೨೫-೧-೧೯೨೧ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಗ್ರಾಮ. ತಂದೆ ನರಸಿಂಗರಾವ್ ನಾಡಿಗ, ತಾಯಿ ಕಮಲಾಬಾಯಿ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಆನವಟ್ಟಿಯಲ್ಲಿ. ಶಿವಮೊಗ್ಗದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಕಾಲೇಜಿಗೆ ಸೇರಿದ್ದು ಮೈಸೂರು. ಎಂ.ಎ. ಪದವಿ ಪಡೆದದ್ದು ಅಮೆರಿಕದಲ್ಲಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ.ಗಾಗಿ “ಪತ್ರಿಕೋದ್ಯಮ ಇತಿಹಾಸ” ಮಹಾಪ್ರಬಂಧ ಮಂಡಿಸಿ ಪದವಿ ಗಳಿಕೆ. ಕಾಲಿಗೆ ಚಕ್ರ ಧರಿಸಿದಂತೆ ಒಂದೆಡೆ ನಿಲ್ಲದ ಬದುಕು. ಕರೆ ಬಂದತ್ತ ಓಡು-ಬೋಧನೆ-ಹಲವಾರು ಬಾರಿ ಹಲವಾರು ದೇಶಗಳ ಸಂದರ್ಶನ. ಅಮೆರಿಕ, ಇಂಗ್ಲೆಂಡ್, ರಷ್ಯ, ಫ್ರಾನ್ಸ್, ಜರ್ಮನಿ, ಜಪಾನ್, ಚೀನಾ, ಯುಗೋಸ್ಲಾವಿಯಾ, ಥೈಯ್ಲ್ಯಾಂಡ್, ಫಿಲಿಪೈನ್ಸ್, ದೇಶಗಳ ಸಂದರ್ಶನ. ಪ್ರಾಧ್ಯಾಪಕರಾಗಿ ಸುತ್ತಾಟ. ಮೈಸೂರಿಗೆ ಹಿಂದಿರುಗಿದಾಗ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪ್ರಾರಂಭ. ವಿಭಾಗದ ಮುಖ್ಯಸ್ಥರ ಹೊಣೆ ಇವರ ಹೆಗಲಿಗೆ. ಕಡೆಗೆ ಪ್ರಿನ್ಸಿಪಾಲರ ಹುದ್ದೆ. ಇವರ ಕಾರ್ಯತತ್ಪರತೆಗಾಗಿ ಅರಸಿ ಬಂದ ಪ್ರಶಸ್ತಿಗಳು ಹಲವಾರು. ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ. ಕರ್ನಾಟಕ ಸರ್ಕಾರದ ಪ್ರಶಸ್ತಿ, ಲೋಕಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕೇಂದ್ರ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಯ ಬಹುಮಾನಗಳು. ಹಿಂದಿ ಸಾಹಿತ್ಯ ಪರಿಷತ್ನಿಂದ ‘ಪತ್ರಕಾರ ಶಿರೋಮಣಿ ’ ಬಿರುದು. ಅಖಿಲ ಭಾರತ ಪತ್ರಿಕೋದ್ಯಮ ಶಿಕ್ಷಣ ಸಂಘ ಸ್ಥಾಪನೆ. ಅಂದಿನ ರಾಜ್ಯ ಪತ್ರಿಕಾ ಅಕಾಡಮಿಯ ಪ್ರಥಮಾಧ್ಯಕ್ಷರ ಪಟ್ಟ. ೧೬.೩.೧೯೮೨- ೧.೫.೧೯೮೩ವರೆಗೆ. ರಚಿಸಿದ ಕೃತಿಗಳು ೪೦ಕ್ಕೂ ಮಿಕ್ಕು. ಶಾಂತಿ ಸಾರ್ವಭೌಮರು, ಕಮಲಾ ನೆಹರು, ಭಾರತದ ವೀರರಮಣಿಯರು ಮುಂತಾದವರ ಜೀವನ ಚರಿತ್ರೆ. ಭಾರತೀಯ ಪತ್ರಿಕೋದ್ಯಮ, ಪತ್ರಿಕೋದ್ಯಮ ಪರಿಚಯ ಮೊದಲಾದ ಪತ್ರಿಕೋದ್ಯಮಕ್ಕೆ ಸಂಬಂಸಿದ ಕೃತಿಗಳು. ‘ಸಾಗರದಾಚೆ ’ ಪ್ರವಾಸ ಸಾಹಿತ್ಯ ರಚನೆ. ಇಂಗ್ಲಿಷ್ನಲ್ಲೂ ಹಲವಾರು ಕೃತಿರಚನೆ. ಟೆನಿಸ್, ತೋಟಗಾರಿಕೆ, ಸದಾ ಪ್ರವಾಸ ಪ್ರಿಯರಾಗಿದ್ದ ಇವರು ಗತಿಸಿದ್ದು ೧೯೮೩ರಲ್ಲಿ.

