೆಂಬರ್ ೨೯ ರಂದು. ತಂದೆ ಮೈಸೂರು ಮಹಾರಾಜರ ಅರಮನೆಯಲ್ಲಿ ಪುರೋಹಿತರಾಗಿದ್ದ ಕೃಷ್ಣಶಾಸ್ತ್ರಿಗಳು, ತಾಯಿ ಸುಬ್ಬಮ್ಮ. ಮೈಸೂರು ಮಹಾರಾಜ ಕಾಲೇಜಿನಿಂದ ಪಡೆದ ಬಿ.ಎ. ಮತ್ತು ಎಂ.ಎ. ಪದವಿ. ಸಂಸ್ಕೃತ ಐಚ್ಛಿಕ ವಿಷಯ. ತತ್ತ್ವಶಾಸ್ತ್ರದ ವಿದ್ಯಾರ್ಥಿಯಾಗಿ ಪ್ರೊ. ಹಿರಯಣ್ಣ ಮತ್ತು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ನೆಚ್ಚಿನ ವಿದ್ಯಾರ್ಥಿ ಬಾಲ್ಯದಿಂದಲೇ ರಂಗಭೂಮಿಯತ್ತ ಒಲವು. ವರದಾಚಾರ್ ಮತ್ತು ರಾಘವಾಚಾರ್ ಕಂಪನಿಗಳಲ್ಲಿ ಬಾಲನಟನಾಗಿ ಪಾತ್ರ ನಿರ್ವಹಣೆ. ೧೯೨೪ ರಲ್ಲಿ ಬೆಂಗಳೂರಿಗೆ ಆಗಮನ. ಗಾಂಧಿ ನಗರದ ಪ್ರೌಢಶಾಲೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಣೆ. ಬೆಂಗಳೂರಿನ ಅಮೆಚೂರ್ ಡ್ರಮ್ಯಾಟಿಕ್ಸ್ ಅಸೋಸಿಯೇಷನ್ನಿನ ಸದಸ್ಯರಾಗಿ ನಚಿಕೇತ, ಮಂಡೋದರಿ, ರಾಮಕೃಷ್ಣ, ಮಾರ್ಕಂಡೇಯ, ಯಶೋಧರ, ನಾಟಕಗಳಲ್ಲಿ ಪ್ರಧಾನ ಪಾತ್ರ. ಚಿತ್ರರಂಗ ಪ್ರವೇಶಿಸಿ ತಮ್ಮದೇ ಕಾದಂಬರಿ ‘ಕಳ್ಳರ ಕೂಟ’ ಚಲನಚಿತ್ರದಲ್ಲಿ ಪಾತ್ರಾಭಿನಯ. ಆದರೆ ಚಿತ್ರ ಅಪೂರ್ಣ. ಗೆಳೆಯರ ಸಹಕಾರದೊಡನೆ ಧ್ರುವಕುಮಾರ್, ಚಿರಂಜೀವಿ ಚಿತ್ರಗಳ ನಿರ್ಮಾಣ. ಬೆಂಗಳೂರಿಗೆ ಬಂದ ನಂತರ ಮಕ್ಕಳ ಪುಸ್ತಕ ನಡೆಸುತ್ತಿದ್ದ ಅಶ್ವತ್ಥ ನಾರಾಯಣರಿಂದ ಸಂಪಾದಕರಾಗಿ ನಿಯೋಜಿತರಾಗಿ ಕಾರ್ಯನಿರ್ವಹಣೆ. ಜೊತೆಗೆ ಸ್ವತಃ ‘ನಮ್ಮ ಪುಸ್ತಕ’ ಯೋಜನೆಯಡಿ ಮಕ್ಕಳಿಗೆ ವೈವಿಧ್ಯಮಯ ಸಾಹಿತ್ಯದ ಕೊಡುಗೆ. ಕನ್ನಡ ಕಲಿಯಲು ಸರಳಗನ್ನಡ ಕಲಿಕೆ ವಿಧಾನದ ಆವಿಷ್ಕಾರ. ವಯಸ್ಕರ ಶಿಕ್ಷಣ ಸಮಿತಿ ಸ್ಥಾಪನೆಗೆ ನಾಂದಿ. ಹೀಗೆ ಮಕ್ಕಳಿಗಾಗಿಯೇ ರಚಿಸಿದ ಕೃತಿಗಳು ಸುಮಾರು ೨೦. ಅದರಲ್ಲಿ ಬುದ್ಧಿಯ ಕಥೆಗಳು, ಗಣೇಶನ ಕಥೆ, ದೇಶಾಂತರದ ಕಥೆಗಳು, ತಂತ್ರಗಾರ ನರಿ ಮತ್ತು ಇತರ ಕಥೆಗಳು ಮುಂತಾದವುಗಳು. ’ಸಾಹಸವರ್ಮ’ ಕಾದಂಬರಿಯನ್ನು ವಿದ್ಯಾರ್ಥಿದೆಸೆಯಲ್ಲಿದ್ದಾಗಲೇ ರಚಿಸಿದ್ದರೂ ನಂತರ ‘ಕಳ್ಳರ ಕೂಟ’, ‘ಅಂತರಂಗ’, ‘ಮಯೂರ’ ಇವುಗಳಲ್ಲದೆ ‘ಮಹಾಬ್ರಾಹ್ಮಣ’, ‘ಮಹಾಕ್ಷತ್ರಿಯ’, ‘ಮಹಾದರ್ಶನ’ ಇವು ದೇವುಡುರವರಿಗೆ ಖ್ಯಾತಿ ತಂದ ಕೃತಿಗಳು. ಸುಮಾರು ೧೫ ಕಾದಂಬರಿಗಳು ಕರ್ತೃ. ಕಾದಂಬರಿಗಳಲ್ಲದೆ ‘ಸೋಲೋಗೆಲವೋ’, ‘ದೇವುಡು ಕಥೆಗಳು’, ‘ಘಾಟಿ ಮುದುಕ ಮತ್ತು ಇತರ ಕಥೆಗಳು’, ‘ಮೂರು ಕನಸು’, ‘ಭಾರ್ಗವಿ’ ಮುಂತಾದ ಕಥಾ ಸಂಕಲನಗಳು ಪ್ರಕಟಿತ. ದುರ್ಮಂತ್ರಿ, ಸಾವಿತ್ರಿ, ವಿಚಿತ್ರ ಶಿಕ್ಷೆ, ಮಯೂರ, ಯಾಜ್ಞವಲ್ಕ ಮುಂತಾದ ನಾಟಕಗಳು. ರಾಮಾಯಣದ ಮಹಾಪುರುಷರು, ಭಾರತದ ಮಹಾಪುರುಷರು, ಸಂಗ್ರಹ ರಾಮಾಯಣ, ಮಹಾಭಾರತ ಸಂಗ್ರಹ, ಪುರುಷೋತ್ತಮ, ಕಾಳಿದಾಸನ ಕೃತಿಗಳು ಅಲ್ಲದೆ ವಿದ್ವಾಂಸರಿಗೇ ಕಬ್ಬಿಣದ ಕಡಲೆ ಎನಿಸಿದ್ದ ಯೋಗಾವಾಶಿಷ್ಠ ವನ್ನು ೨೪ ಸಂಪುಟಗಳಲ್ಲಿ ಕನ್ನಡಕ್ಕೆ ತಂದ ಅನುವಾದ. ಇದಲ್ಲದೆ ಪತ್ರಿಕೋದ್ಯಮ ಮುಂತಾದ ಎಲ್ಲ ಕ್ಷೇತ್ರಗಳ ಕೃತಿಗಳು ಸೇರಿ ಸುಮಾರು ೧೦೦ ಕ್ಕೂ ಹೆಚ್ಚು ಕೃತಿ ಪ್ರಕಟಿತ. ಪತ್ರಿಕಾರಂಗ ಹಾಗೂ ವಿದ್ಯಾಸಂಸ್ಥೆಗಳ ಜೊತೆಗೆ ಕೈಗೊಂಡ ಸಾರ್ವಜನಿಕ ಸೇವೆ. ೧೯೪೪ ರಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಆಯ್ಕೆ. ೧೯೪೬-೪೭ ರಲ್ಲಿ ಬೆಂಗಳೂರು ಪುರಸಭೆಯ ಸದಸ್ಯರು. ಪಠ್ಯಪುಸ್ತಕ ಸಮಿತಿ, ವಿಶ್ವವಿದ್ಯಾಲಯದ ಪರೀಕ್ಷಾ ಮಂಡಲಿಗಳಲ್ಲಿ ಸತತವಾಗಿ ಸಲ್ಲಿಸಿದ ಸೇವೆ. ಇದಲ್ಲದೆ ಕನ್ನಡ ಕಾದಂಬರಿಕಾರರ ಸಮ್ಮೇಳನದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸಲ್ಲಿಸಿದ ಸೇವೆ. ಬಾಬು ರಾಜೇಂದ್ರ ಪ್ರಸಾ‌ದ್‌ರವರಿಂದಲೇ ಕಾಶಿಯಲ್ಲಿ ಗೌರವ ಪಡೆದ ದೇವುಡು ರವರಿಗೆ ೧೯೬೩ ರಲ್ಲಿ ‘ಮಹಾಬ್ರಾಹ್ಮಣ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮರಣೋತ್ತರವಾಗಿ (ಮರಣ ೨೭೩.೧೦.೧೯೬೨) ಪ್ರಕಟಗೊಂಡದ್ದು ದುರದೃಷ್ಟ.

Details

Date:
December 29, 2023
Event Category: