ನೀಳಾದೇವಿ

Home/Birthday/ನೀಳಾದೇವಿ
Loading Events
This event has passed.

೦೫.೦೬.೧೯೩೨ ಪ್ರಸಿದ್ಧ ಕಾದಂಬರಿಕಾರ್ತಿ ನೀಳಾದೇವಿಯವರು ಹುಟ್ಟಿದ್ದು ಮೈಸೂರಿನಲ್ಲಿ ೧೯೩೨ರ ಜೂನ್ ೫ರಂದು. ತಂದೆ ಕೆ.ಎಸ್. ರಾಮಸ್ವಾಮಿ, ತಾಯಿ ರುಕ್ಮಿಣಿಯಮ್ಮ. ತಂದೆ ಮೈಸೂರು ಸಂಸ್ಥಾನದಲ್ಲಿ ಅದೇ ತಾನೆ ಪಾರರಂಭವಾಗಿದ್ದ ಮೊದಲ ಎಂಜನಿಯರಿಂಗ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿಯಾಗಿ ಎಂಜನಿಯರಿಂಗ್ ಪದವೀಧರರಾಗಿ ಕಂಟ್ರಾಕ್ಟರ್ ಆಗಿದ್ದು ಅನುಕೂಲಸ್ಥಿತಿಯಲ್ಲಿದ್ದರೂ ಇವರನ್ನು ಸೇರಿಸಿದ್ದು ಸರಕಾರಿ ಕನ್ನಡ ಶಾಲೆಯಾದ ಮಹಾಜನ್ ಶಾಲೆಗೆ. ಹೈಸ್ಕೂಲಿನಲ್ಲಿ ಬಿ. ರಾಚಯ್ಯ ಮತ್ತು ಎಸ್.ಎಂ. ಕೃಷ್ಣ ಇವರ ಸಹಪಾಠಿಗಳು. ತಂದೆಯವರಿಗೆ ಗಾಂಧೀಜಿಯವರ ತತ್ತ್ವ, ಆದರ್ಶಗಳಲ್ಲಿ ನಂಬಿಕೆ ಇದ್ದುರಿಂದ ತಮ್ಮ ಕಂಪನಿಯಲ್ಲೆ ‘ತಿಲಕ್ ಸಂಘ’ಕ್ಕೆ ಉಚಿತವಾಗಿ ಸ್ಥಳ ನೀಡಿದ್ದರು. ಸ್ಕೂಲಿನಿಂದ ಬಂದ ನಂತರ ಮಕ್ಕಳೂ ಕೂಡಾ ಚರಕದಲ್ಲಿ ನೂಲು ತೆಗೆಯಲು, ಹಿಂದಿಭಾಷೆ ಕಲಿಯಲು ಪ್ರೇರೇಪಿಸುತ್ತಿದ್ದರು. ತರಗತಿಯಲ್ಲಿ ಕನ್ನಡ ಪಂಡಿತರಾಗಿದ್ದ ಸುಬ್ಬರಾಯಾಚಾರ್‌ರವರ ಪಾಠಗಳೆಂದರೆ ಹುಡುಗರಿಗೆ ಬಹಳ ಇಷ್ಟವಾದ ತರಗತಿ. ವಿದ್ಯಾರ್ಥಿಗಳು ಕನ್ನಡ ಕಲಿಯಲು ಸ್ವಂತಮಾತಿನಲ್ಲೇ ಲೇಖನಗಳನ್ನು ಬರೆಯುವಂತೆ ಒತ್ತಾಯಿಸುತ್ತಿದ್ದರು. ಹೀಗೆ ಒಮ್ಮೆ ಇವರು ಕೋಗಿಲೆಯ ಮೇಲೆ ಬರೆದ ಲೇಖನವನ್ನು ಮೆಚ್ಚಿ ಬಹುಮಾನವನ್ನು ಕೊಟ್ಟಿದ್ದರು. ಮನೆಯಲ್ಲಿಯೂ ತಂದೆಯ ಗ್ರಂಥಭಂಡಾರದಲ್ಲಿದ್ದ ಇಂಗ್ಲಿಷ್ ಪುಸ್ತಕಗಳ ಜೊತೆಗೆ ಶಿವರಾಮ ಕಾರಂತರ ಬಾಲ ಪ್ರಪಂಚ, ಎಂ.ಎಸ್. ಪುಟ್ಟಣ್ಣನವರ ನೀತಿಕತೆಗಳನ್ನೆಲ್ಲಾ ಓದಿ ಮುಗಿಸಿದ್ದರು. ಹೀಗೆ ಕಥೆಗಳನ್ನು ಓದುತ್ತ ಬಂದಂತೆಲ್ಲ ಇವರಿಗೂ ಏಕೆ ಕಥೆ ಬರೆಯಬಾರದೆನಿಸಿ ಬರೆದ ಮೊದಲ ಕತೆ ‘ಕಳ್ಳಬೊಮ್ಮ’. ತಾವು ಬರೆದ ಕತೆಯನ್ನು ತಾತನಿಗೆ (ತಾಯಿಯ ತಂದೆ) ತೋರಿಸಿದಾಗ ಅವರು ಮಕ್ಕಳ ಸಾಹಿತ್ಯವನ್ನು ಪ್ರಕಟಿಸುತ್ತಿದ್ದ ಸಿ. ಅಶ್ವತ್ಥನಾರಾಯಣರಾಯರಿಗೆ ಕಳುಹಿಸಿದರು. ಅವರು ‘ಮಕ್ಕಳ ಪುಸ್ತಕ’ದಲ್ಲಿ ಪ್ರಕಟಿಸಿದಾಗ ಇವರಿಗಾದ ಆಶ್ಚರ್ಯ, ಸಂತೋಷ ಅಷ್ಟಿಷ್ಟಲ್ಲ. ನಂತರವೂ ಹಲವಾರು ಕತೆ, ಕವನ, ಒಗಟುಗಳನ್ನು ‘ಮಕ್ಕಳ ಪುಸ್ತಕ’ಕ್ಕೆ ಬರೆದು ಕಳುಹಿಸತೊಡಗಿದರು. ಸಾಹಿತ್ಯದ ಜೊತೆಗೆ ಚಿತ್ರಕಲೆಯಲ್ಲೂ ಆಸಕ್ತಿ ಬೆಳೆದು ಪೇಟೆಯಲ್ಲಿ ಸಿಗುವ ಬಣ್ಣಗಳ ಪರಿಚಯವಿಲ್ಲದಿದ್ದುರಿಂದ ಮನೆಯ ತೋಟದಲ್ಲಿ ಬೆಳೆದ ಮರುಗ, ದಾಸವಾಳ, ಬೋಗನ್‌ವಿಲ್ಲಾ, ಕನಕಾಂಬರ, ಸ್ಫಟಿಕ ಮುಂತಾದ ಹೂಗಳ ರಸ ತೆಗೆದು ಬಣ್ಣಗಳ ಸಂಯೋಜನೆ ಮಾಡಿ ಚಿತ್ರಕಲೆಯನ್ನು ಸ್ವತಃ ಕಲಿತರು. ನಂತರ ಚಾಮರಾಜೇಂದ್ರ ಟೆಕ್ನಲಾಜಿಕಲ್ ಇನ್‌ಸ್ಟಿಟ್ಯೂಟ್‌ಗೆ ಹೀಒಗಿ ಪ್ರಾರಂಭಿಕ ಕೆಲ ಪರೀಕ್ಷೆಗಳಲ್ಲಿ ಉತಿರ್ಣರಾದರು. ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತಿರ್ಣರಾಗುತ್ತಿದ್ದಂತೆ ಸೋದರತ್ತೆ ಮಗನೊಡನೆ ವಿವಾಹ. ಎಸ್.ಎಲ್.ಎಲ್.ಸಿ ಪಾಸುಮಾಡಿದ ನಂತರ ಪತಿಗೃಹಕ್ಕೆ. ಗಂಡ ಸದಾಕಾಲ ಸಂಶೋಧನೆಯಲ್ಲಿ ನಿರತರಾಗಿದ್ದುದರಿಂದ ಇವರಿಗೆ ಒತ್ತಡವಿಲ್ಲದ ಬದುಕು. ಆದರೆ ಮೊದಲ ಮಗು ಹುಟ್ಟಿದಾಗ ಹುಟ್ಟುತ್ತಲೇ ಕಿವುಡಾಗಿದೆ ಎಂದು ತಿಳಿದಾಗ ಅಧೀರರಾದರು. ಮಗು ಕೊಂಚ ಬೆಳೆದನಂತರ ಮದರಾಸಿನ ಬೆಲ್ಜಿಯಂ ಕಾನ್ವೆಂಟಿಗೆ ರೇಖಾ ಸೇರಿಸಲ್ಪಟ್ಟರು. ಅಲ್ಲಿ ತುಟಿ ಚಾಲನೆಮಾಡಿ ಮಾತನಾಡುವುದನ್ನು ಕಲಿಸಿದರು. ಮುಂದೆ ಕಂಪ್ಯೂಟರ್ ಶಿಕ್ಷಣ, ಚಿತ್ರಕಲೆಯಲ್ಲೂ ಮಗಳು ಪ್ರಾವೀಣ್ಯತೆ ಪಡೆದು ಗೃಹಿಣಿಯಾಗಿ ತಾಯಿಯಾಗಿ ಕಂಡುಕೊಂಡ ನೆಮ್ಮದಿ ಬದುಕು. ಇವರ ಸುಪ್ತಮನಸ್ಸಿನಲ್ಲಿ ಅಡಗಿಕೊಂಡಿದ್ದ ವಿದ್ಯೆ ಕಲಿಕೆಯ ಆಸೆ ಪುಟಿದೆದ್ದು ಮೊಮ್ಮಕ್ಕಳು ಬಂದ ನಂತರ ಎಂ.ಎ. ಪದವಿಗಳಿಸಿದ್ದು ದೊಡ್ಡ ಸಾಧನೆಯೇ. ಮಗಳು ಕಿವುಡಿಯಾದಳೆಂದು ತಿಳಿದಾಗ ಅನುಭವಿಸಿದ ಮಾನಸಿಕ ಒತ್ತಡ, ದಿಗ್ಭ್ರಮೆ, ಯಾತನೆಗಳಿಗೆ ರೂಪಕೊಟ್ಟು ಬರೆದ ಕಾದಂಬರಿಗಳೇ ‘ಮೂಕರಾಗ’ ಮತ್ತು ‘ಅನುರಾಧ’. ಮೂಕರಾಗ ಕಾದಂಬರಿಯ ಸುಧಾವಾರ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡು ಪಡೆದ ಓದುಗರ ಮೆಚ್ಚುಗೆ. ಭೂವಿಜ್ಞಾನಿಯಾದ ಇವರ ಪತಿಗೆ ವರ್ಗವಾದದ್ದು ವಿಂದ್ಯಪರ್ವತದ ಅಡವಿಯ ನಡುವಿನ ದೀಪ, ನಲ್ಲಿನೀರು ಇಲ್ಲದ ತಾಣ. ಜನ ಸಂಪರ್ಕವಿಲ್ಲದೆ, ಸರಿಯಾದ ಸ್ನೇಹಿತರಿಲ್ಲದೆ ಹೊತ್ತು ಕಳೆಯುವುದೇ ದುಸ್ತರ ಎನಿಸಿದಾಗ ಸಿಕ್ಕ ಕಾದಂಬರಿ ಚಾರ‍್ಲೆಟ್‌ಬ್ರಾಂಟಿಯ ಜೀನ್ ಐರ್ ಕಾದಂಬರಿ. ಜೀನ್ ಐರ್ ಕಾದಂಬರಿಯಿಂದ ಪ್ರೇರಿತವಾಗಿ ಬರೆದ ಮೊದಲ ಕಾದಂಬರಿಯೇ ‘ಬೇಡಿ ಬಂದವಳು’. ಈ ಕಾದಂಬರಿಯನ್ನು ಹಸ್ತಪ್ರತಿರೂಪದಲ್ಲಿಯೇ ಎಸ್.ವಿ. ಪರಮೇಶ್ವರ ಭಟ್ಟರು, ಜಿ.ಪಿ. ರಾಜರತ್ನ, ತ.ಸು. ಶಾಮರಾಯರು ಓದಿ ಮೆಚ್ಚಿ ಪ್ರಕಟಗೊಂಡಾಗ ಪತ್ರಿಕೆಗಳಲ್ಲಿ ಒಳ್ಳೆಯ ವಿಮರ್ಶೆಯೂ ಬಂದು ೧೯೬೮ರಲ್ಲಿ ಸಿ. ಶ್ರೀನಿವಾಸ್‌ರವರ ನಿರ್ದೇಶನದಲ್ಲಿ ಚಲನಚಿತ್ರವಾಗಿಯೂ ಜನಪ್ರಿಯವಾಯಿತಲ್ಲದೆ ತಮಿಳಿನಲ್ಲಿಯೂ ‘ಶಾಂತನಿಲಯಂ’ ಎಂಬ ಹೆಸರಿನಿಂದ ಚಲನಚಿತ್ರವಾಗಿ ಪ್ರಸಿದ್ಧಿ ಪಡೆಯಿತು. ನಂತರ ಇವರು ಬರೆದ ಕಾದಂಬರಿ ಅನುರಾಧ, ಒಲವಿನ ಜಾಲ, ಕಣ್ಣುಮುಚ್ಚಾಲೇ, ಹುಲ್ಲು ಹರಿರಾಯಿತು. ಜೀವನ ಹೆಜ್ಜೆ ಮೊದಲಾದ ೨೬ ಕಾದಂಬರಿಗಳು ಪ್ರಕಟಗೊಂಡವು. ಗುಜರಾತಿನ ದ್ವಾರಕಾದಲ್ಲಿ ಮೂರುವರ್ಷವಿದ್ದಾಗ ಪುಟ್ಟ ಹಡಗೊಂದು ಸಮುದ್ರದಲ್ಲಿ ಮುಳುಗಿ ಹೆಣಗಳು ತೇಲುವುದು ಕಂಡು, ಚಿನ್ನ ಕಳ್ಳ ಸಾಗಾಣಿಕೆಗೆ ಎಂತೆಂತಹಾ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ ಎಂಬ ವಸ್ತುವನ್ನೊಳಗೊಂಡು ಬರೆದ ‘ಕಳ್ಳಿಗಿಡದ ಬುಡದಲ್ಲಿ’ ಕಥೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನವೂ ದೊರೆತಿದೆ. ಗುಲಬರ್ಗಾದ ಶಹಬಾದ್‌ನಲ್ಲಿದ್ದಾಗ ಅಲ್ಲಿನ ಕಲ್ಲು ಕೆಲಸಮಾಡುವವರ (ಒಡ್ಡರ) ಬದುಕನ್ನು ಕಂಡು ಬರೆದ ‘ಹುಲ್ಲು ಹರಿರಾಯಿತು’ ಕಾದಂಬರಿಯ ಪ್ರಕಟವಾದ ನಂತರ ಓದುಗರ ಮೆಚ್ಚುಗೆ ಪಡೆದದ್ದಷ್ಟೇ ಅಲ್ಲದೆ ವಾಷಿಂಗ್‌ಟನ್ ಲೈಬ್ರರಿ ಆಫ್ ಕಾಂಗ್ರೆಸ್‌ನವರು ಇದೊಂದು ಸಮಾಜಶಾಸ್ತ್ರ ಅಧ್ಯಯನದ ಕೃತಿ ಎಂದು ಆಯ್ಕೇ ಮಾಡಿದ್ದಾರೆ. ರಾಮಾನುಜಾಚಾರ್ಯರನ್ನು ಅಧ್ಯಯನ ಮಾಡಿ ರಚಿಸಿದ ಕೃತಿ ‘ಧನ್ಯ’. ಈ ಕೃತಿಯು ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿಯೂ ದೊರೆತಿದೆ. ತರಂಗ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ಮತ್ತೊಂದು ಕಾದಂಬರಿ ಎಂದರೆ ‘ಕಪಿಮುಷ್ಠಿಲಿ ಕಡ್ಲೆಕಾಯಿ’. ಅಮೆರಿಕಾ, ಕೆನಡಾ ದೇಶಗಳಿಗೆ ೧೧ ಬಾರಿ ಭೇಟಿ ನೀಡಿ ಗಳಿಸಿದ ವಿಫುಲ ಅನುಭವಕ್ಕೆ ಅಕ್ಷರರೂಪಕೊಟ್ಟು ಬರೆದ ಎರಡು ಕೃತಿಗಳೆಂದರೆ ‘ನಾ ಕಂಡ ಆ ಖಂಡ’ ಮತ್ತು ‘ಸಬಲನ ವಿದೇಶ ಯಾತ್ರೆ’. ನಂತರ ಬರೆದ ಕಾದಂಬರಿಗಳಾದ ಕಾಗದದ ಚೂರು, ಅಂತರ, ಕಾದಂಬರಿಗಳು, ನಾ ಕಂಡ ಆ ಖಂಡ ಪ್ರವಾಸ ಕಥನವು ಸುಧಾ ವಾರಪತ್ರಿಕೆಯಲ್ಲಿ, ‘ಫ್ಲಾಟ್‌ಫಾರಂ ಮೇಲೆ ಒಂದು ರಾತ್ರಿ’ ಕಾದಂಬರಿಯು ಕನ್ನಡ ಪ್ರಭ ದಿನಪತ್ರಿಕೆಯಲ್ಲೂ ಧಾರವಾಹಿಯಾಗಿ ಪ್ರಕಟವಾಗಿವೆ. ಇವಲ್ಲದೆ ರೂಪದಾಹ, ಅಲೆಯ ಆಟ, ಮಾಣಿಕ್ಯ, ಹೆಜ್ಜೆ, ಕಾಮನ ಬಿಲ್ಲು, ಕಾಲ ಕಂಡ ಕಥೆಗಳು (ಅನುವಾದ) ಮುಂತಾದ ಕಥಾ ಸಂಕಲನಗಳು ಪ್ರಕಟವಾಗಿವೆ. ಭೂವಿಜ್ಞಾನಿಯಾದ ಪತಿಯೊಡನೆ ವಿಂದ್ಯ ಪರ್ವತದ ಕಾಡು, ಗುಜರಾತಿನ ದ್ವಾರಕಾ, ಚಂಬಲ್ ಕಣಿವೆ ಪ್ರದೇಶ ಮುಂತಾದೆಡೆಯಲ್ಲೆಲ್ಲಾ ಜೀವನ ಸಾಗಿಸಿ ತಾವು ಕಂಡ ವೈವಿಧ್ಯಮಯ ಜೀವನ ಚಿತ್ರಣವನ್ನು ತಮ್ಮ ಕಾದಂಬರಿಗಳಲ್ಲಿ, ಲೇಖನಗಳಲ್ಲಿ, ಚಿತ್ರಿಸಿದ್ದು ಒಟ್ಟು ೩೫ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಲೇಖಕರಾಗಿ ಸಮಾಜವನ್ನು ಸಂಪೂರ್ಣವಾಗಿ ತಿದ್ದಲಾಗದಿದ್ದರೂ ಸ್ಪಷ್ಟ ದಾರಿಯನ್ನಾದರೂ ತೋರಿಸಬಹುದೆಂಬ ಆಶಾಭಾವದಿಂದ, ತಮ್ಮ ಜವಾಬ್ದಾರಿಯನ್ನರಿತು ಸಾಹಿತ್ಯರಚನೆಯಲ್ಲಿ ತೊಡಗಿರುವ ನೀಳಾದೇಯವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬಿ. ಸರೋಜದೇವಿ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ, ಗೊರೂರು ಪ್ರತಿಷ್ಠಾನ ಪ್ರಶಸ್ತಿ, ಅಂಬೇಡ್ಕರ್ ಪ್ರಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮ ಪ್ರಶಸ್ತಿ ಮತ್ತು ಸ್ವರಲಿಪಿ ಪ್ರಾಜ್ಞೆ ಪ್ರಶಸ್ತಿಗಳ ಜೊತೆಗೆ ೨೦೦೭ರಲ್ಲಿ ಮಂಡ್ಯದಲ್ಲಿ ನಡೆದ ಕರ್ನಾಟಕ ಲೇಖಕಿಯಿರ ಸಂಘದ ಆರನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವೂ ದೊರೆತಿದೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top