ಪದ್ಮಾ ಶೆಣೈ

Home/Birthday/ಪದ್ಮಾ ಶೆಣೈ
Loading Events

೦೩.೧೧.೧೯೩೩ ಮನುಷ್ಯರು ಬೆಳೆಸಿಕೊಂಡಿರುವ ಸಂಸ್ಕಾರ, ನಂಬಿಕೆ, ಬದಲಾಗುತ್ತಿರುವ ಜೀವನ ಮೌಲ್ಯಗಳು, ಸಂಘರ್ಷ, ಮಾನಸಿಕ ದ್ವಂದ್ವಗಳು ಇವುಗಳನ್ನೇ ತಮ್ಮ ಕಥಾವಸ್ತುವಿನಲ್ಲಿ ಮೂಡಿಸಿ ಜನಪ್ರಿಯ ಲೇಖಕಿ ಎನಿಸಿರುವ ಪದ್ಮಾ ಶೆಣೈರವರು ಹುಟ್ಟಿದ್ದು ಚೆನ್ನೈನಲ್ಲಿ. ತಂದೆ ರಾಮ ಬಾಳಿಗ, ತಾಯಿ ಲಕ್ಷ್ಮಿದೇವಿ. ಮುಂಬೈ, ಮಂಗಳೂರು, ಬ್ರಹ್ಮಾವರ, ಕಟಪಾಡಿ, ಉಡುಪಿ ಮುಂತಾದಡೆಯಲ್ಲೆಲ್ಲ ಸುತ್ತಾಟದ ನಡುವೆಯೂ ಮೆಟ್ರಿಕ್ ಪಾಸು ಮಾಡಿದ ಜಾಣ ಹುಡುಗಿ. ತಂದೆ ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪರಿಣತರು. ಜೊತೆಗೆ ರಾಮಕೃಷ್ಣ ಆಶ್ರಮದ ಭಕ್ತರು. ತಂದೆಯಿಂದಲೇ ಎಳೆ ವಯಸ್ಸಿನಲ್ಲಿಯೇ ‘ಗಾಸ್ಪೆಲ್ ಆಫ್ ರಾಮಕೃಷ್ಣ’ ಓದಿದ್ದರ ಜೊತೆಗೆ ತಂದೆಯ ಸಂಗ್ರಹದಲ್ಲಿದ್ದ ಇಂಗ್ಲಿಷ್ ಲೇಖಕರಾದ ಡೇಲ್ ಕಾರ್ನಿಜ್, ಜಿಮ್ ಕಾರ್ಬೆಟ್ ಮುಂತಾದವರ ಕೃತಿಗಳನ್ನಲ್ಲದೆ ರವೀಂದ್ರನಾಥ ಠಾಕೂರ್, ಬಂಕಿಮ ಚಂದ್ರ ಚಟರ್ಜಿ, ಶರಶ್ಚಂದ್ರ ಚಟರ್ಜಿ ಮುಂತಾದವರುಗಳ ಕೃತಿಗಳ ಪರಿಚಯವನ್ನು ಪಡೆದಿದ್ದರು. ಜೊತೆಗೆ ಸಮಯ ಸಿಕ್ಕಾಗಲೆಲ್ಲ ಕನ್ನಡ ಕಾದಂಬರಿಕಾರರಾದ ಶಿವರಾಮ ಕಾರಂತ, ಅ.ನ.ಕೃ., ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟೀಮನಿಯವರ ಕಾದಂಬರಿಗಳನ್ನು ಓದಿದ್ದಲ್ಲದೆ ಕುವೆಂಪು, ಡಿವಿ.ಜಿ. ಯವರ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಆಧ್ಯಾತ್ಮ ಹಾಗೂ ಸಾಹಿತ್ಯದಲ್ಲಿನ ಅಭಿರುಚಿಯು ತಂದೆಯಿಂದಲೇ ಬಂದದ್ದು. ಬರವಣಿಗೆಯನ್ನು ಶಾಲೆಯಲ್ಲಿದ್ದಾಗಲೇ ರೂಢಿಸಿಕೊಂಡಿದ್ದು, ಶಾಲಾ ಮ್ಯಾಗಜಿನ್‌ಗಳಿಗೆ ಕಥೆಗಳನ್ನು ಬರೆಯತೊಡಗಿದರು. ಅಂದಿನ ಪತ್ರಿಕೆಗಳಾದ ಪ್ರಕಾಶ, ರಾಯಭಾರಿ, ನವಯುಗ, ಚೇತನಾ ಮುಂತಾದ ಪತ್ರಿಕೆಗಳಲ್ಲಿ ಸಣ್ಣ ಕಥೆಗಳನ್ನು ಪ್ರಕಟಿಸತೊಡಗಿದವು. ಪತಿ ಮೋಹನ ಶೆಣೈರೊಡನೆ ಒಮ್ಮೆ ನಿರಂಜನ ದಂಪತಿಗಳನ್ನು ಭೇಟಿಯಾದನಂತರ ಕಾದಂಬರಿ ಬರೆಯುವ ಹುಮ್ಮಸ್ಸು ಬಂದು ಬರೆದ ಮೊದಲ ಕಾದಂಬರಿ ರಸ-ವಿರಸ. ಈ ಕಾದಂಬರಿಗೆ ಮೈಸೂರು ಸರಕಾರದ ಪ್ರಶಸ್ತಿ ದೊರೆತಿದ್ದರ ಜೊತೆಗೆ ‘ಜಾಣ’ ಪರೀಕ್ಷೆಗೆ ಪಠ್ಯವಾಗಿಯೂ ಆಯ್ಕೆಯಾದದ್ದು ಸಂತಸ ತಂದಿತ್ತು. ನಂತರ ಬರೆದ ಕಾದಂಬರಿಗಳಾದ ‘ಸಂಧಿಕಾಲ’, ‘ಕೊನೆಯ ನಿರ್ಧಾರ’, ‘ನಾ ನಿನ್ನ ಧ್ಯಾನದೊಳಿರಲು’. ಇವುಗಳಲ್ಲಿ ಕಡೆಯ ಎರಡು ಕಾದಂಬರಿಗಳು ಪ್ರಜಾವಾಣಿಯಲ್ಲಿ ಧಾರಾವಾಹಿಯಾಗಿಯೂ ಪ್ರಕಟವಾಯಿತು. ಇದಾದನಂತರ ನರನಾರಾಯಣ, ಅನಿಶ್ಚಿತ, ಅನುಬಂಧ, ಮರೆಯ ನೆರಳುಗಳು, ಅನುಗ್ರಹ, ಜಯಶ್ರೀ, ಉಯ್ಯಾಲೆ ಮುಂತಾದ ಕಾದಂಬರಿಗಳನ್ನು ಬರೆದರು. ಹಲವಾರು ಕಾದಂಬರಿಗಳು ವಾರ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿಯೇ ಓದುಗರಿಗೆ ಪರಿಚಯವಾದದ್ದು. ಉ‌ಯ್ಯಾಲೆ ಕಾದಂಬರಿಯನ್ನು ಸುಧಾ ವಾರಪತ್ರಿಕೆಯವರು ಧಾರಾವಾಹಿಯಾಗಿ ಪ್ರಕಟಿಸಿದರು. ಅನಿಶ್ಚಿತ ಮತ್ತು ಮರೆಯ ನೆರಳುಗಳು ಮನೋವೈಜ್ಞಾನಿಕ ಕಾದಂಬರಿಗಳಾಗಿದ್ದು ಅನಿಶ್ಚಿತ ಕಾದಂಬರಿಯು ರೇಡಿಯೋ ನಾಟಕವಾಗಿಯೂ ರೂಪಾಂತರವಾಗಿ ಆಕಾಶವಾಣಿಯಿಂದ ಪ್ರಸಾರಗೊಂಡಿತು. ಆಗಿಂದ್ದಾಗ್ಗೆ ಬರೆದ ಸಣ್ಣ ಕಥೆಗಳು ‘ದೂರದ ಆಸೆ’, ‘ಹರಿದ ಗಾಳಿಪಟ’, ‘ನೂಲಿನಂತೆ ಸೀರೆ’ ಎಂಬ ಮೂರು ಸಂಕಲನಗಳಲ್ಲಿ ಪ್ರಕಟಿಸಿದ್ದಾರೆ. ಇದಲ್ಲದೆ, ಪ್ರಭಾ, ಉಷಾ, ಸುಧಾ ಎಂಬ ಮೂರು ನೀಳ್ಗತೆಗಳನ್ನೂ ಬರೆದಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್‌ನ ಪ್ರಕಟಣೆಗಾಗಿ ಶಂಕರಾಚಾರ್ಯರ ಜೀವನ ಗಾಥೆಯನ್ನು ‘ಮಹಾ ಸಂನ್ಯಾಸಿ’ ಎಂಬ ಹೆಸರಿನಿಂದ ಬರೆದು ಪ್ರಕಟಿಸಿದರು. ಇದೇ ಸಂಸ್ಥೆಗಾಗಿ ಭಾರತ-ಭಾರತಿ ಸಂಪದಕ್ಕಾಗಿ ದ್ರೌಪದಿ, ಸಖೂಬಾಯಿ, ಫಿರೋಜ್ ಷಾ ಮೆಹ್ತಾ ಎಂಬ ಮಕ್ಕಳ ಹೊತ್ತಗೆಗಳನ್ನು ರಚಿಸಿಕೊಟ್ಟರು. ಇವು ಹಿಂದಿ ಹಾಗೂ ಮರಾಠಿ ಭಾಷೆಗೂ ಅನುವಾದಗೊಂಡಿದೆ. ಪತಿ ಮೋಹನ ಶೆಣೈರವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯನಿರ್ವಾಹಕರಾಗಿದ್ದು ತುರ್ತು ಪರಿಸ್ಥಿತಿಯ (೧೯೭೫) ಸಂದರ್ಭದಲ್ಲಿ ಬಂದನಕ್ಕೊಳಗಾದಾಗ ಓದುತ್ತಿದ್ದ ಇಬ್ಬರು ಮಕ್ಕಳು, ಗಂಡನ ‘ವೆಸ್ಟ್‌ಕೋಸ್ಟ್ ಪೇಪರ್ ಅಂಡ್ ಸ್ಟೇಷನರ್ಸ್‌’ ಮಾರಾಟ ವ್ಯವಹಾರ ಎಲ್ಲವನ್ನೂ ನಿಭಾಯಿಸುವ ಹೊಣೆ ಇವರ ಮೇಲೆಯೇ ಬಿದ್ದಾಗ ಧೃತಿಗೆಡದೆ ಜವಾಬ್ದಾರಿಯನ್ನು ಹೊತ್ತರು. ಇವರೂ ಕೂಡ ರಾಷ್ಟ್ರಸೇವಿಕಾ ಸಮಿತಿಯಲ್ಲಿ ದುಡಿಯುತ್ತಿದ್ದರೂ ಮನೆ ಹಾಗೂ ಮಕ್ಕಳ ಭವಿಷ್ಯವನ್ನು ನೋಡಿಕೊಳ್ಳುವುದೇ ಪ್ರಮುಖವಾಗಿದ್ದು ‘ಬದುಕೊ, ಬಂಧನವೋ’ ಎಂಬ ಪ್ರಶ್ನೆ ಬಂದಾಗ ಮನೆಯ ಪರಿಸ್ಥಿತಿ ಮೂರಾಬಟ್ಟೆಯಾಗುವ ಸ್ಥಿತಿಯಿಂದ ಪಾರಾಗಲು ಬದುಕನ್ನು ಅನಿವಾರ್ಯವಾಗಿ ಆಯ್ಕೆ ಮಾಡಿಕೊಳ್ಳಬೇಕಾಗಿ ಬಂತು. ಗಂಡನ ವ್ಯವಹಾರ, ಮಕ್ಕಳ ಓದು – ಲಾಲನೆ-ಪಾಲನೆಗಳ ನಡುವೆಯೂ ಸಾಹಿತ್ಯವನ್ನು ಕಡೆಗಣಿಸದೆ ವೈಚಾರಿಕ ಕೃತಿಗಳನ್ನು ರಚಿಸಿದ್ದು ಒಂದು ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿತು. ಮತ್ತೊಂದು ಕೃತಿ ‘ಭಾರತೀಯ ಸ್ತ್ರೀ ಸಂಸ್ಕೃತಿ ಮತ್ತು ಸಮಾಜ.’ ಹೀಗೆ ಸಂಸಾರವನ್ನು ನಿಭಾಯಿಸಿ ಇಬ್ಬರು ಮಕ್ಕಳನ್ನು ಮುಂದೆ ತಂದು ಹೆಸರಾಂತ ಡಾಕ್ಟರ್ ಎನಿಸಿದ್ದು ಅಮೆರಕಾದಲ್ಲಿ ನೆಲೆಸಿರುವ, ಮಗ-ಹೆಂಡತಿ-ಮೊಮ್ಮಕ್ಕಳನ್ನು ಕಾಣಲು ಐದು ಬಾರಿ ಅಮೆರಿಕಾ ಪ್ರವಾಸ ಕೈಗೊಂಡು ಬರೆದ ಕೃತಿ ‘ಅಮೆರಿಕಾ ವಾಸ-ಪ್ರವಾಸ’ (೧೯೮೩). ಆಧ್ಯಾತ್ಮಿಕಕ್ಕೆ ಸಂಬಂಧಿಸಿದ ಇವರ ಮತ್ತೊಂದು ಕೃತಿ ಆನಂದ ಕುಟೀರ ಮಹಾತ್ಮ – ಅಜ್ಜ (೨೦೦೨) ಪ್ರಕಟಗೊಂಡಿದೆ. ಚಿಂತನ, ಕಥೆ, ಕಾದಂಬರಿ, ಲೇಖನ, ಪ್ರಬಂಧ ಮುಂತಾದ ವೈವಿಧ್ಯಮಯ ಪ್ರಕಾರಗಳಲ್ಲಿ ೨೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಹಲವಾರು ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಸಾಹಿತ್ಯ ಸಮ್ಮೇಳನಗಳ ಉದ್ಘಾಟಕರಾಗಿ, ಅಧ್ಯಕ್ಷೆಯಾಗಿ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ. ಶಾಲಾ ಕಾಲೇಜುಗಳ, ಸಾಹಿತ್ಯ ಸಂಘಗಳ ಸಾಹಿತ್ಯೋತ್ಸವ, ವಾರ್ಷಿಕೋತ್ಸವಗಳಲ್ಲಿ ಮುಖ್ಯ ಅತಿಥಿಗಳ ಗೌರವಕ್ಕೂ ಪಾತ್ರರಾಗಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top