ಪಿ.ಕೆ. ನಾರಾಯಣ

Home/Birthday/ಪಿ.ಕೆ. ನಾರಾಯಣ
Loading Events
This event has passed.

೧೬..೧೯೧೪ ೧೯.೦೫.೧೯೮೩ ಪತ್ರಿಕೋದ್ಯಮಿ, ಗಾಂಧಿವಾದಿ, ಸಾಹಿತಿ, ನಾಟಕಕಾರರಾದ ನಾರಾಯಣರವರು ಹುಟ್ಟಿದ್ದು ಚಿಕ್ಕಪುತ್ತೂರಿನಲ್ಲಿ ೧೯೧೪ರ ಮಾರ್ಚ್‌ ೧೬ ರಂದು. ತಂದೆ ಕರಿಯಪ್ಪ, ತಾಯಿ ಲಕ್ಷ್ಮಿ. ಬಡತನದಿಂದ ಹಗಲು ಶಾಲೆಗೆ ಹೋಗಲಾಗದೆ ಸೇರಿದ್ದು ರಾತ್ರಿ ಶಾಲೆ. ಹೀಗೊಮ್ಮೆ ವೀಕ್ಷಣೆಗೆ ಬಂದ ಮೊಳಹಳ್ಳಿ ಶಿವರಾಯರು (ಪ್ರಸಿದ್ಧ ವಕೀಲರು, ರಾಜಕೀಯ ಧುರೀಣರು, ಸಹಕಾರಿ ಮತ್ತು ಶಿಕ್ಷಣ ಕ್ಷೇತ್ರದ ಪಿತಾಮಹರು) ಇವರ ಬುದ್ಧಿವಂತಿಕೆಗೆ ಮೆಚ್ಚಿ ಹಗಲು ಶಾಲೆಗೆ ಸೇರಲು ಅನುಮತಿಸಿದಾಗ ಸೇರಿದ್ದು ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆ, ನಂತರ ವಿದ್ಯಾರ್ಥಿ ವೇತನ ದೊರೆತು ಸೇರಿದ್ದು ಪುತ್ತೂರಿನ ಬೋರ್ಡ್‌ ಹೈಸ್ಕೂಲು. ಹೈಸ್ಕೂಲಿನಲ್ಲಿದ್ದಾಗ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗಿ. ಶಿವರಾಮ ಕಾರಂತರ ನಾಟಕಗಳ ಪ್ರಮುಖ ಪಾತ್ರಧಾರಿ. ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಾರಂಭಿಸಿದ್ದು ಹಸ್ತಪ್ರತಿ ಮಾಸಪತ್ರಿಕೆ ‘ವಿದ್ಯಾದಾಯಿನಿ’. ಇವರು ಸಂಪಾದಕೀಯ ಹಾಗೂ ಇತರ ಲೇಖನಗಳನ್ನು ಬರೆದರೆ ಸಹ ವಿದ್ಯಾರ್ಥಿಗಳು ಕಥೆ, ಕವನ, ಒಗಟುಗಳನ್ನು ಬರೆಯತೊಡಗಿದರು. ಇವರಿಗೆ ಸಾಹಿತ್ಯದಲ್ಲಿ ಅಭಿರುಚಿ ಹುಟ್ಟುವಂತೆ ಮಾಡಿದವರು ಕನ್ನಡದ ಮೇಸ್ಟ್ರು ಹರಿಯಪ್ಪ, ಮುಖ್ಯೋಪಾಧ್ಯಾಯರಾಗಿದ್ದ ಪಾಂಡುರಂಗರಾಯರು, ರಾಮಪ್ಪಯ್ಯ ಮಾಸ್ತರು ಮುಂತಾದವರುಗಳು. ಎಸ್.ಎಸ್.ಎಲ್.ಸಿ. ನಂತರ ಸೇರಿದ್ದು ಮಂಗಳೂರಿನ ಅಧ್ಯಾಪಕರ ತರಬೇತಿ ಕೇಂದ್ರ. ನಂತರ ಪಡೆದದ್ದು ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ. ಉದ್ಯೋಗಿಯಾದದ್ದು ಮಂಗಲ್ಪಾಡಿ ಹೈಯರ್ ಎಲಿಮೆಂಟರಿ ಶಾಲೆ ಮತ್ತು ಮಂಚಿಯ ಶಾಲೆಗಳಲ್ಲಿ ಉಪಾಧ್ಯಾಯರಾಗಿ. ನಂತರ ಸೇರಿದ್ದು ಶಿವರಾಮ ಕಾರಂತರ ಶಿಫಾರಸ್ಸಿನಿಂದ ಮಂಗಳೂರಿನ ಬೆಸೆಂಟ್ ಎಲಿಮೆಂಟರಿ ಶಾಲಾ ಅಧ್ಯಾಪಕರಾಗಿ, ಪ್ರೌಢಶಾಲೆಯ ಕನ್ನಡ ಪಂಡಿತರಾಗಿ. ಪಂಡಿತರಾಗಿದ್ದ ಸಂದರ್ಭದಲ್ಲಿ ಇವರ ಒಬ್ಬ ಮಗಳು ವರದಾ ಎಂ.ಎ. ನಂತರ ಅದೇ ಶಾಲೆಯಲ್ಲಿ ಜ್ಯೂ. ಕಾಲೇಜು ಪ್ರಾರಂಭವಾದಾಗ ಅಧ್ಯಾಪಕಿಯಾಗಿದ್ದರೆ, ಕಿರಿಮಗಳು ಶಾಲಾ ವಿದ್ಯಾರ್ಥಿನಿ. ಹೀಗೆ ಸಂಸಾರದ ಮೂವರ ಸಮಾಗಮ ಒಂದೇ ಶಾಲೆಯಲ್ಲಿ. ದೇಶದ ಸ್ವಾತಂತ್ರ್ಯಕ್ಕಾಗಿ ಬಿರುಸಿನಿಂದ ನಡೆಯುತ್ತಿದ್ದ ಹೋರಾಟದ ದಿನಗಳು. ೧೯೩೪ ರಲ್ಲಿ ಮಹಾತ್ಮಗಾಂಧಿಯವರು ಒಮ್ಮೆ ಪುತ್ತೂರಿಗೆ ಬಂದು ಭಾಷಣ ಮಾಡಿ ದೇಶಕ್ಕಾಗಿ ತ್ಯಾಗ ಮಾಡಬೇಕೆಂದು ಕರೆ ನೀಡಿದಾಗ ಹಲವಾರು ಮಂದಿ ಹಣ, ಒಡವೆ ನೀಡಿದರೆ ಇವರು ಕೈಯಲ್ಲಿದ್ದ ಉಂಗುರವನ್ನೇ ತೆಗೆದುಕೊಟ್ಟು ಖಾದಿ ಧಾರಿಯಾಗಿ ಗಾಂಧೀಜಿ ಯವರ ಅನುಯಾಯಿಯಾದರು. ಮಂಗಳೂರಿನ ಗಾಂಧಿ ಪ್ರತಿಷ್ಠಾನದ ಸಕ್ರಿಯ ಸದಸ್ಯರಾಗಿ, ಕಾರ್ಯಕರ್ತರಾಗಿ ದುಡಿದರು. ತರಬೇತಿ ಶಿಬಿರಗಳಿಗೆ ತಮ್ಮ ಮಕ್ಕಳನ್ನೇ ಕರೆದೊಯ್ದು ಮೇಲ್ಪಂಕ್ತಿ ಹಾಕಿದರು. ಗಾಂಧೀಜಿಯವರ ಸತ್ಯ, ಅಹಿಂಸಾತತ್ತ್ವ, ಅಸ್ಪೃಶ್ಯತಾ ನಿವಾರಣೆ ಮುಂತಾದವುಗಳನ್ನು ಬೋಧಿಸಿದ್ದಲ್ಲದೆ ತಾವೂ ಪಾಲಿಸಿದರು. ಉಪಾಧ್ಯಾಯರ ಸಂಘ, ಪಂಡಿತರ ಸಂಘ ಮುಂತಾದವುಗಳ ಪದಾಧಿಕಾರಿಗಳಾಗಿ ದುಡಿದರು. ಇವರ ಸಾಹಿತ್ಯದ ಚಟುವಟಿಕೆಗಳಿಗೆ ನೀರೆರೆದು ಬೆಳೆಸಿದವರು ಶಿವರಾಮಕಾರಂತರು, ನಿರಂಜನ, ಕಯ್ಯಾರ ಕಿಞ್ಞಣ್ಣರೈ, ಜಿ.ಪಿ. ರಾಜರತ್ನಂ, ಮಾಸ್ತಿ, ಗೊರೂರು ಮುಂತಾದವರು. ‘ಪುನಾಕ’ ಎಂಬ ಕಾವ್ಯ ನಾಮದಿಂದಲೂ ಹಲವಾರು ಕವನಗಳನ್ನು ರಚಿಸಿದರು. ೧೯೩೫ ರಿಂದ ಪ್ರಾರಂಭವಾದ ಇವರ ಸಾಹಿತ್ಯ ಕೃಷಿ ೧೯೮೧ ರವರೆಗೂ ಮುಂದುವರೆದಿತ್ತು. ಹೀಗೆ ಬರೆದವುಗಳಲ್ಲಿ ಪ್ರೇಮಗೀತೆಗಳು, ಪ್ರಕೃತಿ ಗೀತೆಗಳು, ದೇಶಭಕ್ತಿ ಗೀತೆಗಳು, ಕಥನ ಕವನಗಳು, ನೀಳ್ಗವನಗಳು ಮುಂತಾದವುಗಳು ಸೇರಿವೆ. ಹಲವಾರು ಕವನಗಳು ಆ ಕಾಲದ ಪ್ರಸಿದ್ಧ ಪತ್ರಿಕೆಗಳಾದ ಕಂಠೀರವ, ಸರ್ವೋದಯ, ಉಷಾ, ಪ್ರಭಾತ, ರಾಷ್ಟ್ರಬಂಧು, ನವಭಾರತ, ಕರ್ಮವೀರ, ಪ್ರಜಾಮತ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕಾರಂತರು ನಿರ್ದೇಶಿಸಿದ ನಾಟಕಗಳ ಪಾತ್ರಧಾರಿ. ಸೊಹ್ರಾಬ್ – ರುಸ್ತುಂ ನಲ್ಲಿ ಸೊಹ್ರಾಬ್ ಪಾತ್ರ ಇವರಿಗೆ ಹೆಚ್ಚು ಪ್ರಖ್ಯಾತಿ ತಂದುಕೊಟ್ಟ ಪಾತ್ರ. ಪಾತ್ರಧಾರಿಯಾಗಿದಷ್ಟೇ ಅಲ್ಲದೆ ನಾಟಕ ರಚನಕಾರರಾಗಿ ಹಲವಾರು ಪೌರಾಣಿಕ ನಾಟಕಗಳು, ಐತಿಹಾಸಿಕ ನಾಟಕಗಳು, ಗೀತರೂಪಕಗಳನ್ನು ರಚಿಸಿ ರಂಗದ ಮೇಲೆ ತಂದಿದ್ದಾರೆ. ‘ಮಹಾತ್ಯಾಗಿ ಶ್ರೀ ಪುರಂದರ ದಾಸರು’, ಪ್ರಿಯದರ್ಶಿ (ಅಶೋಕನ ಕುರಿತು) ಪ್ರಕಟಿತ ನಾಟಕಗಳಾದರೆ ಉಳಿದವುಗಳು ಪ್ರಕಟವಾಗಬೇಕಿದೆ. ಕನ್ನಡದ ಮಹತ್ವದ ಕೃತಿಗಳಲ್ಲೊಂದಾದ ಜೈನ ಸಾಹಿತ್ಯದ ರತ್ನಾಕರವರ್ಣಿಯ ಭರತೇಶ ವೈಭವ ಕೃತಿಯನ್ನು ತಿಳಿಗನ್ನಡದಲ್ಲಿ ಅನುವಾದಿಸಿದ ಕೀರ್ತಿಯೂ ಇವರದೆ. ಬೃಹತ್ ಕಾವ್ಯದ ಅನುವಾದವನ್ನು ಮೂರು ಭಾಗಗಳಲ್ಲಿ ಓದುಗರಿಗೆ ನೀಡಿದ್ದಾರೆ. ವಿವೇಕಾಭ್ಯುದಯದಲ್ಲಿ ಪ್ರಕಟವಾದ ಲೇಖನ ಮಾಲೆಯು ಮುಂದೆ ಭರತೇಶ ಚಕ್ರವರ್ತಿಯ ವೈಭವದ ಮೊದಲಭಾಗ ಭೋಗ ವಿಜಯದ ಭಾಗ ‘ಸರಸದ ದಿನಗಳು’. ದಿಗ್ವಿಜಯದ ಭಾಗ ‘ದಿಗ್ವಿಜಯದ ದಿನಗಳು’. ಯೋಗ ವಿಜಯ, ಮೋಕ್ಷ ವಿಜಯ, ಅರ್ಕಕೀರ್ತಿ ವಿಜಯಗಳೇ ‘ತಪಸ್ಸಿನ ದಿನಗಳು’ ಆಗಿ ಸಹಕಾರಿ ಪ್ರಕಾಶನದವರು ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಇವರು ಪ್ರಕಟಿಸಿದ ಇತರ ಕೃತಿಗಳೆಂದರೆ ಮೊದಲ ಮೊಗ್ಗೆ (ಕವನ ಸಂಕಲನ), ಶ್ರೀ ವಾಲ್ಮೀಕಿ ರಾಮಾಯಣದ ಕಥೆ, ದಕ್ಷಿಣ ಕನ್ನಡದಲ್ಲಿ ಕನ್ನಡ ಬೆಳವಣಿಗೆ, ದಕ್ಷಿಣ ಕನ್ನಡದಲ್ಲಿ ಕನ್ನಡ ಬೆಳವಣಿಗೆ, ದಕ್ಷಿಣ ಕನ್ನಡದಲ್ಲಿ ಸ್ವಾತಂತ್ರ್ಯ ಹೋರಾಟ (ಸಂಶೋಧನೆ) ಮೊಳಹಳ್ಳಿ ಶಿವರಾಯರು (ಜೀವನ ಚರಿತ್ರೆ) ಪ್ರಮುಖವಾದವುಗಳು. ಇವರು ಸಂಪಾದಿಸಿದ “ಆಯ್ದ ಮುತ್ತುಗಳು” (ಕಥಾ ಸಂಗ್ರಹ), ‘ಸಮ್ಮೇದ ಶೈಲಮಹಾತ್ಮೆ’ (ಜೈನಗ್ರಂಥ), ‘ಗಾಂಧಿ ಶತಾಬ್ದಿ ಕವಿತಾಂಜಲಿ’ ಮುಂತಾದವುಗಳಲ್ಲದೆ ಕಾಸರಗೋಡು ಸಮ್ಮೇಳನ ಸಂದರ್ಭದ ‘ಕಿಲ್ಲೆಸ್ಮಾರಕ ಗ್ರಂಥ’, ಕಾರ್ಕಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ದಿಬ್ಬಣ’, ಧರ್ಮಸ್ಥಳದ ವೀರೇಂದ್ರ ಹೆಗಡೆಯವರ ಪಟ್ಟಾಭಿಷೇಕ ಮಹೋತ್ಸವದ ಸಂದರ್ಭದ ‘ಆರೋಹಣ’, ಪಂಜೆಮಂಗೇಶರಾಯರ ಶತಮಾನೋತ್ಸವ ಗ್ರಂಥ ‘ತೆಂಕಣಗಾಳಿ’, ಮೊಳಹಳ್ಳಿ ಶಿವರಾಯರ ಶತಮಾನೋತ್ಸವ ಕೃತಿ ‘ನೂರರ ಮೇರು’ ಮುಂತಾದವುಗಳನ್ನು ಸಂಪಾದಿಸಿದ್ದಾರೆ. ಜೈನಸಾಹಿತ್ಯ, ಪತ್ರಿಕೋದ್ಯಮ, ಯಕ್ಷಗಾನ ಹೀಗೆ ನಾನಾ ರಂಗಗಳಲ್ಲಿ ತೊಡಗಿಸಿಕೊಂಡಿದ್ದ ನಾರಾಯಣ ರವರಿಗೆ ಬೆಸೆಂಟ್ ಶಾಲೆಯ ಹಳೆಯ ವಿದ್ಯಾರ್ಥಿ ಸಂಘ, ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜುಕೇಷನ್ ಸಂಸ್ಥೆ, ಗುಂಡೂರಾವ್ ಸರಕಾರದ ಪ್ರಥಮ ವಾರ್ಷಿಕೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರುಗಳನ್ನು ಸನ್ಮಾನಿಸಿದಾಗ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾದ ಪಿ.ಕೆ. ನಾರಾಯಣರು ಸಾಹಿತ್ಯ ಲೋಕದಿಂದ ನಿರ್ಗಮಿಸಿದ್ದು ೧೯೮೩ ರ ಮೇ ೧೯ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top