೨೩.೦೨.೧೯೩೫ ೨೨.೦೯.೨೦೦೪ ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯಲ್ಲಿ ನಿಷ್ಣಾತರೆನಿಸಿದ್ದ ಚನ್ನಯ್ಯನವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ೧೯೩೫ ರ ಫೆಬ್ರುವರಿ ೨೩ ರಂದು. ತಂದೆ ಎಚ್.ಜಿ. ಮಹದೇವಯ್ಯ, ತಾಯಿ ಗಂಗಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಸೊರಬ ತಾಲ್ಲೂಕಿನ ಜಡೆ ಹಾಗೂ ತೀರ್ಥಹಳ್ಳಿ ಶಾಲೆಗಳಲ್ಲಿ. ಮಾಧ್ಯಮಿಕ ವಿದ್ಯಾಭ್ಯಾಸ ಸಂತೆಬೆನ್ನೂರು ಹಾಗೂ ಹೊನ್ನಳಿಯಲ್ಲಿ. ಪ್ರೌಢಶಾಲೆ ಓದಿದ್ದು ಶಿರಾಳ ಕೊಪ್ಪದಲ್ಲಿ. ಕವಿ ಸುಮತೀಂದ್ರ ನಾಡಿಗರು ಇವರ ಸಹಪಾಠಿ. ಹೈಸ್ಕೂಲಿನಲ್ಲಿದ್ದಾಗಲೇ ಕವನಗಳ ರಚನೆಯ ಆರಂಭ. ಇಂಟರ್ ಮೀಡಿಯೆಟ್ ಓದಿದ್ದು ಶಿವಮೊಗ್ಗದಲ್ಲಿ. ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ ಕನ್ನಡ ಸಾಹಿತ್ಯದ ಪರಿಸರ, ಸ್ನೇಹಿತರ ಸಹವಾಸದಿಂದ ಪ್ರೇರಿತರಾಗಿ ಮೈಸೂರು ಮಹಾರಾಜ ಕಾಲೇಜು ಸೇರಿ ಪಡೆದದ್ದು ಬಿ.ಎ. (ಆನರ್ಸ್) ಹಾಗೂ ಎಂ.ಎ. ಪದವಿಗಳು. ತೀನಂಶ್ರೀ, ಡಿ.ಎಲ್.ಎನ್, ಸುಜನಾ, ಜಿ.ಎಸ್.ಎಸ್, ಮುಂತಾದವರುಗಳ ಶಿಷ್ಯರಾಗಿ ಅವರ ಪ್ರಭಾವಕ್ಕೊಳಗಾದರು. ಮಹಾರಾಜ ಕಾಲೇಜಿನಲ್ಲಿಯೇ ಉಪನ್ಯಾಸಕರಾಗಿ ವೃತ್ತಿ ಜೀವನವನ್ನಾರಂಭಿಸಿ ಕನ್ನಡ ಅಧ್ಯಯನ ಸಂಸ್ಥೆ ಯ ನಿರ್ದೇಶಕರವರೆಗೂ ವಿವಿಧ ಜವಾಬ್ದಾರಿ ಸ್ಥಾನಗಳನ್ನಲಂಕರಿಸಿ ೧೯೯೫ರಲ್ಲಿ ನಿವೃತ್ತರಾದರು. ಡಬ್ಲ್ಯು. ಬಿ.ಏಟ್ಸ್, ಟಿ.ಎಸ್. ಎಲಿಯಟ್, ಎಜ್ರಾಪೌಂಡ್ ಮುಂತಾದ ಇಂಗ್ಲಿಷ್ ಕವಿಗಳ ಕಾವ್ಯ ಮತ್ತು ಸಾಹಿತ್ಯ ವಿಮರ್ಶೆಯನ್ನೂ ಅಧ್ಯಯನ ಮಾಡಿ ಕಾವ್ಯ ಕೃಷಿ ಪ್ರಾರಂಭಿಸಿದ ಚನ್ನಯ್ಯನವರ ಕವಿತೆಗಳು ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟಗೊಂಡವು. ಇತರ ಪತ್ರಿಕೆಗಳಲ್ಲಿಯೂ ಹಲವಾರು ಕವಿತೆಗಳು ಪ್ರಕಟಿತ. ನಂತರ ಹೊರತಂದ ಪ್ರಥಮ ಕವನ ಸಂಕಲನ ‘ಕಾಮಿ’, ನಂತರ ಪ್ರಕಟವಾದದ್ದು ‘ಆಮೆ’. ಕನ್ನಡ ಸಾಹಿತ್ಯದ ನವ್ಯ ಚಳುವಳಿಯ ಸಂದರ್ಭದಲ್ಲಿ ಪ್ರಕಟಗೊಂಡ ಇವರ ಕವನ ಸಂಕಲನಗಳು ಡಾ.ಯು.ಆರ್. ಅನಂತಮೂರ್ತಿ, ಕೆ. ಸದಾಶಿವ, ಗೋಪಾಲಕೃಷ್ಣ ಅಡಿಗ, ಜಿ.ಎಚ್. ನಾಯಕ, ಮುಂತಾದ ಕಾವ್ಯಾಸಕ್ತರಲ್ಲಿ ಚರ್ಚೆಯ ವಿಷಯವಾಗಿತ್ತು. ಪಾಶ್ಚಾತ್ಯ ವಿಮರ್ಶೆಯ ಪ್ರಭಾವಕ್ಕೊಳಗಾಗಿ ರಚಿಸಿದ್ದು ‘ಜಿಜ್ಞಾಸೆ’, ಹಾಗೂ ‘ಪ್ರಾಸಂಗಿಕ’ ವಿಮರ್ಶಾ ಕೃತಿಗಳು. ಕಾವ್ಯ ಹಾಗೂ ವಿಮರ್ಶೆಯ ಜೊತೆಗೆ ಇವರನ್ನೂ ಆಕರ್ಷಿಸಿದ ಮತ್ತೊಂದು ಕ್ಷೇತ್ರವೆಂದರೆ ನಾಟಕ ಹಾಗೂ ನಟನೆ. ಸಮಾನ ಮನಸ್ಕರಾದ ವಿಶ್ವನಾಥ ಮಿರ್ಲೆ, ದ್ವಾರಕಾನಾಥ್, ಸಿಂಧುವಳ್ಳಿ ಅನಂತಮೂರ್ತಿಯವರೊಡನೆ ಸೇರಿ ಸ್ಥಾಪಿಸಿದ್ದು ‘ಸಮತೆಂತೋ’ ನಾಟಕ ಸಂಸ್ಥೆ. ಈ ಸಂದರ್ಭದಲ್ಲಿ ರಚಿಸಿದ ನಾಟಕ ‘ಎಲ್ಲರಂತಲ್ಲ ನನ್ನ ಗಂಡ’, ರಚಿಸಿದ್ದಷ್ಟೇ ಅಲ್ಲದೆ ನಾಟಕವನ್ನು ತಾವೇ ನಿರ್ದೇಶಿಸಿದರು. ಸುಮಾರು ೩೦-೪೦ ನಾಟಕಗಳಲ್ಲಿ ಅಭಿನಯಿಸಿದ ಚನ್ನಯ್ಯನವರು ಕುವೆಂಪುರವರ ‘ರಕ್ತಾಕ್ಷಿ’, ಪೂರ್ಣಚಂದ್ರತೇಜಸ್ವಿಯವರ ‘ಯಮಳ ಪ್ರಶ್ನೆ’, ನ.ರತ್ನರವರ ‘ಎಲ್ಲಿಗೆ?’, ಮೃಚ್ಛಕಟಿಕ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು. ನಾಟಕರಂಗದಲ್ಲಿಯೂ ಕ್ರಾಂತಿಕಾರಕ ಬದಲಾವಣೆಗಳಾಗಿ ನವ್ಯನಾಟಕಗಳೆನಿಸಿದ ಅಸಂಗತ ನಾಟಕಗಳಲ್ಲಿಯೂ ಅಭಿನಯಿಸಿದರು. ಅವುಗಳಲ್ಲಿ ಚದುರಂಗ ‘ಇಲಿಬೋನು’, ನ.ರತ್ನರವರ ‘ಗೋಡೆ ಬೇಕೆ ಗೋಡೆ’, ಚಂದ್ರಶೇಖರ ಪಾಟೀಲರ ‘ಕೊಡೆಗಳು’ ಪ್ರಮುಖವಾದವುಗಳು. ಸಮುದಾಯ ತಂಡಕ್ಕಾಗಿ ‘ತಾಯಿ’ ನಾಟಕವನ್ನು ನಿರ್ದೇಶಿಸಿ ತಾವೊಬ್ಬ ಪ್ರತಿಭಾವಂತ ನಿರ್ದೇಶಕರೆನಿಸಿಕೊಂಡರು. ಇವರು ರಚಿಸಿದ ಇನ್ನೆರಡು ನಾಟಕಗಳು ‘ಹುಯ್ಯಲವೋ ಡಂಗುರವ’ ಹಾಗೂ ‘ಅಯಾಸ್’ (ಅನುವಾದ) ನಾಟಕ. ೧೯೬೮ರಲ್ಲಿ ಕವಿಗೋಪಾಲಕೃಷ್ಣ ಅಡಿಗರಿಗೆ ೫೦ ವರ್ಷ ತುಂಬಿದ ಸಂದರ್ಭದಲ್ಲಿ ಅರ್ಪಿಸಿದ ಗೌರವ ಗ್ರಂಥ ‘ಸಂವೇದನೆ’ಗೆ ಜಿ.ಎಚ್. ನಾಯಕರೊಡನೆ ಸಂಪಾದಕರಾಗಿದ್ದರು. ನಾಟಕದಿಂದ ಚಲನಚಿತ್ರದ ಕಡೆಗೂ ವಾಲಿದ ಚನ್ನಯ್ಯನವರು ಪಿ. ಲಂಕೇಶರ ‘ಎಲ್ಲಿಂದಲೋ ಬಂದವರು’ ಚಲನಚಿತ್ರದಲ್ಲೂ ಅಭಿನಯಿಸಿದರು. ಇಂಗ್ಲಿಷ್ ಹಾಗೂ ಕನ್ನಡ ಭಾಷೆ ಎರಡರಲ್ಲೂ ಮಹತ್ವದ ಲೇಖನಗಳನ್ನೂ ಬರೆದಿರುವ ಚನ್ನಯ್ಯನವರ ಹಲವಾರು ಕವನಗಳು ಇತರರು ಸಂಪಾದಿಸಿರುವ ಸಂಗ್ರಹಗಳಲ್ಲಿಯೂ ಸೇರ್ಪಡೆಯಾಗಿ, ಅನೇಕ ಕವನಗಳು ಪಠ್ಯ ಪುಸ್ತಕಗಳಲ್ಲೂ ಸೇರಿವೆ. ೧೯೯೪ ರ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಹೀಗೆ ಮಹತ್ವದ ಲೇಖಕರೆನಿಸಿದ್ದ ಚನ್ನಯ್ಯನವರು ಕಾವ್ಯಲೋಕದಿಂದ ನಿರ್ಗಮಿಸಿದ್ದು ೨೨.೯.೨೦೦೪ರಲ್ಲಿ.

