೦೮.೦೩.೧೯೩೬ ಹಿರಿಯ ವೃತ್ತಿ ರಂಗಭೂಮಿ ಕಲಾವಿದರಾದ ಎನ್.ಎಸ್. ಜೋಶಿಯವರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಚಿಲ್ಲೂರ ಬಡ್ನಿ ಎಂಬಲ್ಲಿ. ತಂದೆ ಶಿವಭಟ್ಟ ಜೋಶಿ, ತಾಯಿ ಅಂಬಾಬಾಯಿ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ ಸವಣೂರಿನಲ್ಲಿ. ಶಾಲೆಯ ದಿನಗಳಿಂದಲೂ ರಂಗಭೂಮಿಯತ್ತ ಬೆಳೆದ ಒಲವು. ಮೆಟ್ರಿಕ್ಯುಲೇಷನ್ ಓದುತ್ತಿರುವಾಗಲೇ ರತ್ನಮಾಂಗಲ್ಯ ಸ್ವರಚಿತ ನಾಟಕದ ನಟನಾಗಿ ರಂಗಪ್ರವೇಶ. ನಾಟಕಗಳಲ್ಲಿ ನಟಿಸುತ್ತ, ನಿರ್ದೇಶಿಸುತ್ತಾ ಹಲವಾರು ನಾಟಕ-ಹಾಡುಗಳ ರಚನೆ. ಬಂಜೆತೊಟ್ಟಿಲು, ಚನ್ನಪ್ಪ ಚನ್ನೇಗೌಡ, ರೌಡಿ ರಾಮಾಚಾರಿ, ತಲಾಟಿ ಮಾಡಿದ ಗಲಾಟಿ, ದಾರತಪ್ಪಿದ ಮಗ, ಸಿಂಧೂರಸಿಂಹ ಲಕ್ಷ್ಮಣ, ಸಂಗ್ಯಾಬಾಳ್ಯ, ಸಮಾಜಕ್ಕೆ ಸವಾಲ್, ಹುಚ್ಚ ಹಚ್ಚಿದ ದೀಪ, ಹಾಸಿಗೆ ಇದ್ದಷ್ಟು ಕಾಲು ಚಾಚು, ಕಳ್ಳ ಪಾಲಿಸಿದ ಕರ್ತವ್ಯ, ಸಾಮ್ರಾಟ ನೃಪತುಂಗ ಮುಂತಾದ ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳ ರಚನೆ, ಹಲವಾರು ನಾಟಕಗಳು ಆಕಾಶವಾಣಿಯಿಂದ ಪ್ರಸಾರ. ಇದಲ್ಲದೆ ರಾಮಲಿಂಗ ಪುರಾಣಂ, ಮಲ್ಹಸಾ ಮಾರ್ತಾಂಡ ಭೈರವ ಪುರಾಣಂ ಮಹಾಕಾವ್ಯಗಳ ರಚನೆ; ಶ್ರೀದೇವಿ ಪುರಾಣಂ ಎಂಬ ಆಖ್ಯಾನ ಕಾವ್ಯ; ಶ್ರೀ ರಾಘವೇಂದ್ರ ಮಹಾತ್ಮ, ಶ್ರೀ ಗುರುಚರಿತ್ರೆ, ಯಡೆಯೂರು ಸಿದ್ಧಲಿಂಗೇಶ್ವರ ಚರಿತ್ರೆ, ಶ್ರೀ ನಾಗಲಿಂಗ ಚರಿತ್ರೆ, ಶ್ರೀ ಮುನೇಶ್ವರ ಚರಿತ್ರೆ ಮುಂತಾದ ಹತ್ತು ಧಾರ್ಮಿಕ ಕೃತಿಗಳು, ಪಂಚತಂತ್ರ ಕಥೆಗಳು, ಬಾಲ ರಾಮಾಯಣ, ಭಾಲ ಭಾರತವೆಂಬ ಮಕ್ಕಳ ಸಾಹಿತ್ಯ ಕೃತಿಗಳ ರಚನೆ. ರಚಿಸಿದ ಹಲವಾರು ನಾಟಕಗಳು ಚಲನಚಿತ್ರಗಳಾಗಿವೆ. ಬಂಜೆ ತೊಟ್ಟಿಲು ನಾಟಕವನ್ನಾಧರಿಸಿ ‘ತಾಯಿ’ ಕನ್ನಡ ಚಲನಚಿತ್ರವಾದರೆ ಹಿಂದಿಯಲ್ಲಿ ‘ಸ್ವರ್ಗ ಸೇ ಸುಂದರ್’ ಎಂಬ ಹೆಸರಿನಿಂದ ಚಲನಚಿತ್ರವಾಗಿದೆ. ರತ್ನಮಾಂಗಲ್ಯ, ಚನ್ನಪ್ಪ ಚನ್ನೇಗೌಡ, ಹುಚ್ಚು ಬಿಡಿಸಿದ ಹೆಣ್ಣು ಚಲನಚಿತ್ರದ ನಿರ್ಮಾಣದ ವಿವಿಧ ಹಂತದಲ್ಲಿವೆ. ಸಂದ ಪ್ರಶಸ್ತಿ ಗೌರವಗಳು ಹಲವಾರು, ಬಳ್ಳಾರಿ ಕಲಾ ಸಂಘದಿಂದ ಸಾಹಿತ್ಯ ರತ್ನಾಕರ, ಸವಣೂರು ಸಾಹಿತ್ಯ ವೇದಿಕೆಯಿಂದ ನಾಟಕ ರತ್ನ ಬಿರುದು, ಬೆಂಗಳೂರಿನ ಗುಬ್ಬಿವೀರಣ್ಣ ಮಂದಿರದಲ್ಲಿ ಡಾ. ರಾಜ್ಕುಮಾರರಿಂದ ಸನ್ಮಾನ, ಹಾವೇರಿ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದುವು. ವೃತ್ತಿ ರಂಗಭೂಮಿಗಾಗಿ ದುಡಿದ ಇವರಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಅದೇಕೊ ದೂರವೇ! ಇದೇ ದಿನ ಹುಟ್ಟಿದ ಕಲಾವಿದರು : ಚೆಟ್ಟಿ ಎಂ.ಎ. – ೧೯೦೭ ವಿಶ್ವನಾಥ್ ಸಿ. – ೧೯೫೮ ರವಿಕುಮಾರ್ ಡಿ.ಬಿ. – ೧೯೭೧
* * *