ಪೂರ್ಣಚಂದ್ರ ತೇಜಸ್ವಿ

Home/Birthday/ಪೂರ್ಣಚಂದ್ರ ತೇಜಸ್ವಿ
Loading Events

೮-೯-೧೯೩೮ ಸಾಹಿತ್ಯ, ಕೃಷಿ, ಪರಿಸರ ಕಾಳಜಿ, ವಿಜ್ಞಾನ, ಮಾನವ ಶಾಸ್ತ್ರ ಮುಂತಾದುವುಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ಪಾಂಡಿತ್ಯ ಪಡೆದಿದ್ದ ಪೂರ್ಣಚಂದ್ರ ತೇಜಸ್ವಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ. ತಂದೆ ಕುವೆಂಪುರವರು, ತಾಯಿ ಹೇಮಾವತಿ. ಓದಿದ್ದು ಮೈಸೂರಿನಲ್ಲಿ. ಕನ್ನಡ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿ. ಸ್ವತಂತ್ರ ಪ್ರವೃತ್ತಿಯ ವ್ಯಕ್ತಿ. ಅಧ್ಯಾಪಕ ಅಥವಾ ಸರಕಾರಿ ಹುದ್ದೆ ಬಯಸದೆ ಆಯ್ದುಕೊಂಡದ್ದು ಸ್ವತಂತ್ರ ವೃತ್ತಿ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಾಫಿ ಎಸ್ಟೇಟ್ ಒಂದರ ಮಾಲೀಕರು. ಸಾಹಿತ್ಯದ ಯಾವುದೇ ಪಂಥಕ್ಕೆ ಸೇರದೆ, ನವೋದಯ, ನವ್ಯ, ನವ್ಯೋತ್ತರ, ಆಧುನಿಕ ಕನ್ನಡ ಸಾಹಿತ್ಯದ ಎಲ್ಲ ಘಟ್ಟಗಳಲ್ಲಿಯೂ ಕೃತಿ ರಚಿಸುತ್ತಾ ಬಂದಿರುವ ತೇಜಸ್ವಿಯವರದು ನಿಸರ್ಗ ಹಾಗೂ ಬದುಕಿನ ಎಲ್ಲ ಮಗ್ಗುಲುಗಳ ಅನ್ವೇಷಕ, ಸಮಾಜವಾದಿ ಚಿಂತಕ, ಚಿಕಿತ್ಸಕ ಬುದ್ಧಿಯಿಂದ ನೋಡುವ ಮನಸ್ಸು. ಕುವೆಂಪುರವರ ಕಲಾಸೃಷ್ಟಿ, ಲೋಹಿಯಾರವರ ತತ್ತ್ವಚಿಂತನೆ, ಕಾರಂತರ ಜೀವನದ ಪ್ರಯೋಗಶೀಲತೆ ಮತ್ತು ಸಾಹಸಪ್ರಿಯತೆಯಿಂದ ಪ್ರಭಾವಿತರಾದವರು. ಹಲವಾರು ಕೃತಿ ರಚನೆ. ಕವನ-ಸ್ವಗತ ಮತ್ತು ಲಹರಿ. ಕಥಾ ಸಂಕಲನ-ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟಾಫೀಸು, ಕಿರಿಗೂರಿನ ಗಯ್ಯಾಳಿಗಳು. ನಾಟಕ-ಯಮಳ ಪ್ರಶ್ನೆ . ಪ್ರಬಂಧ ಸಂಕಲನ-ವ್ಯಕ್ತಿ ವಿಶಿಷ್ಟ ಸಿದ್ಧಾಂತ. ನೀಳ್ಗತೆ-ಸ್ವರೂಪ, ನಿಗೂಢ ಮನುಷ್ಯರು. ಕಾದಂಬರಿ- ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್. ವಿಮರ್ಶೆ, ಚಿಂತನೆ-ಅಣ್ಣನ ನೆನಪು. ಅನುವಾದ- ಲೋಹಿಯಾ, ಕಾಡಿನ ಕಥೆಗಳು (೧, ೨, ೩) ಮಾನವಶಾಸ್ತ್ರ-ಮಿಸ್ಸಿಂಗ್ ಲಿಂಕ್ಸ್ . ಇತರ- ಮಿಲೇನಿಯಂ ಸರಣಿ ಕೃತಿಗಳು, ಸಹಜಕೃಷಿ, ಪರಿಸರದ ಕಥೆಗಳು, ಅಲೆಮಾರಿ ಅಂಡಮಾನ್ ಮತ್ತು ಮಹಾನದಿ ನೈಲ್, ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು. ಫ್ಲೈಯಿಂಗ್ ಸಾಸರ್ಸ್‌ (ಭಾಗ ೧-೨), ಕನ್ನಡ ನಾಡಿನ ಹಕ್ಕಿಗಳು. ಇತರರೊಡನೆ ಸಂಪಾದಿತ-ವಿಸ್ಮಯ (ಭಾಗ೧-೩), ಮಿಂಚುಳ್ಳಿಗಳು ಮುಂತಾದ ಅರವತ್ತಕ್ಕೂ ಹೆಚ್ಚು ಕೃತಿ ರಚಿತ.ಮರಾಠಿ, ಹಿಂದಿ, ಮಲೆಯಾಳಂ, ಇಂಗ್ಲಿಷ್ ಭಾಷೆಗೂ ಅನುವಾದ. ಹಲವಾರು ಕಥೆಗಳು ಚಲನ ಚಿತ್ರಗಳಾಗಿವೆ. ಅಬಚೂರಿನ ಪೋಸ್ಟಾಫೀಸು ಕಥೆಗೆ ಅತ್ಯುತ್ತಮ ಪ್ರಾಂತೀಯ ಚಲನಚಿತ್ರ ಪ್ರಶಸ್ತಿ, ತಬರನ ಕಥೆಗೆ ಸ್ವರ್ಣಕಮಲ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಗೌರವಗಳು-ಚಿದಂಬರ ರಹಸ್ಯ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ. ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಟಿ. ಮಹಾಬಲೇಶ್ವರ ಭಟ್ಟ – ೧೯೨೮ ಕುಲಶೇಖರಿ – ೧೯೩೯ ಬಿ.ಎಸ್. ಸ್ವಾಮಿ – ೧೯೪೨ ಕವಿತಾ ಕೃಷ್ಣ – ೧೯೪೫ ಜರಗನ ಹಳ್ಳಿ ಶಿವಶಂಕರ್ – ೧೯೪೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top