ಪಂ. ನರಸಿಂಹಲು ವಡವಾಟಿ

Home/Birthday/ಪಂ. ನರಸಿಂಹಲು ವಡವಾಟಿ
Loading Events
This event has passed.

೨೧.೦೧.೧೯೪೨ ಅಂತಾರಾಷ್ಟ್ರೀಯ ಖ್ಯಾತಿಯ ಕ್ಲಾರಿನೆಟ್ ವಾದಕ ನರಸಿಂಹಲು ವಡವಾಟಿಯವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ವಡವಾಟಿ. ತಂದೆ ಬುಡ್ಡಪ್ಪ, ತಾಯಿ ರಂಗಮ್ಮ, ತಂದೆ ತಬಲ ವಾದಕರಾದರೆ ತಾಯಿ ಭಕ್ತಿಗೀತೆಗಳ ಹಾಡುಗಾರ್ತಿ. ಅಜ್ಜ ಹೊಬಳಪ್ಪ ಶಹನಾಯ್ ವಾದಕರು. ಹೀಗೆ ಸಂಗೀತ ಮೂರು ತಲೆಮಾರಿನಿಂದ ಬಂದ ಬಳುವಳಿ. ಕ್ಲಾರಿನೆಟ್ ನುಡಿಸುವುದರಲ್ಲಿ ಹಲವಾರು ವರ್ಷ ಮಾಡಿದ ಸತತ ಸಾಧನೆ. ಹಿಂದೂಸ್ತಾನಿ ಸಂಗೀತದ ಆಳವಾದ ಅಭ್ಯಾಸ. ಪಂಡಿತ ಸಿದ್ಧರಾಮ ಜಂಬಲದಿನ್ನಿಯವರಿಂದ ಹಿಂದೂಸ್ತಾನಿ ಸಂಗೀತ ಕಲಿತು ಕ್ಲಾರಿನೆಟ್‌ಗೆ ಅಳವಡಿಕೆ. ಸತತ ಸಾಧನೆಯಿಂದ ಕ್ಲಾರಿನೆಟ್‌ನಲ್ಲಿ ಹೊಸ ಹೊಸ ಪ್ರಯೋಗಗಳು. ಕ್ಲಿಷ್ಟರಾಗಗಳನ್ನು ನುಡಿಸಬಲ್ಲ ಸಮರ್ಥರು. ರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ ನಡೆಸಿಕೊಟ್ಟ ಕಾರ್ಯಕ್ರಮಗಳು. ಮುಂಬಯಿ, ಮದರಾಸ್, ಕಲ್ಕತ್ತ, ದೆಹಲಿ, ನಾಗಪುರ, ಒರಿಸ್ಸಾ, ಕೇದಾರ, ಬದರೀನಾಥ್, ಬೆಂಗಳೂರು, ಮೈಸೂರು, ಮಂಗಳೂರು, ಹೈದರಾಬಾದ್ ಮುಂತಾದೆಡೆಗಳಲ್ಲಿ ಹಲವಾರು ಬಾರಿ ನಡೆಸಿದ ಕಚೇರಿ. ಆಕಾಶವಾಣಿ ಮತ್ತು ದೂರದರ್ಶನ ವಾಹಿನಿಗಳಲ್ಲಿ ಹಲವಾರು ಕಾರ್ಯಕ್ರಮಗಳು. ಕಾರ್ಯಕ್ರಮದ ವಿಶೇಷತೆಯೆಂದರೆ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್, ವಿದ್ವಾನ್ ಎ.ಕೆ.ಸಿ. ನಟರಾಜನ್, ಕ್ಲಾರಿನೆಟ್ (ಕರ್ನಾಟಕ ಶೈಲಿ) ಡಾ. ಕಾರೈಕುಡಿ ಸುಬ್ರಹ್ಮಣ್ಯಮ್ (ವೀಣೆ) ಹಾಗೂ ಅಮೆರಿಕದ ಪ್ರಸಿದ್ಧ ಸಂಗೀತಗಾರ ವಿಲಿಯಂ ಪೊವೆಲ್ ಜೊತೆ ನೀಡಿದ ಜುಗಲ್‌ಬಂದಿ ಕಾರ್ಯಕ್ರಮ, ರಸಿಕರ ಪಾಲಿಗೆ ರಸದೌತಣ. ರಾಯಚೂರು ನಗರದಲ್ಲಿ ಸ್ವರಸಂಗೀತ ವಿದ್ಯಾಲಯ ಸ್ಥಾಪನೆ. ನೂರಾರು ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಂಗೀತ ಗಾಯನ, ಹಾರ್ಮೋನಿಯಂ, ತಬಲ, ಕೊಳಲು, ಸಿತಾರ್, ಕ್ಲಾರಿನೆಟ್ ತರಬೇತಿ. ಬೆಂಗಳೂರಿನ ಕೆನ್ ಕಲಾಶಾಲೆಯಲ್ಲಿ ತೆರೆದ ಸ್ವರಸಂಗಮ ಸಂಗೀತ ವಿದ್ಯಾಲಯ. ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಸುರಮಣಿ (ಸು ಸಿಂಗರ್ ಸಮ್‌ಸನ್ ಮುಂಬೈ), ಕರ್ನಾಟಕ ಸಂಗೀತ ಅಕಾಡಮಿಯಿಂದ ಕರ್ನಾಟಕ ಕಲಾ ತಿಲಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂದರ್ಶನ ಪ್ರಾಧ್ಯಾಪಕರಾಗಿ ಹಲವಾರು ವಿದೇಶಿ ವಿಶ್ವವಿದ್ಯಾಲಯದಲ್ಲಿ ನೀಡಿದ ಕಾರ್ಯಕ್ರಮಗಳು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ.   ಇದೇ ದಿನ ಹುಟ್ಟಿದ ಕಲಾವಿದರು : ಲಕ್ಷ್ಮೀ ಎಂ. – ೧೯೫೧

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top