
ನೇಮಿಚಂದ್ರ
July 16, 2024
೧೬-೭-೧೯೫೯ ಕತೆಗಾರ್ತಿ, ಅಂಕಣಗಾರ್ತಿ, ತಂತ್ರಜ್ಞೆ ನೇಮಿಚಂದ್ರರು ಹುಟ್ಟಿದ್ದು ಚಿತ್ರದುರ್ಗದಲ್ಲಿ. ತಂದೆ ಪ್ರೊ. ಜಿ. ಗುಂಡಣ್ಣ, ತಾಯಿ ತಿಮ್ಮಕ್ಕ. ಪ್ರಾರಂಭಿಕ ಶಿಕ್ಷಣ ತುಮಕೂರು, ಮೈಸೂರು. ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಬಿ.ಇ. ಪದವಿ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಎಂ.ಎಸ್. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಹಿಂದೂಸ್ಥಾನ್ ಕಾರ್ಖಾನೆ. ಹೆಲಿಕಾಪ್ಟರ್ ಡಿಸೈನ್ ಬ್ಯೂರೊದಲ್ಲಿ ಮುಖ್ಯ ವ್ಯವಸ್ಥಾಪಕಿಯಾಗಿ ಕಾರ‍್ಯನಿರ್ವಹಣೆ. ಪ್ರವೃತ್ತಿಯಲ್ಲಿ ಸಾಹಿತ್ಯ, ಪ್ರವಾಸಾಸಕ್ತೆ. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ‘ಅಚಲಾ’ ಮಹಿಳಾ ಅಧ್ಯಯನ ಮಾಸಪತ್ರಿಕೆಯ ಸಂಪಾದಕೀಯ ಮಂಡಲಿಯ ಸದಸ್ಯೆಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರ, ‘ನೆರವು’ ಹಿತರಕ್ಷಣಾ ವೇದಿಕೆಗಳ ನಿಕಟ ಸಂಪರ್ಕ ಮತ್ತು ಒಡನಾಟ. ವಿಜ್ಞಾನ, ಸಾಹಿತ್ಯ, ಮಹಿಳಾ ಅಧ್ಯಯನ ಕುರಿತಂತೆ ಹಲವಾರು ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ಪ್ರಕಟಿತ ಕೃತಿಗಳು, ಕಥಾಸಂಕಲನ-ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಮತ್ತೆ ಬರೆದ ಕಥೆಗಳು, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು (ಇಲ್ಲಿಯವರೆಗಿನ) ಮುಂತಾದುವು. ಸಂವೇದನಾ ಸೂಕ್ಷ್ಮತೆ, ಸಂಯಮ, ಮನಸ್ಸಿನ ವ್ಯಾಪಾರಗಳ ವಿಶ್ಲೇಷಣೆಯಿಂದ ಕೂಡಿದ ಕಥೆಗಳು. ಸಂಪಾದಿತ ಕೃತಿ-ಬೆಳಗೆರೆ ಜಾನಕಮ್ಮ ಬದುಕು-ಬರೆಹ. ಅಂತರ ಶಿಸ್ತೀಯ ಅಧ್ಯಯನ-ಸಾಹಿತ್ಯ ಮತ್ತು ವಿಜ್ಞಾನ. ಜೀವನಚರಿತ್ರೆ-ನೋವಿಗದ್ದಿದ ಕುಂಚ (ಪ್ರಸಿದ್ಧ ಚಿತ್ರಕಾರ ವ್ಯಾನ್‌ಗೊ), ಬೆಳಕಿಗೊಂದು ಕಿರಣ (ಮೇರಿಕ್ಯೂರಿ), ಥಾಮಸ್ ಆಲ್ವಾ ಎಡಿಸನ್. ವೈಜ್ಞಾನಿಕ ಕೃತಿಗಳು-ನಿಮ್ಮ ಮನೆಗೊಂದು ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ಸ್. ಅನುವಾದ-ನನ್ನ ಕಥೆ…ನಮ್ಮ ಕಥೆ. ಪ್ರವಾಸ ಸಾಹಿತ್ಯ-ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ. ಅಂಕಣ ಬರಹ ಕೃತಿ-ಬದುಕು ಬದಲಿಸಬಹುದು ಮುಂತಾದ ಇಪ್ಪತ್ತು ಕೃತಿ ಪ್ರಕಟಿತ. ಸಂದ ಪ್ರಶಸ್ತಿಗಳು. ಬೆಳಕಿಗೊಂದು ಕಿರಣ ಮೇರಿಕ್ಯೂರಿ ಹಾಗೂ ಪೆರುವಿನ ಪವಿತ್ರ ಕಣಿವೆಯಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಒಂದು ಕನಸಿನ ಪಯಣ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮತ್ತೆ ಬರೆದ ಕಥೆಗಳು ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, ವಿಜ್ಞಾನ, ಸಾಹಿತ್ಯ, ಮಹಿಳಾ ಅಧ್ಯಯನಕ್ಕಾಗಿ ಸಂದೇಶ ಪ್ರಶಸ್ತಿ ದೊರೆತಿದೆ. ಇದೇ ದಿನ ಹುಟ್ಟಿದ ಸಾಹಿತಿಗಳು : ಶೀಲಾ ಗಜಾನನ ಅಂಕೋಲ – ೧೯೪೨ ಸುಮಿತ್ರಾ ಶ್ಯಾನುಭಾಗ – ೧೯೪೭ ಜ್ಯೋತಿ ಗುರುಪ್ರಸಾದ್ – ೧೯೬೫