Loading Events

« All Events

  • This event has passed.

ದ.ಕೃ. ಭಾರದ್ವಾಜ್

December 29, 2023

೨೯.೧೨.೧೮೯೧ ೨೨..೧೯೫೩ ಪತ್ರಕರ್ತ, ಆಯುರ್ವೇದ ವೈದ್ಯ, ಸಾಹಿತಿ, ನಿಘಂಟುಕಾರರಾದ ಭಾರದ್ವಾಜರು ಹುಟ್ಟಿದ್ದು ಬೆಂಗಳೂರು ಬಳಿಯ ಹೊಸಕೋಟೆಯಲ್ಲಿ ೧೮೯೧ರ ಡಿಸೆಂಬರ್ ೨೯ ರಂದು. ತಂದೆ ಕೃಷ್ಣಾಜಿ ಸಂಬಾಜಿ ಕುಂದುಗೋಳ ಕರ್, ತಾಯಿ ಭೀಮಾಬಾಯಿ. ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ. ಮೆಟ್ರಿಕ್ಯೂಲೇಷನ್ ಮುಗಿಸುವ ಹೊತ್ತಿಗೆ ಬಂಗಾಳಿ, ಗುಜರಾತಿ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಗಳಿಸಿದ ಪಾಂಡಿತ್ಯ, ದೇಶದಲ್ಲೆಲ್ಲಾ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಚಳವಳಿಯಿಂದ ಪ್ರೇರಣೆ. ಇದಕ್ಕಾಗಿ ಪತ್ರಿಕಾ ಪ್ರಪಂಚದ ಸಂಪರ್ಕ. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ‘ಒಕ್ಕಲಿಗರ ಪತ್ರಿಕೆ’ಯ ಉಪಸಂಪಾದಕರ ಹುದ್ದೆ. ಇವರ ರಾಷ್ಟ್ರೀಯ ಕಾರ್ಯ ಚಟುವಟಿಕೆಯನ್ನು ಗಮನಿಸಿದ ‘ರಾಷ್ಟ್ರೀಯ ವಿದ್ಯಾವರ್ಧಿನಿ ಸಭಾ’ ದಿಂದ ವಿದ್ಯಾರ್ಥಿವೇತನ ಪಡೆದು ನ್ಯಾಷನಲ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ, ಪತ್ರಿಕೋದ್ಯಮಗಳಲ್ಲಿ ಪಡೆದ ಪಾಂಡಿತ್ಯ. ಮಂಗಳೂರಿನಲ್ಲಿ ಡಾ. ಅನಿಬೆಸೆಂಟರು ಸ್ಥಾಪಿಸಿದ್ದ ರಾಷ್ಟ್ರೀಯ ಶಿಕ್ಷಕರ ಶಾಲೆಯಲ್ಲಿ ದೊರೆತ ಅಧ್ಯಾಪಕರ ಹುದ್ದೆ. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಗಾಂಧಿ ತತ್ವಗಳ ಪಾಲನೆ. ಜನರನ್ನು ಉದ್ದೀಪನಗೊಳಿಸಲು ಭಾಷಣ, ಪತ್ರಿಕೆಗಳಿಗೆ ಬರೆದ ಲೇಖನಗಳು. ಅಧ್ಯಾಪಕನಾಗಿದ್ದು ಚಳವಳಿಯಲ್ಲಿ ತೊಡಗಬಾರದೆಂದು ನಿರ್ಧರಿಸಿ ಉದ್ಯೋಗ ತೊರೆದು ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿ. ಚಳವಳಿಯಲ್ಲಿ ತೊಡಗಿ ಒಂದುವರೆ ವರ್ಷ ಅನುಭವಿಸಿದ ಸೆರೆಮನೆ ವಾಸ. ೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ೩೯ನೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರ ನಿಕಟ ಸಂಪರ್ಕ. ‘ರಾಷ್ಟ್ರೀಯ ಕಾಂಗ್ರೆಸ್ ಇತಿಹಾಸ’ ಮತ್ತು ‘ಕರ್ನಾಟಕ ಕೈಪಿಡಿ’ ಎಂಬ ಎರಡು ಪುಸ್ತಕಗಳ ರಚನೆ. ಕೆಲ ಸ್ವಾರ್ಥಿಗಳ ಚಟುವಟಿಕೆಗಳಿಂದ ಬೇಸತ್ತು ಚಳವಳಿಯಿಂದ ದೂರ. ನಂತರ ಆಯ್ದುಕೊಂಡದ್ದು ಬೆಂಗಳೂರು ವಾಸ. ಹಿಂದಿ ಪ್ರಚಾರಕರಾಗಿ, ಪತ್ರಿಕೋದ್ಯಮಿಯಾಗಿ, ಆಯುರ್ವೇದ ಪಂಡಿತರಾಗಿ ಜನಹಿತ ಕಾರ್ಯಗಳು ಪ್ರಾರಂಭ. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಪರಿಣತಿ ಪಡೆದು ‘ರಾಮಕೃಷ್ಣ ಚಿಕಿತ್ಸಾಲಯ’ ತೆರೆದು ಮಾಡಿದ ಜನಸೇವೆ. ಆಯುರ್ವೇದ ಕ್ಷೇತ್ರದಲ್ಲಿದ್ದ ಅವರ ಆತ್ಮೀಯ ಸ್ನೇಹಿತರೆಂದರೆ ಎಂ.ಗೋಪಾಲಕೃಷ್ಣ ರಾಯರು, ಪಾರ್ಥನಾರಾಯಣ ಪಂಡಿತರು ಮತ್ತು ಪಂಡಿತ ತಾರಾನಾಥರು. ಇದೇ ಸಂದರ್ಭದಲ್ಲಿ ಇವರಿಂದ ಆಯುರ್ವೇದ ಪದ್ಧತಿಯ ಕೆಲ ಕೃತಿಗಳ ರಚನೆ. ‘ಆಯುರ್ವೇದ ಚಿಕಿತ್ಸಾ ಸಾರ ಸಂಗ್ರಹ’, ‘ಆಹಾರ ವಿಜ್ಞಾನ’. ಅಡುಗೆ ಮನೆಯೋ, ಔಷಧಾಲಯವೋ, ‘ಸಂತಾನ ವಿಜ್ಞಾನ’, ದಾಂಪತ್ಯ ವಿಜ್ಞಾನ, ಜನನ ನಿಯಂತ್ರಣ ಮುಂತಾದ ಆರೋಗ್ಯಶಾಸ್ತ್ರ ಸಂಬಂಧಿ ಪುಸ್ತಕಗಳ ಪ್ರಕಟಣೆ. ಬಿಜಾಪುರದಲ್ಲಿ ನಡೆದ ಆಯುರ್ವೇದ ಕಾಂಗ್ರೆಸ್ ಸಮ್ಮೇಳನಾಧ್ಯಕ್ಷರಾಗಿ, ನಿಖಿಲ ಭಾರತ ಆಯುರ್ವೇದ ವಿದ್ಯಾಪೀಠ ಸ್ಥಾನಿಕ ಕೇಂದ್ರದ ಅಧ್ಯಕ್ಷರಾಗಿ, ಕಾರವಾರ ಜಿಲ್ಲಾ ನಿಖಿಲ ಭಾರತ ಅನುವಂಶಿಕ ವೈದ್ಯ ಹಕೀಮರ ಸಮ್ಮೇಳನದ ಅಧ್ಯಕ್ಷರಾಗಿ, ನಿಖಿಲ ಭಾರತ ಆಯುರ್ವೇದ ಪ್ರಚಾರ ಪರಿಷತ್ತಿನ ಅಧ್ಯಕ್ಷರಾಗಿ ದೊರೆತ ಕಾರ್ಯಗೌರವಗಳು. ಪತ್ರಿಕೋದ್ಯಮಿ ಭಾರದ್ವಾಜರಿಂದ ‘ತಿಲಕ್‌ಸಂದೇಶ’ ಮತ್ತು ‘ಸ್ವರಾಜ್ ಡೈರಿ’ ಪತ್ರಿಕೆಗಳ ಸಂಪಾದಕತ್ವ ಕೆಲ ಕಾಲ. ೧೯೨೫ರ ಸುಮಾರಿನಲ್ಲಿ ಪತ್ರಿಕೆಯ ಸಂಪಾದಕತ್ವ. ಸುಬೋಧ ರಾಮರಾಯರ ‘ಸುಬೋಧ’ ಮಾಸ ಪತ್ರಿಕೆಗೆ ಬರೆದ ಕಾಲಂ ‘ಪ್ರಚಲಿತ ಪ್ರಪಂಚ’. ಇದಲ್ಲದೆ ಅಂದಿನ ಪತ್ರಿಕೆಗಳಾದ ಸುಬೋಧ, ಜಯಕರ್ನಾಟಕ, ಕನ್ನಡ ನುಡಿ, ವಿಶ್ವಕರ್ನಾಟಕ, ಜಯಂತಿ, ಜೀವನ, ನಗುವನಂದ ಮುಂತಾದ ಪತ್ರಿಕೆಗಳಿಗೂ ಬರೆದ ಲೇಖನಗಳು. ಹಿಂದಿ ಪ್ರಚಾರಕರಾಗಿ ನ್ಯಾಷನಲ್ ಹೈಸ್ಕೂಲಿನಲ್ಲಿ ನಡೆಸಿದ ಹಿಂದಿ ಉಚಿತ ತರಗತಿಗಳು. ತಿಲಕ ಮಹಾರಾಜರ ಚರಿತ್ರೆ, ಅಮೃತಸರ ಪಟ್ಟಣ, ಹಿಂದ್ ಸ್ವರಾಜ್ಯ, ಶ್ರೀಕೃಷ್ಣಜನ್ಮಾಷ್ಟಮಿ, ನೀತಿಧರ್ಮ, ಹಿಂದಿ ಭಾಷಾಸಾರ, ಸ್ವರಾಜ್ ಡೈರಿ ಮತ್ತು ವಿಶ್ವಕೋಶ ಮುಂತಾದ ಕೃತಿಗಳ ಜೊತೆಗೆ ಭೀಷ್ಮಾ, ಸೀತಾ ನಾಟಕಗಳ ರಚನೆ. ನಿಘಂಟು ಕಾರರಾದ ಇವರ ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟು (ಮೊದಲ ಮುದ್ರಣ ೧೯೪೪) ಇಂದಿಗೂ ಬಹೂಪಯೋಗಿ ನಿಘಂಟು ಎನಿಸಿ ಡಿ.ಕೆ. ಭಾರದ್ವಾಜರಿಗೆ ಹೆಸರು ತಂದ ಕೃತಿ. ಹೀಗೆ ನಾಟಕ, ಕಲೆ, ಸಂಗೀತ, ಸಾಹಿತ್ಯ, ವೈದ್ಯಕೀಯ ಎಲ್ಲದರಲ್ಲೂ ಪರಿಣತರಾಗಿದ್ದ ಭಾರದ್ವಾಜರು ತೀರಿಕೊಂಡದ್ದು ೨೨.೨.೧೯೫೩ ರಲ್ಲಿ.

Details

Date:
December 29, 2023
Event Category: