Loading Events

« All Events

  • This event has passed.

ನರೇಂದ್ರಬಾಬು. ಎಂ.

August 15, 2023

೧೫-೮-೧೯೨೬ ೧೮-೧೦-೧೯೯೯ 15.8_Narendrababu Mಕನ್ನಡದ ಖ್ಯಾತ ಸಾಹಿತಿ, ಚಲನಚಿತ್ರ ಸಂಭಾಷಣಕಾರ, ಗೀತರಚನಕಾರರಾದ ಎಂ. ನರೇಂದ್ರ ಬಾಬುರವರು ಹುಟ್ಟಿದ್ದು ಸಾಹಿತ್ಯ, ಕಲೆ, ಸಂಸ್ಕೃತಿಗೆ ಹೆಸರಾದ ಮೈಸೂರಿನಲ್ಲಿ. ತಂದೆ ಅರಮನೆಯ ಭಕ್ಷಿಗಳಾಗಿದ್ದ ಕಾಶೀಪತಯ್ಯನವರು, ತಾಯಿ ಮರಮ್ಮಣ್ಣಿಯವರು. ಪ್ರಾರಂಭಿಕ ಶಿಕ್ಷಣ ಮೈಸೂರು ಶಾರದಾ ವಿಲಾಸ್ ಪ್ರೌಢಶಾಲೆಯಲ್ಲಿ. ಹೈಸ್ಕೂಲು ಓದುತ್ತಿದ್ದಾಗಲೇ ಬೆಳೆದ ಸಾಹಿತ್ಯ ರಚನೆಯ ಹವ್ಯಾಸ. ಶಾಲೆಯ ಪತ್ರಿಕೆ ‘ಗರಿಕೆ’ಯಲ್ಲಿ ಕಥೆ, ಕವನ, ಪ್ರಕಟಿತ. ಎಸ್.ಎಸ್.ಎಲ್.ಸಿ.ಯ ನಂತರ ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರಿನ ಯುವರಾಜ ಕಾಲೇಜು. ಡಿ.ಎಲ್. ನರಸಿಂಹಾಚಾರ‍್ಯರು ಇವರ ನೇರ ಗುರುಗಳಾದರೆ, ಎಂ.ವಿ. ಸೀತಾರಾಮಯ್ಯ, ಎ.ಆರ್. ಕೃಷ್ಣಶಾಸ್ತ್ರಿಗಳು ಪರೋಕ್ಷವಾಗಿ ಸಾಹಿತ್ಯಕ್ಕೆ ಇಂಬುಕೊಟ್ಟವರು. ತರಗತಿಯಲ್ಲಿ ಡಿ.ಎಲ್.ಎನ್.ರವರು ‘ರೈಲ್ವೆ ಪ್ರಯಾಣ’ ಕುರಿತು ಬರೆಸಿದ ಪ್ರಬಂಧ. ಇವರ ಪ್ರಬಂಧ ಉಪಾಧ್ಯಾಯರ ಮೆಚ್ಚುಗೆ ಪಡೆದು ವಿ.ಸೀ.ಯವರು ಸಂಪಾದಕರಾಗಿದ್ದ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಿತ. ಬಾಬುಗಳಿಗಾದ ಸಂತೋಷ ಅಷ್ಟಿಷ್ಟಲ್ಲ. ನಾಟಕ, ಹಾಡುಗಾರಿಕೆಗಳತ್ತ ಒಲಿದ ಮನಸ್ಸು. ಅಷ್ಟರಲ್ಲಿ ಬರೆದಿದ್ದ ‘ರಾಘಣ್ಣನ ರಥ’ ತುಂಬ ಪ್ರಸಿದ್ಧಿ ತಂದುಕೊಟ್ಟ ನಾಟಕ. ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಹಲವಾರು ಬಾರಿ ಹಲವಾರು ತಂಡಗಳಿಂದ ಪ್ರದರ್ಶನ. ಸ್ನೇಹಿತರ ಒತ್ತಾಯಕ್ಕೆ ಕಟ್ಟು ಬಿದ್ದು ಬರೆದ ನೀಳ್ಗವನ ‘ಚಿರದುಃಖಿ’. ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳದಿದ್ದರೂ ತಂದುಕೊಟ್ಟ ಚಿನ್ನದ ಪದಕ. ಮುನ್ನೂರು ಸಾಲುಗಳೆಂದರೆ ಮುನ್ನೂರಕ್ಕಿಂತ ಕಡಿಮೆ ಅಥವಾ ಹೆಚ್ಚಿರಬಾರದೆಂಬ ಕಟ್ಟುನಿಟ್ಟಿನಲ್ಲೂ ಮುನ್ನೂರು ಸಾಲು ಬರೆದು ೧೯೪೫ರಲ್ಲಿ ಪಡೆದ ಬಿ.ಎಂ.ಶ್ರೀ.ಯವರ ಚಿನ್ನದ ಪದಕ. ಹೇಳಲಸಾಧ್ಯ ಸಂತಸ. ೧೯೮೪ರಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿದ ‘ಶ್ರೀಕಂಠಿಕೆ’ಯಲ್ಲೂ ಕವನ ಸೇರ‍್ಪಡೆಯಾದಾಗ, ಕುವೆಂಪು, ಎಸ್.ವಿ. ಪರಮೇಶ್ವರಭಟ್ಟ, ಜಿ.ಪಿ. ರಾಜರತ್ನಂರವರ ಸಾಲಿಗೆ ಸೇರಿದೆನೆಂಬ ಧನ್ಯತಾಭಾವ. ಸಾಹಿತ್ಯದಲ್ಲಿ ಮೊದಲ ದರ್ಜೆ ಗಳಿಸಿದ್ದರೂ ಪಠ್ಯ ವಿಷಯದಲ್ಲಿ ಇಂಟರ್ ದಾಟಲೇ ಇಲ್ಲ. ಮೊದಲ ಕಾದಂಬರಿ ‘ನಾಲ್ಕನೆಯ ಮನೆ’ ಪ್ರಕಟ. ಆರ್.ಎಂ. ವೀರಭದ್ರಯ್ಯನವರು ನಿರ್ದೇಶಿಸುತ್ತಿದ್ದ ಚಲನಚಿತ್ರಕ್ಕೆ ಸಾಹಿತ್ಯ ರಚನೆಗೆ ಆಹ್ವಾನ. ೧೯೪೭ರಲ್ಲಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ. ೧೯೬೪ರಲ್ಲಿ ‘ಸರ್ವಜ್ಞಮೂರ್ತಿ’, ಡಾ. ರಾಜಕುಮಾರ್ ನಾಯಕತ್ವದಲ್ಲಿ ತಾವೇ ನಿರ್ಮಿಸಿದ ಚಲನಚಿತ್ರ. ಸುಮಾರು ೮೫ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ಸಾಹಿತ್ಯ. ಸಂಧ್ಯಾರಾಗ, ಎಡಕಲ್ಲು ಗುಡ್ಡದ ಮೇಲೆ, ಭಾಗ್ಯಜ್ಯೋತಿ ಪ್ರಮುಖವಾದುವು. ಸುಮಾರು ನೂರೈವತ್ತಕ್ಕೂ ಹೆಚ್ಚು ಚಲನಚಿತ್ರಗೀತೆ ರಚನೆ. ಸುಮಾರು ೧೦ ಕಾದಂಬರಿಗಳು. ಸತ್ಯಭಾಮ, ಹಕ್ಕಿಗಿಟ್ಟ ಗುರಿ, ಹಾವಾಡಿಗ, ಕುಡಿನೋಟ ಜನಪ್ರಿಯ ಕಾದಂಬರಿಗಳು. ಕಥಾಸಂಕಲನ-ಸಂಪಿಗೆ ಪ್ರಕಟಿತ. ಹಲವಾರು ನಾಟಕಗಳು, ಕಾದಂಬರಿ, ಕಥಾಸಂಕಲನಗಳನ್ನು ರಚಿಸಿದ ಬಾಬುರವರು ನಿಧನರಾದದ್ದು ಅಕ್ಟೋಬರ್ ೧೮ರ ೧೯೯೯ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಬೆಸಗರಹಳ್ಳಿ ರಾಮಣ್ಣ – ೧೯೩೮ ಮಧು ಪೀಹಳ್ಳಿ – ೧೯೪೬ ಯಶೋಧ. ವಿ. – ೧೯೫೬ ಐರೋಡಿ ಯಜ್ಞನಾರಾಯಣ ಉಡುಪ-೧೯೧೦

Details

Date:
August 15, 2023
Event Category: