ಪ್ರೊ.ಎಚ್.ಎಂ. ಮರುಳಸಿದ್ಧಯ್ಯ

Home/Birthday/ಪ್ರೊ.ಎಚ್.ಎಂ. ಮರುಳಸಿದ್ಧಯ್ಯ
Loading Events

೨೯..೧೯೩೧ ನಿರ್ಮಲ ಕರ್ನಾಟಕ, ಪಂಚಮುಖಿ ಅಭ್ಯುದಯ ಮಾರ್ಗ, ಸ್ವಸ್ತಿ ಗ್ರಾಮ ಯೋಜನೆ ಮುಂತಾದ ಹಲವಾರು ಯೋಜನೆಗಳ ರೂವಾರಿಯಾಗಿ ಸಮಾಜಕಾರ್ಯ ಶಿಕ್ಷಣ, ಕ್ಷೇತ್ರ ಕಾರ್ಯ, ಸಂಘಟನೆ, ಸಾಹಿತ್ಯರಚನೆ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಮರುಳ ಸಿದ್ಧಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಎಂಬ ಹಳ್ಳಿಯಲ್ಲಿ ೧೯೩೧ ರ ಜುಲಯ ೨೯ ರಂದು. ತಂದೆ ಮಠದ ದೊಡ್ಡ ಬಸವಯ್ಯನವರು, ತಾಯಿ ದೊಡ್ಡ ಬಸಮ್ಮ. ಐವರು ಅಣ್ಣಂದಿರು ಮೂವರು ಅಕ್ಕಂದಿರನ್ನೂ ಹೊಂದಿರುವ ದೊಡ್ಡ ಕುಟುಂಬದಲ್ಲಿ ಜನಿಸಿದ ಇವರ ಅಣ್ಣಂದಿರಲ್ಲಿ ಹಿ.ಮ.ನಾಗಯ್ಯನವರು ಸಾಹಿತಿ, ಪತ್ರಕರ್ತರಾಗಿ ಖ್ಯಾತಿ ಪಡೆದವರು. ಪ್ರಾರಂಭಿಕ ಶಿಕ್ಷಣ ಅಕ್ಕನ ಊರದ ಹುಲಿಕೆರೆ ಎಂಬ ಹಳ್ಳಿಯಲ್ಲಿ. ಕೊಟ್ಟೂರಿನಲ್ಲಿ ಪ್ರೌಢಶಾಲಾ ಶಿಕ್ಷಣ. ಮೈಸೂರು ಸೇಂಟ್‌ ಫಿಲೋಮಿನ ಕಾಲೇಜು ಸೇರಿ ಇಂಟರ್‌ಮೀಡಿಯೆಟ್‌ ನಲ್ಲಿ ೯ ನೇ ರ‍್ಯಾಂಕ್‌ ಪಡೆದ ವಿದ್ಯಾರ್ಥಿ, ಮಹಾರಾಜಕಾಲೇಜು ಸೇರಿದ್ದು, ಕನ್ನಡದಲ್ಲಿ ಆನರ್ಸ್ ಪದವಿ ಪಡೆಯಲು. ಆದರೆ ಓದಿದ್ದು ಸಮಾಜ ಶಾಸ್ತ್ರ. ಬೋಧಿಸಿದವರು ಪ್ರಖ್ಯಾತರಾದ ಪ್ರೊ.ಯಮುನಾಚಾರ್ಯ ಮತ್ತು ಪ್ರೊ.ಎನ್‌.ಎ. ನಿಕ್ಕಂ (ಮುಂದೆ ವಿ.ವಿ.ದ ಉಪಕುಲಪತಿಗಳಾದರು) ಮೈಸೂರು ವಿ.ವಿ. ದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಹಾಗೂ ಸಮಾಜ ಕಾರ್ಯದಲ್ಲಿ ದೆಹಲಿಯ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳು. ವಾರಣಾಸಿಯ ಮಹಾತ್ಮಾಗಾಂಧಿ ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯದಿಂದ ಪಡೆದ ಡಾಕ್ಟರೇಟ್‌ ಪದವಿ (೧೯೭೮). ಕನ್ನಡ ಸಾಹಿತ್ಯದ ಓದು, ಬರೆಹದಲ್ಲಿ ಆಸಕ್ತಿಯಿದ್ದು ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ನವಿಲನ್ನು ಕುರಿತು ಬರೆದ ಕವಿತೆಯು ಬಳ್ಳಾರಿಯಿಂದ ಪ್ರಕಟವಾಗುತ್ತಿದ್ದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಎಸ್‌.ಎಸ್‌.ಎಲ್‌.ಸಿ. ಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಯಾಗಿದ್ದ ಇವರಿಗೆ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಕೊಂಚ ದ್ವಂದ್ವವಾಗಿ ಹುಬ್ಬಳ್ಳಿಯ ‘ನವಯುಗ’ ಪತ್ರಿಕೆ ಹಾಗೂ ದಾವಣಗೆರೆಯ ‘ನೇತಾಜಿ’ ಪತ್ರಿಕೆಗಳಲ್ಲಿ ಕೆಲಕಾಲ ಪತ್ರಕರ್ತರಾಗಿಯೂ ದುಡಿದರು. ಹಳ್ಳಿಯಲ್ಲಿ ತಾವು ಕಂಡ ಬದುಕಿನ ಸಮಸ್ಯೆಗಳು, ಮೂಢನಂಬಿಕೆ, ಆಢ್ಯವ್ಯಕ್ತಿಗಳ ನಡವಳಿಕೆಗಳು ಮುಂತಾದ ವಿಷಯಗಳ ಬಗ್ಗೆಯೇ ವಿಚಾರಪೂರಿತ ಲೇಖನಗಳನ್ನೂ ಬರೆಯತೊಡಗಿದರು. ಪತ್ರಿಕೋದ್ಯಮವೂ ಬೇಸರವೆನಿಸಿ ಅಣ್ಣ ಹಿ.ಮ. ನಾಗಯ್ಯನವರ ಸಹಾಯದಿಂದ ಸೇರಿದ್ದು ಮೈಸೂರಿನ ಸೇಂಟ್‌ ಫಿಲೋಮಿನ ಕಾಲೇಜು, ಅಲ್ಲಿ ಪ್ರೊ. ಗೋಪಾಲ ಕೃಷ್ಣ ಅಡಿಗ, ಪ್ರೊ. ಕೆ.ಎಸ್‌. ಕೃಷ್ಣಮೂರ್ತಿ, ಡೇಡಿಡ್‌ ಹಾರ್ಸ್ ಬ್ರೋ ಇವರ ಗುರುಗಳು. ಅಡಿಗರ ಪ್ರಚೋದನೆಯಿಂದ ಸಾಹಿತ್ಯದಲ್ಲಿ ಆಸಕ್ತಿ ಬೆಳೆದು ಕತೆ, ಕಾದಂಬರಿಗಳ ರಚನೆ. ಇವರು ಬರೆದ ಕ್ರಾಂತ್ರಿಕಾರಕ, ಮನೋವಿಶ್ಲೇಷಣಾತ್ಮಕ ವಸ್ತುವಿನ ಮೊದಲ ಕಾದಂಬರಿ ಕೆದರಿದ ಕೆಂಡ (೧೯೫೪) ಪ್ರಕಟಿಸಿ ಹಲವಾರು ಮಂದಿಗೆ ಅಚ್ಚರಿ ಹುಟ್ಟಿಸುವಂತೆ ಮಾಡಿದರು (ಮುಂದೆ ಈ ಕಾದಂಬರಿ ಎರಡು ಸಾರೆ ಮರು ಮುದ್ರಣಗಳನ್ನು ಕಂಡಿತು). ಸಮಾಜಶಾಸ್ತ್ರವನ್ನೂ ಅಧ್ಯಯನ ಮಾಡುತ್ತಲೇ ೧೯೫೦ ರ ದಶಕದಲ್ಲಿ ಸಮಾನ ಮನಸ್ಕರೊಡನೆ ಸೇರಿ ಪ್ರಾರಂಭಿಸಿದ ‘ಸಾಹಿತ್ಯ ಸಂಘ’ದಲ್ಲಿ ಜಿ.ಎಸ್‌. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಎಂ. ಚಿದಾನಂದಮೂರ್ತಿ, ಎಸ್‌.ಎಂ. ವೃಷಭೇಂದ್ರಸ್ವಾಮಿ, ಹಾ.ಮಾ.ನಾ. ತ್ರಿವೇಣಿ, ಎಸ್‌.ವಿ.ಪಿ., ಎಚ್‌.ಎಂ.ಶಂಕರನಾರಾಯಣರಾವ್ ಮುಂತಾದವರೊಡನೆ ಸಾಹಿತ್ಯ, ಸಾಂಸ್ಕೃತಿಕ ವಿಮರ್ಶೆ, ಚರ್ಚೆಗಾಗಿ ಸೇರುತ್ತಿದ್ದುದು ದಾಸಪ್ರಕಾಶ್‌ ಹೊಟೇಲಿನಲ್ಲಿ. ‘ಕನ್ನಡ ಕುಲ’ ಎಂಬ ಪ್ರಕಾಶನ ಸಂಸ್ಥೆಯನ್ನೂ ಪ್ರಾರಂಭಿಸಿ ಎಚ್‌. ತಿಪ್ಪೇರುದ್ರಸ್ವಾಮಿಯವರ ಮೊದಲ ಕೃತಿ ‘ಭಾವಗೀತೆ’ ಯ ಪ್ರಕಟಣೆ. ಇದೇ ಅವಧಿಯಲ್ಲಿಯೇ ಇವರು ಬರೆದ ‘ವಿಷಬಿಂದು’ ನೀಳ್ಗವಿತೆಗೆ ಬಿ.ಎಂ.ಶ್ರೀ.ಯವರ ಚಿನ್ನದ ಪದಕವೂ ದೊರೆಯಿತು. ಉದ್ಯೋಗಕ್ಕಾಗಿ ಸೇರಿದ್ದು ಕೊಯಮತ್ತೂರಿನ ಖಾಸಗಿ ಕಾಲೇಜಿನಲ್ಲಿ ಸ್ನಾತಕೋತ್ತರ ತರಗತಿಗಳ ಉಪನ್ಯಾಸಕರಾಗಿ, ಗುಲಬರ್ಗದ ಎಸ್.ಬಿ. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಕಾಲ. ನಂತರ ಸೇರಿದ್ದು ಧಾರವಾಡದ ಕರ್ನಾಟಕ ವಿ.ವಿ. ದಲ್ಲಿ. ಸ್ನಾತಕೋತ್ತರ ಸಮಾಜಶಾಸ್ತ್ರ ಉಪನ್ಯಾಸಕರಾಗಿ. ಸೋಷಿಯಲ್‌ ಆಂತ್ರೋಪಾಲಜಿ ಎಂದು ಪ್ರಾರಂಭವಾಗಿ ನಂತರ ಸಮಾಜಕಾರ್ಯ ಎಂಬ ಸ್ವತಂತ್ರ ವಿಭಾಗವಾಯಿತು. ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಸಮಾಜಾಧ್ಯಯನ, ಸಮಾಜಶಾಸ್ತ್ರ, ಸಮಾಜಕಾರ್ಯ ವಿಷಯಗಳ ಬೋಧನೆಗಳು ಪ್ರಾರಂಭಾವಸ್ಥೆಯಲ್ಲಿದ್ದ ಸಂದರ್ಭ. ಇದಕ್ಕೆ ಭದ್ರಬುನಾದಿ ಹಾಕಿದವರಲ್ಲಿ ಎಚ್‌.ಎಂ.ಎಂ. ಕೂಡಾ ಒಬ್ಬರು. ಕರ್ನಾಟಕ ವಿ.ವಿ.ದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾಗಿ (೧೯೭೩-೭೪), ಬೆಂಗಳೂರು ವಿ.ವಿ.ದ ಸ್ನಾತಕೋತ್ತರ ಸಮಾಜ ಕಾರ್ಯವಿಭಾಗದ ಪ್ರವಾಚಕ ಮತ್ತು ಮುಖ್ಯಸ್ಥರಾಗಿ (೧೯೭೪-೭೮),ಸಮಾಜ ಕಾರ್ಯ ವಿಭಾಗದ ಅಧ್ಯಕ್ಷರಾಗಿ (೧೯೭೯-೯೦), ಪ್ರಾಧ್ಯಾಪಕರಾಗಿ (೧೯೯೦-೯೨), ನಿವೃತ್ತಿಯ ನಂತರ ಹಂಪಿ ಕನ್ನಡ ವಿ.ವಿ.ದ ಸಂದರ್ಶಕ ಪ್ರಾಧ್ಯಾಪಕರಾಗಿ ಮೈಸೂರು ಸ್ನಾತಕೋತ್ತರ ಕೇಂದ್ರ, ಐ.ಸಿ.ಎಫ್‌.ಎ.ಐ ಲಾ ಸ್ಕೂಲ್‌, ಲಾರ್ ವೆನ್‌ ಸ್ಕೂಲ್‌ ಆಫ್‌ ಸೋಷಿಯಲ್‌ ವರ್ಕ್ಸ್‌ ಮುಂತಾದೆಡೆ ಸೇವೆ ಸಲ್ಲಿಸಿದ್ದಾರೆ. ಇವರ ಸಂಶೋಧನ ವಿಷಯಗಳಲ್ಲಿ ವೃದ್ಧಾಪ್ಯಶಾಸ್ತ್ರ, ಸಮಾಜಕಾರ್ಯ ಆಡಳಿತ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಅಭ್ಯುದಯ ಮುಂತಾದ ಕ್ಷೇತ್ರಗಳು ಸೇರಿವೆ. ಇವಲ್ಲದೆ ಹಲವಾರು ಶಿಬಿರ ನಿರ್ದೇಶನ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆ. ವಿ.ವಿ.ಗಳ ಧನ ಸಹಾಯ  ಆಯೋಗದ ನೆರವಿನಿಂದ ಕರ್ನಾಟಕದ ಹಳ್ಳಿಗಳಲ್ಲಿ ಸಾಮಾಜಿಕ ಅಭ್ಯುದಯ, ಮನೋ-ಸಾಮಾಜಿಕ ಅಭ್ಯುದಯ ಕೇಂದ್ರ, ಸ್ವಯಂ ಸೇವಾ ಸಂಸ್ಥೆ ಸ್ವಸ್ತಿ ಮುಂತಾದವುಗಳನ್ನು ರಚಿಸುವಲ್ಲಿ ಮುಂದಾಳತ್ವ ವಹಿಸಿದ್ದಾರೆ. ದೇಶದ ವಿವಿಧ ಸಮಾಜ ಶಾಸ್ತ್ರದ ಸಮಿತಿಗಳ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇಂಡಿಯನ್‌ ಸೋಷಿಯಲಾಜಿಕಲ್‌ ಸೊಸೈಟಿ, ಸ್ಕೂಲ್‌ ಆಫ್‌ ಸೋಷಿಯಲ್‌ ವರ್ಕ್, ಇಂಡಿಯನ್‌ ಅಸೋಷಿಯೇಷನ್‌ ಆಫ್‌ ಟ್ರೇಯಿನ್ಡ್‌ ಸೋಷಿಯಲ್‌ ವರ್ಕ್‌, ಆಗ್ರಾದ ಸೋಷಿಯಲ್‌ ಸೈನ್ಸ್‌ ಅಸೋಷಿಯೇಷನ್‌, ಅಲಹಾಬಾದಿನ ಇಂಡಿಯನ್‌ ಅಕಾಡಮಿ ಆಫ್‌ ಸೋಷಿಯಲ್‌ ಸೈನ್ಸ್‌ಸ್‌ ಮುಂತಾದ ಹಲವಾರು ಸಂಸ್ಥೆಗಳ ಒಡನಾಟ ಹೊಂದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಬೆಂಗಳೂರು ವಿ.ವಿ. ಹಾಗೂ ಕರ್ನಾಟಕ ವಿ.ವಿ.ದ ಹತ್ತು ಮಂದಿ ವಿದ್ಯಾರ್ಥಿಗಳು ಸಮಾಜಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದಿದ್ದಾರೆ. ಇವರು ಬರೆದ ಕೃತಿಗಳಲ್ಲಿ ವಿಷಬಿಂದು (ಕಥನಕಾವ್ಯ), ಸಾವಿನ ಸೆಳವಿನಲ್ಲಿ (ಜೀವನ ಕಥೆಗಳು) ಮುಂತಾದ ಸಾಹಿತ್ಯ ಕೃತಿಗಳಷ್ಟೇ ಅಲ್ಲದೆ ಸಮಾಜಕಾರ್ಯ, ಮಾನವ ಸಮಾಜ ಹಾಗೂ ಸಮಾಜಶಾಸ್ತ್ರ, ಸಮುದಾಯ ಸಂಘಟನೆ, ಸಮಾಜಶಾಸ್ತ್ರದ ಕೆಲವು ಪಾಠಗಳು,ಮಾನವ ಸಂಪನ್ಮೂಲ ಸಂವರ್ಧನೆ, ಗ್ರಾಮೋನ್ನತಿ, ನಾವು ಮತ್ತು ಸಹಕಾರ, ಪಂಚಮುಖಿ ಅಭ್ಯುದಯ ಮಾರ್ಗ, ಇವುಗಳಲ್ಲದೆ, ಇಂಗ್ಲಿಷ್‌ನಲ್ಲಿ ಓಲ್ಡ್‌ ಪೀಪಲ್‌ ಆಫ್‌ ಮಕುಂತಿ, ದಿ ಕಾಂಟೂರ್ಸ್ ಆಫ್‌ ಸೋಷಿಯಲ್‌ ವೆಲ್‌ಫೇರ್, ಸೆಕ್ಟರಿಯನ್‌ ಅಂಡ್‌ ಸೆಕ್ಯುಲರ್ ಬೇಸಿಸ್‌ ಆಫ್‌ ವೆಲ್‌ ಫೇರ್ ಅಂಡ್‌ ಡೆವಲಪ್‌ಮೆಂಟ್‌ ಮುಂತಾದ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ೫೦ ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಸ್ವಸ್ತಿ ಎಂಬ ಸ್ವಯಂ ಸೇವಾ ಸಂಘಟನೆಯೊಂದನ್ನು ತಮ್ಮ ಹುಟ್ಟಿದ ಊರಾದ ಹಿರೇಕುಂಬಳಗುಂಟೆಯಲ್ಲಿ ಸ್ಥಾಪಿಸಿ, ಇದಕ್ಕಾಗಿ ಸ್ಥಳೀಯರನ್ನೂ ಸಂಘಟಿಸಿದ್ದಲ್ಲದೆ ಬೆಂಗಳೂರು ಹಾಗೂ  ರಾಜ್ಯದ ವಿವಿಧ ಕಾಲೇಜುಗಳ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳನ್ನೂ ತೊಡಗಿಸಿ ತಮ್ಮ ಹಳ್ಳಿಯಲ್ಲಿ ಬದಲಾವಣೆಯ ತರಲು ಕಾರಣರಾದರು. ಹಳ್ಳಿಯಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ, ಮಹಿಳೆಯರ ಸಂಘಟನೆ, ಪರಿಸರ ರಕ್ಷಣೆ ಮುಂತಾದವುಗಳನ್ನೂ ಪ್ರಾರಂಭಿಸಿ ಇದರ ಆರಂಭೋತ್ಸವಕ್ಕೆ ಮಂತ್ರಿಗಳನ್ನೇ ಆಹ್ವಾನಿಸಿ ಸರಕಾರದ ಕಣ್ಣುತೆರೆಸಿ, ಹೆಣ್ಣುಮಕ್ಕಳಿಗೆ ಕೌಶಲ್ಯ ತರಬೇರಿ, ನೈರ್ಮಲ್ಯ, ಕುಡಿಯುವ ನೀರು, ವಸತಿ ಸೌಲಭ್ಯ, ಬಡಮಕ್ಕಳ ಶೈಕ್ಷಣಿಕ ಸೌಲಭ್ಯ  ಮುಂತಾದ ಕೆಲಸಗಳಿಗೆ ‘ಸ್ವಸ್ತಿ’ ನೆರವಾಗುತ್ತಿದೆ. ಸ್ವೀಡನ್‌ ವಿ.ವಿ.ದ ಆಹ್ವಾನದ ಮೇರೆಗೆ ಸ್ವೀಡನ್‌ ಗೂ ಹೋಗಿ ಬಂದ ಎಚ್‌.ಎಂ.ಎಂ. ದಂಪತಿಗಳು (ವಿದ್ಯಾಭ್ಯಾಸ ಕಡಿಮೆಯಿದ್ದರೂ ಪತಿಗೆ ಸರ್ವವಿಧದಲ್ಲೂ ಸಹಕರಿಸುವ ಸಹಧರ್ಮಿಣಿ-ಶಾಂತವೀರಮ್ಮನವರು) ಸಮಾಜ ಕಾರ್ಯಗಳ ಕಾರ್ಯವಿಧಾನಗಳ ವಿನಿಮಯ ನಡೆಸಿ ಬಂದಿದ್ದಾರೆ. ಕೆನಡಾದ ಮಾಂಟ್ರಿಯಾಲ್‌ಗೆ ಹೋದ ಎಚ್‌.ಎಂ.ಎಂ.ರವರು ಸಮ್ಮೇಳನದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಇವರ ಹಲವಾರು ಯೋಜನೆಗಳಿಗೆ ಕೈಜೋಡಿಸಿದ ಸರಕಾರ ಹಳ್ಳಿಗಳಲ್ಲಿ ಬಯಲಲ್ಲಿ ಮಲವಿಸರ್ಜನೆ ಅನಾರೋಗ್ಯಕರ ಎಂದು ತಿಳಿಸಿ ಅದಕ್ಕಾಗಿ ಸೌಲಭ್ಯ ಕಲ್ಪಿಸಿ ನಿರ್ಮಲ ಕರ್ನಾಟಕಕ್ಕೆ (೧೯೯೫) ಅಸ್ತಿಭಾರ ಹಾಕಿತು. ಹಳ್ಳಿಗಳ ದೇಶವೆನಿಸಿರುವ ಭಾರತದಲ್ಲಿ ಸಮಾಜ ಕಾರ್ಯಕರ್ತರ ಅಗತ್ಯವೂ ಬಹಳವಾಗಿದ್ದು ಸಮಾಜಕಾರ್ಯದಲ್ಲಿ ಪರಿಣತಿ ಪಡೆದು ಸಾಮಾಜಿಕ ಪರಿವರ್ತನೆ ತರುವಲ್ಲಿ ಸಮಾಜಕಾರ್ಯ, ಶಿಕ್ಷಣ, ಕ್ಷೇತ್ರಕಾರ್ಯ, ಸಂಶೋಧನೆ, ಇತ್ಯಾದಿಗಳಲ್ಲಿ ತೊಡಗಿಸಿಕೊಂಡು ನಿರ್ಮಲಕರ್ನಾಟಕ, ಪಂಚಮುಖಿ ಅಭ್ಯುದಯ ಯೋಜನೆ, ಸ್ವಸ್ತಿ ಗ್ರಾಮ ಯೋಜನೆ, ಅನಾಥ ಮಕ್ಕಳ ಅಭ್ಯುದಯ ಮುಂತಾದವುಗಳ ರೂವಾರಿಯಾಗಿ ದುಡಿಯುವವರ ಅಗತ್ಯವಿದೆ. ಇದಕ್ಕಾಗಿ ಸ್ನಾತಕೋತ್ತರ ಪದವಿ ಪಡೆದ ಹಲವಾರು ಮಂದಿ ಸ್ವಯಂ ಸೇವಾ ಸಂಘಗಳಲ್ಲಿ, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವಾ ವಿಭಾಗಗಳಲ್ಲಿ, ಸರಕಾರಿ ಸೇವೆಗಳಲ್ಲಿ, ಸಮಾಜವಿಜ್ಞಾನಿಯಾಗಿ, ಅಧ್ಯಾಪಕರಾಗಿ, ಸಮಾಜ ಕಲ್ಯಾಣ ಅಧಿಕಾರಿ, ಕಾರ್ಮಿಕ ಕಲ್ಯಾಣ ಅಧಿಕಾರಿಯಾಗಿ ದುಡಿಯುತ್ತಿದ್ದಾರೆ. ಹೀಗೆ ದುಡಿದ ಮರುಳ ಸಿದ್ಧಯ್ಯನವರಿಗೆ ಕೊಟ್ಟೂರಿನಲ್ಲಿ ನಡೆದ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ; ಕೇರಳದ ರಾಜಗಿರಿ ಕಾಲೇಜ್‌ ಆಫ್‌ ಸೋಷಿಯಲ್‌ ಸೈನ್ಸ್‌ ಮತ್ತು ಮಂಗಳೂರಿನ ಡಿ.ಪಿ.ಮುಖರ್ಜಿ ಫೆಲೊಶಿಕಪ್‌ ಮುಂತಾದ ಗೌರವಗಳಿಗೆ ಪಾತ್ರರಾಗಿರುವ ಪ್ರೊ. ಮರುಳಸಿದ್ಧಯ್ಯನವರು ಈಗಲೂ ಸಾಮಾಜಿಕ ಕಾರ್ಯಗಳ ಮಾರ್ಗದರ್ಶಕರಾಗಿದ್ದು ಇವರ ಪರಿಚಯದ ಕೃತಿ ‘ಸಮಾಜಕಾರ್ಯದ ಕನಸುಗಾರ ಪ್ರೊ.ಎಂ.ಎಂ. ಮರುಳ ಸಿದ್ಧಯ್ಯ’ ಕೃತಿಯು ೨೦೧೧ ರಲ್ಲಿ ಬಿಡುಗಡೆಯಾಗಿದೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top