
ಪ್ರಮೀಳಮ್ಮ
July 18, 2024
೧೮-೭-೧೯೪೬ ಉತ್ತಮ ಶಿಕ್ಷಕಿ, ಮಾರ್ಗದರ್ಶಿ, ನೆಚ್ಚಿನ ಅಕ್ಕ ಎನಿಸಿರುವ ಪ್ರಮೀಳಮ್ಮನವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ. ತಂದೆ ಸಿದ್ಧರಾಮಯ್ಯ, ತಾಯಿ ಗುರುಸಿದ್ಧಮ್ಮ. ಪ್ರಾರಂಭಿಕ ಶಿಕ್ಷಣ ನೆಲಮಂಗಲ. ಬೆಂಗಳೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ. ಸೆಂಟ್ರಲ್ ಕಾಲೇಜಿನಿಂದ ಕನ್ನಡ ಮತ್ತು ಸಂಸ್ಕೃತ ಸ್ನಾತಕೋತ್ತರ ಪದವಿ. ಜಯನಗರದ ಶಿಕ್ಷಕರ ತರಬೇತಿ ಕಾಲೇಜಿನಿಂದ ಬಿ.ಎಡ್. ಪದವಿ. ಉದ್ಯೋಗಕ್ಕಾಗಿ ಆರಿಸಿಕೊಂಡದ್ದು ಅಧ್ಯಾಪನ ವೃತ್ತಿ. ಟ್ಯುಟೋರಿಯಲ್ಸ್‌ನಲ್ಲಿ ಕೆಲಕಾಲ. ಬೊರೂಕ ಇಂಗ್ಲಿಷ್ ಶಾಲೆಯಲ್ಲಿ ಕೆಲಕಾಲ. ಜೆ.ಎಸ್.ಎಸ್. ಸಂಸ್ಕೃತ ಶಾಲೆಯಲ್ಲಿ, ನಂತರ ಹೈಸ್ಕೂಲಿನಲ್ಲಿ ಅಧ್ಯಾಪಕಿಯಾಗಿ ೨೪ ವರ್ಷಗಳ ದೀರ್ಘಸೇವೆಯಿಂದ ೨೦೦೪ರಲ್ಲಿ ನಿವೃತ್ತಿ. ಬಾಲ್ಯದಿಂದಲೇ ಬೆಳೆದ ಸಾಹಿತ್ಯಾಸಕ್ತಿ. ಸಂಜೆ ವೇಳೆ, ತಾತ ಕೂಡಿಸಿಕೊಂಡು ಹೇಳುತ್ತಿದ್ದ ಕಥೆಗಳು, ಹಾಸ್ಯಭರಿತವಾಗಿ ಸನ್ನಿವೇಶಕ್ಕೆ ತಕ್ಕಂತೆ ಕಾಲ್ಪನಿಕ ಕಥೆಗಳನ್ನು ಹೆಣೆಯುತ್ತಿದ್ದ ದೊಡ್ಡಮ್ಮ, ಇವರ ಪ್ರಭಾವದಿಂದ ಬರೆಯಬೇಕೆಂದು ಹುಟ್ಟಿದ ಹುಮ್ಮಸ್ಸು. ಜೊತೆಗೆ ಎಂ.ಎ. ತರಗತಿಯಲ್ಲಿ ಜಿ.ಎಸ್.ಎಸ್., ಎಂ.ವಿ. ಸೀತಾರಾಮಯ್ಯ, ಎಂ. ಚಿದಾನಂದಮೂರ್ತಿ, ಹಂ.ಪ.ನಾ., ವಿದ್ಯಾಶಂಕರ್ ಇವರಿಂದ ದೊರೆತ ಸಾಹಿತ್ಯ ಪ್ರೇರಣೆ. ಹಲವಾರು ಕೃತಿಗಳ ರಚನೆ. ಸರ್ವಜ್ಞನ ವಚನಾಮೃತ, ದೊಡ್ಡಮ್ಮ ಹೇಳಿದ ಕಥೆಗಳು, ಕನ್ನಡ ಕವಿಲೋಕ-ಆದಿ ಕವಿ ಪಂಪನಿಂದ ಹಿಡಿದು ಲಕ್ಷ್ಮೀನಾರಾಯಣಭಟ್ಟರವರೆಗೆ ಬರೆದ ಕವಿ ಪರಿಚಯದ ಗ್ರಂಥ. ಜೀಮೂತವಾಹನ, ನಚಿಕೇತ, ಕರುನಾಡ ದೀಪಗಳು, ಸುವರ್ಣ ಸಂಭ್ರಮಕ್ಕಾಗಿ ರಚಿಸಿದ ವಿಶಿಷ್ಟ ಪುಸ್ತಕ ಪ್ರಕಟಿತ. ಬರಲಿರುವ ಹಲವಾರು ಕೃತಿಗಳು. ಮುಖಕ್ಕೆ ಆದ ಪ್ಯಾರಲಿಸಿಸ್‌ನಿಂದ ವಿಕಲಚೇತನಳು ಎನಿಸಿದರೂ ಅದೊಂದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಸಮಾಜದಲ್ಲಿ ಬೆರೆತು, ಸ್ಕೂಲಿನಲ್ಲಿ ಮಕ್ಕಳೊಂದಿಗೆ ಬೆರೆತು, ವೈಯಕ್ತಿಕ ಅಸಮರ್ಥತೆಯನ್ನು ದೂರವಿಟ್ಟು ಸಾಧನೆ. ಶಾಲೆಯ ಮಕ್ಕಳಿಗೆ ಪಠ್ಯದ ಜೊತೆಗೆ ಮಾನವೀಯತೆ, ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಭಾರತ ಸಂಸ್ಕೃತಿ ಪ್ರಸಾರ ಯೋಜನೆಯಡಿಯಲ್ಲಿ ವಿಶ್ವ ಹಿಂದೂ ಪರಿಷತ್ ನಡೆಸುವ ಎಳೆಯರ ರಾಮಾಯಣ, ಕಿಶೋರ ಭಾರತ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ. ‘ಸಂಸ್ಕೃತ ಭಾರತಿ’ ನಡೆಸುವ ಪರೀಕ್ಷೆಗೆ ಸಂಸ್ಕೃತ ಪಾಠದ ಬೋಧನೆ. ಹೀಗೆ ನಾನಾ ರೀತಿಯ ಶೈಕ್ಷಣಿಕ ಸೇವೆಯನ್ನು ಗಮನಿಸಿ ವಿಶ್ವ ಹಿಂದೂ ಪರಿಷತ್‌ನಿಂದ ಸನ್ಮಾನ, ಜೆ.ಎಸ್.ಎಸ್. ಅಭಿವೃದ್ಧಿ ಸಂಸ್ಥೆಯಿಂದ ಸನ್ಮಾನ. ಜೆ.ಎಸ್.ಎಸ್. ಮಹಾವಿದ್ಯಾಲಯ ಮೈಸೂರ್ ಇವರಿಂದ ‘ಉತ್ತಮ ಶಿಕ್ಷಕಿ’ ಸನ್ಮಾನ. ಸಮಾಜ ಕೊಟ್ಟಿದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕೆಂದು ದುಡಿಯುತ್ತಿರುವ ಮಹಿಳೆ. ಇದೇ ದಿನ ಹುಟ್ಟಿದ ಸಾಹಿತಿ : ರಾಧಾಕೃಷ್ಣ ಬೆಳ್ಳೂರ್ – ೧೯೭೧