ಪುಟ್ಟರಾಜ ಗವಾಯಿ

Home/Birthday/ಪುಟ್ಟರಾಜ ಗವಾಯಿ
Loading Events
This event has passed.

೦೩.೦೩.೧೯೧೪ ಗಾನಯೋಗಿ ಪುಟ್ಟರಾಜ ಗವಾಯಿಗಳು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕರ್ಜಗಿಯ ಬಳಿಯ ದೇವಗಿರಿ. ತಂದೆ ರೇವಣ್ಣಯ್ಯ, ತಾಯಿ ಸಿದ್ಧಮ್ಮ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ಸಿಡುಬಿನ ಖಾಯಿಲೆಯಿಂದ ಕಳೆದುಕೊಂಡ ಕಣ್ಣಿನ ದೃಷ್ಟಿ, ಬದುಕಿನ ದೊಡ್ಡ ಆಘಾತಗಳು. ಸೋದರಮಾವ ಚಂದ್ರಶೇಖರಯ್ಯನವರ ಆರೈಕೆ. ಶ್ರೀ ಪಂಚಾಕ್ಷರಿ ಗವಾಯಿಗಳ ಬಳಿ ಸಂಗೀತ ಕಲಿಕೆ. ನೇತ್ರಹೀನನೆಂದೆಣಿಸದೆ ಧಾರೆಯೆರೆದ ಸಂಗೀತ. ಗುರುಗಳಂತೆ ಬ್ರಹ್ಮಚರ್ಯ, ನೇಮನಿಷ್ಠೆ, ಆಚಾರದಿಂದೊಡಗೂಡಿದ ಜೀವನ. ತಾವು ಕಲಿತ ವಿದ್ಯೆಯನ್ನು ಶಿಷ್ಯರಿಗೆ ಕಲಿಸಲು ಗುರುಗಳಿಂದ ಸ್ಥಾಪಿತವಾದ ಶ್ರೀ ಕುಮಾರೇಶ್ವರ ಕೃಪಾಪೋಷಿತ ಧರ್ಮಾರ್ಥ ಸಂಚಾರಕ ಸಂಗೀತ ಮಹಾವಿದ್ಯಾಲಯದ ಜವಾಬ್ದಾರಿ. ನೂರಾರು ಅಂಧರು, ಅನಾಥರು, ವಿಕಲಚೇತನರಿಗೆ ಸಂಗೀತ ಶಿಕ್ಷಣ. ಹಿಂದಿ ಭಾಷೆಯಲ್ಲಿ ಅದ್ಭುತ ಕವಿತಾಶಕ್ತಿ. ರಚಿಸಿದ ಹಲವಾರು ಚೀಜುಗಳು. ಆಕಾಶವಾಣಿ ಮತ್ತು ದೂರದರ್ಶನದಿಂದ ಪ್ರಸಾರಿತ. ಹಲವಾರು ಕೃತಿ ರಚನೆ. ಪುಟ್ಟರಾಜ ಗವಾಯಿಗಳ ಬಸವೇಶ್ವರ ಪುರಾಣವನ್ನು ನೋಡಿದ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದರಿಂದ ದೊರೆತ ಮೆಚ್ಚುಗೆ. ರಾಷ್ಟ್ರಪತಿ ಭವನದಲ್ಲಿ ಸತ್ಕಾರ. ಕನ್ನಡದಲ್ಲಿ ೨೦, ಹಿಂದಿಯಲ್ಲಿ ೫ ಸಂಸ್ಕೃತದಲ್ಲಿ ಆರು ಕೃತಿಗಳ ರಚನೆ. ಹಲವಾರು ವಿದ್ಯಾರ್ಥಿಗಳಿಗೆ ಸಂಗೀತದಷ್ಟೇ ಅಲ್ಲದೆ ವಿವಿಧ ವಾದ್ಯ ಸಂಗೀತದಲ್ಲೂ ತರಬೇತಿ. ತಬಲ, ಸಾರಂಗಿ, ಪಿಟೀಲು, ಹಾರ್ಮೋನಿಯಂ, ಶಹನಾಯ್, ಸಿತಾರ್, ದಿಲ್‌ರೂಬಾ, ಮೃದಂಗ, ಕೊಳಲು ಮುಂತಾದುವುಗಳಲ್ಲಿ ಶಿಷ್ಯರ ತಯಾರು. ಶಿಷ್ಯನೊಬ್ಬ ನುಡಿಸಿದ ಶಹನಾಯ್ ವಾದನಕ್ಕೆ ಉಸ್ತಾದ್ ಬಿಸ್ಮಿಲ್ಲಾ ಖಾನರಿಂದ ದೊರೆತ ಪ್ರಶಂಸೆ. ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಶ್ರೀ ಜಯಚಾಮರಾಜ ಒಡೆಯರ್ ರವರಿಂದ ಸನ್ಮಾನ. ಮೈಸೂರು ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಪಾಲ್ ಹ್ಯಾರಿಸ್ ಪ್ರಶಸ್ತಿ, ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಫೆಲೊಷಿಪ್, ಕರ್ನಾಟಕ ಸರಕಾರದ ಪ್ರತಿಷ್ಠಿತ ಕನಕ-ಪುರಂದರ ಪ್ರಶಸ್ತಿ, ರಾಷ್ಟ್ರೀಯ ಬಸವ ಪುರಸ್ಕಾರ, ಕಾಳಿದಾಸ ಸಮ್ಮಾನ ಪ್ರಶಸ್ತಿ, ಸುಮಾರು ೧೬೦೦ ಬಾರಿ ತುಲಾಭಾರ, ಸನ್ಮಾನ ಮುಂತಾದುವುಗಳು. ಇದೇ ದಿನ ಹುಟ್ಟಿದ ಕಲಾವಿದರು : ಎಸ್.ಜಿ. ವಾಸುದೇವ್ – ೧೯೪೧ ಮಾಲತಿ ಶರ್ಮ – ೧೯೫೧

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top