ದ. ಬಾ. ಕುಲಕರ್ಣಿ

Home/Birthday/ದ. ಬಾ. ಕುಲಕರ್ಣಿ
Loading Events
This event has passed.

೨೩..೧೯೧೬ ೧೧..೧೯೬೩ ಕಥೆ, ಪ್ರಬಂಧಗಳನ್ನು ಬರೆದುದಷ್ಟೇ ಅಲ್ಲದೆ ಬರೆದುದನ್ನು ಪ್ರಕಟಿಸಿ, ಓದುಗರಿಗೆ ತಲುಪಿಸುವ ಕನ್ನಡದ ಪರಿಚಾರಿಕೆಯನ್ನು ಕೈಗೊಂಡ ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿ ಯವರು ಹುಟ್ಟಿದ್ದು ಹಿಂದಿನ ರಾಮದುರ್ಗ ಸಂಸ್ಥಾನದ ಮುದೇನಕೊಪ್ಪದಲ್ಲಿ (ಬೆಳಗಾಂ ಜಿಲ್ಲಾ ರಾಮದುರ್ಗ ತಾಲೂಕಿನಲ್ಲಿದೆ) ೧೯೧೬ರ ಮಾರ್ಚ್ ೨೩ ರಂದು. ಹುಟ್ಟಿದೂರಿನಲ್ಲಿಯೇ ಮುಲ್ಕಿ ಪರೀಕ್ಷೆಯನ್ನು ಮುಗಿಸಿದ ನಂತರ ಸಹೋದರನಾದ (ದೊಡ್ಡಮನ ಮಗ) ಪ್ರಹ್ಲಾದನನ್ನು ಕರೆದುಕೊಂಡು ಧಾರವಾಡಕ್ಕೆ ಬಂದರು. ಸೋದರ ಮಾವನವರಾದ ಗೋವಿಂದರಾವ್ ಚುಳಕಿಯವರು ಆಗ ಗೆಳೆಯರ ಗುಂಪಿನ ಸದಸ್ಯರಾಗಿದ್ದರು. ಚುಳಕಿಯವರು ಮನೋಹರ ಗ್ರಂಥ ಮಾಲೆಯ ಸಂಸ್ಥಾಪಕರಲ್ಲೊಬ್ಬರು. ಮುಂದೆ ಈ ಗ್ರಂಥ ಮಾಲೆಯನ್ನು ಜಿ.ಬಿ. ಜೋಶಿಯವರು ವಹಿಸಿಕೊಂಡ ನಂತರ ಚುಳಕಿಯವರು ಮನೋಹರ ಗ್ರಂಥ ಭಂಡಾರವನ್ನು ತೆರೆದು ಈ ಇಬ್ಬರಿಗೂ ಉದ್ಯೋಗದ ಅವಕಾಶವನ್ನು ಕಲ್ಪಿಸಿದರು. ಮನೋಹರ ಗ್ರಂಥ ಭಂಡಾರವನ್ನು ಪ್ರಹ್ಲಾದನು ಕುಳಿತು ನೋಡಿಕೊಂಡರೆ ದ. ಬಾ. ಕುಲಕರ್ಣಿಯವರು ಲಲಿತ ಸಾಹಿತ್ಯ ಮಾಲೆ ಎಂಬ ಪ್ರಕಾಶನ ಸಂಸ್ಥೆಯನ್ನು ತೆರೆದು, ತಾವು ಪ್ರಕಟಿಸಿದ ಪುಸ್ತಕಗಳನ್ನು ಹೊತ್ತು ಮೈಸೂರು, ಕೊಡಗು, ಮುಂಬೈ, ಹೈದರಾಬಾದು, ಮದರಾಸುಗಳನ್ನು ಸುತ್ತಿದರು. ಹೀಗೆ ಪರಿಚಾರಿಕೆ ಕೈಗೊಂಡಾಗ ಇವರಿಗೆ ದೊರೆತ ಲಾಭವೆಂದರೆ ಅನೇಕ ಸಾಹಿತಿಗಳ ಪರಿಚಯ. ಬೇಂದ್ರೆ, ಗೋಕಾಕರು, ಮಾಸ್ತಿ, ಕಾರಂತರು ಮುಂತಾದ ಅನೇಕ ಸಾಹಿತಿಗಳ ಪ್ರೀತಿಯನ್ನು ಗಳಿಸಿದರು. ಇವರು ಪ್ರಾರಂಭಿಸಿದ್ದ ಮನೋಹರ ಗ್ರಂಥ ಭಂಡಾರವು ಬಸ್ಟಾಂಡಿನ ಎದುರಿಗೇ ಇದ್ದು ಅನೇಕ ಸಾಹಿತಿಗಳು ಪ್ರತಿನಿತ್ಯವೂ ಒಂದೆಡೆ ಸೇರುವ ಕೇಂದ್ರ ಸ್ಥಳವಾಯಿತು. ಹೀಗೆ ಸಾಹಿತಿಗಳ ಒಡನಾಟದಿಂದ ದ. ಬಾ. ಕುಲಕರ್ಣಿಯವರು ರಚಿಸಿದ್ದು ಅನೇಕ ಪ್ರಬಂಧಗಳು. ಇವರ ಬದುಕಿನ ಅಂಗವಾಗಿದ್ದ ಪುಸ್ತಕ ಪ್ರಕಾಶನ, ಮಾರಾಟದ ವಿಷಯವನ್ನೇ ಕುರಿತು ಬರೆದ ಪ್ರಬಂಧ ‘ಸಾಹಿತ್ಯ ಭಂಡಾರಿ’ ಎಂಬುದು. ನಂತರ ಹಲವಾರು ಪ್ರಬಂಧಗಳು, ಸಣ್ಣ ಕಥೆಗಳನ್ನು ಬರೆದರು. ಕೊಡಗಿನ ಗೌರಮ್ಮ ಮತ್ತು ಗೀತಾ ಕುಲಕರ್ಣಿಯವರು ಕಥೆಗಾರ್ತಿಯರಾಗಿ ಹೆಸರು ಮಾಡಿದ್ದು ದ. ಬಾ. ಕುಲಕರ್ಣಿಯವರ ಪ್ರಕಾಶನಾದ ಸ್ಫೂರ್ತಿಯಿಂದಲೇ. ಕತೆಗಾರ್ತಿ ಕೊಡಗಿನ ಗೌರಮ್ಮನವರು ದುರಂತದಲ್ಲಿ ತೀರಿಕೊಂಡಾಗ ತಮ್ಮ ಮನದ ಅಳಲಿಗೆ ಅಕ್ಷರ ರೂಪಕೊಟ್ಟು ಬರೆದ ಹೃದಯ ಸ್ಪರ್ಶಿ ಲೇಖನ ‘ನಾ ಕಂಡ ಗೌರಮ್ಮ’ ಎಂಬ ವ್ಯಕ್ತಿಚಿತ್ರ ಬಹುಜನ ಓದುಗರಿಂದ ಪ್ರಶಂಸಿಸಲ್ಪಟ್ಟ ನಂತರ ಹಲವಾರು ವ್ಯಕ್ತಿಚಿತ್ರಗಳನ್ನು ಬರೆದರು. ಹೀಗೆ ಬರೆದ ವ್ಯಕ್ತಿ ಚಿತ್ರಗಳು ‘ಹಕ್ಕಿನೋಟ’ ಮತ್ತು ‘ಸೀಮಾ ಪುರುಷರು’ ಎಂಬ ಸಂಕಲನಗಳಲ್ಲಿ ಸೇರಿವೆ. ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ಇವರು ಭಾಷಾಂತರಿಸಿದ ಮತ್ತೊಂದು ವ್ಯಕ್ತಿಚಿತ್ರಕೃತಿ ‘ಸ್ಮೃತಿ ಚಿತ್ರಗಳು’. ತಮ್ಮ ದೈನಂದಿನ ಪುಸ್ತಕ ಪರಿಚಾರಿಕೆಯ ಸುತ್ತಾಟದ ನಡುವೆಯೂ ಬರೆದದ್ದು ಬಹಳಷ್ಟು ಇಲ್ಲದಿದ್ದರೂ ಪ್ರಬಂಧ ಹಾಗೂ ಕಥಾ ಸಾಹಿತ್ಯಕ್ಕೆ ಇವರು ನೀಡಿದ ಕೃತಿಗಳು ಮೌಲ್ಯದಲ್ಲಿ ಎಲ್ಲಕ್ಕೂ ಸರಿಸಾಟಿಯಾಗಬಲ್ಲವು. ‘ಹಾಸುಹೊಕ್ಕು’, ‘ಕಪ್ಪು ಹುಡುಕಿ’, ‘ನಾಳಿನ ಕನಸು’ ಇವರು ಪ್ರಕಟಿಸಿದ ಮೂರು ಕಥಾ ಸಂಕಲನಗಳಾದರೆ ‘ಪರಿಹಾರ’ ಎಂಬುದು ಕಾದಂಬರಿ. ಸಮಕಾಲೀನ, ಸಾಮಾಜಿಕ ಪರಿಸ್ಥಿತಿ ಸ್ಥಿತ್ಯಂತರಗಳು ಆಧುನಿಕ ಜೀವನ ಕ್ರಮದಿಂದ ಅನಿವಾರ್ಯವಾಗಿ ಸಡಿಲಗೊಳ್ಳುತ್ತಿರುವ ಸಾಮಾಜಿಕ ಕಟ್ಟುಪಾಡುಗಳನ್ನು ‘ನಾಳಿನ ಕನಸು’ ಕಥಾ ಸಂಕಲನದಲ್ಲಿ ಕಾಣಬಹುದಾಗಿದೆ. ದ. ಬಾ.ಕು. ರವರನ್ನು ಕಥೆಗಾರರೆಂದು ಗುರುತಿಸುವುದಕ್ಕಿಂತ ಪ್ರಬಂಧ ಕಾರರೆಂದು ಗುರುತಿಸುವುದೇ ಹೆಚ್ಚು. ಇವರು ಬರೆದ ಪ್ರಬಂಧಗಳು ಕಸ್ತೂರಿ, ಕರ್ಮವೀರ, ಪ್ರಜಾವಾಣಿ, ಜಯಕರ್ನಾಟಕ ಮತ್ತು ನರಸಿಂಹ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿಯಲ್ಲಿ ಪ್ರಸಾರಗೊಂಡ ನಂತರ ‘ಸಾವಧಾನ’ ಎಂಬ ಹೆಸರಿನಿಂದ ಪ್ರಕಟಗೊಂಡು ಮೈಸೂರು ವಿಶ್ವವಿದ್ಯಾಲಯದ ಬಿ.ಕಾಂ. ತರಗತಿಗಳಿಗೆ ಪಠ್ಯವಾಗಿ ಆಯ್ಕೆಯಾಯಿತು. ನಂತರ ಈ ಸಂಕಲನಕ್ಕೆ ಅವರು ತೀರಿಕೊಂಡ ನಂತರ ಮತ್ತಷ್ಟು ಪ್ರಬಂಧಗಳು ಸೇರಿ ಪ್ರಕಟವಾದ ನಂತರ ಬೆಂಗಳೂರು ವಿ.ವಿ.ದ ಪಿ.ಯು. ತರಗತಿಗಳಿಗೆ ಪಠ್ಯವಾಗಿಯೂ ಆಯ್ಕೆಯಾಯಿತು. ಹೀಗೆ ‘ಸಾವಧಾನ’ ಪ್ರಬಂಧ ಸಂಕಲನವು ಮೂರು ಮುದ್ರಣಗಳನ್ನು (೧೯೬೦, ೬೨, ೬೮) ಕಂಡ ಪ್ರಬಂಧ ಸಂಕಲನ. ಇವರ ಲೇಖನಗಳ ಮತ್ತೊಂದು ಸಂಕಲನ ‘ಬದುಕಿದ ಬಾಳು’. ಹೀಗೆ ಸಾಹಿತ್ಯ ಪರಿಚಾರಿಕೆಯಿಂದಲೇ ಸಂತೃಪ್ತಿ ಪಡೆದ ಪ್ರಬಂಧಕಾರ, ಕಥೆಗಾರ, ಹೃದ್ಯವಾದ ವ್ಯಕ್ತಿ ಚಿತ್ರಗಳನ್ನು ನೀಡಿದ ಕುಲಕರ್ಣಿಯವರು ಸಾಹಿತ್ಯಲೋಕವನ್ನು ತ್ಯಜಿಸಿದ್ದು ೧೯೬೩ ರ ಆಗಸ್ಟ್‌೧೧ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top