Loading Events

« All Events

ಪಡುಕೋಣೆ ರಮಾನಂದರಾಯರು

December 30

೩೦-೧೨-೧೮೯೬ ೧೩-೨-೧೯೮೩ ಕನ್ನಡ ಸಾಹಿತ್ಯಕ್ಕೆ ಹಾಸ್ಯದ ಸ್ಪರ್ಶ ನೀಡಿದ ಪ್ರಮುಖರಲ್ಲಿ ಒಬ್ಬರಾದ ರಮಾನಂದರಾಯರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಡುಕೋಣೆ. ತಂದೆ ನರಸಿಂಗರಾಯರು, ತಾಯಿ ಚಂದ್ರಭಾಗಿ. ಪ್ರಾರಂಭಿಕ ಶಿಕ್ಷಣ ಮಂಗಳೂರಿನ ಶಾಲಾ ಕಾಲೇಜುಗಳಲ್ಲಿ. ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದತ್ತ ಒಲವು. ಪಿ.ಜಿ. ವುಡ್‌ಹೌಸ್, ಸ್ಟೀಫನ್ ಲೀಕಾಕ್  ಬರಹಗಳೆಂದರೆ ಅಚ್ಚುಮೆಚ್ಚು. ಇಂಟರ್ ಮೀಡಿಯೆಟ್ ಓದಿದ್ದು ಮಂಗಳೂರು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಪಡೆದ ಎಂ.ಎ. ಮತ್ತು ಎಲ್.ಟಿ. ಪದವಿಗಳು. ಪದವಿ ಪಡೆದ ನಂತರ ಉದ್ಯೋಗಕ್ಕೆ ಸೇರಿದ್ದು ರಾಜ ಮಹೇಂದ್ರಿ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಅಧ್ಯಾಪಕರಾಗಿ. ಕೆಲಕಾಲ ತಲಚೇರಿ ಕಾಲೇಜು. ನಂತರ ಮಂಗಳೂರಿನ ತರಬೇತು ಕಾಲೇಜಿನ ಪ್ರಾಂಶುಪಾಲರ ಹುದ್ದೆ ನಿರ್ವಹಿಸಿ ನಿವೃತ್ತಿ. ನಿವೃತ್ತಿಯ ನಂತರ ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಕಾಲ. ಸಂಗೀತ, ನಾಟಕ, ಸಿನಿಮಾಟೋಗ್ರಫಿ, ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ನಾಟಕಗಳಲ್ಲೂ ನಟನೆ. ಶಿವರಾಮ ಕಾರಂತರ ಸಿನಿಮಾದಲ್ಲೂ ಪಾತ್ರಧಾರಿ. ಕೈಲಾಸಂರವರ ನಾಟಕ ‘ಹೋಂ ರೂಲ್’ನ್ನು ರಂಗಕ್ಕೆ ತಂದುದಲ್ಲದೆ ಕೊಂಕಣಿಗೆ ಅನುವಾದ. ಸಿ.ಕೆ. ವೆಂಕಟರಾಮಯ್ಯನವರ ಮಂಡೋದರಿ, ವಿ.ಸೀ.ಯವರ ಸೊಹ್ರಾಬ್-ರುಸ್ತುಂ ರಂಗಕ್ಕೆ ತಂದ ಖ್ಯಾತಿ. ಹಲವಾರು ಸಾಹಿತಿ ನಾಟಕಕಾರರಿಗೆ ಮನೆಯಲ್ಲಿ ಧಾರಾಳ ಆತಿಥ್ಯ. ರಾಜರತ್ನಂರವರು ‘ಬೌದ್ಧ ಧರ್ಮದ ಗ್ರಂಥ’ ಬರೆದದ್ದು ಇವರ ಅತಿಥಿಯಾಗಿ. ರಚಿಸಿದ ಕೃತಿಗಳು. ಹುಚ್ಚು ಬೆಳದಿಂಗಳ ಹೂಬಾಣಗಳು, ಇದೊಂದು ವಿಶಿಷ್ಟ ಹಾಸ್ಯ ಪ್ರಬಂಧ ಕೃತಿ. ಅನುವಾದ-ಚೆರ್ರಿ ಹಣ್ಣಿನ ತೋಟ (ಆಂಟನಿ ಚಕಾವ್ ನಾಟಕ). ಕಾದಂಬರಿ-ಪಶ್ಚಿಮ ರಣರಂಗದಲ್ಲಿ ಎಲ್ಲವೂ ಶಾಂತ (ಜರ್ಮನ್ ಕಾದಂಬರಿ-ಆಲ್ ಕ್ವಯಟ್ ಆನ್ ದಿ ವೆಸ್ಟರ್ನ್ ಫ್ರಂಟ್). ಇಂಗ್ಲಿಷ್‌ನಲ್ಲಿ-THE CLOAK, MIRDAD ಮುಂತಾದ ಕೃತಿಗಳು. ಇವರ ಜನ್ಮಶತಾಬ್ದಿ ವರ್ಷದಲ್ಲಿ ಹೊರತಂದ ಕೃತಿ ‘ರಮಾನಂದ ನಮನ.’ ಪ್ರತಿ ವರ್ಷ ಹಾಸ್ಯ ಸಾಹಿತಿಗಳಿಗೆ ಕೊಡುತ್ತಿದ್ದ ಪರಮಾನಂದ ಪ್ರಶಸ್ತಿ ಸ್ಥಗಿತವಾಗಿ ಕೊರವಂಜಿ ಅಪರಂಜಿ ಟ್ರಸ್ಟ್ ಇವರ ಹೆಸರಿನಲ್ಲಿ ಹಾಸ್ಯ ಲೇಖಕರಿಗೆ ವಾರ್ಷಿಕ ಬಹುಮಾನ ನೀಡಲು ನಿರ್ಧರಿಸಿದೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಸುಲೋಚನಾದೇವಿ ಆರಾಧ್ಯ – ೧೯೩೦ ಗರುಡನಗಿರಿ ನಾಗರಾಜ – ೧೯೩೧

Details

Date:
December 30
Event Category: