ಪಂ. ಕೇಶವಶರ್ಮ ಗಲಗಲಿ

Home/Birthday/ಪಂ. ಕೇಶವಶರ್ಮ ಗಲಗಲಿ
Loading Events
This event has passed.

೧೩.೦೩.೧೮೯೩ ೧೬.೦೬.೧೯೬೬ ಶಾಲಾ ಶಿಕ್ಷಕರಾಗಿ, ಸಾಹಿತ್ಯಾಭ್ಯಾಸಿಯಾಗಿದ್ದಂತೆ ಜ್ಯೋತಿಶಾಸ್ತ್ರದಲ್ಲೂ ಪಂಡಿತರೆನಿಸಿದ್ದ ಕೇಶವ ಶರ್ಮರು ಹುಟ್ಟಿದ್ದು ಇಂದಿನ ಬಾಗಲ ಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ನಾಗನೂರಿನಲ್ಲಿ. ತಂದೆ ರಂಗಭಟ್ಟರು, ತಾಯಿ ಜಾನಕೀಬಾಯಿ. ಗಲಗಲಿಯಲ್ಲಿ ಪ್ರಾರಂಭಿಕ ಶಿಕ್ಣಣ ಮುಗಿಸಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದನಂತರ ಶಿಕ್ಷಕರಾಗಿ ಸೇರಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಸಂಸ್ಕೃತ, ಕಾವ್ಯ, ನಾಟಕ, ವ್ಯಾಕರಣಗಳನ್ನು ಇವರಿಗೆ ಬೋಧಿಸಿದವರು ಕೂರ್ಮಾಚಾರ‍್ಯರು ಹಾಗೂ ಸುಬ್ಬಣ್ಣಾಚಾರ್ಯರು. ಶಿಕ್ಷಕರ ತರಬೇತಿಗಾಗಿ ಧಾರವಾಡಕ್ಕೆ ಬಂದಾಗ ಶಂಬಾ ಜೋಶಿಯವರ ಪರಿಚಯವಾದ ನಂತರ ಸಂಸ್ಕೃತ ವ್ಯಾಸಂಗವನ್ನು ಕೈಗೊಂಡು ೧೯೨೨ರಲ್ಲಿ ಮೈಸೂರಿಗೆ ತೆರಳಿ ಮೈಸೂರು ವಿದ್ಯಾ ಇಲಾಖೆಯು ನಡೆಸುತ್ತಿದ್ದ ಪಂಡಿತ ಪರೀಕ್ಷೆಯಲ್ಲಿ ತೇರ್ಗಡೆಯಾದನಂತರ ಪ್ರಾಥಮಿಕಶಾಲಾ ಮುಖ್ಯೋಪಾದ್ಯಾಯರಾಗಿ, ಅದೇ ಹುದ್ದೆಯಲ್ಲಿ ಕಾರ‍್ಯ ನಿರ್ವಹಿಸಿ ನಿವೃತ್ತರಾದರು. ಇವರಿಗೆ ಕನ್ನಡ, ಇಂಗ್ಲಿಷ್, ಬಂಗಾಳಿ, ಪಾಳಿ, ಸಂಸ್ಕೃತ ಹಾಗೂ ಮರಾಠಿ ಮುಂತಾದ ಆರು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದು ಬಹು ಭಾಷಾ ಕೋವಿದರಾಗಿದ್ದುದರಿಂದ ಇವರ ಸಾಹಿತ್ಯ ರಚನೆಯು ಪ್ರಾರಂಭವಾದುದು ಧಾರವಾಡದ ಟ್ರೈನಿಂಗ್ ಕಾಲೇಜಿನಲ್ಲಿದ್ದಾಗಿನಿಂದ.. ಕಾಲೇಜಿನಲ್ಲಿ ಹೊರಡಿಸುತ್ತಿದ್ದ ಪತ್ರಿಕೆಗೆ ಲೇಖನಗಳನ್ನು ಬರೆಯತೊಡಗಿದರು.  ಟ್ಯಾಗೊರರ ಗೀತಾಂಜಲಿಗೆ ನೊಬೆಲ್ ಪ್ರಶಸ್ತಿ ಬಂದಾಗ ಗೀತಾಂಜಲಿಯನ್ನು ಮೂಲದಲ್ಲಿಯೇ ಓದಬೇಕೆಂಬ ಆಶಯದಿಂದ ಬಂಗಾಳಿ ಪ್ರತಿಯನ್ನು ತರಿಸಿ ಸಂಸ್ಕೃತದ ಸಹಾಯದಿಂದ ಬಂಗಾಲಿಯನ್ನು ಕಲಿತು ಗೀತಾಂಜಲಿಯನ್ನು ಓದಿದ್ದಲ್ಲದೆ ಕನ್ನಡಕ್ಕೆ ಅನುವಾದಿಸಿ ಶಾಲಾ ಪತ್ರಿಕೆಯಲ್ಲಿ ಪ್ರಕಟಿಸಿದರು. ನಿವೃತ್ತಿಯ ನಂತರ ಧಾರವಾಡದ ಕೆ.ಇ.ಬೋರ್ಡ್‌ನ ಶಿಕ್ಷಕರ ತರಬೇತಿ ಕೇಂದ್ರದಲ್ಲಿಯೂ ಕನ್ನಡ ಪಂಡಿತರಾಗಿ ಕೆಲಕಾಲ ಕಾರ‍್ಯ ನಿರ್ವಹಿಸಿದರು. ನಂತರ ಮನೆತನದ ವಿದ್ಯೆಯಾಧ ಜ್ಯೋತಿಷ್ಯ ಶಾಸ್ತ್ರವನ್ನೇ ಸಾಂಪ್ರದಾಯಿಕವಾಗಿ ಹಾಗೂ ವೈಜ್ಞಾನಿಕವಾಗಿ ಅಭ್ಯಾಸಮಾಡಿ ಕನ್ನಡದಲ್ಲಿ ‘ಅಷ್ಟಕವರ್ಗ ಪದ್ಧತಿ’ ಎಂಬ ಕೃತಿಯನ್ನು ರಚಿಸಿ ಜ್ಯೋತಿಷ್ಯವನ್ನು ಅಭ್ಯಾಸಮಾಡುವವರಿಗೆ ಸಹಾಯ ಮಾಡಿದ್ದಾರೆ. ಇವರು ರಚಿಸಿದ ಚಾರಿತ್ರಿಕ ಕಾದಂಬರಿ ‘ನೂರ್‌ಜಹಾನ್‌’ ಮತ್ತು ‘ಪಂಡಿತರಾಜ’. ಪಂಡಿತರಾಜ ಕೃತಿಯು ವಾಗ್ಭೂಷಣ ಪತ್ರಿಕೆಯಲ್ಲಿ ಪ್ರಕಟವಾಯಿತು. ಸಂಸ್ಕೃತ ಕವಿಗಳಾದ ಜಗನ್ನಾಥ ಮತ್ತು ಪಾಣಿನಿಯನ್ನು ಕುರಿತು ಎರಡು ಕೃತಿಗಳನ್ನು ರಚಿಸಿ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಬಹುಮಾನವನ್ನೂ ಪಡೆದರು. ಅಂದಿನ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದವರು ಕನ್ನಡ ಭಾಷೆಗೆ ಪ್ರೋತ್ಸಾಹ ನೀಡಲು ಶಿಕ್ಷಕರಿಂದ ಪುಸ್ತಕಗಳನ್ನು ರಚಿಸುವಂತೆ ಪ್ರೇರೇಪಿಸಿ ಬಹುಮಾನ ಕೊಡುವ ಪದ್ಧತಿಯನ್ನು ಜಾರಿಗೆ ತಂದಿದ್ದು ಮೊದಲಸಾರೆ ಬಹುಮಾನ ಪಡೆದವರು ಗಳಗನಾಥರು, ತಮ್ಮ ‘ಪದ್ಮ ನಯನೆ’ ಕಾದಂಬರಿಗೆ. ಆಲೂರು ವೆಂಕಟರಾಯರ ‘ಜಯ ಕರ್ನಾಟಕ’, ಬೆನಗಲ್ ರಾಮರಾವ್ ಮತ್ತು ರಾ.ಹ. ದೇಶಪಾಂಡೆಯವರು ಸಂಪಾದಿಸಿ ಪ್ರಕಟಿಸುತ್ತಿದ್ದ ‘ವಾಗ್ಭೂಷಣ’ ಕನ್ನಡ ಸಾಹಿತ್ಯ ಪರಿಷತ್‌ ಪತ್ರಿಕೆಯಲ್ಲದೆ ಶಾಲಾ ಪತ್ರಿಕೆಗಳೂ ಸೇರಿ ನೂರಾರು ಲೇಖನಗಳನ್ನು ಬರೆದರು. ಕರ್ನಾಟಕ ಇತಿಹಾಸದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದು ಹಲವಾರು ಲೇಖನಗಳನ್ನು ಬರೆದಿದ್ದು ನಾಡು – ನುಡಿಯ ಬಗ್ಗೆ ತಿಳಿಯಬೇಕೆನ್ನುವವರಿಗೆ ಸಹಾಯಕವಾಗಿವೆ. ಇವರು ರಚಿಸಿದ ಕೃತಿಗಳೆಂದರೆ ಜಾಂಬವತಿ ಕಲ್ಯಾಣ, ಉಪನಿಷತ್ತುಗಳಲ್ಲಿ ಕಾವ್ಯ ಧ್ವನಿ,  ಕನ್ನಡಕ್ಕೆ ಸಂಸ್ಕೃತದ ಕಾಣ್ಕೆ, ಚಾರ್ವಾಕ ದರ್ಶನ ಮುಂತಾದವುಗಳು. ಬಹುಭಾಷಾ ಕೋವಿದರಾಗಿದ್ದ ಕೇಶವಶರ್ಮರು ತೀರಿಕೊಂಡದ್ದು ೧೯೬೬ರ ಜೂನ್ ೧೬ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top