ಪೇಜಾವರ ಸದಾಶಿವರಾಯರು

Home/Birthday/ಪೇಜಾವರ ಸದಾಶಿವರಾಯರು
Loading Events
This event has passed.

೦೮..೧೯೧೩ ೧೮.೧೦.೧೯೩೯ ಕವನ, ಹರಟೆ, ಲಲಿತಪ್ರಬಂಧ, ವಿಮರ್ಶೆ, ನಾಟಕ – ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ಸಮಾನ ಆಸಕ್ತರಾಗಿದ್ದರೂ ಕವಿಯೆಂದೇ ಗುರುತಿಸಿಕೊಂಡಿದ್ದ ಸದಾಶಿವರಾಯರು ಹುಟ್ಟಿದ್ದು. ೧೯೧೩ರ ಮಾರ್ಚ್ ೮ರಂದು ದಕ್ಷಿಣ ಕನ್ನಡ ಜಿಲ್ಲೆಯ ಪೇಜಾವರದಲ್ಲಿ, ನೆಲೆಸಿದ್ದು ಕಟೀಲಿನಲ್ಲಿ ತಂದೆ ಶಾಮರಾವ್, ತಾಯಿ ಸೀತಮ್ಮ. ಶಾಲೆಗೆ ಸೇರಿದ್ದು ಎಕ್ಕಾರಿನ ಮಿಡ್ಲ್‌ಸ್ಕೂಲ್‌. ೩ವರ್ಷ ಅಂತರದ ತಮ್ಮನಾದ ವಾಸುದೇವನೊಡನೆ ಹೊಳೆಯಾಚೆ ಇದ್ದ ಎಕ್ಕಾರಿನ ಶಾಲೆಯಲ್ಲಿ ಕಲಿಕೆ. ಮಕ್ಕಳು ಸಂಜೆ ಹಿಂದಿರುಗುವುದು ಹತ್ತುನಿಮಿಷ ತಡವಾದರೂ ತಾಯಿಗೆ ಆತಂಕ, ತಳಮಳ, ಉದ್ವೇಗ ಹೆಚ್ಚಾಗುತ್ತಿತ್ತು. ಹೈಸ್ಕೂಲು ಶಿಕ್ಷಣ ಮುಲ್ಕಿಯಲ್ಲಿ. ಮಂಗಳೂರಿನ ಆಲೋಶಿಯಸ್ ಕಾಲೇಜಿನಲ್ಲಿ ಕಾಲೇಜು ವಿದ್ಯಾಭ್ಯಾಸ. ಕಾಲೇಜು ದಿನಗಳಲ್ಲಿ ಇವರಲ್ಲಿದ್ದ ಕನ್ನಡ ಸಾಹಿತ್ಯದ ಆಸಕ್ತಿಗೆ ನೀರೆರೆದು ಪೋಷಿಸಿದವರು ಸೇಡಿಯಾವು ಕೃಷ್ಣಭಟ್ಟರು ಹಾಗೂ ಮುಳಿಯ ತಿಮ್ಮಪ್ಪಯ್ಯನವರು. ಸದಾಶಿವರಾಯರು ತಾವಷ್ಟೇ ಕವಿತೆಗಳನ್ನು ರಚಿಸುತ್ತಿದ್ದುದಲ್ಲದೆ ಇತರರನ್ನೂ ಬರೆಯಲು ಪ್ರೇರೆಪಿಸುತ್ತಿದ್ದರು. ಜೆ.ವಾಮನಭಟ್ಟ, ಕುಡ್ಪಿವಾಸುದೇವ ಶೆಣೈ, ಎಸ್.ಪಿ.ಭಟ್ಟ, ಜಿ.ಟಿ.ಆಚಾರ್‌ ಮುಂತಾದವರುಗಳೊಡನೆ ಸೇರಿ ಮಂಗಳೂರಿನಲ್ಲಿ ಸ್ಥಾಪಿಸಿದ್ದು ‘ಮಿತ್ರಮಂಡಲಿ’ ಈ ಗುಂಪಿನಿಂದ ಹೊರತಂದ ಕವನ ಸಂಕಲನ ‘ಅಳಿಲು ಸೇವೆ’ ನಂತರ ಸದಾಶಿವರಾಯರಿಗೆ ಕವನ ಸಂಕಲನ ತರಲು ವಹಿಸಿದಾಗ, ಸಂಗ್ರಹಿಸಿ ಪ್ರಕಟಿಸಿದ್ದು ‘ಅಲರು’ ಎಂಬ ಸಂಗ್ರಹ ೧೯೩೧ರಲ್ಲಿ. ಹದಿನೇಳರ ಹರೆಯದಲ್ಲಿಯೇ ಕವನ ಬರೆದಿದ್ದಷ್ಟೇ ಅಲ್ಲದೆ ಸಂಪಾದಕರ ಜವಾಬ್ದಾರಿಯನ್ನೂ ಹೊತ್ತಿದ್ದರು. ಸಂಕಲನದ ಪೀಡಿಕೆಯಲ್ಲಿ ವ್ಯಾಟನ್ ಕವಿಯ ಸುಪ್ರಸಿದ್ಧ ಸಾಲುಗಳನ್ನು ಉದಹರಿಸಿರುವುದನ್ನು ಓದಿದವರಿಗೆ, ಸದಾಶಿವರಾಯರಿಗೆ ೧೭ರ ಹರೆಯಲ್ಲಿಯೇ ಕಾವ್ಯ ಪ್ರೌಢಿಮೆ ಸಿದ್ಧಸಿತ್ತು ಎಂಬುದು ಅರ್ಥವಾದೀತು. ೧೯೨೭ರಿಂದ ೧೯೩೫ರವರೆಗೆ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿದ್ದುಕೊಂಡು ಓದಿದ್ದು ಎಂಜನಿಯರಿಂಗ್ ಪದವಿಗಾಗಿ. ಮಂಗಳೂರಿನಲ್ಲಿದ್ದಾಗ ಇಟಲಿಯಿಂದ ಬಂದಿದ್ದ ಡಾ.ಫೆಸ್ಸಿ (FEZZI) ಎಂಬ ನಿಕಟವರ್ತಿಯ ಪ್ರೇರಣೆಯಿಂದ ಆಟೋಮೊಬೈಲ್ ಎಂಜನಿಯರಿಂಗ್‌ನಲ್ಲಿ ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದರು. ಇಟಲಿಗೆ ಶಿಕ್ಷಣಾರ್ಥಿಯಾಗಿ ಹೋಗುವವರು ಮದುವೆಯಾಗಿರಲೇ ಬೇಕೆಂಬ ನಿಬಂಧನೆಯಿದ್ದುದರಿಂದ ಮದುವೆಯಾದ ಎರಡನೆಯ ವರ್ಷ ೧೯೩೬ರಲ್ಲಿ ಇಟಲಿಯ ಮಿಲಾನ್‌ಗೆ ತೆರಳಿದರು. ಮಿಲಾನ್‌ನಲ್ಲಿದ್ದರೂ ಕನ್ನಡ ಪತ್ರಿಕೆಗಳಾದ ತ್ರಿವೇಣಿ, ಪ್ರಭಾತ, ಜಯಕರ್ನಾಟಕ ಮುಂತಾದ ಪತ್ರಿಕೆಗಳನ್ನು ತರಿಸಿಕೊಂಡು ಓದಿ, ಆಗಾಗ್ಗೆ ಬರಹಗಳನ್ನು ಬರೆಯತೊಡಗಿದ್ದರು. ಇದೇ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿದ್ದ ಗೋಕಾಕರನ್ನು ಭೇಟಿಮಾಡಿದ ನಂತರ, ತಾವು ಬರೆದ ಕವನಗಳನ್ನು ಅವರಿಗೆ ಕಳುಹಿಸಿದಾಗ ಓದಿದ ಗೋಕಾಕರು ‘ನಾನೂ ಸಹ ಈ ರೀತಿ ಬರೆಯಲಾರೆ’ ಮುಂದುವರೆಸಿ ಎಂದು ಪ್ರಶಂಸಿಸಿ ಪತ್ರ ಬರೆದರಂತೆ. ಇವರು ರಚಿಸಿದ ನಾಟಕಗಳಾದ ಸರಪಣಿ, ಬೀದಿಗಳಿದ ನಾರಿ, ಜೀವನ ಸಂಗೀತ ಎಂಬ ನಾಟಕಗಳು ತ್ರಿವೇಣಿ ಪತ್ರಿಕೆಯಲ್ಲಿ ಪ್ರಕಟಗೊಂಡವು. ಕ್ಷತ್ರಿಯ ರಮಣಿ (ಐತಿಹಾಸಿಕ), ಚಂಡಮಾರುತ, ಬಿರುಸು, ಸೂಜಿಕಲ್ಲು ಮುಂತಾದ ಸ್ವತಂತ್ರ ಕತೆಗಳಲ್ಲದೆ ಅಂಧಶಿಲ್ಪ ಮತ್ತು ಶ್ರೀಗಂಧ ಎಂಬ ಎರಡು ರೂಪಾಂತರ ಕಥೆಗಳನ್ನು ಬರೆದಿದ್ದಾರೆ. ಇವರು ಬರೆದ ಬಹುತೇಕ ಕವನಗಳಲ್ಲಿ ರಾಷ್ಟ್ರಭಕ್ತಿ, ಪ್ರಕೃತಿ, ಬದುಕು – ಸಾವು ಇವುಗಳ ಚಿತ್ರಣಗಳಿಂದ ಕೂಡಿವೆ. ನಾಟ್ಯೋತ್ಸವ ಎಂಬ ಕವನದಲ್ಲಿ ಬೇರೆ ಬೇರೆ ದೇಶಗಳಿಂದ ಇಟಲಿಗೆ ಬರುವ ಸುಂದರಿಯರ ನರ್ತನವನ್ನು ಚಿತ್ರಿಸಿದ್ದಾರೆ. ಹೀಗೆ ಬರೆದ ೪೮ ಕವನಗಳು. ‘ವರುಣ’ ಎಂಬ ಸಂಕಲನದಲ್ಲಿ ಸೇರಿವೆ. ಇಟಲಿಯಲ್ಲಿದ್ದರೂ ಕನ್ನಡದ ಬಗ್ಗೆ ಆಸ್ಥೆ ವಹಿಸಿದ ಸದಾಶಿವರಾಯರಿಗೆ ವಾಮನ ಭಟ್ಟರು ತಮ್ಮ, ಕೋದಂಡನ ಉಪನ್ಯಾಸಗಳು’ ಎಂಬ ಕೃತಿಯನ್ನು ಅರ್ಪಣೆ ಮಾಡಿದ್ದಾರೆ (೧೯೩೭). ಇಟಲಿಯಿಂದ ಜೆ.ವಾಮನಭಟ್ಟರಿಗೆ ಬರೆದ ಪತ್ರದಲ್ಲಿ ಡಿ.ವಿ.ಜಿ., ಬೇಂದ್ರೆ, ಗೋಕಾಕ ಮೊದಲಾದವರ ಕೆಲ ಕೃತಿಗಳನ್ನು ಕಳುಹಿಸುವಂತೆ ವಿನಂತಿಸಿದ್ದು, ಅವುಗಳನ್ನು ಇಟಲಿಯನ್ನರಿಗೆ ಪರಿಚಯಿಸುವ ಆಶಯ ವ್ಯಕ್ತಪಡಿಸಿದ್ದರು. ಆದರೆ ಇದ್ದಕ್ಕಿದಂತೆ ೧೯೩೯ರ ಏಪ್ರಿಲ್‌ನಲ್ಲಿ ಕಾಣಿಸಿಕೊಂಡಿದ್ದು ಪೆರಿಟೊನೈಟಿಸ್ ಖಾಯಿಲೆ. ಇದು ‌ಪ್ರಾಣಾಂತಿಕ ಖಾಯಿಲೆ ಅಲ್ಲದಿದ್ದರೂ ಯೂರೋಪಿನಲ್ಲಿ ಪರಿಣಾಮಕಾರಿ ಚಿಕಿತ್ಸೆ ಸಿದ್ಧವಿರಲಿಲ್ಲ. ಚಿಕಿತ್ಸೆ ಪಡೆದಾಗ ಕೊಂಚ ಗುಣಮುಖರಾದಂತೆ ಕಂಡುಬಂದು, ನಾಟಕ ಗೃಹಗಳಿಗೂ ಭೇಟಿನೀಡಿದರು. ಪುನಃ ರೋಗ ಉಲ್ಬಣಿಸಿ ಜೀನಿವಾದ ಬಳಿಯ ವಿಶ್ರಾಂತಿ ಧಾಮದಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದರು. ಸೆಪ್ಟೆಂಬರ್‌ ವೇಳೆಗೆ ದೈಹಿಕವಾಗಿ ನಿತ್ರಾಣಗೊಂಡಿದ್ದರ ಜೊತೆಗೆ ಸಾವಿರಾರು ಮೈಲಿ ದೂರದಲ್ಲಿರುವ ತಂದೆ ತಾಯಿ, ಬಂಧುಗಳು, ಪ್ರೀತಿಯ ಹೆಂಡತಿ, ಮಗು ಯಾರೂ ತನ್ನ ಬಳಿ ಇಲ್ಲವೆಂಬ ಮಾನಸಿಕ ಕ್ಲೇಶೆಗೊಳಗಾಗಿ ಚಿಕಿತ್ಸೆಪರಿಣಾಮ ಕಾರಿಯಾಗದೆ ಅಕ್ಟೋಬರ್‌ ೧೮,೧೯೩೯ರಂದು ಕೊನೆಯುಸಿರೆಳೆದರು. ಅತ್ಯಂತ ಪ್ರತಿಭಾನ್ವಿತರಾಗಿದ್ದು ಕನ್ನಡ ಸಾಹಿತ್ಯಕ್ಕೆ ಉಜ್ವಲ ಭವಿಷ್ಯವನ್ನು ರೂಪಿಸಬಲ್ಲವರಾಗಿದ್ದ ಪೇಜಾವರ ಸದಾಶಿವರಾಯರು ತಮ್ಮ ೨೬ನೆಯ ವಯಸ್ಸಿನಲ್ಲಿಯೇ ಸಾಹಿತ್ಯ ಲೋಕದಿಂದ ನಿರ್ಗಮಿಸಿ, ಮುದ್ದಣ (೧೮೭೦-೧೯೦೧), ಯರ್ಮಂಜರಾಮಚಂದ್ರ (೧೯೩೩-೫೫), ಮಧುರ ಚೆನ್ನ (೧೯೦೩-೫೩) ಇವರ ಸಾಲಿಗೆ ಸೇರಿಹೋದರು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top