೨-೬-೧೯೨೯ ಪ್ರಖ್ಯಾತ ಹಾಸ್ಯ ಸಾಹಿತಿ, ಕಾದಂಬರಿಕಾರ್ತಿ ಪಂಕಜರವರು ಹುಟ್ಟಿದ್ದು ಬೆಂಗಳೂರು. ತಂದೆ ಎಸ್.ವಿ. ರಾಘವಾಚಾರ್, ತಾಯಿ ಶಾಂತಮ್ಮ. ಶಾಲೆಯಲ್ಲಿ ಕಲಿತದ್ದು ಕಡಿಮೆ. ಶಿಸ್ತು ಬದ್ಧ ಶಿಕ್ಷಣ. ಗುಡ್ ಶೆಪರ್ಡ್ ಕಾನ್ವೆಂಟಿನಲ್ಲಿ ಹೈಸ್ಕೂಲುವರೆಗೆ (ಫೋರ್ತ್ ಫಾರಂ) ಓದಿದ್ದು ಇಂಗ್ಲಿಷ್ ಯೂರೋಪಿಯನ್ ಚರಿತ್ರೆ. ಎಚ್.ಎ. ಜೋನ್ಸ್, ಆಸ್ಕರ್ವೈಲ್ಡ್, ಪಿನೇರೋ ಇವರೆಲ್ಲರ ಸಾಹಿತ್ಯ ನಾಲಗೆಯ ತುದಿಯಲ್ಲಿ. ಬರೆದದ್ದು ಕನ್ನಡದಲ್ಲಿ. ಕಾದಂಬರಿಕಾರರಾದ ಬಿ. ವೆಂಕಟಾಚಾರ್ಯರ ನಾಲ್ಕನೆಯ ತಲೆಮಾರಿನ ಕುಡಿ. ಎಳೆವೆಯಿಂದಲೇ ಮುತ್ತಾತನ ಕಾದಂಬರಿಯಿಂದ ಪ್ರೇರಿತೆ. ದುರ್ಗೇಶ ನಂದಿನಿಯಾಗಲೀ, ದೇವಿ ಚೌಧುರಾಣಿಯಾಗಲೀ, ನವಾಬ ನಂದಿನಿಯಾಗಲೀ….. ನಾಟಕೀಯವಾಗಿ, ಸಿನಿಮಾ ಸೀನಿನಂತೆ ಕೇಳುಗರ ಮುಂದಿಡುತ್ತಿದ್ದ ಕೌಶಲ. ವಂಶವಾಹಿನಿಯಲ್ಲಿ ಹರಿದು ಬಂದ ಸಾಹಿತ್ಯದ ತಳಿ. ಬರೆಯಲು ಆಯ್ದುಕೊಳ್ಳುತ್ತಿದ್ದ ಸಮಯವೂ ಅಷ್ಟೆ. ರಾತ್ರಿಯ ಹೊತ್ತು. ಬೆಳಗಾಗುವುದರೊಳಗೆ ನಾಲ್ಕಾರು ಅಧ್ಯಾಯಗಳು ರೆಡಿ. ಕಾದಂಬರಿ ಪ್ರಾರಂಭಿಸಿ, ಜೈಲಿಗೆ ಹೋಗಿ ಬರುತ್ತೇನೆಂದರೆ ಹಿರಿಯರು ಕಕ್ಕಾಬಿಕ್ಕಿ. ಕಥಾನಾಯಕ ಜೈಲಿನಲ್ಲಿದ್ದಾನೆ…..ಅದಕ್ಕೆ ಎಂದುತ್ತರ. ವೇಶ್ಯಾ ವೃತ್ತಿ ಜೀವನದ ಚಿತ್ರಣದ ಕಾದಂಬರಿ ಬರೆಯಲು ವೇಶ್ಯೆಯ ಮನೆಗೆ ಹೋಗಿ ಬರುತ್ತೇನೆಂದಾಗ ಹೌಹಾರಿದ ಹಿರಿಯರು. ಕಡೆಗೆ ಓದಿ ಅನುಭವ ಪಡೆದದ್ದು ‘ಯಾಮಾ’ ಎಂದ ವೈಟ್ ಸ್ಲೇವರಿ ಗ್ರಂಥ. ಬರಲೆ ಇನ್ನು…..ಯಮುನೆ, ಢಕಾಯಿತರ ಮೇಲೆ ಕಾದಂಬರಿ ಬರೆದಾಗ, ಢಕಾಯಿತರ ಬಳಿ ಹೋಗಿ ಬರುತ್ತೇನೆನ್ನಲಿಲ್ಲವಲ್ಲಾ ! ಮನೆಯವರಿಗೆ ಸಮಾಧಾನ. ಮೊದಲ ಕಾದಂಬರಿ ಕಾವೇರಿಯ ಆರ್ತರವ, ನಂತರ ಉಷಾನಿದ್ರೆ. ಮಲಯಮಾರುತ, ವೀಣಾ ಓ ವೀಣಾ ! ಬರಲೆ ಇನ್ನು ಯಮುನೆ (ಸಿಪಾಯಿರಾಮು), ಗಗನ (ಇವೆರಡು ಚಲನಚಿತ್ರಗಳಾದುವು). ದೀಪ, ಗೂಡುಬಿಟ್ಟ ಹಕ್ಕಿ, ತೇಲಿ ಬಂದ ಬಂಧನ, ಸಂಧ್ಯಾ ಬರುವಳೇ ?, ತೆರೆ ಸರಿಯಿತು, ಅಲೆಗೆ ಸಿಕ್ಕ ಎಲೆ, ಟುವ್ವಿ ಟುವ್ವಿ ಉಲಿಯಿತು, ಗುಬ್ಬಚ್ಚಿ, ಪ್ರತಿಕಾರದ ಸುಳಿಯಲ್ಲಿ ಮೇಘ ಮುಂತಾದ ಕಾದಂಬರಿಗಳು. ಅನುವಾದ-ಒಂದು ವಸಂತ ಋತುವಿನಲ್ಲಿ, ಮ್ಯೂಸಿಕ್ ಫಾರ್ ಮೋಹಿನಿ, ಹಾಸ್ಯ ಕಾದಂಬರಿ-ನಮಸ್ಕಾರ ಗರುಡಮ್ಮನವರೇ ಏನ್ಸಮಾಚಾರ, ಕೋಣೆಗೊಂದು ಮೂಲೆಗೊಂದು ಮಾತು, ಶಿಶುಸಾಹಿತ್ಯ-ಬಿ. ವೆಂಕಟಾಚಾರ್ಯ, ಪಾದ್ರಿಯ ಕುದುರೆ, ಕಮಲನೆಹರು, ರಾಜಕುಮಾರಿಯ ಸ್ವಯಂವರ, ತೋಳಗಳ ನಡುವೆ. ನಾಟಕ-ಸಲೋಮೆ, ಆ ಒಂದು ವಿಷಗಳಿಗೆ, ಅರಳಿಕಟ್ಟೆ ರಾಮಾಚಾರಿಯ ಎರಡನೆಯ ಹೆಂಡತಿ. ಹಾಸ್ಯ ಸಂಕಲನಗಳು- ತರಂಗರಂಗ, ಕಾವೇರಮ್ಮ ಅಮೆರಿಕಾದಲ್ಲಿ, ಮದುವೆ ಗೊತ್ತಾದಾಗ. ಕಥಾಸಂಕಲನ-‘ಇಪ್ಪತ್ತು ವರ್ಷಗಳ ಹಿಂದೆ’, ‘ಅರ್ಧ ಚಂದ್ರ’ ಸೇರಿದಂತೆ ೪೦ಕ್ಕೂ ಹೆಚ್ಚು ಕೃತಿ ರಚನೆ. ಸಂದ ಗೌರವ ಪ್ರಶಸ್ತಿಗಳು-ಅತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಶ್ರೀರಸ ಪ್ರಶಸ್ತಿ, ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಶಸ್ತಿ, ಲಿಪಿ ಪ್ರಾಜ್ಞ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮ ಪ್ರಶಸ್ತಿ ಮುಂತಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ಎಚ್. ಪ್ರೇಮಲೀಲಾ – ೧೯೫೨ ಲತಾ ರಾಜಶೇಖರ್ – ೧೯೫೪ ಅಮರೇಶ ನುಗಡೋಣಿ – ೧೯೬೦

