೨೬.೨.೧೮೮೭ ೩೦.೧೧.೧೯೫೩ ದಕ್ಷಿಣ ಕನ್ನಡ ಜಿಲ್ಲೆಯ ಚಿತ್ರಾಪುರ ಸಾರಸ್ವತ ಕುಟುಂಬಗಳಲ್ಲಿ ಒಂದಾದ ಬೆನೆಗಲ್ ಮನೆತನದಲ್ಲಿ ಜನಿಸಿದರು. ತಂದೆ ಬಿ. ರಾಘವೇಂದ್ರರಾವ್-ಮದರಾಸು ಪ್ರೆಸಿಡೆನ್ಸಿಯಲ್ಲಿ ಸರಕಾರಿ ವೈದ್ಯರು. ತಾಯಿ ರಾಧಾಬಾಯಿ. ೧೯೦೫ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ. ಪ್ರಥಮ ದರ್ಜೆ. ಭಾರತ ಸರ್ಕಾರದ ಶಿಷ್ಯವೇತನದಿಂದ ಇಂಗ್ಲೆಂಡಿನಲ್ಲಿ ಐ.ಸಿ.ಎಸ್. ಪರೀಕ್ಷೆಯಲ್ಲಿ ಜಯ. ಭಾರತಕ್ಕೆ ಹಿಂದಿರುಗಿ ಬಂಗಾಳದಲ್ಲಿ ೧೪ ವರ್ಷ ಜಿಲ್ಲಾಕಾರಿ, ನ್ಯಾಯಾಧಿಶರಾಗಿ ಸೇವೆ. ೧೯೧೯-೨೦ರಲ್ಲಿ ಮುರ್ಷಿದಾಬಾದ್ನಲ್ಲಿ ಸೆಷನ್ ಜಡ್ಜ್ . ೧೯೨೦-೨೫ರಲ್ಲಿ ಸಿಲ್ಹೆಟ್ ಹಾಗೂ ಕಾತಾರ್ನಲ್ಲಿ ಡಿಸ್ಟ್ರಿಕ್ಟ್ ಹಾಗೂ ಸೆಷನ್ ಜಡ್ಜ್ . ೧೯೨೫ರಲ್ಲಿ ಅಸ್ಸಾಂ ಪ್ರಾಂತ್ಯದ ವಿಧಾನ ಪರಿಷತ್ತಿನ ಕಾರ್ಯದರ್ಶಿ. ಲಂಡನ್ನಿನ ದುಂಡುಮೇಜಿನ ಪರಿಷತ್ತಿಗೆ ಅಸ್ಸಾಂ ಪ್ರತಿನಿಯಾಗಿ ಪಯಣ. ೧೯೩೪-೩೫ರಲ್ಲಿ ಭಾರತ ಸರಕಾರದ ಲೆಜಿಸ್ಲೆಟಿವ್ ವಿಭಾಗದ ಕಾರ್ಯದರ್ಶಿ. ೧೯೩೫ರಲ್ಲಿ ಕಲ್ಕತ್ತಾದ ಉಚ್ಚ ನ್ಯಾಯಾಲಯದ ನ್ಯಾಯಾಧಿಶರು. ೧೯೩೮ರಲ್ಲಿ ಸುಧಾರಣ ಆಯೋಗದ ಕೆಲಸ. ೧೯೪೧ರಲ್ಲಿ ಹಿಂದೂ ನ್ಯಾಯ ಪರಿಷ್ಕರಣೆಗಾಗಿ ಕೇಂದ್ರ ಸರಕಾರ ರಚಿಸಿದ ಸಮಿತಿಯ ಅಧ್ಯಕ್ಷರಾಗಿ ನೇಮಕ. ೧೯೩೯ರಲ್ಲಿ ಕೇಂದ್ರ ಸಂಶೋಧನ ಸಂಸ್ಥೆಗಾಗಿ ವೈದ್ಯವಿಜ್ಞಾನ, ಶಸ್ತ್ರ ಚಿಕಿತ್ಸೆ ವಿಭಾಗಗಳ ಯೋಜನೆಯನ್ನು ಸಿದ್ಧಪಡಿಸಿದರು. ಸಿಂಧೂ ಆಯೋಗದಲ್ಲೂ ಕಾರ್ಯಭಾಗಿ. ೧೯೪೪ರಲ್ಲಿ ಭಾರತ ಸರ್ಕಾರದ ಸೇವೆಯಿಂದ ನಿವೃತ್ತಿ. ನಿವೃತ್ತಿಯ ನಂತರವೂ ಹಲವಾರು ಪ್ರತಿಷ್ಠಿತ ಹುದ್ದೆಗಳು. ೧೯೪೪ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಯಾಗಿ ಸಂದಿಗ್ಧ ಕಾಲದಲ್ಲಿ ೧೮ ತಿಂಗಳು ಸೇವೆ. ೧೯೪೬ರ ಜುಲೈನಲ್ಲಿ ಭಾರತ ಸಂವಿಧಾನ ರಚನೆಗೆ, ಸಂವಿಧಾನ ಸಲಹೆಗಾರರಾಗಿ ನೇಮಕ. ಹೊಸ ಸಂವಿಧಾನದ ರೂಪರೇಷೆ ಕುರಿತ ಹಲವಾರು ಲೇಖನಗಳ ಮಂಡನೆ, ಪ್ರಕಟಣೆ. ಭಾರತ ಸರ್ಕಾರದ ಸಂವಿಧಾನದ ಕರಡುಪ್ರತಿ ಸಿದ್ಧಪಡಿಸಿದ ಖ್ಯಾತಿ ಬೆನಗಲ್ ನರಸಿಂಗರಾಯರದು. ಅದರಲ್ಲೂ ಕನ್ನಡಿಗರೊಬ್ಬರಿಂದ ಎಂದ ಮೇಲೆ ಕರ್ನಾಟಕಕ್ಕೆ ಸಂದ ಕಿರೀಟ. ವಿಶ್ವ ಸಂಸ್ಥೆಯ ಕಾನೂನು ಆಯೋಗದಲ್ಲಿ ಪ್ರತಿಷ್ಠಿತ ಸ್ಥಾನ-ಆಯೋಗದಲ್ಲಿ ಖಾಯಂ ಪ್ರತಿನಿಧಿ. ಕಾಶ್ಮೀರ ಸಮಸ್ಯೆ, ಪರಮಾಣು ಶಕ್ತಿ, ಆಫ್ರಿಕಾದಲ್ಲಿ ಇಟಲಿಯ ವಸಾಹತು ಮುಂತಾದ ವಿಷಯಗಳ ಬಗ್ಗೆ ವಿಶ್ವಸಂಸ್ಥೆಯಲ್ಲಿ ವಾದಮಂಡನೆ. ೧೯೫೧ರ ವೇಳೆಗೆ ಹೇಗ್ನ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧಿಶರಾಗಿ ಆಯ್ಕೆ. ಹುದ್ದೆಯಲ್ಲಿದ್ದಾಗಲೇ ನಿಧನ. ಉತ್ತಮ ಬರಹಗಾರರಾದರೂ ಗ್ರಂಥ ಪ್ರಕಟವಾಗಲಿಲ್ಲ. ಇವರ ಸಹೋದರರೂ ಪ್ರಖ್ಯಾತರೇ. ಬೆನಗಲ್ ಸಂಜೀವರಾವ್ ಖ್ಯಾತ ಶಿಕ್ಷಣ ತಜ್ಞರು. ಬೆನಗಲ್ ರಾಮರಾವ ರಿಸರ್ವ್ ಬ್ಯಾಂಕಿನ ಗರ್ವನರ್ ಆಗಿದ್ದರು. ಬೆನಗಲ್ ಶಿವರಾಮ್ ಖ್ಯಾತ ಪತ್ರಿಕೋದ್ಯಮಿಗಳು, ಗ್ರಂಥಕರ್ತರು, ಇವರು, ಕನ್ನಡಿಗರ ಹೆಮ್ಮೆಯ ಪುತ್ರರಾದ ಬೆನಗಲ್ ನರಸಿಂಗರಾಯರ ಬರಹಗಳನ್ನೆಲ್ಲಾ INDIA’S CONSTITUTION IN THE MAKING ಎಂಬ ಹೆಸರಿನಡಿ ಸಂಪಾದಿಸಿ ಪ್ರಕಟಿಸಿದ್ದಾರೆ.

