೨೩.೦೩.೧೯೫೧ ಎಪ್ಪತ್ತರ ದಶಕದಲ್ಲಿ ಹವ್ಯಾಸಿ ರಂಗಭೂಮಿಗೆ ಹಬ್ಬದ ಸಡಗರ ಹಲವಾರು ಹವ್ಯಾಸಿ ರಂಗಸಂಸ್ಥೆಗಳು ಹುಟ್ಟಿಕೊಂಡದ್ದು ಆಗಲೇ ಈ ಸಂದರ್ಭದಲ್ಲಿ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಸನ್ನರವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ., ಪದವಿ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆ. ಅಲ್ಲಿಯ ನಾಟಕ ಶಾಲೆಗಾಗಿ ನಿರ್ದೇಶಿಸಿದ ನಾಟಕಗಳು ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಪಡೆದ ಪ್ರಭುತ್ವ. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ, ರಂಗಭೂಮಿ ಅಧ್ಯಯನಕ್ಕಾಗಿ ರಷ್ಯ, ಜರ್ಮನಿ ಪ್ರವಾಸ. ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭ ಎಡಪಂಥೀಯ ವಿಚಾರ ಧಾರೆಗೆ ಪ್ರಾಶಸ್ತ್ಯ ನೀಡಿ ಹುಟ್ಟುಹಾಕಿದ್ದು ‘ಸಮುದಾಯ’ ತಂಡ. ರಾಜ್ಯಾದ್ಯಂತ ಶಾಖೆಗಳು. ನಾಟಕ, ಜಾಥಾ, ಕಲಾ ಮೇಳಗಳ ಮೂಲಕ ಕೈಗೊಂಡ ಜನಾಂದೋಲನ. ಕಾರ್ಮಿಕರು, ಪ್ರಗತಿಪರ ಚಿಂತಕರು, ಸಾಹಿತಿ-ಕಲಾವಿದರನ್ನು ಒಗ್ಗೂಡಿಸಲು ಸ್ಥಾಪಿಸಿದ ವೇದಿಕೆ, ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯ ಪರಿವರ್ತನೆಗೆ ಕೈಗೊಂಡ ಹಲವಾರು ಕಾರ್ಯಕ್ರಮಗಳು. ನಿರ್ದೇಶಿಸಿದ ನಾಟಕಗಳು- ಗೆಲಿಲಿಯೋ, ಹುತ್ತವ ಬಡಿದರೆ, ತದ್ರೂಪಿ, ಕದಡಿದ ನೀರು, ತಾಯಿ, ದಂಗೆಯ ಮುಂಚಿನ ದಿನಗಳು ಮುಂತಾದವು. ತಮಿಳುನಾಡು, ಕೇರಳ, ಮಧ್ಯಪ್ರದೇಶ, ಬಿಹಾರಗಳಲ್ಲಿ ರಂಗಭೂಮಿ ಅಧ್ಯಯನಕ್ಕೆ ಪ್ರವಾಸ. ಸೈದ್ಧಾಂತಿಕ ತಿಳುವಳಿಕೆಗಾಗಿ ಪ್ರಾರಂಭಿಸಿದ್ದು ಸಮುದಾಯ ವಾರ್ತಾಪತ್ರ, ಭೀಷ್ಮ ಸಾಹ್ನಿಯವರ ‘ತಮಸ್’ ಕಾದಂಬರಿಯನ್ನು ದೂರದರ್ಶನಕ್ಕೆ ಅಳವಡಿಕೆ, ನೌಟಂಕಿ, ಸ್ವಯಂವರ, ನಾಶವಾಯ್ತೆ ಲಂಕಾದ್ರಿಪುರ ಮುಂತಾದ ಕಾದಂಬರಿಗಳ ರಚನೆ. ಮೈಸೂರಿನ ರಂಗಾಯಣದ ನಿರ್ದೇಶಕರ ಜವಾಬ್ದಾರಿ. ಹಲವಾರು ನಾಟಕಗಳ ನಿರ್ದೇಶನ. ರಂಗಭೂಮಿಗೆ ನೀಡಿದ ಹೊಸ ಆಯಾಮ. ಬರೆದ ನಾಟಕಗಳು ಹದ್ದು ಮೀರಿದ ಹಾದಿ ಮತ್ತು ಜಂಗಮದ ಬದುಕು. ಹೆಗ್ಗೋಡಿಗೆ ಹೋಗಿ ಕವಿ-ಕಾವ್ಯ ಟ್ರಸ್ಟ್ನ ಆಶ್ರಯದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು. ರುಜುವಾತು ಪತ್ರಿಕೆಗೆ ನೀಡಿದ ಹೊಸರೂಪ. ಗುಡಿ ಕೈಗಾರಿಕೆಗೆ ಪ್ರೋತ್ಸಾಹ, ಗ್ರಾಮೀಣ ಕುಶಲ ಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ತೆರೆದ ‘ದೇಸಿ’ ಅಂಗಡಿ. (ಜಯನಗರ ಸೌತ್ ಎಂಡ್ ಸರ್ಕಲ್, ಗಿರಿನಗರದ ಪ್ರವೇಶ ದ್ವಾರದ ಬಳಿ) ಗ್ರಾಮೀಣ ಕುಶಲ ಕರ್ಮಿಗಳಿಗೆ ಪ್ರಾರಂಭಿಸಿದ ಕಲ್ಯಾಣನಿಧಿ. ಸಂದ ಹಲವಾರು ಪ್ರಶಸ್ತಿಗಳು, ಸಂಗೀತ ನಾಟಕ ಅಕಾಡಮಿ ಫೆಲೋಷಿಪ್, ರಂಗಭೂಮಿ ಅಧ್ಯಯನಕ್ಕಾಗಿ ಭಾರತ ಭವನ್ ಫೆಲೋಷಿಪ್, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಬಹುಮಾನ, ಪು.ತಿ.ನ. ಟ್ರಸ್ಟ್ ಪುರಸ್ಕಾರ, ಚದುರಂಗ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದವು. ಇದೇ ದಿನ ಹುಟ್ಟಿದ ಕಲಾವಿದರು : ಎನ್.ವಿ. ಚಿನ್ನಾಚಾರಿ – ೧೯೩೧ ರತ್ನ ಶಿವಶಂಕರ್ – ೧೯೪೬ ತಿಮ್ಮಯ್ಯ ಸಿ.ಎಂ. – ೧೯೫೩

