ಪಳಕಳ ಸೀತಾರಾಮಭಟ್ಟ

Home/Birthday/ಪಳಕಳ ಸೀತಾರಾಮಭಟ್ಟ
Loading Events

..೧೯೩೦ ಸ್ವಾತಂತ್ರ್ಯಪೂರ್ವದಲ್ಲಿ ಪ್ರಾರಂಭವಾಗಿದ್ದ ಪತ್ರಿಕೆಗಳಾದ ಕಥಾವಳಿ, ಬಾಲಚಂದ್ರ, ಸುವಾಸಿನಿ, ಪಾಪಚ್ಚಿ, ತುತ್ತೂರಿ ಮುಂತಾದ ಪತ್ರಿಕೆಗಳಿಂದ ಹಿಡಿದು ಇಂದು ಪ್ರಕಟಗೊಳ್ಳುತ್ತಿರುವ ವಾರಪತ್ರಿಕೆಗಳಾದ ಸುಧಾ, ತರಂಗ, ಕರ್ಮವೀರ, ಮುಂತಾದವುಗಳ ಜೊತೆಗೆ ಉದಯವಾಣಿ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಮುಂತಾದ ದಿನ ಪತ್ರಿಕೆಗಳಲ್ಲೂ ಮಕ್ಕಳ ಕತೆ, ಪದ್ಯಗಳ ಮುಖಾಂತರ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಲೇಖಕರ ಹೆಸರೆಂದರೆ ಸೀತಾರಾಮಭಟ್ಟರದು. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಹತ್ತಿರದ ಪಳಕಳದಲ್ಲಿ ೧೯೩೦ ರ ಜುಲೈ ೫ ರಂದು. ತಂದೆ ಈಶ್ವರ ಭಟ್ಟರು, ತಾಯಿ ಲಕ್ಷ್ಮೀ ಅಮ್ಮ. ಪ್ರಾರಂಭಿಕ ಶಿಕ್ಷಣ ಸ್ಥಳೀಯ ಶಾಲೆಯಲ್ಲಿ, ಪ್ರೌಢಶಾಲಾ ಶಿಕ್ಷಣ ಮೂಡಬಿದಿರೆ, ಖಾಸಗಿಯಾಗಿ ಪಡೆದದ್ದು ಎಂ.ಎ, ಬಿ.ಎಡ್‌. ಪದವಿಗಳು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಉದ್ಯೋಗವನ್ನಾರಂಭಿಸಿ ಮೂಡಬಿದಿರೆಯ ಜೈನ್‌ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ ೧೯೮೮ ರಲ್ಲಿ ನಿವೃತ್ತಿ. ಶಾಲಾಬಾಲಕನಾಗಿದ್ದಾಗ ಸೋದರತ್ತೆ ಚೆನ್ನಕ್ಕ ಹೇಳುತ್ತಿದ್ದ ಕಥೆಗಳು, ಪಂಜೆಯವರ ಡೊಂಬರ ಚೆನ್ನೆ, ನಾಗಣ್ಣನ ಕನ್ನಡಕ, ಉದಯರಾಗ, ತೆಂಕಣಗಾಳಿಯಾಟ ಮೊದಲಾದ ಪದ್ಯಗಳು; ಮೂರು ಕರಡಿಗಳು, ಇಲಿಗಳ ಥಕಥೈ, ಗುಡುಗುಡು ಗುಮ್ಮಟ ದೇವರು ಮೊದಲಾದ ಕಥೆಗಳನ್ನೂ ಓದಿ ಪ್ರಭಾವಿತರಾಗಿ ಹೈಸ್ಕೂಲಿಗೆ ಬರುತ್ತಿದ್ದಂತೆ ತಾವು ಕಥೆ, ಕವನಗಳನ್ನೂ ರಚಿಸತೊಡಗಿದರು. ಗುರುಗಳಾದ ರಘುಚಂದ್ರಶೆಟ್ಟಿ, ಶ್ರೀಕಾಂತ ರೈ ಮತ್ತು ಸಾಹಿತಿ ರಾ.ಮೊ. ವಿಶ್ವಾಮಿತ್ರ ಇವರುಗಳ ಒತ್ತಾಸೆಯಿಂದ ಬರೆದ ಹಲವಾರು ಕತೆಗಳು ಅಂದಿನ ಪತ್ರಿಕೆಗಳಾದ ಕಥಾವಳಿ, ಬಾಲಚಂದ್ರ, ಸುವಾಸಿನಿ, ಪಾಪಚ್ಚಿ, ತುತ್ತೂರಿ ಮುಂತಾದವುಗಳಲ್ಲಿ ಪ್ರಕಟವಾಗತೊಡಗಿದವು. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರದಲ್ಲಿಯೂ ಕೃತಿರಚಿಸಿರುವ ಪಳಕಳರವರು ಚಿಣ್ಣರ ಹಾಡುಗಳು, ಕಿರಿಯರ ಕಿನ್ನರಿ, ತಿಮ್ಮನ ತುತ್ತೂರಿ, ಮುಂತಾದ ೩೫ ಕ್ಕೂ ಹೆಚ್ಚು ಪದ್ಯ ಸಂಕಲನಗಳು, ಗಡಿಬಿಡಿಗುಂಡ, ಕುಂಟುಂ ಕುಟುಂ ಕಪ್ಪೆಯಣ್ಣ ಮುಂತಾದ ೧೦೦ ಕ್ಕೂ ಹೆಚ್ಚು ಮಕ್ಕಳ ಕಥಾ ಸಂಕಲನಗಳು; ಏಕಲವ್ಯ, ಭಕ್ತಧ್ರುವ, ಮಾದನೂ ಹುಲಿಯೂ, ಅವಿವೇಕಿರಾಜ ಅರೆಹುಚ್ಚು ಮಂತ್ರಿ ಮೊದಲಾದ ೧೫ ಕ್ಕೂ ಹೆಚ್ಚು ನಾಟಕ, ಪ್ರಹಸನಗಳು,  ಈಶ್ವರ ಚಂದ್ರ ವಿದ್ಯಾಸಾಗರ್, ಭಾರತ ರತ್ನ, ಮಕ್ಕಳ ಮಿತ್ರ ಮುಂತಾದ ಮಕ್ಕಳ ಪ್ರಬಂಧ, ಕಾದಂಬರಿಗಳು; ಪ್ರೌಢರಿಗಾಗಿ ಚುಟುಕು ಚೂರು ಜಿನುಗು ಜೇನು, ಪಂಚಾಮೃತ ಮುಂತಾದವು ಸೇರಿ ರಚಿಸಿದ ಒಟ್ಟು ಸಾಹಿತ್ಯ ಕೃತಿಗಳ ಸಂಖ್ಯೆ ಸುಮಾರು ೧೫೦ ಕ್ಕೂ ಹೆಚ್ಚು. ಮಕ್ಕಳ ಸಾಹಿತ್ಯಕ್ಕೆ ಪಳಕಳ ರವರ ಕೊಡುಗೆ ದೊಡ್ಡದೆ. ಮಕ್ಕಳ ಬೌದ್ಧಿಕ ಬೆಳವಣಿಗೆಯ ಕಡೆ ಗಮನ ಹರಿಸಿ, ಆ ವಯಸ್ಸಿನ ಮಕ್ಕಳ ಕೈಕಾಲು ಚಲನೆ, ಆಟಪಾಟಗಳ ಲಯಕ್ಕೆ ತಕ್ಕಂತಹ ಪದ್ಯಗಳನ್ನು  ಬರೆದು ಪಂಜೆ, ಎಂ.ಎನ್‌. ಕಾಮತ್‌, ಮತ್ತು ಜಿ.ಪಿ. ರಾಜರತ್ನಂ ರವರಂತೆ ಮಕ್ಕಳ ಮನಸ್ಸನ್ನು ರಂಜಿಸಿದ್ದಾರೆ. ಮಕ್ಕಳ ಸಾಹಿತ್ಯ ರಚನೆಗಾಗಿ ತಮ್ಮನ್ನೂ ತಾವು ಸಜ್ಜುಗೊಳಿಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರ ನಡೆಸಿದ ಮಕ್ಕಳ ಸಾಹಿತ್ಯ ರಚನಾಲಯದ (೧೯೫೯, ೬೧ ರಲ್ಲಿ) ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ಮಕ್ಕಳ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಮಕ್ಕಳ ಸಾಹಿತ್ಯ ಸಂಚಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ೧೯೮೩-೮೭ ರ ಅವಧಿಯಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಯ ಅಧ್ಯಕ್ಷರಾಗಿ, ೧೯೯೬ ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷರಾಗಿ, ೨೦೦೪ ರಲ್ಲಿ ನಡೆದ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಮಕ್ಕಳ ಮನೋವಿಕಾಸಕ್ಕಾಗಿ ಸಾಹಿತ್ಯ ರಚಿಸುವಂತೆ ಕರೆ ನೀಡಿದ್ದಲ್ಲದೆ ಅದರಂತೆ ಹಲವಾರು ಕೃತಿಗಳನ್ನು ರಚಿಸಿ ಮಾರ್ಗದರ್ಶಕರಾದರು. ತಾವು ರಚಿಸಿದ ಮಕ್ಕಳ ಸಾಹಿತ್ಯದ ಪ್ರಕಟಣೆಗಾಗಿ ‘ಶಿಶುಸಾಹಿತ್ಯಮಾಲೆ’ಯನ್ನು ಪ್ರಾರಂಭಿಸಿ ಹಲವಾರು ಕೃತಿಗಳನ್ನೂ ಹೊರತಂದಿದ್ದಲ್ಲದೆ ಮಿತ್ರರಾದ ಕೂರಾಡಿ ಸೀತಾರಾಮ ಅಡಿಗ, ಬಿ. ಶ್ರೀನಿವಾಸರಾವ್‌ ಮುಂತಾದವರೊಡನೆ ಸೇರಿ ದ.ಕನ್ನಡದ ಉಡುಪಿ, ಕಾಸರಗೋಡು ತಾಲ್ಲೂಕಿನ ‘ಮಕ್ಕಳ ಸಾಹಿತ್ಯ ವೇದಿಕೆ’, ‘ಮಕ್ಕಳ ಸಾಹಿತ್ಯ ಸಂಗಮ’ ಮುಂತಾದವುಗಳ ಸ್ಥಾಪಕ ಅಧ್ಯಕ್ಷರಾಗಿ ಮಕ್ಕಳ ಸಾಹಿತ್ಯ ಪ್ರಚಾರ, ಪ್ರಸಾರವನ್ನೂ ಹಲವಾರು ರೀತಿ ಕೈಗೊಂಡರು. ಇವರ ಮಕ್ಕಳ ರಚನೆಗಳು ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಕನ್ನಡ ಪಠ್ಯಗಳ ‘ಅದಮ್ಯ ಚೇತನ’ ಮತ್ತು ‘ಕನ್ನಡ ಪರಿಮಳ’ ಕವನ ವಾಚನ ಮಾಲೆಯಲ್ಲಿ ಕವನಗಳು ಸೇರ್ಪಡೆಯಾಗಿರುವುದಲ್ಲದೆ ‘ಮಕ್ಕಳ ಮಾಣಿಕ್ಯ’ ಎಂಬ ಧ್ವನಿ ಮಾಲೆಯಲ್ಲಿ ಕವನಗಳು ಸೇರ್ಪಡೆಯಾಗಿರುವುದಲ್ಲದೆ ‘ಮಕ್ಕಳ ಮಾಣಿಕ್ಯ’ ಎಂಬ ಧ್ವನಿ ಸುರುಳಿಯೂ ಬಿಡುಗಡೆಯಾಗಿದೆ. ಸಾರ್ವಜನಿಕವಾಗಿಯೂ ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದು ಸಹಕಾರಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸ್ಥಳೀಯ ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ಅಧ್ಯಕ್ಷರಾಗಿ, ಭೂರಹಿತ ಕುಟುಂಬಗಳಿಗೆ ನಿವೇಶನಗಳು ದೊರೆಯುವಂತೆ ಮಾಡಿ ಬಡವರ ಬದುಕಿನ ಬೆಳಕಾಗಿ ಹಲವಾರು ಜನ ಹಿತ ಕಾರ್ಯಗಳಲ್ಲೂ ಭಾಗಿಯಾಗಿದ್ದಾರೆ. ಇವರ ಮಕ್ಕಳ ಸಾಹಿತ್ಯದ ಕೊಡುಗೆಗಾಗಿ ಮದರಾಸು ಸರಕಾರದಿಂದ ಮಕ್ಕಳ ಸಾಹಿತ್ಯ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜರತ್ನಂ ದತ್ತಿನಿಧಿ ಪ್ರಶಸ್ತಿ, ಮತ್ತು ವಸುದೇವ ಭೂಪಾಳಂ ದತ್ತಿ ನಿಧಿ ಪ್ರಶಸ್ತಿ, ನವದೆಹಲಿಯ ಬಾಲಶಿಕ್ಷಾ ಪರಿಷತ್‌ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಮಕ್ಕಳ ಸಾಹಿತ್ಯ ಬಹುಮಾನ,  ಕೊ.ಅ. ಉಡುಪ ಪ್ರಶಸ್ತಿ, ಶಿವರಾಮ ಕಾರಂತ ಪ್ರತಿಷ್ಠಾನ ಗೌರವ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದಿಂದ ಮಕ್ಕಳ ಸಾಹಿತ್ಯ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಮೃತ ಮಹೋತ್ಸವ  ಸಂದರ್ಭದಲ್ಲಿ ಸನ್ಮಾನ, ಕರ್ನಾಟಕ ಬಾಲ ವಿಕಾಸ ಅಕಾಡಮಿ ಗೌರವ ಪ್ರಶಸ್ತಿ,  ಬೋಳಂತ ಕೋಡಿ ಕನ್ನಡ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಲಭಿಸಿವೆ. ತಮ್ಮ ಜೀವಮಾನದ ಸಂಪಾದನೆಯಿಂದ ಒಂದು ಲಕ್ಷ ರೂ.ಗಳ ನಿಧಿಯೊಂದಿಗೆ ‘ಪಳಕಳ ಪ್ರತಿಷ್ಠಾನ’ ಸ್ಥಾಪಿಸಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಬಡ ಮಕ್ಕಳಿಗೆ ಶೈಕ್ಷಣಿಕ ನೆರವು, ವೈದ್ಯಕೀಯ ನೆರವನ್ನೂ ಪ್ರತಿಷ್ಠಾನದ ಮೂಲಕ ಕೈಗೊಂಡು ಜನಸೇವೆಯಲ್ಲಿಯೂ ನಿರತರಾಗಿರುವ ವಿಶಿಷ್ಟ ವ್ಯಕ್ತಿ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top