೧೯೨೮ ಪ್ರಸಿದ್ಧ ವಾಗ್ಗೇಯಕಾರರು, ಸಂಗೀತಜ್ಞರು, ಸಂಗೀತ ಶಿಕ್ಷಕರೂ ಆದ ವೆಂಕಣ್ಣಾಚಾರ್ ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ. ತಂದೆ ಕುರುಡಿ ಅಡಿವಾಚಾರ್, ತಾಯಿ ಗಂಗಮ್ಮ, ತಂದೆಯಿಂದಲೇ ಸಂಗೀತದ ಪ್ರಥಮ ಪಾಠ, ಆಸ್ಥಾನ ವಿದ್ವಾಂಸರಾಗಿದ್ದ ಚಿಂತಲಪಲ್ಲಿ ವೆಂಕಟರಾಯರಲ್ಲಿ ಮುಂದುವರೆದ ಶಿಕ್ಷಣ. ಕನ್ನಡದ ಕೃತಿಗಳಲ್ಲೇ ಮೂರು ಗಂಟೆಗೂ ಮಿಕ್ಕು ಕಚೇರಿ ನಡೆಸಿದ ಖ್ಯಾತಿ. ಆಕಾಶವಾಣಿ, ದೂರದರ್ಶನಗಳಿಂದ ಕಾರ್ಯಕ್ರಮ ಪ್ರಸಾರ. ಆಕಾಶವಾಣಿ ಆಡಿಷನ್ ಬೋರ್ಡಿನ ತೀರ್ಪುಗಾರರಾಗಿ, ಬೆಂಗಳೂರು ವಿ.ವಿ.ದ ಸಂಗೀತ ಪರೀಕ್ಷೆಯ ಪರೀಕ್ಷಕರಾಗಿ, ಕರ್ನಾಟಕ ಗಾನಕಲಾ ಪರಿಷತ್ತಿನ ಸಮಿತಿ ಸದಸ್ಯರಾಗಿ ಸಲ್ಲಿಸಿದ ಸೇವೆ. ಅಮೆರಿಕದ ಹಲವಾರು ಕಡೆ ನಡೆಸಿದ ಸಂಗೀತ ಕಚೇರಿಗಳು, ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ಹಾಡುಗಾರಿಕೆ ಮತ್ತು ಪ್ರಾತ್ಯಕ್ಷಿಕೆ. ಹಲವಾರು ಸಂಗೀತ ಸಮ್ಮೇಳನದ ಅಧ್ಯಕ್ಷತೆ. ಕನ್ನಡದ ಕವಿಗಳಾದ ಪು.ತಿ.ನ., ಕುವೆಂಪು, ವಿ.ಸೀ. ಮುಂತಾದವರ ಕವನಗಳಿಗೆ ಮಾಡಿದ ರಾಗಸಂಯೋಜನೆ, ಕನಕ ಪುರಂದರ ದಾಸರ ಕೃತಿಗಳ ಪ್ರಚಾರ, ದೇವರ ನಾಮಗಳು, ದಾಸರ ಪದಗಳು, ಶ್ರೀ ರಾಮಾಂಬಿಕಾ ಕೃತಿ ರತ್ನಮಾಲಾ, ನವರತ್ನ ಮಾಲಿಕಾ, ಕನಕ ತರಂಗಿಣಿ ಮುಂತಾದ ಸಿಡಿ, ಧ್ವನಿಸುರಳಿಗಳ ಬಿಡುಗಡೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನೂರಾರು ಕೃತಿಗಳ ರಚನೆ. ಮಲ್ಲಾಡಿ ಹಳ್ಳಿ ಆಶ್ರಮದಿಂದ ನಾದಬ್ರಹ್ಮ, ಗಾಯನ ಸಮಾಜದಿಂದ ನಾದ ಚಿಂತಾಮಣಿ, ನಾದ ಜ್ಯೋತಿ ಕಲಾ ಸಭಾದಿಂದ ಕಲಾಜ್ಯೋತಿ, ತ್ಯಾಗರಾಜ ಗಾನಸಭಾದಿಂದ ಕಲಾಭೂಷಣ, ಕರ್ನಾಟಕ ಸರಕಾರದಿಂದ ಕರ್ನಾಟಕ ಕಲಾಶ್ರೀ, ಸುವರ್ಣ ಕರ್ನಾಟಕ ರಾಜ್ಯಪ್ರಶಸ್ತಿ, ಧಾರವಾಡದ ಪುಟ್ಟರಾಜ ಗವಾಯಿ ಪ್ರತಿಷ್ಠಾನದಿಂದ ಪುಟ್ಟರಾಜ ಸನ್ಮಾನ, ಸಂಗೀತ ಸ್ವರ ಸಾಮ್ರಾಜ್ಯ, ಪ್ರಣವಶ್ರೀ ಮುಂತಾದ ಪ್ರಶಸ್ತಿ ಬಿರುದುಗಳು. ಇದೇ ದಿನ ಹುಟ್ಟಿದ ಕಲಾವಿದರು : ವೀರಭದ್ರಪ್ಪ ಪಾಟೀಲ – ೧೯೧೨ ಇನಾಂದಾರ್ ಎಂ.ಎಂ. – ೧೯೩೦ ಜಗದೀಶ ಮನೆವಾರ್ತೆ – ೧೯೬೪ ನಾಗರತ್ನ ನವಲಗುಂದ – ೧೯೭೦
* * *