ಪಂ. ರಘುನಾಥ್ ನಾಕೋಡ್

Home/Birthday/ಪಂ. ರಘುನಾಥ್ ನಾಕೋಡ್
Loading Events
This event has passed.

೧೭.೦೧.೧೯೫೪ ರಾಷ್ಟ್ರೀಯ ಮಟ್ಟದ ತಬಲ ವಾದಕರಾದ ರಘುನಾಥ್ ನಾಕೋಡ್ ರವರು ಹುಟ್ಟಿದ್ದು ಹುಬ್ಬಳ್ಳಿಯ ಸಂಗೀತಗಾರರ ಮನೆತನದಲ್ಲಿ. ತಂದೆ ಅರ್ಜುನ್ ಸಾ. ನಾಕೋಡ್ ಹಿಂದೂಸ್ತಾನಿ ಸಂಗೀತಗಾರರು, ತಾಯಿ ಅನಸೂಯಾ ನಾಕೋಡ್. ಸಾಮಾನ್ಯ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ. ವರೆಗೆ. ತಂದೆಯಿಂದಲೇ ಸಂಗೀತದ ಪ್ರಥಮ ಪಾಠ. ಆರಿಸಿಕೊಂಡದ್ದು ತಬಲ ನುಡಿಸಲು. ತಾಳ, ಲಯಗಳನ್ನು ಕಲಿಸಿದವರು ವೀರಣ್ಣ ಕುಮಾರ್, ನಂತರ ಬಸವರಾಜ ಬೆಂಡಿಗೇರಿಯವರ ಬಳಿ ಕಠಿಣ ಅಭ್ಯಾಸ. ಹತ್ತರ ಹರೆಯದಲ್ಲೇ ತಂದೆಯ ಸಂಗೀತಕ್ಕೆ ನೀಡಿದ ಸಾಥಿ. ಹೈದರಾಬಾದಿನ ಉಸ್ತಾದ ಶೇಖ್‌ದಾವೂದ್, ಇವರ ಮಗ ತಬ್ಬೀರ್ ದಾವೂದ್, ಗುರುಬಂಧು ನಂದಕುಮಾರ್ ಮುಂತಾದವರ ಬಳಿ ಮುಂದುವರೆದ ಶಿಕ್ಷಣ. ೧೯೭೭ರಲ್ಲಿ ಉದ್ಯೋಗಕ್ಕಾಗಿ ಸೇರಿದ್ದು ಮಂಗಳೂರಿನ ಆಕಾಶವಾಣಿ ನಿಲಯ. ಕಲಾವಿದರಾಗಿ. ಹಲವಾರು ಮಂದಿ ಹಿಂದೂಸ್ತಾನಿ ಸಂಗೀತಗಾರರಿಗೆ ತಬಲ ನುಡಿಸುವ ಅವಕಾಶ. ಆಕಾಶವಾಣಿಯ ಉನ್ನತ ಮಟ್ಟದ ತಬಲ ಕಲಾವಿದರೆಂಬ ಹೆಗ್ಗಳಿಕೆ. ಕೆಲಕಾಲ ಧಾರವಾಡದ ಆಕಾಶವಾಣಿ ಕೇಂದ್ರದಲ್ಲೂ ಸಲ್ಲಿಸಿದ ಸೇವೆ. ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಗೀತೋತ್ಸವಗಳಲ್ಲಿ ಪ್ರಖ್ಯಾತಿ ಸಂಗೀತಗಾರರಿಗೆ ನೀಡಿದ ತಬಲ ಸಾಥಿ. ೧೯೮೮ರಲ್ಲಿ ಲಂಡನ್ನಿನ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ, ೧೯೯೬ರಲ್ಲಿ ಫ್ರಾನ್ಸ್‌ನ ಸಾಂಸ್ಕೃತಿಕ ಕಾರ್ಯಕ್ರಮಗಳಡಿಯಲ್ಲಿ ತಬಲ ಸಾಥಿಯಾಗಲು ನೀಡಿದ ಆಹ್ವಾನಿತ ಕಾರ್ಯಕ್ರಮದಲ್ಲಿ ಭಾಗಿ. ಆಕಾಶವಾಣಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತಗಾರರಾದ ಪಂ. ಮಲ್ಲಿಕಾರ್ಜುನ ಮನಸೂರ, ಪಂ. ಬಸವರಾಜರಾಜಗುರು, ಡಾ. ಪ್ರಭಾಅತ್ರೆ, ಗೋಪಾಲಕೃಷ್ಣನ್ (ಪಿಟೀಲು), ಪಂ. ನಂದಾಲಾಲ್ ಘೋಷ್ (ಸರೋರ್), ಶ್ರೀಮತಿ ಜಯಶ್ರೀ ಪಟ್ನಕರ್, ಪಂ. ವೆಂಕಟೇಶ ಗೋಡ್ಖಿಂಡಿ (ಕೊಳಲು), ಡಾ. ರಾಜಶೇಖರ ಮನಸೂರ್ ಮುಂತಾದವರುಗಳಿಗೆ ನೀಡಿದ ಸಾಥಿ. ಬಂದ ಪ್ರಶಸ್ತಿಗಳು ಹಲವಾರು, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಮೈಸೂರಿನ ತ್ಯಾಗರಾಜ ಆರಾಧನಾ ಸಮಿತಿಯಿಂದ ‘ಸಂಗೀತಕಲಾ ತಪಸ್ವಿ’, ಧಾರವಾಡದ ಗುರು ಪಂಚಾಕ್ಷರಿ ಸಂಗೀತ ವಿದ್ಯಾಲಯದಿಂದ ‘ತಾಳ-ಲಯ-ಕಣ್ಮಣಿ’, ಬಸವಗುರು ಕಾರುಣ್ಯ ಪ್ರತಿಷ್ಠಾನದಿಂದ ‘ತಬಲ ವಾದ್ಯ ಗಾರುಡಿಗ’ ಮುಂತಾದ ಪ್ರಶಸ್ತಿಗಳು. ಪತ್ನಿ ರೇಣುಕಾ ನಾಕೋಡ್ ಹಿಂದೂಸ್ತಾನಿ ಸಂಗೀತ ಗಾರ್ತಿಯಾದರೆ ಮಗ ರವಿಕಿರಣ್ ನಾಕೋಡ್ ಪ್ರವರ್ಧಮಾನಕ್ಕೆ ಬರುತ್ತಿರುವ ತಬಲ ಕಲಾವಿದ.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top