Loading Events

« All Events

ನಾ.ಸು. ಭರತನಹಳ್ಳಿ

July 22, 2024

೨೨..೧೯೩೭ ವೃತ್ತಿಯಿಂದ ಕೃಷಿಕರಾದರೂ ಪ್ರವೃತ್ತಿಯಿಂದ ಬೌದ್ಧಿಕ ಕೃಷಿಕರಾಗಿ ಶಿಕ್ಷಕರಾಗಿ, ಸಾಹಿತಿಯಾಗಿ, ಪರ್ತಕರ್ತರಾಗಿರುವ ನಾರಾಯಣ ಹೆಗಡೆಯವರು (ನಾ.ಸು. ಭರತನಹಳ್ಳಿ) ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಭರತನಹಳ್ಳಿ ಎಂಬ ಪುಟ್ಟಹಳ್ಳಿಯಲ್ಲಿ ೧೯೩೭ ರ ಜುಲೈ ೨೨ ರಂದು. ತಂದೆ ಸುಬ್ರಾಯ ಹೆಗಡೆಯವರು ಪುರಾಣ, ಪ್ರವಚನ,  ಯಕ್ಷಗಾನ, ತಾಳಮದ್ದಲೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಷಕರು. ಪ್ರಾರಂಭಿಕ ಶಿಕ್ಷಣ ದೂರದ ಕನೇಹ ಹಳ್ಳಿಯ ಮಾಕಾಣೆ ಗುಡ್ಡದ ಮೇಲಿನ ಸೋಗೆ ಝೋಪಡಿಯ ಶಾಲೆಯಲ್ಲಿ. ಮಂಚಿಕೇರಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ. ಆಗೆಲ್ಲ ಮುಲ್ಕಿ ಪರೀಕ್ಷೆ ಅಥವಾ ಲೋಯರ್ ಸೆಕೆಂಡರಿ ಅಥವಾ ಐದು ರೂಪಾಯಿ ಪರೀಕ್ಷೆ ಎಂದು ಕರೆಯಲ್ಪಡುತ್ತಿದ್ದ ಏಳನೆಯ ತರಗತಿಯಲ್ಲಿ ತೇರ್ಗಡೆಯಾದರೆ ಮಾಸ್ತರಿಕೆ ಮಾಡುವ ಅರ್ಹತೆ ದೊರೆಯುತ್ತಿತ್ತು. ದೂರದ ಊರಿನ ಹೈಸ್ಕೂಲಿಗೆ ಸೇರಲಾಗದೆ ನಾ.ಸು. ರವರು ಆಯ್ದುಕೊಂಡದ್ದು ಮಾಸ್ತರಿಕೆ ಕೆಲಸವನ್ನೇ. ಅದೂ ಇವರ ತಂದೆಯವರೇ ಪ್ರಾರಂಭಿಸಿದ ಗಾಂವಠಿ ಶಾಲೆಯಲ್ಲಿ. ೧೮ ವರ್ಷ ತುಂಬದಿದ್ದುದರಿಂದ ಹೆಸರಿಗೆ ಮತ್ತೊಬ್ಬರು, ಪಾಠ ಹೇಳುವವರು ಇವರೇ ಆಗಿದ್ದು ಅನಧಿಕೃತ ಮಾಸ್ತರಾಗಿದ್ದರು. ಹೀಗೆ ಪ್ರಾರಂಭವಾದ ಮಾಸ್ತರಿಕೆ ಕೆಲಸ. ಮಂಜಿಕೇರಿ ಎಂಬಲ್ಲಿ ಪ್ರೌಢಶಾಲೆ ಪ್ರಾರಂಭವಾದ ನಂತರ ಇತ್ತ ಮಾಸ್ತರಿಕೆ ಬಿಡಲಾಗದೆ ಅತ್ತ ಹೈಸ್ಕೂಲು ಶಿಕ್ಷಣವನ್ನೂ ಕಳೆದುಕೊಳ್ಳಲಾಗದೆ ಇದ್ದ ಸಂದರ್ಭದಲ್ಲಿ, ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದುದರಿಂದ ಇವರಿಗೂ ಕಲಿಯಲು ದೊರೆತ ಅವಕಾಶ. ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿ ಎನಿಸಿಕೊಂಡಿದ್ದಲ್ಲದೆ ಹಿಂದಿ ಭಾಷೆಯ ಉನ್ನತ ಶಿಕ್ಷಣ ಪಡೆದು ಸರಕಾರಿ ಶಾಲೆಯಲ್ಲಿ ಅಧಿಕೃತ ಹಿಂದಿ ಶಿಕ್ಷಕರೆನಿಸಿದರು. ತಂದೆಯಿಂದ ಬಳುವಳಿಯಾಗಿ ಬಂದ ಸಂಸ್ಕೃತಿ-ಕಲೆಗಳ ವಿದ್ಯೆಯಿಂದ ತಮ್ಮ ಹಳ್ಳಿಯಲ್ಲಿಯೇ “ಭರತನಹಳ್ಳಿ ಸೀಮಾ ಕಲಾ ಸಂಘ” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಹಲವಾರು ನಾಟಕಗಳನ್ನೂ ನಿರ್ದೇಶಿಸಿದ್ದಲ್ಲದೆ ನಟರಾಗಿಯೂ ಅಭಿನಯಿಸಿದರು. ಟಿಪ್ಪುಸುಲ್ತಾನ್‌ ನಾಟಕದ ಕಾರನ್‌ವಾಲೀಸ್‌ ಪಾತ್ರ, ಕಂದಗಲ್‌ ಹನುಮಂತರಾಯರ ಅಕ್ಷಯಾಂಬರದ ಅಭಿಮನ್ಯು, ಜಿ.ಜಿ. ಹೆಗಡೆಯವರ ದೇವತಾನಾಟಕದಲ್ಲಿ ಸ್ತ್ರೀ ಪಾತ್ರಧಾರಿ, ಇನಾಮದಾರ್ ನಾಟಕ ‘ಅಗ್ನಿಕುಂಡ’ ನಾಟಕದಲ್ಲಿನ ಪಾತ್ರ ನಾ.ಸು. ರವರಿಗೆ ಪ್ರಖ್ಯಾತಿಯನ್ನು ತಂದುಕೊಟ್ಟ ನಾಟಕದ ಪಾತ್ರಗಳು. ಆಧುನಿಕ ತಂತ್ರವನ್ನುಪಯೋಗಿಸಿಕೊಂಡು ಯುವ ಕಲಾವಿದರ ತಂಡಕಟ್ಟಿ ರಥಮುಸಲ, ಆವಾಹನೆ, ಅಶೋಕ, ಕಾಲಾಯತಸ್ಮೈನಮಃ ಮುಂತಾದ ನವ್ಯ ನಾಟಕಗಳನ್ನೂ ನಿರ್ದೇಶಿಸಿದರು. ಶಾಲೆಯ ಶಿಕ್ಷಕರಾಗಿ ದುಡಿಯ ತೊಡಗಿದಾಗ ಬಿಡುವಿನ ವೇಳೆಯಲ್ಲಿ ಗಣ್ಯರ ಸಾಹಿತ್ಯ ಕೃತಿಗಳ ಅಧ್ಯಯನ , ಬರವಣಿಗೆ ನಡೆಸಿದ್ದರ ಜೊತೆಗೆ ಸುತ್ತಲಿನವರಿಗೂ ಸಾಹಿತ್ಯವನ್ನು ಪರಿಚಯಿಸಿ ಓದಿನಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿದರು. ಹೀಗೆ ಇವರು ಬರೆದ ಕಥೆಗಳು ಪ್ರಜಾಮತ, ಕರ್ಮವೀರ, ಪತ್ರಿಕೆಗಳಲ್ಲಿ ಬೆಳಕು ಕಾಣುವುದರ ಜೊತೆಗೆ ಸ್ಥಳೀಯ ಪತ್ರಿಕೆಗಳಾದ ಪಾಂಡೇಶ್ವರರವರ ‘ಜನತಾ’ ಪತ್ರಿಕೆ ಹಾಗೂ ನಾಗರಿಕ ಪತ್ರಿಕೆಗಳಲ್ಲೂ ಪ್ರಕಟವಾಗತೊಡಗಿದುವು. ಕಾಲುದಾರಿಯಷ್ಟೆ ಅಗಲದ ಕಾಡುಹಾದಿಯಲ್ಲಿ ಕೆರೆಹೊಸಳ್ಳಿ ಶಾಲೆಗೆ ಶಿಕ್ಷಕರಾಗಿ ಸೈಕಲ್‌ ತುಳಿಯುತ್ತಿದ್ದಾಗ, ಕಾಲುದಾರಿಯಲ್ಲಿ ಹರಡಿದ್ದ ಹೂಗಳ ಮೇಲೆ ಸೈಕಲ್‌ ಚಕ್ರ ಹರಿದು ‘ಹಿಚುಕಲ್ಪಟ್ಟ ಹೂಗಳ ವ್ಯಥೆಯನ್ನಾಧರಿಸಿ’ ಪದ್ಯಗಳನ್ನೂ ಬರೆದರು. ಸುತ್ತಮುತ್ತಲ ಪ್ರಕೃತಿಯಲ್ಲಿ ಕಂಡದ್ದೇ ಕಾವ್ಯದ ವಸ್ತುವಾದವು. ಪ್ರಕಟಿತ ಕೃತಿಗಳಾದ ಬಯಲು ಬತ್ತಲೆ (ಕಥಾ ಸಂಕಲನ), ಭೂಮಿಕೆ, ಕಾಳಿದಾಸ ನಂದಿನಿ (ಕಾದಂಬರಿ), ಹೆಜ್ಜೆಗುರುತು (ಪತ್ರಿಕಾಚರಿತ್ರೆ), ಪಂಜರದಲ್ಲಿ ಹುಲಿ, ಆಕಾಶ ಹರಿದು ಬೀಳುತ್ತದೆ (ಮಕ್ಕಳ ನಾಟಕ), ಚಿಂತನೆಯ ತುಣುಕು, ಅರಿವಿನ ಬೆಳಕಿನೆಡೆಗೆ (ಚಿಂತನೆಯ ಕೃತಿಗಳು), ಅವಾಂತರ (ಪ್ರೌಢನಾಟಕ) ಪ್ರಕೃತಿ-ವಿಕೃತಿ ಮತ್ತು ಶರಣೆಂಬೆತಾಯಿಗೆ (ಭಾವಗೀತೆಗಳು), ನಾಮ ಭಗವಂತ (ದಿವ್ಯಚರಿತ್ರೆ-ಅನುವಾದ) ಶ್ರೀನುಡಿಯೊಳು (ತತ್ತ್ವಚಿಂತನೆ) ಡಾ. ಗೌರೀಶ ಕಾಯ್ಕಿಣಿ (ಜೀವನ ಚರಿತ್ರೆ) ಇನ್ನೂ ಮುಂತಾದ ಕೃತಿಗಳು ಪ್ರಕಟಗೊಂಡಿವೆ. ಪತ್ರಿಕೋದ್ಯಮಿಯಾಗಿ ‘ಮುನ್ನಡೆ’ ಮತ್ತು ‘ಸ್ವರ್ಣವಲ್ಲೀಪ್ರಭಾ’ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಣೆ.  ಇದಲ್ಲದೆ ಡೆಕ್ಕನ್‌ ಹೆರಾಲ್ಡ್‌, ಪ್ರಜಾವಾಣಿ ಪತ್ರಿಕೆಗಳಿಗೆ ವರದಿಗಾರರಾಗಿ, ಧಾರವಾಡದ ಆಕಾಶವಾಣಿಗಾಗಿ ಜಿಲ್ಲಾವಾರ್ತಾಪತ್ರ ಬಾತ್ಮೀದಾರರಾಗಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಗ್ರಂಥವಿಮರ್ಶಕರಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರ ಜೊತೆಗೆ ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಲಿ, ರಾಜ್ಯ ಸಣ್ಣ ಪತ್ರಿಕಾ ಸಂಪಾದಕರ ಮಂಡಲಿ, ಕಾರ್ಯನಿರತ ಪತ್ರಿಕಾ ಸಂಘ, ಉತ್ತರ ಕನ್ನಡ ಜಿಲ್ಲಾ ಪತ್ರಿಕೆಯ ಪ್ರಕಾಶಕ-ಮುದ್ರಕ ಸಂಘ ಮುಂತಾದವುಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿನ ಕೊಡುಗೆಗಾಗಿ ಕೆ.ಶಾಮರಾವ್ ದತ್ತಿ ‘ಶ್ರೇಷ್ಠಪತ್ರಕರ್ತ’ ಪ್ರಶಸ್ತಿ, ಅರುವತ್ತು ತುಂಬಿದ ಸಂದರ್ಭದಲ್ಲಿ ಸನ್ಮಾನ, ಮೂಡಬಿದಿರೆಯಲ್ಲಿ ನಡೆದ ೭೧ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ರಾಜ್ಯ ಮಾಧ್ಯಮ ಅಕಾಡಮಿ ಪ್ರಶಸ್ತಿ, ಹಳಿಯಾಲ ತಾಲ್ಲೂಕು ಸಮ್ಮೇಳನದಲ್ಲಿ ವಿಶೇಷ ಪುರಸ್ಕಾರ ಮುಂತಾದ ಗೌರವಗಳು ಸಂದಿವೆ.

Details

Date:
July 22, 2024
Event Category: