ಪಂ. ಭೀಮಸೇನ ಜೋಶಿ

Home/Birthday/ಪಂ. ಭೀಮಸೇನ ಜೋಶಿ
Loading Events
This event has passed.

೧೪.೦೨.೧೯೨೨ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಕರ್ನಾಟಕಕ್ಕೆ ತಂದುಕೊಟ್ಟ ಭೀಮಸೇನ ಜೋಶಿಯವರು ಹುಟ್ಟಿದ್ದು ಧಾರವಾಡದ ಗದುಗಿನಲ್ಲಿ. ತಂದೆ ಗುರುರಾಜ ಜೋಶಿ, ಹೈಸ್ಕೂಲಿನಲ್ಲಿ ಶಿಕ್ಷಕರು. ತಾಯಿ ಗೋದಾವರಿಬಾಯಿ, ದಾಸರ ಪದಗಳ ಸುಶ್ರಾವ್ಯ ಹಾಡುಗಾರ್ತಿ, ಸಂಗೀತದ ಮನೆತನ. ತಾಯಿ ಹಾಡುತ್ತಿದ್ದರೆ ಬಾಲ್ಯದಲ್ಲೆ ತಾಳ ಹಾಕುತ್ತಾ ಹಾಡು ಕೇಳುತ್ತಾ ಮೈಮರೆಯುತ್ತಿದ್ದ ಮನಸ್ಸು. ಓದುವುದಕ್ಕಿಂತ ಸಂಗೀತದಲ್ಲೇ ಆಸಕ್ತಿ. ತಂದೆಯಿಂದ ಸಿಕ್ಕ ಪ್ರೋತ್ಸಾಹ, ಸಂಗೀತ ಕಲಿಯಲು ಅಗಸರ ಚೆನ್ನಪ್ಪ ಎಂಬ ಶಿಕ್ಷಕರ ನೇಮಕ. ಮುಂದೆ ಬಾದಾಮಿ ಶಾಮಾಚಾರ್ಯರಲ್ಲಿ ಕೆಲಕಾಲ ಸಂಗೀತಾಭ್ಯಾಸ, ಅಬ್ದುಲ್ ಕರೀಂಖಾನರ ಹಿಂದೂಸ್ತಾನಿ ಸಂಗೀತ ಕೇಳಿ ಮರುಳಾಗಿ ತಾವೂ ಕಲಿಯಬೇಕೆಂಬ ಛಲದಿಂದ ಖಾಲಿ ಕಿಸೆಯಲ್ಲಿಯೇ ಮನೆಬಿಟ್ಟು ಗುರುಗಳ ಅನ್ವೇಷಣೆ. ಗ್ವಾಲಿಯರ್, ಲಕ್ನೋ, ಜಲಂಧರ್‌ಗಳಲ್ಲಿ ಬೇರೆಬೇರೆ ಘರಾಣೆಗಳ ಶೈಲಿಯ ಅಭ್ಯಾಸ. ಊರಿಗೆ ಹಿಂದಿರುಗಿ ಗುರುವಾಗಿ ಸ್ವೀಕರಿಸಿದ್ದು ಸವಾಯ್‌ಗಂಧರ್ವರನ್ನು. ಐದು ವರ್ಷಗಳ ನಿರಂತರ ಸಾಧನೆ. ಮುಸ್ತಾಕ ಹುಸೇನ್ ಖಾನ್, ಅಮೀರ್ ಖಾನ್ ಮುಂತಾದ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಲ್ಲಿಯೂ ಸಂಗೀತ ಕಲಿಕೆ, ಕೆಲಕಾಲ ನಾಟಕಗಳಲ್ಲಿಯೂ ಪಾತ್ರ. ನಾಟಕದಲ್ಲಿ ಇವರ ಹಾಡು ಕೇಳಲೆಂದೇ ಬರುತ್ತಿದ್ದ ಪ್ರೇಕ್ಷಕ ವರ್ಗ, ಮುಂಬಯಿಯಲ್ಲಿ ಪ್ರದರ್ಶಿತವಾಗುತ್ತಿದ್ದ ಭಾಗ್ಯಶ್ರೀ ನಾಟಕದ ಹಾಡುಗಳನ್ನು ಎಚ್.ಎಂ.ವಿ. ಸಂಸ್ಥೆ ರೆಕಾರ್ಡ್ ಮಾಡಿ ಮಾರಾಟದ ದಾಖಲೆಯ ಸೃಷ್ಟಿ. ಹಲವಾರು ಚಲನಚಿತ್ರಗಳಿಗೂ ಹಿನ್ನೆಲೆಗಾಯನ. ಭಾರತದಲ್ಲಷ್ಟೇ ಅಲ್ಲದೆ ವಿದೇಶದಲ್ಲಿಯೂ ನೀಡಿದ ಸಂಗೀತ ಕಾರ್ಯಕ್ರಮಗಳು. ಇಂಗ್ಲೆಂಡ್, ಅಮೆರಿಕಾ, ಕೆನಡ, ಇಟಲಿ, ಜರ್ಮನಿ ಮುಂತಾದ ಹಲವಾರು ದೇಶಗಳಿಗೆ ಹಲವಾರು ಬಾರಿ ಭೇಟಿನೀಡಿ ನೀಡಿದ ಸಂಗೀತ ಕಾರ್ಯಕ್ರಮಗಳು. ಸಂದ ಗೌರವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಮಹಾರಾಷ್ಟ್ರ ಭೂಷಣ ಪ್ರಶಸ್ತಿಯೊಂದಿಗೆ ಐದು ಲಕ್ಷ ರೂ. ಹಮ್ಮಿಣಿ. ರಾಜ್ಯ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ, ಕೊಲ್ಹಾಪುರ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ತಾನಸೇನ ಪ್ರಶಸ್ತಿ, ಕಾಳಿದಾಸ ಸಮ್ಮಾನ, ಕರ್ನಾಟಕ ರತ್ನ ಮುಂತಾದುವು. ‘ಸ್ವರಾಧಿರಾಜ’ ಕಲಾಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ.   ಇದೇ ದಿನ ಹುಟ್ಟಿದ ಕಲಾವಿದರು : ಸುಂದರರಾವ್ ಸಿ.ಆರ್. – ೧೯೧೯ ಕೆ.ಎ. ಚೆಟ್ಟಿ – ೧೯೦೮ ಎಚ್.ಎಸ್. ಇನಾಮತಿ – ೧೯೦೦

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top