Loading Events

« All Events

  • This event has passed.

ಪದ್ಮಾ ಗುರುರಾಜ್

September 2, 2023

೧೨..೧೯೪೨ ಪ್ರಸಿದ್ಧ ಕಾದಂಬರಿಕಾರ್ತಿ ಪದ್ಮಾಗುರುರಾಜ್‌ರವರು ಹುಟ್ಟಿದ್ದು ೧೯೪೨ ರ ಸೆಪ್ಟಂಬರ್ ೧೨ ರಂದು ಕೋಲಾರದಲ್ಲಿ. ತಂದೆ ನಿಷ್ಟಾವಂತ ಪೊಲೀಸ್‌ ಅಧಿಕಾರಿಯಾಗಿದ್ದ ಎಚ್‌.ಕೆ. ರಾಮಚಂದ್ರರಾವ್‌ ತಾಯಿ ಜಯಲಕ್ಷ್ಮೀ. ಪ್ರಾಥಮಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ಮಾಧ್ಯಮಿಕದಿಂದ ಪ್ರೌಢಶಾಲೆಯವರೆಗೆ ಮಹಾರಾಷ್ಟ್ರ ಮಹಿಳಾ ವಿದ್ಯಾಲಯದಲ್ಲಿ  (ಈಗಿನ ವಾಸವಿ ಎಜುಕೇಷನ್‌ ಟ್ರಸ್ಟ್‌). ಬಿ.ಎ. ಪದವಿ ಪಡೆದದ್ದು ಆಚಾರ್ಯ ಪಾಠಶಾಲಾ ಕಾಲೇಜಿನಿಂದ. ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ.  ಪದವಿ. ಬಾಲ್ಯದಿಂದಲೂ ಅ.ನ.ಕೃ., ತ.ರಾ.ಸು., ತ್ರಿವೇಣಿ ಮುಂತಾದವರ ಸಾಹಿತ್ಯವನ್ನೂ ಓದುತ್ತಾ ಬಂದಂತೆಲ್ಲ ಬರೆಯಬೇಕೆಂಬ ಉತ್ಕಟೇಚ್ಛೆ ಪ್ರಾರಂಭವಾದಾಗ ಇದಕ್ಕೆ ಪ್ರೋತ್ಸಾಹ ನೀಡಿದವರು ಟಿ. ಸುನಂದಮ್ಮ, ಅನುಪಮಾ ನಿರಂಜನ ಮುಂತಾದವರುಗಳು. ಕಾಲೇಜು ಪತ್ರಿಕೆಗಳಿಗೆ ಆಗಾಗ್ಗೆ ಬರೆದ ಸಣ್ಣಕತೆ, ಕವನಗಳು ಪ್ರಕಟಗೊಂಡಾಗ ಕತೆಗಾರ್ತಿ, ಕವಯತ್ರಿ ಆದೆಯೆಂದು ಸ್ನೇಹಿತೆಯರು ಛೇಡಿಸಿದಾಗ ಅವರ ನುಡಿಗಳಿಗೆ ಬೆರಗಾಗಿ ಇವರ ಮನಸ್ಸು ಪುಳಕಗೊಳ್ಳುತ್ತಿತ್ತು. ಓದು ಮುಗಿಯುವ ಮುನ್ನವೇ ದಾಂಪತ್ಯ ಜೀವನಕ್ಕೆ ಅಡಿಯಿಟ್ಟು ತುಂಬಿದ ಮನೆಯ ಅವಿಭಕ್ತ ಕುಟುಂಬದಲ್ಲಿ ಪತಿಯೊಡನೆ ಏಕಾಂತದಲ್ಲಿ ಮಾತನಾಡಲೂ ಅವಕಾಶ ಸಿಗದಂತಹ ಪರಿಸ್ಥಿತಿಯಲ್ಲಿ ಇವರ ನೋವು, ನಲಿಗಳು, ತುಮಲಗಳಿಗೆ ಸಾಂತ್ವನ ಮಾಡುವವರೂ ಇಲ್ಲದ ಪರಿಸ್ಥಿತಿಯಲ್ಲಿ, ಕಾಲೇಜು ದಿನಗಳಲ್ಲಿ ಮನಸ್ಸಿನಾಳದಲ್ಲಿ ಬೆಚ್ಚಗೆ ಕುಳಿತಿದ್ದ ಸಾಹಿತ್ಯ ಚಟುವಟಿಕೆಗಳಿಗೆ ಕಾವು ಕೊಟ್ಟಂತಾಗಿ ಸಣ್ಣಕಥೆ, ಹರಟೆ, ಲೇಖನ ರೂಪದಲ್ಲಿ ಹೊರಹೊಮ್ಮತೊಡಗಿದವು. ಹೀಗೆ ಇವರು ಬರೆದ ಮೊದಲ ಕತೆ ಪ್ರಕಟವಾದದ್ದು ೧೯೬೩ ರಲ್ಲಿ ‘ಕೈಲಾಸ’ ಎಂಬ ಪತ್ರಿಕೆಯಲ್ಲಿ. ಈಗಿನಂತೆ ಗ್ಯಾಸ್‌, ಕುಕ್ಕರ್, ಮಿಕ್ಸರ್ ಇಲ್ಲದ, ಗಾಳಿಯಾಡದ ಅಡುಗೆಮನೆಯಲ್ಲಿ ರುಬ್ಬು, ಕುಟ್ಟು, ಸೌದೆಉರಿ, ಇದ್ದಿಲೊಲೆ, ಅತ್ತೆಯ ಮಡಿ-ಹುಡಿ, ಮೈಲಿಗೆಯ ಕಿರಿಕಿರಿ ನಡುವೆಯೂ ರಾತ್ರಿ ಎಲ್ಲರೂ ಮಲಗಿದ ನಂತರ ಮೋಂಬತ್ತಿ ಬೆಳಕಿನಲ್ಲಿ ಚಿಗುರೊಡೆಯುತ್ತಿದ್ದ ಸಾಹಿತ್ಯ ಕೃತಿಗಳು. ಹೀಗೆ ಬರೆದ ಕಥೆಗಳು ಕರ್ಮವೀರ, ಪ್ರಜಾಮತ, ಸುಧಾ ವಾರ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇವರ ಮೊದಲ ಕಾದಂಬರಿ ‘ಹೆಣ್ಣಿನ ಪ್ರೇಮ’ ಪ್ರಕಟವಾದುದು ಹಂಸಧ್ವನಿ ಪ್ರಕಾಶನದಿಂದ ೧೯೬೮ ರಲ್ಲಿ. ಎರಡನೆಯ ಕಾದಂಬರಿ ಧ್ರುವತಾರೆ ಪ್ರಕಟವಾದುದು ೧೯೭೦ ರಲ್ಲಿ. ಪಾಕಿಸ್ತಾನ, ಭಾರತ ಯುದ್ಧದ ಸಂದರ್ಭ. ‘ಭಾರತದ ಮೇಲೆ ಸಾವಿರ ವರ್ಷ ಯುದ್ಧಮಾಡುತ್ತೇವೆ’ ಎಂದು ಬಡಬಡಿಸುತ್ತಿದ್ದ ಯಹ್ಯಾಖಾನ್‌, ಭಾರತದ ಜಲ, ಭೂ, ವಾಯಸೇನೆಯಲ್ಲಿದ್ದ ವೀರಯೋಧರ ಸಾಹಸ, ಬಲಿದಾನಗಳ ಕಥೆಯೇ ಕಾದಂಬರಿ ರೂಪ ಪಡೆದ ‘ಧ್ರುವತಾರೆ’. ಎಚ್‌.ಆರ್. ಇಂದಿರಾರವರು ಪ್ರಾರಂಭಿಸಿದ್ದ ಲೇಖಕಿಯ ಸಂಘಟನೆಯಲ್ಲಿ ಪಾಲ್ಗೊಂಡಾಗ ದೊರೆತ ಲೇಖಕಿಯ ಪರಿಚಯದಿಂದ ವಿಸ್ತೃತಗೊಂಡ ಅನುಭವದ ಬದುಕು. ೧೯೭೪ರಲ್ಲಿ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ‘ಸಮಾಜ ಕಲ್ಯಾಣ’ ಪತ್ರಿಕೆಯ ಸಹಸಂಪಾದಕಿಯಾಗಿ, ವಾರ್ತಾ ಇಲಾಖೆಯ ‘ಜನಪದ’ ಪತ್ರಿಕೆಯ ಮಕ್ಕಳ ವಿಭಾಗಕ್ಕೆ ಬರೆದ ಲೇಖನ, ಸಂದರ್ಶನಗಳಿಂದ, ಸಂಯುಕ್ತ ಕರ್ನಾಟಕ ಪತ್ರಿಕೆಗಾಗಿ ಬರೆದ ಸಮೀಕ್ಷಾ ಲೇಖನಗಳಿಂದ ಪಡೆದ ಅನುಭವ. ನಂತರ ಎನ್‌.ಎಂ.ಕೆ. ಆರ್.ವಿ. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಕಾಲ ಪಡೆದ ಬೋಧನಾನುಭವ. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ‘ಲೇಖಕಿ’ ಪತ್ರಿಕೆಯ ಸಹ ಸಂಪಾದಕಿಯಾಗಿ, ಸಂಘದ ಉಪಾಧ್ಯಕ್ಷೆಯಾಗಿ ನಿರ್ವಹಿಸಿದ ಕಾರ್ಯಗಳು. ಬರೆದ ಹಲವಾರು ಕಾದಂಬರಿಗಳು ‘ರಾಗಸಂಗಮ’, ‘ಮಲ್ಲಿಗೆ’, ಉದಯವಾಣಿ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದು ಇದುವರೆವಿಗೂ ೫೩ ಕಾದಂಬರಿಗಳು, ಕುಸುಮಾಂಜಲಿ, ಪುಷ್ಪಸಿಂಚನ ಎಂಬ ಎರಡು ಲೇಖನ ಸಂಗ್ರಹಗಳು, ದಾಹ, ಬೇಲಿ, ಭೂಮಿಕ, ಬರಿದ ಮೊಗ್ಗು ಮೊದಲಾದ ೪ ಕಥಾ ಸಂಕಲನಗಳು ಪ್ರಕಟಗೊಂಡಿವೆ. ‘ಕಾಂಗರೂಗಳ ನಾಡಿನಲ್ಲಿ’, ನಾಲ್ಕು ಬಾರಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ ಅನುಭವದಿಂದ ಬರೆದ ಕೃತಿ. ತಮ್ಮ ಸ್ವಂತ ಪ್ರಕಾಶನ ಪ್ರಿಯಾ ಪ್ರಕಾಶನದಡಿಯಲ್ಲಿ ಪ್ರಕಟಿಸಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯುತ್ತಮ ಕೃತಿ ವಿಭಾಗದ ಅಂತಾರಾಷ್ಟ್ರೀಯ ಮಹಿಳಾ ವರ್ಷದ (೧೯೯೫) ಪ್ರಶಸ್ತಿ ಗಳಿಸಿದ್ದಾರೆ, ಬಿರಿದ ಮೊಗ್ಗು ಕಥಾ ಸಂಕಲನಕ್ಕೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆಂಪೇಗೌಡ ಪ್ರಶಸ್ತಿ, ಕಾವ್ಯಸಿಂಚನ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ದಶಮಾನೋತ್ಸವ, ರಜತೋತ್ಸವ ಸಂದರ್ಭದಲ್ಲಿ ಸನ್ಮಾನ, ಬೆಂಗಳೂರು ವಿಹಾರ ಕೇಂದ್ರದಿಂದ ಪ್ರಶಸ್ತಿ, ಸನ್ಮಾನ-ಹೀಗೆ ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.

Details

Date:
September 2, 2023
Event Category: