ಪಂಡಿತ ಚನ್ನಬಸಪ್ಪ ಎಲ್ಲಪ್ಪ ಕವಲಿ

Home/Birthday/ಪಂಡಿತ ಚನ್ನಬಸಪ್ಪ ಎಲ್ಲಪ್ಪ ಕವಲಿ
Loading Events

೦೭..೧೯೦೦ ೧೮..೧೯೮೫ ಪಂಡಿತ ಕವಲಿ ಎಂದೇ ವಿದ್ವತ್‌ ವಲಯದಲ್ಲಿ ಪ್ರಖ್ಯಾತರಾಗಿದ್ದ ಚನ್ನಬಸಪ್ಪ ಕವಲಿಯವರು ಹುಟ್ಟಿದ್ದು ೧೯೦೦ರ ಸೆಪ್ಟಂಬರ್ ೭ರಂದು, ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ. ತಂದೆ ಎಲ್ಲಪ್ಪ ಕವಲಿ, ತಾಯಿ ಮರಿಯಮ್ಮ. ಪ್ರಾರಂಭಿಕ ಶಿಕ್ಷಣ ಬ್ಯಾಡಗಿಯಲ್ಲಿ ಮೈಸೂರಿಗೆ ತೆರಳಿ ಕನ್ನಡ-ಸಂಸ್ಕೃತದಲ್ಲಿ ವಿಶೇಷಾಧ್ಯಯನ ನಡೆಸಿ ೨೪ನೆಯ ವಯಸ್ಸಿಗೆ ನೇಕಾರರ ವರ್ಗದಲ್ಲಿಯೇ ಮೊದಲ ಪಂಡಿತರೆಂದು ಖ್ಯಾತಿ ಪಡೆದರು. ಕಾಳಿದಾಸನ ಬಗ್ಗೆ ಹೊಸ ದೃಷ್ಟಿಕೋನದಿಂದ, ವಿಮರ್ಶೆಯ ಪ್ರಪಂಚಕ್ಕೆ ಹೊಸನೋಟವನ್ನೂ ಕೊಟ್ಟ ಕೃತಿ ‘ಕಾಳಿದಾಸ: ಕ್ಷ-ಕಿರಣ’. ಸುಮಾರು ೭೫ ಕ್ಕೂ ಹೆಚ್ಚು ಕೃತಿಗಳನ್ನೂ ರಚಿಸಿದ್ದು ಅವುಗಳಲ್ಲಿ ವಿದ್ವತ್ತಿನ ಕೃತಿಗಳು, ಸ್ವತಂತ್ರ ನಾಟಕಗಳು ಮತ್ತು ಅನುವಾದಗಳು ಹಾಗೂ ಮಕ್ಕಳ ಸಾಹಿತ್ಯ ಎಂಬ ಮೂರು ಪ್ರಕಾರಗಳಲ್ಲಿವೆ. ಮಕ್ಕಳ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಗಳೇ ಸುಮಾರು ಐವತ್ತಕ್ಕೂ ಹೆಚ್ಚು. ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳಿಗಾಗಿ ಬರೆದ ‘ವ್ಯಾಕರಣ ವಿವಿಧ ಸಾಹಿತ್ಯ’ ಮತ್ತು ರಾಷ್ಟ್ರಪಿತ ಮಹಾತ್ಮಗಾಂಧಿ, ಸಯ್ಯದ್‌ ಅಹಮದ್‌ ಖಾನ್‌, ಮುಂತಾದ ವ್ಯಕ್ತಿ ಚಿತ್ರಗಳಲ್ಲದೆ ಪುರಾಣ ಪುರುಷರ ಕಥೆಗಳು, ನೀತಿಕತೆಗಳು ಮುಂತಾದವುಗಳನ್ನೂ ರಚಿಸಿದ್ದಾರೆ. ಮಹಾಲಕ್ಷ್ಮೀ-ವಿಷ್ಣು ಪರಿಣಯದ ‘ಶ್ರೀಮತಿ ಪರಿಣಯ’, ಮಧ್ಯಮ ವರ್ಗದ ಸಾಮಾಜಿಕ ನಾಟಕವಾದ ‘ಮೆಂಟಲ್‌ ಹಾಸ್ಪಿಟಲ್‌ ಎಂದರೆ ಮಧ್ಯಮ ವರ್ಗದ ಮನೆತನ’ ಅಲ್ಲದೆ ಹುಟ್ಟುಹಬ್ಬ, ಸಮಾಜ ಸಾಮರಸ್ಯ ಮುಂತಾದ ಹಲವಾರು ರೇಡಿಯೋ ನಾಟಕಗಳು, ಏಕಾಂಕ ನಾಟಕಗಳು; ಧಾರವಾಡದ ಆಕಾಶವಾಣಿಗಾಗಿ ಸಿರಿಯಾಳ ಷಷ್ಠಿ, ಹೋಳಿ ಹುಣ್ಣಿಮೆ ಮುಂತಾದ ರೂಪಕಗಳು; ರತ್ನಾವಳಿ,ನಾಗಾನಂದ, ಶ್ರೀಹರ್ಷನ ಪ್ರಿಯದರ್ಶಿಕಾ ಮೊದಲಾದ ಅನುವಾದದ ನಾಟಕಗಳನ್ನೂ ರಚಿಸಿದ್ದಾರೆ. ಇವರು ರಚಿಸಿದ ನಾಟಕಗಳಲ್ಲಿ ಚಲನಚಿತ್ರ ನಿರ್ಮಾಪಕರ ತಂಡದ ಅನೈತಿಕ ವ್ಯವಹಾರವನ್ನೂ ಕುರಿತು ಬರೆದ ನಾಟಕ ‘ಗೋಲ್ಡನ್‌ ಗ್ಯಾಂಗ್‌’ ಅಥವಾ ಪುಂಡರ ತಂಡ. ಇದು ೧೯೫೦ ರ ಸುಮಾರಿನಲ್ಲಿ ಪ್ರಕಟವಾದ ನಾಟಕ. ರಂಗಭೂಮಿಯೊಡನೆಯೂ ಸಂಬಂಧ ಹೊಂದಿದ್ದ ಕವಲಿಯವರು ತಮ್ಮದೇ ಆದ ಕಂಪನಿಯನ್ನು ಹೊಂದಿದ್ದರ ಜೊತೆಗೆ ಹಲಗೇರಿ ಜಟ್ಟಪ್ಪನವರ ಹಾಗೂ ಶಿರಹಟ್ಟಿ ವೆಂಕೋಬರಾಯರ ಕಂಪನಿಗಳೊಡನೆಯೂ ನಿಕಟ ಸಂಬಂಧ ಹೊಂದಿದ್ದರು. ಇವರು ರಚಿಸಿದ ಕೃತಿಗಳಲ್ಲಿ ಕನ್ನಡ ನಾಡಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಬರೆದ ಕೃತಿ ‘ಕನ್ನಡನಾಡಿನ ಚರಿತ್ರೆ’ ಹಾಗೂ ಸಾಂಸ್ಕೃತಿಕ ಜಗತ್ತಿಗೆ ಕೊಟ್ಟ ಕೊಡುಗೆ ‘ಭಾರತೀಯರ ಹಬ್ಬ ಹುಣ್ಣಿಮೆಗಳು’ ಪ್ರಮುಖವಾದವುಗಳು. ಇವರ ವಿದ್ವತ್ತಿನ ಕೃತಿಗಳಲ್ಲೆಲ್ಲಾ ಆಚಾರ್ಯ ಕೃತಿ ಎಂದರೆ ‘ಸಚಿತ್ರ ಕನ್ನಡ-ಕನ್ನಡ ಕಸ್ತೂರಿ ಕೋಶ’. ಒಂದು ಸಂಸ್ಥೆ, ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಅಗಾಧ ಕೆಲಸವನ್ನೂ ಏಕವ್ಯಕ್ತಿಯಾಗಿ ಸಾಧಿಸಿ ತೋರಿಸಿದ್ದಾರೆ. ‘ರಂ.ಶ್ರೀ. ಮುಗಳಿಯವರು ಹೇಳಿದಂತೆ ವ್ಯಾಕರಣದ ಮೇಲಿನ ಪ್ರೀತಿ, ಕೋಶದ ಮೇಲಿನ ಪ್ರಜ್ಞೆಯಿಂದ ರಚಿಸಿದ ಕೃತಿ.’ ಇದೊಂದು ಮಹಾಸಾಹಸದ ಕೆಲಸವಾಗಿದ್ದು ೧೯೫೭ ರಲ್ಲಿ ಪ್ರಕಟಗೊಂಡ ಈ ಕೋಶವು ಕನ್ನಡದ ಮೊಟ್ಟಮೊದಲ ಸಚಿತ್ರಕೋಶ. ಈ ಕೋಶ ಸುಮಾರು ಒಂದು ಸಾವಿರ ಪುಟಗಳನ್ನೊಳಗೊಂಡಿದ್ದು ನಲವತ್ತು ಸಾವಿರ ಮುಖ್ಯ ಉಲ್ಲೇಖಗಳು, ಎರಡುವರೆ ಲಕ್ಷ ಪದಗಳಿಂದ ಕೂಡಿದೆ. “ಇದೊಂದು ನನ್ನ ಜೀವಿತಾವಧಿಯ ಫಲ. ಸಿರಿಗನ್ನಡದೇವಿಯ ಸಿರಿಮುಡಿಯನ್ನಲ್ಲದಿದ್ದರೂ ಸಿರಿಯಡಿಯನ್ನಾದರೂ ಸಿಂಗರಿಸಬಹುದೆಂಬ ನಂಬಿಕೆ ನನಗಿದೆ”  ಎಂದು ಕವಲಿಯವರು ಹೇಳಿಕೊಂಡಿದ್ದಾರೆ (ಹಾ.ಮಾ.ನಾ. ಸಂಪ್ರತಿ-ಪುಟ ೧೯). ಇವರು ರಚಿಸಿದ ಕೃತಿಗಳಲ್ಲಿ ‘ಪುಟ್ಟಣ್ಣನ ಪಂಚತಂತ್ರ’ ಕೃತಿಗೆ ಕೇಂದ್ರಸರಕಾರದ ಬಹುಮಾನ, ‘ವಿವೇಕಾನಂದ’ ಕೃತಿಗೆ ಮುಂಬಯಿ ಸರಕಾರದ ಬಹುಮಾನ ಮತ್ತು ‘ಸಂಸ್ಕೃತ ಸಾಹಿತ್ಯ ಸುಧಾ’ ಕೃತಿಗೆ ಮೈಸೂರು ರಾಜ್ಯ ಸರಕಾರದ ಬಹುಮಾನ-ಹೀಗೆ ಹಲವಾರು ಪುರಸ್ಕಾರಗಳನ್ನೂ ಪಡೆದಿದ್ದ ಪಂಡಿತ ಕವಲಿಯವರು ಸಾಹಿತ್ಯ ಲೋಕದಿಂದ ದೂರವಾದದ್ದು ೧೯೮೫ ರ ಜನವರಿ ೧೮ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top