೧೮-೨-೧೯೧೮ ಅಡಿಗರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಗೇರಿ ಎಂಬ ಹಳ್ಳಿ. ಪ್ರಾರಂಭಿಕ ಶಿಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ. ಮೈಸೂರು ವಿಶ್ವವಿದ್ಯಾಲಯದ ಎಂ.ಎ. ಪದವಿ. ಅನೇಕ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ. ಸಾಗರ ಹಾಗೂ ಉಡುಪಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ. ಶಿಕ್ಷಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಎನ್.ಬಿ.ಟಿ. ನಿರ್ದೇಶಕತ್ವ. ೧೯೭೧ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧೆ. ಸಂದರ್ಶಕ ಉಪನ್ಯಾಸಕರಾಗಿ ದೇಶ ವಿದೇಶ ಪ್ರವಾಸ. ಸಿಮ್ಲಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ನಲ್ಲಿ ರಿಸರ್ಚ್ ಫೆಲೊ ಆಗಿ ಕಾರ್ಯ ನಿರ್ವಹಣೆ. ನಿವೃತ್ತಿಯ ನಂತರ ಬೆಂಗಳೂರು ವಾಸ. ಪುರೋಹಿತ ಮನೆತನದಿಂದ ಬಂದವರು. ತಂದೆ ಕನ್ನಡ ಹಾಗೂ ಸಂಸ್ಕೃತದಲ್ಲಿ ದೇಶ ಭಕ್ತಿಗೀತೆ ರಚಿಸಿದ್ದರು. ಇವರಿಗೆ ಚಿಕ್ಕಂದಿನಿಂದಲೇ ಸಾಹಿತ್ಯ ಸಂಸ್ಕಾರ, ಒಲಿದು ಬಂದ ವರದಾನ. ಕಿಶೋರಾವಸ್ಥೆಯಲ್ಲಿಯೇ ಪದ್ಯರಚನೆಗಾರಂಭ. ಇವರ ಮೊದಲ ಕವನ ಸಂಕಲನ ‘ಭಾವತರಂಗ’ ೧೯೪೬ರಲ್ಲಿ ಪ್ರಕಟ. ನಂತರ ಕಟ್ಟುವೆವು ನಾವು, ನಡೆದು ಬಂದ ದಾರಿ, ಚಂಡಮದ್ದಳೆ, ಭೂಮಿಗೀತ, ವರ್ಧಮಾನ, ಇದನ್ನು ಬಯಸಿರಲಿಲ್ಲ. ಮೂಲಕ ಮಹಾಶಯರು, ಬತ್ತಲಾರದ ಗಂಗೆ, ಚಿಂತಾಮಣಿಯಲ್ಲಿ ಕಂಡ ಮುಖ, ಸುವರ್ಣ ಪುತ್ಥಳಿ ಮುಂತಾದ ಕವನ ಸಂಕಲನಗಳು. ಐ.ಬಿ.ಎಚ್. ಪ್ರಕಾಶನದಿಂದ ಸಮಗ್ರ ಕಾವ್ಯ ಪ್ರಕಟನೆ. ಅನಾಥೆ, ಆಕಾಶದೀಪ-ಕಾದಂಬರಿಗಳು. ಮಣ್ಣಿನ ವಾಸನೆ, ಕನ್ನಡಾಭಿಮಾನ, ನಮ್ಮ ಶಿಕ್ಷಣ ಕೇಂದ್ರ ಇತ್ಯಾದಿ ಪ್ರಮುಖ ಗದ್ಯಕೃತಿಗಳು. ಸಮಗ್ರ ಗದ್ಯವೂ ಪ್ರಕಟಗೊಂಡಿದೆ. ಹುಲ್ಲಿನ ದಳಗಳು, ಸುವರ್ಣ ಕೀಟ, ಭೂಗರ್ಭ ಯಾತ್ರೆ, ರೈತರ ಹುಡುಗಿ, ಜನತೆಯ ಶತ್ರು, ಮುಕ್ತಫಲ, ಇತಿಹಾಸ ಚಕ್ರ ಮುಂತಾದ ಅನುವಾದಿತ ಕೃತಿಗಳು. ನವ್ಯಮಾರ್ಗ ಪ್ರವರ್ತಕರೆನಿಸಿ ಸಾಹಿತ್ಯದ ಪರಿಸರಕ್ಕೆ ಮಾರ್ಗದರ್ಶಿ ಪ್ರೇರಣೆ ನೀಡಲು ಪ್ರಾರಂಭಿಸಿದ್ದು ‘ಸಾಕ್ಷಿ’ ತ್ರೈಮಾಸಿಕ ಪತ್ರಿಕೆ. ಚಿಕಿತ್ಸಕ ಬುದ್ಧಿಯಿಂದ ನೋಡುವ, ವಿಶ್ಲೇಷಿಸುವ, ಬಂಡೇಳುವ, ಖಂಡಿಸುವ, ಪ್ರಸ್ತುತ ಪರಿಶೀಲಿಸುವ, ಭೂಮಿ ಆಕಾಶಗಳ ಸೆಳೆತ ಇವರ ಕಾವ್ಯದುದ್ದಕ್ಕೂ ಕಂಡು ಬರುವ ಪ್ರಧಾನ ಅಂಶ. ಸಂದ ಗೌರವ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕಬೀರ ಸಮ್ಮಾನ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು. ನಿಧನರಾದದ್ದು ೧೪.೧೧.೧೯೯೨ರಂದು. ಇದೇ ದಿನ ಹುಟ್ಟಿದ ಸಾಹಿತಿಗಳು : ಹರ್ಡೇಕರ್ ಮಂಜಪ್ಪ – ೧೮೮೯-೩.೧.೧೯೪೭ ಶಾಂತಕುಮಾರಿ – ೧೯೬೪ ಛಾಯಾದೇವಿ ನಂಜಪ್ಪ – ೧೯೨೧-೨೭.೫.೯೧ ಮುಕುಂದ ಪುರೋಹಿತ್- ೧೯೫೮

