೨೦.೦೧.೧೯೩೪ ಸಮಕಾಲೀನ ಶಿಲ್ಪಕಲೆಯಲ್ಲಿ ನಿಷ್ಣಾತರಾದ ಧನಂಜಯ ಶಿಲ್ಪಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ. ತಂದೆ ಶಿವಬಸಪ್ಪ, ತಾಯಿ ಮಾಣಿಕ್ಕಮ್ಮ, ಅಥಣಿಯಲ್ಲಿ ಪ್ರಾರಂಭಿಕ ಶಿಕ್ಷಣ, ಹೈಸ್ಕೂಲಿಗೆ ಸೇರಿದ್ದು ಬೆಳಗಾವಿಯ ಸರದಾರ ಹೈಸ್ಕೂಲು. ಚಿಕ್ಕಂದಿನಿಂದಲೂ ಮಣ್ಣಿನ ಮೂರ್ತಿಗಳನ್ನು ರಚಿಸಿ ಅಕ್ಕಪಕ್ಕದವರನ್ನು ಬೆರಗುಗೊಳಿಸುತ್ತಿದ್ದರು. ಹೈಸ್ಕೂಲಿನ ಉಪಾಧ್ಯಾಯರಾದ ಸಿ.ವಿ. ಕಾರದಗಿಯವರು ಶಿಲ್ಪಕಲೆ ಮತ್ತು ಚಿತ್ರಕಲೆಗೆ ಕೊಟ್ಟ ಪ್ರೋತ್ಸಾಹ. ವಿದ್ಯಾರ್ಥಿಯಾಗಿದ್ದಾಗಲೇ ಕಲಾಸ್ಪರ್ಧೆಯಲ್ಲಿ ಭಾಗವಹಿಸಿ ಪಡೆದ ೩೦೦ ರೂ ಪ್ರಥಮ ಬಹುಮಾನ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಪಡೆದ ಪ್ರಥಮ ರ್ಯಾಂಕ್. ಮುಂಬಯಿಯ ಕಲಾಶಾಲೆ ಸೇರಬೇಕೆಂಬ ಆಸೆ. ಬಡತನದ ಬದುಕು. ಓದಿಗೆ ತಿಲಾಂಜಲಿ ಇತ್ತು ಸೇರಿದ್ದು ಗ್ರಾಮ ಸೇವಕನ ಹುದ್ದೆ. ಕೆಲಕಾಲ ಸೋಷಿಯಲ್ ವೆಲ್ಫೇರ್ ಇನ್ಸ್ಪೆಕ್ಟರ್ ಹುದ್ದೆ. ಉದ್ಯೋಗ ಬೇಸರ ತರಿಸಿ ಸೇರಿದ್ದು ಮುಂಬಯಿಯ ಜೆ.ಜೆ. ಕಲಾಶಾಲೆ. ಸದಾ ಪ್ರಥಮ ರ್ಯಾಂಕಿನೊಡನೆ ಕಲಿಕೆ. ಪಡೆದ ಮೂರು ಶಿಷ್ಯವೇತನಗಳು. ಮಹಾರಾಜ ಆಫ್ ಕಚ್ ಎಂಡೋಮೊಟ್ ಸ್ಕಾಲರ್ಷಿಪ್, ಸೆಂಟ್ರಲ್ ಗೌರ್ನಮೆಂಟ್ ಮೆರಿಟ್ ಸ್ಕಾಲರ್ಷಿಪ್, ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಮೆರಿಟ್ ಸ್ಕಾಲರ್ಷಿಪ್, ಶಿಷ್ಯವೇತನದಿಂದ ಹೆಚ್ಚಿದ ಕಲಿಕಾ ದಾಹ. ಕಲ್ಲು, ಸಿಮೆಂಟು, ಲೋಹ, ಪ್ಲಾಸ್ಟರ್ ಆಫ್ ಪ್ಯಾರಿಸ್, ಅಮೃತಶಿಲೆ ಎಲ್ಲದರಲ್ಲೂ ಕೆತ್ತನೆಯ ಕೆಲಸದಲ್ಲಿ ಸಾಧಿಸಿದ ಅಸಾಧಾರಣ ಪ್ರತಿಭೆ. ಶಿಕ್ಷಣ ಮುಗಿಸಿ ಹಲವಾರು ಕಡೆ ಉದ್ಯೋಗ. ಕಲ್ಕತ್ತೆಯ ಬೆಂಗಾಲ್ ಪಾಟ್ರಿಜ್ ಕಂಪನಿ ‘ಚೀಫ್ ಮಾಡಲರ್’ ಆಗಿ ನಂತರ ಓದಿದ ಜೆ.ಜೆ. ಕಲಾಶಾಲೆಯ ಉಪನ್ಯಾಸಕರಾಗಿ ಸೇರಿ ಡೀನ್ ಹಂತದವರೆಗೆ ಹೋದರೂ ಆತ್ಮಾಭಿಮಾನಿಯಾದ ಧನಂಜಯರವರು ನೀಡಿದ ರಾಜೀನಾಮೆ. ಹೆಸರು ತಂದ ಹಲವಾರು ಕೆತ್ತನೆ ಕೆಲಸಗಳು. ಗುಲಬರ್ಗಾದ ದೊಡ್ಡಪ್ಪ ಅಪ್ಪರವರ ಅಮೃತಕಲಾ ವಿಗ್ರಹ, ಸಿಂಧಿಯಾ ನ್ಯಾವಿಗೇಷನ್ ಕಂಪನಿಯ ಅಮೃತಶಿಲೆಯ ಅರ್ಧಮಟ್ಟದ ಪುತ್ಥಳಿಗಳು. ಗೋವಾದ ಫಾದರ್ ರೋಜಾ ಅಮೃತಶಿಲಾ ಪುತ್ಥಳಿ, ಪಂಪ, ರನ್ನ, ಅತ್ತಿಮಬ್ಬೆ ಉಬ್ಬು ಶಿಲ್ಪಗಳು (ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಾಗಿ) ಎಲ್ಲರ ಮೆಚ್ಚುಗೆಗೆ ಪಾತ್ರವಾದದ್ದು ‘ತಾಯಿ ಮತ್ತು ಮಗು’ ಶಿಲ್ಪ. ಸಂದ ಪ್ರಶಸ್ತಿಗಳು ಹಲವಾರು. ರಾಜ್ಯ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಶಿಲ್ಪಕಲೆಯ ಸರ್ವಶ್ರೇಷ್ಠ ಜಕಣಾಚಾರಿ ಪ್ರಶಸ್ತಿ, ಜಾಹೀರಾತು, ಸಿನಿಮಾ ಮಾಧ್ಯಮಗಳಲ್ಲಿ ಕಲಾಕೃತಿಗಳು ಪಡೆದ ಸ್ಥಾನ ಮುಂತಾದುವು. ಇದೇ ದಿನ ಹುಟ್ಟಿದ ಕಲಾವಿದರು : ಆರ್. ಲೀಲಾಬಾಯಿ – ೧೯೨೯
* * *