ನಾಡಿಗೇರ್‌ ಕೃಷ್ಣರಾವ್

Home/Birthday/ನಾಡಿಗೇರ್‌ ಕೃಷ್ಣರಾವ್
Loading Events
This event has passed.

೨೫..೧೯೦೮ ೦೩..೧೯೯೨ “ನೋವನ್ನು ನಗೆಯಾಗಿ ಪರಿವರ್ತಿಸಿಕೊಳ್ಳಬೇಕು, ನೋವಿನ ಕಾಯಿಲೆಗೆ ನಗೆಯ ಇಂಜಕ್ಷನ್‌ಕೊಟ್ಟು ರೋಗ ಪರಿಹರಿಸಬೇಕು” ಎಂಬ ಸಿದ್ಧಾಂತವನ್ನು ರೂಪಿಸಿದ್ದಷ್ಟೇ ಅಲ್ಲದೆ ಬದುಕಿನಲ್ಲೂ ಅಳವಡಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಹಾಸ್ಯ ಲೇಪನ ಮಾಡಿ, ತಮ್ಮದೇ ಲಘು ಧಾಟಿಯಲ್ಲಿ ಹಾಸ್ಯಬರಹಗಳನ್ನು ನೀಡಿ ಕನ್ನಡಿಗರನ್ನು ಸುಮಾರು ಆರು ದಶಕಗಳ ಕಾಲ ರಂಜಿಸಿದ ಪತ್ರಕರ್ತ, ಕಾದಂಬರಿಕಾರ, ಕಥೆಗಾರ, ವಿಮರ್ಶಕ, ಸಿನಿಮಾಸಾಹಿತಿ, ಕನ್ನಡಪರ ಹೋರಾಟಗಾರ ನಾಡಿಗೇರ್ ಕೃಷ್ಣರಾಯರು ಹುಟ್ಟಿದ್ದು ಹರಿಹರದಲ್ಲಿ ೧೯೦೮ರ ಮಾರ್ಚ್ ೨೫ರ ಯುಗಾದಿ ಹಬ್ಬದ ದಿನ. ತಂದೆ ದತ್ತಾತ್ರೇಯ ರಾಯರು, ತಾಯಿ ಕಾಂಚಮ್ಮ. ತಂದೆಗೆ ನಾಟಕದ ಗೀಳು, ಜೊತೆಗೆ ಸಾಹಿತ್ಯದ ದಿಗ್ಗಜರುಗಳಾದ ಹರ್ಡೇಕರ್‌ಮಂಜಪ್ಪ, ಗಳಗನಾಥ, ಹೊಸಕೆರೆ ಚಿದಂಬರಯ್ಯ, ಕುಕ್ಕೆಸುಬ್ರಹ್ಮಣ್ಯ ಶಾಸ್ತ್ರಿ ಮುಂತಾದವರುಗಳು ಆಗಾಗ್ಗೆ ಇವರ ಮನೆಯಲ್ಲಿ ಸೇರಿ ನಡೆಸುತ್ತಿದ್ದ ಸಾಹಿತ್ಯ ಚರ್ಚೆಯಿಂದ ಪ್ರಭಾವಿತರಾದ ನಾಡಿಗೇರರಿಗೂ ಸಾಹಿತ್ಯದಲ್ಲಿ ಮೂಡಿದ ಆಸಕ್ತಿ. ಓದಿದ್ದು ಫಿಫ್ತ್‌ಫಾರಂ ಅಂದರೆ ಈಗಿನ ಹೈಸ್ಕೂಲು ೯ನೆಯ ತರಗತಿಯವರೆಗೆ. ಎರಡು ಸಾರೆ ಪರೀಕ್ಷೆಗೆ ಕುಳಿತರೂ ನಪಾಸು. ಆದರೆ ಇವರ ಮಾತಿನ ಮೋಡಿಗೆ, ಹಾಸ್ಯ ಚಟಾಕಿಗಳಿಗೆ ಕಿವಿಗೊಟ್ಟು ನಕ್ಕು ನಲಿಯಲು ನೆರೆದಿರುತ್ತಿದ್ದುದು ಸದಾ ಹುಡುಗರ ದಂಡು. ಹರಿಹರದ ಕೋಟೆ ಭಾಗದಲ್ಲಿ ನಾಡಿಗೇರ್ ಕಿಟ್ಟಿ ಎಂದೇ ಪಡೆದ ಪ್ರಸಿದ್ಧಿ. ವಿದ್ಯೆಗೆ ಶರಣು ಹೊಡೆದು ಜವಳಿ ಅಂಗಡಿ ಗುಮಾಸ್ತರಾಗಿ, ಮೈಸೂರು ಮಾಡರ‍್ನ್ ಹೊಟೇಲಿನಲ್ಲಿ, ಭದ್ರಾವತಿ – ನರಸಿಂಹರಾಜ ಪುರದಲ್ಲಿ ದಿನಗೂಲಿ ಮಾಡಿ, ಲಕ್ಕವಳ್ಳಿ ಇದ್ದಿಲು ಸುಡುವ ಕಡೆ ಮೇಲ್ವಿಚಾರಕರಾಗಿ, ಶಾನುಭೋಗರಾಗಿ – ಹೀಗೆ ಏನೇನೋ ಆಗಿ ಕಡೆಗೆ ಬಂದು ಸೇರಿದ್ದು ಪತ್ರಿಕೋದ್ಯಮ. ಪತ್ರಿಕೋದ್ಯಮದ ಭೀಷ್ಮರೆನಿಸಿದ್ದ ಬಿ.ಎನ್.ಗುಪ್ತ ಮತ್ತು ನಾಡಿಗೇರರ ಸ್ನೇಹ ಮೂರ‍್ನಾಲ್ಕು ದಶಕಗಳ ಕಾಲ ಅವ್ಯಾಹತ. ಅವರ ಮಾತುಗಾರಿಕೆಯ ವಿಶಿಷ್ಟ ರೀತಿಯ ಹಾಸ್ಯಭರಿತ ಕೌಶಲ್ಯದಿಂದ ಕೂಡಿದಂತೆ ಬರವಣಿಗೆಯೂ ಸೂಕ್ತಭಾಷಾ ಪ್ರಯೋಗದ ಮೂಲಕ ಓದುಗರನ್ನು ರಂಜಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಬಹುಶಃ ಇದೇ ಕಾರಣಕ್ಕೆ ಅವರು ಪತ್ರಿಕೋದ್ಯಮವನ್ನೇ ವೃತ್ತಿಯಾಗಿ ಅಯ್ಕೆ ಮಾಡಿಕೊಂಡು ಅಂದಿನ ಲೋಕಮತ, ಸಂಯುಕ್ತ ಕರ್ನಾಟಕ, ಕಥಾಂಜಲಿ, ಪ್ರಜಾಮತ, ದೇಶಬಂಧು, ಸಂಜಯ, ಸುಗ್ಗಿ, ಸತ್ಯ, ಕ್ರಾಂತಿ, ಸಿನೀಮಾ, ಪ್ರಜಾಮತ, ತಾಯಿನಾಡು, ಜನಪ್ರಗತಿ, ಮಲ್ಲಿಗೆ, ಮೈಸೂರು ಪ್ರಭ, ಉಷಾ ಮುಂತಾದ ಪತ್ರಿಕೆಗಳಲ್ಲಿ ಸಹಸಂಪಾದಕರಾಗಿ, ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಅ.ನ.ಕೃ. ರವರ ಪರಿಚಯವಾದ ನಂತರ ಇವರಲ್ಲಿದ್ದ ಸಾಹಿತ್ಯದ ಪ್ರತಿಭೆಗೆ ಅವಕಾಶ ದೊರೆತು ಲಘು ಬರಹಗಳನ್ನು ಬರೆದಂತೆ ಕನ್ನಡ ಪರ ಹೋರಾಟದಲ್ಲಿಯೂ ಸಕ್ರಿಯವಾಗಿ ಅ.ನ.ಕೃ. ರೊಡನೆ ತೊಡಗಿಸಿಕೊಂಡರು. ೧೯೫೧ರಿಂದ ಮೂರು ದಶಕಗಳ ಕಾಲ ಜಿ. ನಾರಾಯಣ ರವರ ‘ವಿನೋದ’ ಹಾಸ್ಯಪತ್ರಿಕೆಗೆ ಅವ್ಯಾಹತವಾಗಿ ಹಾಸ್ಯಲೇಖನಗಳನ್ನು ಬರೆದರು. ವಿನೋದ ಪತ್ರಿಕೆಯ ಕಚೇರಿಯ ಬೆಂಚಿನ ಮೇಲೆ ಕುಳಿತು ‘ಬರೆಯೋದಕ್ಕೆ ಒಂದಿಷ್ಟು ಪೇಪರ್‌ಕೊಡಿ’ ಎಂದು ಬಿಳಿಹಾಳೆ ಪಡೆದು, ಒಂದು ಕಪ್‌ಕಾಫಿ ಕುಡಿದು, ಸಿಗರೇಟ್ ಹಚ್ಚಿ, ಅರ್ಧ ಗಂಟೆಯಲ್ಲಿ ಹಾಸ್ಯಲೇಖನ ಬರೆದು ಕೊಟ್ಟ ಗೌರವಧನವನ್ನು ಜುಬ್ಬದ ಜೇಬಿಗಿಳಿಸಿ ನಡೆದುಬಿಡುತ್ತಿದ್ದರಂತೆ. ನಾಡಿಗೇರರ ಬರವಣಿಗೆಯಲ್ಲಿ ಇವರೇ ನಾಯಕರು, ಇವರ ಶ್ರೀಮತಿ ಯವರೇ ನಾಯಕಿ, ಮಕ್ಕಳಿಬ್ಬರು ಪೋಷಕ ಪಾತ್ರಧಾರಿಗಳು. ಆದರೆ ಪಾತ್ರರಚನೆಯಲ್ಲಿ ಡಜನ್ ಗಂಡು ಮಕ್ಕಳು, ಮೇಲೊಂದು ಹೆಣ್ಣು ಮಗು ಎಂದೇ ಚಿತ್ರಿಸುತ್ತಿದ್ದರು. ಇದನ್ನು ಓದಿದ ಹಲವಾರು ಮಂದಿ ಬೇಸ್ತು ಬಿದ್ದಿದ್ದಾರೆ. “ಈ ವಯ್ಯಂಗೆ ಅಷ್ಟುಬುದ್ಧಿ ಬ್ಯಾಡ್ವಾ, ಹದಿಮೂರು ಮಕ್ಕಳ್ನ ಸಾಕೋದು ಅಂದ್ರೆ ಸುಮ್ಕಾತ್ತಾದಾ?” ಎಂದು ಭಾಷಣ ಕೇಳಿ ಪ್ರತಿಕ್ರಿಯಿಸುತ್ತಿದ್ದರಂತೆ. ಕೆಲವು ಸಾರೆ ಮಕ್ಕಳಿಬ್ಬರು ಮದ್ದು, ಗುಂಡು ನಾಮಾಂಕಿತರಾಗುತ್ತಿದ್ದರು. ‘ಅನುಭವಕ್ಕಿಂತ ಹಾಸ್ಯಕ್ಕೆ ಮತ್ತೊಂದು ಉತ್ತಮ ಆಕರವಿಲ್ಲ’ ಎಂಬುದನ್ನು ಮನಗಂಡಿದ್ದ ನಾಡಿಗೇರರು ದಿನ ನಿತ್ಯ ತಾವು ಕಾಣುತ್ತಿದ್ದ ಘಟನೆಗಳಿಗೆ ಹಾಸ್ಯದ ಲೇಪಹಚ್ಚಿ ಬರೆದ ನಗೆ ಹನಿಗಳು ಬಹಳಷ್ಟು ಜನರನ್ನು ರಂಜಿಸಿವೆ. ಹೀಗೆ ಬರೆದ ಹಾಸ್ಯಬರಹ ಸಂಕಲನಗಳು ‘ತಲೆಹರಟೆ’ಯಿಂದ ‘ಹರಕು ಮುರುಕು’ ಆಗಿ ನಗೆ ಚಿಮ್ಮಲೆತ್ನಿಸಿ, ನಗೆ ಉಕ್ಕಿಸಲು ಅಸಮರ್ಥವಾದದ್ದನ್ನು ನಿರ್ಯೋಚನೆಯಿಂದ ‘ಕಸದ ಬುಟ್ಟಿಗೆ’ ಎಸೆದರೂ ಎಂದೂ ‘ಅಡ್ಡಾದಿಡ್ಡಿ’ ಹಾದಿ ಹಿಡಿಯದೆ, ಹಾಳೂಮೂಳು ಬರೆದು ಸಮಾಜದ ಸ್ವಾಸ್ಥ ಕೆಡಿಸಿದರೆಂದು ‘ಕಿಡಿಗೇಡಿಗಳು’ ಕಿಚಾಯಿಸಿದರೂ ಒಪ್ಪದೆ ಬರೆದ ಹಾಸ್ಯ ಮಹಾಪೂರ ‘ನಾಡಿಗೇರರ ನಗೆ ಬರಹಗಳು’ ಎಂಬ ಮೂರು ಹಾಸ್ಯಕೃತಿಗಳಾಗಿ ‘ಹಾಸ್ಯರಸಾಯನ’ವಾಗಿ ಹರಿದ ಬಂದಿದ್ದನ್ನು ಜನತೆ ‘ಮೆಲ್ಲೋಗರ’ದಂತೆ ಸವಿಯದವರಿಗೆ ಮುಟ್ಟಿಸಿದ್ದು ‘ಹಾಸ್ಯ ಬರೆಗಳು’. ಇವುಗಳನ್ನು ಓದಿದ ಹಾಸ್ಯಪ್ರಿಯರು ಇವೆಲ್ಲವನ್ನೂ ನಗುನಗುತ್ತಲೇ ‘ನೈಲಾನ್ ಹುಡುಗಿ’ಯನ್ನೂ ಸ್ವಾಗತಿಸಿದರು. ಹೀಗೆ ಬರೆದದ್ದು ನಗೆಯ ೧೩ ಹಾಸ್ಯ ಸಂಕಲನಗಳಲ್ಲದೆ ‘ಪ್ರಣಯ ಕೋಲಾಹಲ’ ಮತ್ತು ‘ತವರಿಗೆ ಬಂದ ಹೆಣ್ಣು ಮಕ್ಕಳು’ ಎಂಬ ಎರಡು ಹಾಸ್ಯಕಾದಂಬರಿಗಳು. ಇದರ ಜೊತೆಗೆ ‘ರನ್ನಗನ್ನಡಿ’ ಎಂಬ ಕಥಾಸಂಕಲನ. ‘ಪ್ರಣಯಕಥೆಗಳು’ (ಅನುವಾದ), ರಾಷ್ಟ್ರಪತಿ ವಿ.ವಿ. ಗಿರಿ (ಜೀವನ ಚರಿತ್ರೆ), ಶ್ರೀ ಹರಿಹರ ಕ್ಷೇತ್ರ (ಕ್ಷೇತ್ರ ಪರಿಚಯ), ಪುಢಾರಿ ಪುಟ್ಟಯ್ಯ (ಹಾಸ್ಯನಾಟಕ) ಮತ್ತು ಎದಿರೇಟು, ರಾಜಾರಾಣಿ ಗುಲಾಮ, ಮೂರಕ್ಕೆ ಮುಕ್ತಿ, ಗಗನ ಚಂದಿರ, ಅದಲುಬದಲು ಮುಂತಾದ ೪೨ ಸಾಮಾಜಿಕ ಕಾದಂಬರಿಗಳೂ ಸೇರಿ ಒಟ್ಟು ೬೭ ಕೃತಿಗಳನ್ನು ರಚಿಸಿದ್ದಾರೆ. ತಾವು ಬರೆದುದಷ್ಟೇ ಅಲ್ಲದೆ ಬರಹಗಾರರ ಬೆನ್ನೆಲುಬಾಗಿ ನಿಂತು ಹಲವಾರು ಲೇಖಕರಿಂದ ಕಥೆ, ಕಾದಂಬರಿ ಬರೆಸಿದ್ದಾರೆ. ಬೆಂಗಳೂರಿನ ಅನೇಕ ಮಂದಿ ಲೇಖಕ, ಲೇಖಕಿಯರನ್ನು ಸೇರಿಸಿ ‘ಸಂದಿಗ್ಧದ ಸುಳಿಯಲ್ಲಿ’ ಎಂಬ ಖೋಖೋ ಕಾದಂಬರಿಯನ್ನು ಬರೆಸಿದರಂತೆ. ಮೈಸೂರಿನ ಎಸ್. ಮಂಗಳಾ ಸತ್ಯನ್ ರವರ ಅಪೇಕ್ಷೆಯಂತೆ ಮೈಸೂರಿನ ಬರಹಗಾರರಾದ ವಾಣಿ, ಆರ್ಯಾಂಬ ಪಟ್ಟಾಭಿ, ಜನಾರ್ಧನ ಗುರ್ಕಾರ್‌, ರಘುಸುತ, ಪುಷ್ಪಾ ಎನ್.ರಾವ್. ರಾಮದಾಸ್, ಬಿ.ಎನ್ ನಾಗರಾಜ ಭಟ್, ನಾರಾಯಣ ಬಲ್ಲಾಳ, ರಾವ್ ದಂಡಿನ, ಮಂಗಳಾ ಸತ್ಯನ್‌ರವರು ಸೇರಿ ರಚಿಸಿದ ಕಾದಂಬರಿ ‘ತವರಿನ ಕುಡಿ’. ಹೀಗೆ ಹೊಸ ಬರಹ ಗಾರರಿಗೆ ಪ್ರೋತ್ಸಾಹ ಕೊಡಬೇಕೆಂಬ ವಿಶಾಲ ಮನೋಭಾವವನ್ನು ಹೊಂದಿದ್ದರು. ಚಿತ್ರರಂಗದ ಸಂಪರ್ಕಕ್ಕೂ ಬಂದ ನಾಡಿಗೇರರು ಸಿ.ವಿ. ರಾಜುರವರು ನಿರ್ಮಿಸಿದ ‘ನಟ ಶೇಖರ’ ಚಿತ್ರಕ್ಕೆ (೧೯೫೪ ರಲ್ಲಿ ತೆರೆಕಂಡ) ಸಂಭಾಷಣೆ ಮತ್ತು ೧೫ ಹಾಡುಗಳನ್ನು ಬರೆದುದಲ್ಲದೆ ಚೊಕ್ಕಣ್ಣ ಎಂಬ ಯುವಕನಿಗೆ ಕಲ್ಯಾಣ ಕುಮಾರ್ ಎಂದು ನಾಮಕರಣ ಮಾಡಿದವರೂ ಇವರೇ. ಮತ್ತೆ ಇದೇ ನಿರ್ಮಾಪಕರಿಗೆ ಭಕ್ತಮಲ್ಲಿಕಾರ್ಜುನ (೧೯೫೫ ರಲ್ಲಿ ತೆರೆಕಂಡ) ಚಿತ್ರಕ್ಕೆ ೮ ಹಾಡುಗಳನ್ನು ಬರೆದರು. ಮತ್ತೊಂದು ಚಿತ್ರ ಲವ-ಕುಶ ಚಿತ್ರಕ್ಕೆ ಹಾಡು, ಸಾಹಿತ್ಯದ ಜೊತೆಗೆ ನಿರ್ದೇಶನದ ಹೊಣೆಯನ್ನು ಸಿ.ವಿ.ರಾಜು ರವರು ವಹಿಸಿದರಾದರೂ ಚಿತ್ರಸೆಟ್ಟೇರಲೇ ಇಲ್ಲ. ಆರುಜನ ಸಹೋದರರಲ್ಲಿ ನಾಡಿಗೇರ್‌ ಗೋವಿಂದರಾವ್, ನಾಡಿಗೇರ್‌ ಮಾಧವ ರಾವ್‌(ಮಾಧುಗೇರ್) ಮತ್ತು ನಾಡಿಗೇರ್ ಕೃಷ್ಣರಾಯರು ಹಾಸ್ಯಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಗೋವಿಂದರಾವ್‌ ಬರೆದದ್ದು ಕಡಿಮೆ. ನಗೆಬುಗ್ಗೆ, ಗೋವಿಂದರಾಯರ ಬರಹಗಳು, ಗೋವಿಂದರಾಯನ ಗೋತಾ ಮುಂತಾದವು. ಮಾಧುಗೇರ್ ಬರೆದದ್ದು ಮಕಮಲ್ ಚೂರಿ ಹಾಸ್ಯ ಸಂಕಲನವಾದರೆ ಅಶ್ರುಧಾರಾ ಕಾದಂಬರಿ. ಹೀಗೆ ಪತ್ರಿಕೋದ್ಯಮ ಇವರ ವಂಶಕ್ಕಂಟಿದ ನಂಟು. ನಾಡಿಗೇರ್‌ಕೃಷ್ಣರಾಯರ ಒಬ್ಬಮಗ ನಾಡಿಗೇರ್‌ಶ್ರೀಕಾಂತ್‌- ಇವರ ಮಗ ಚೇತನ್ ನಾಡಿಗೇರ್ ಕೂಡಾ ಪತ್ರಕರ್ತರೆ. ಹೀಗೆ ಹಲವಾರು ದಶಕಗಳ ಕಾಲ ಬೀಚಿ, ಅ.ನ.ಕೃ., ತ.ರಾಸು, ಕೃಷ್ಣಮೂರ್ತಿ ಪುರಾಣಿಕ ಇವರುಗಳೊಡನೆ ಕನ್ನಡಿಗರಿಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ರಸದೂಟ ಬಡಿಸಿದ ನಾಡಿಗೇರರು ಹಾಸ್ಯಲೋಕದಿಂದ ದೂರ ನಡೆದದ್ದು ಮಾರ್ಚ್‌೩ರ ೧೯೯೨ ರಲ್ಲಿ. ಈ ಹಾಸ್ಯ ಚಕ್ರವರ್ತಿಗೆ ಹಿತೈಷಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಾಡಿಗೇರ್‌’ (೧೯೭೨) ಮತ್ತು ೨೦೦೦ ದಲ್ಲಿ ನಾಡಿಗೇರರ ಆಯ್ದ ನಗೆ ಬರಹಗಳು ಮತ್ತು ೨೦೦೭ ರಲ್ಲಿ ಬೆಸ್ಟ್ ಆಫ್‌ನಾಡಿಗೇರ್ (ಸಂ: ವೈ.ಎನ್. ಗುಂಡೂರಾವ್) ಕೃತಿಗಳು ಪ್ರಕಟವಾಗಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top