Loading Events

« All Events

ಪ್ರಹ್ಲಾದ ಕುಮಾರ ಭಾಗೋಜಿ

July 7, 2024

೧೭.೦೭.೧೯೨೫ ೧೯.೦೭.೨೦೦೦  ಬೆಳಗಾವಿಯ ಬಹುದೊಡ್ಡ ವಿದ್ವಾಂಸರು, ಹಿರಿಯ ಸಾಹಿತಿಗಳು, ಶಿಕ್ಷಣ ತಜ್ಞರೂ ಆಗಿದ್ದ ಭಾಗೋಜಿಯವರು ಹುಟ್ಟಿದ್ದು ಬೆಳಗಾವಿಯಲ್ಲಿ. ತಂದೆ ಪ್ರಹ್ಲಾದ ಗೋವಿಂದ ಕುಲಕರ್ಣಿ (ಪ್ರ.ಗೋ.ಕುಲಕರ್ಣಿ). ತಂದೆ ಮಗ ಇಬ್ಬರೂ ಹುಟ್ಟಿದ ದಿವಸ ಜುಲೈ ೧೭ ಆಗಿರುವುದು ಇದೊಂದು ಕನ್ನಡ ಸಾಹಿತ್ಯ ಚರಿತ್ರೆಯಲ್ಲೇ ಸೋಜಿಗದ ಸಂಗತಿಯಾಗಿದೆ. ತಂದೆಗೆ, ಮಗ ಪ್ರೌಢಶಾಲಾ ಶಿಕ್ಷಕನಾಗಬೇಕೆಂಬ ಆಸೆಯಿಂದ ಸ್ವತ: ಮಗನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಆಗೆಲ್ಲ ಪ್ರಾರಂಭಿಕ ಶಿಕ್ಣಣ ಕನ್ನಡ ಭಾಷೆಯಲ್ಲಿದ್ದರೆ, ಪ್ರೌಢಶಾಲಾ ಶಿಕ್ಷಣ ಇಂಗ್ಲಿಷ್ ಭಾಷೆಯಲ್ಲಿರುತ್ತಿತ್ತು. ಕಠಿಣವಾದ ಇಂಗ್ಲಿಷ್ ಭಾಷೆಯನ್ನು  ಕಲಿತು ಮೆಟ್ರುಕ್ಯುಲೇಷನ್ ನಲ್ಲಿ ಉತ್ತಮ ಅಂಕಗಳಿಸಿ ನಂತರ ಮುಂಬಯಿ ವಿಶ್ವವಿದ್ಯಾಲಯದಿಂದ ಬಿ.ಎ. ಆನರ್ಸ್ ಪದವಿಯನ್ನು (೧೯೪೮) ಪ್ರಥಮ ದರ್ಜೆಯಲ್ಲೇ ಪಡೆದರು. ೧೯೫೦ರಲ್ಲಿ ಎಂ.ಎ.ತರಗತಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದು ಉತ್ತೀರ್ಣರಾದರಲ್ಲದೆ ಬಿ.ಎಡ್, ಎಂ.ಎಡ್. ಪದವಿಯನ್ನೂ ಗಳಿಸಿದರು. ಕಾಲೇಜು ದಿನಗಳಿಂದಲೇ ತಮ್ಮ ನಿರಂತರ ಅಧ್ಯಯನದಿಂದ ಕಾವ್ಯ, ನಾಟಕ, ಕಾದಂಬರಿಗಳ ಓದಿನ ಜೊತೆಗೆ ಪಾಶ್ಚಾತ್ಯ ಕಾವ್ಯ ಮೀಮಾಂಸೆಯನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ಭರತನ ನಾಟ್ಯ ಶಾಸ್ತ್ರ ದಂಡಿಯ ಕಾವ್ಯಾದರ್ಶ, ಆನಂದ ವರ್ಧನನ  ಧ್ವನ್ಯಾಲೋಕ ಮುಂತಾದವುಗಳೆಲ್ಲವೂ ಕರತಲಾಮಲಕವಾಗಿದ್ದವು. ಭಾಷಾಶಾಸ್ತ್ರ ಹಾಗೂ ಛಂದ: ಶಾಸ್ತ್ರಗಳು ತಂದೆಯಿಂದ ರಕ್ತಗತವಾಗಿ ಬಂದ ವಿದ್ಯೆಯಾಗಿತ್ತು. ಕನ್ನಡ, ಸಂಸ್ಕೃತಗಳಲ್ಲದೆ  ವಿ.ಜಿ. ಕುಲಕರ್ಣಿಯವರ ಸಲಹೆಯಂತೆ ಇಂಗ್ಲಿಷ್ ಭಾಷೆಯನ್ನು ಗಂಭೀರವಾಗಿ ಅಭ್ಯಸಿಸಿದರು. ಶೆಲ್ಲಿ,  ಕೀಟ್ಸ್, ವರ್ಡ್ಸವರ್ತ್, ಬೈರನ್, ಎಲಿಯಟ್, ಏಟ್ಸ್ ಮುಂತಾದವರನ್ನೆಲ್ಲ ಪರಿಚಯಿಸಿಕೊಂಡರು. ಆನರ್ಸ್ ತರಗತಿಗಳಿಗೆ ಬೋಧಿಸುವ ಶಕ್ತಿ ಸಾಮರ್ಥ್ಯಗಳಿದ್ದರೂ ಅಧ್ಯಾಪಕರಾಗಿ ಹೋದದ್ದು ಕಾರವಾರದ ಕಾಲೇಜಿಗೆ. ಅಲ್ಲಿ ತಮ್ಮ ಶ್ರೀಮತಿಯವರ ಅಕಾಲ ಮರಣದಿಂದ ಈ ಕೆಲಸವೂ ಬೇಸರ ತರಿಸಿದಾಗ , ಅಷ್ಟರಲ್ಲಿ ಬೆಳಗಾವಿಯ ರಾಣಿ ಪಾರ್ವತಿದೇವಿಯ ಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದ ಕ.ಗಿ.ಕುಂದಣಗಾರರ ಅಪೇಕ್ಷೆಯಂತೆ ಈ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನವನ್ನಾರಂಭಿಸಿದರು.(೧೯೫೪). ಬೆಳಗಾವಿಯಲ್ಲಿ ಕನ್ನಡಿಗರು ಅನುಭವಿಸುತ್ತಿರುವ ಮರಾಠಿಗರ ತಿರಸ್ಕಾರ, ಕುಚೇಷ್ಟೆ, ಅವಮಾನಗಳಿಗೆ ಕಡಿವಾಣ ಹಾಕಿ, ಕನ್ನಡಕ್ಕೆ ಗೌರವ ತರುವಂತಹ ಕೆಲಸಮಾಡಬೇಕೆಂದು ನಿರ್ಧರಿಸಿ ಬೆಳಗಾವಿಯಲ್ಲಿ ಕನ್ನಡದ ವಾತಾವರಣವನ್ನು ಮೂಡಿಸಲು ಪಣತೊಟ್ಟರು. ತಾವು ನಿರ್ವಹಿಸುತ್ತಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ  ಆಯ್ಕೆಯಾದಾಗ ಪೂರ್ವ ಪ್ರಾಥಮಿಕ ತರಗತಿಗಳನ್ನಾರಂಭಿಸಲು ಯೋಜನೆಯೊಂದು ಸಿದ್ಧವಿದ್ದು ಆಂಗ್ಲ ಭಾಷೆಗೆ ಬೇಡಿಕೆ ಇದ್ದರೂ ಕನ್ನಡದಲ್ಲೇ ತರಗತಿಗಳನ್ನು ಪ್ರಾರಂಭಿಸಿ ಕೆಲವೇ ವರ್ಷಗಳಲ್ಲಿ ಏಳು ನೂರಕ್ಕೂ ಹೆಚ್ಚು ಮಕ್ಕಳು ಕನ್ನಡ ಕಲಿಯತೊಡಗಿದರು. ಜೊತೆಗೆ ಮುಂಬಯಿ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯ, ಮಂಗಳೂರು, ಗುಲ್ಬರ್ಗ,ವಿಶ್ವವಿದ್ಯಾಲಯಗಳ ಸಂಪರ್ಕಹೊಂದಿ ಸೇವೆಸಲ್ಲಸಿದ್ದಲ್ಲದೆ ಹತ್ತು ವರ್ಷಗಳ ಕಾಲ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಕಲಾ ವಿಭಾಗದ ಡೀನ್ ಆಗಿಯೂ ಕಾರ‍್ಯ ನಿರ್ವಹಿಸಿದರು. ಕನ್ನಡದಲ್ಲಿ ಸುಮಾರು ಹತ್ತು ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ ಒಂದೆರಡು ಅನುವಾದಿಸಿದ ಕೃತಿಗಳಾದರೆ, ಮೂರು ಸಂಪಾದಿಸಿದ ಕೃತಿಗಳೂ ಸೇರಿವೆ. ಇವುಗಳಲ್ಲಿ ಬಹು ಪ್ರಸಿದ್ಧ ಕೃತಿಗಳೆಂದರೆ ‘ರಸಗವಳ’ ಹಾಗೂ ‘ನನ್ನ ಬೆಳಗಾವಿ’. ‘ರಸಗವಳ’ ವಿಮರ್ಶಾ ಪ್ರಬಂಧ ಸಂಕಲನವಾದರೆ , ‘ನನ್ನ ಬೆಳಗಾವಿ’ ಕೃತಿಯಲ್ಲಿ ಬೆಳಗಾವಿಯ ೫೦ ವರ್ಷಗಳ ಸಾಂಸ್ಕೃತಿಕ ಚರಿತ್ರೆಯನ್ನು ದಾಖಲಿಸುತ್ತಾ ಹೋದಂತೆ ಉತ್ತರ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನೂ ಕಟ್ಟಿ ಕೊಟ್ಟಿದ್ದಾರೆ. ಹೆಚ್ಚು ಪುಸ್ತಕಗಳನ್ನು ಬರೆಯದೆಹೋದರೂ ಪುಸ್ತಕ ಸಂಸ್ಕೃತಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಬೆಳಗಾವಿಯಲ್ಲಿ ೧೯೯೪ರಲ್ಲಿ ಸಾಹಿತ್ಯ ಪ್ರತಿಷ್ಠಾನವನ್ನು ಸ್ಥಾಪಿಸಿ ಇವರು ಅದರ ಅಧ್ಯಕ್ಷರಾಗಿದ್ದರೆ ಹಾಸ್ಯ ಸಾಹಿತಿ ಅನಂತ ಕಲ್ಲೋಳರು ಕಾರ‍್ಯದರ್ಶಿಯಾಗಿ ಇವರೊಡನೆ ಭೀಮಸೇನ ತೋರಗಲ್ಲ, ವೆಂ.ಲ.ಜೋಶಿ ಮುಂತಾದವರು ಜೊತೆಗೂಡಿದರು. ಪ್ರತಿವರ್ಷವೂ ‘ಸಿರಿಗನ್ನಡ’ ಪ್ರಶಸ್ತಿಯನ್ನು ಈಗಲೂ ನೀಡುತ್ತಾ ಬಂದಿದೆ. ಪ್ರಹ್ಲಾದ ಕುಮಾರ ಭಾಗೋಜಿಯವರ ಅಮೃತ ಮಹೋತ್ಸವ ಸಂದರ್ಭದಲ್ಲಿ ಅಭಿಮಾನಿಗಳು ಹೊರತಂದ ಸಂಚಿಕೆ ‘ಅಣ್ಣಯ್ಯ’, ಇದಾದ ನಂತರ ಪ್ರಹ್ಲಾದ ಕುಮಾರ ಭಾಗೋಜಿಯವರು ಸಾಹಿತ್ಯ ಲೋಕದಿಂದ ಕಣ್ಮರೆಯಾದದ್ದು ೨೦೦೦ದ ಜುಲೈ ೧೯ರಂದು.

Details

Date:
July 7, 2024
Event Category: