ಪ್ರೊ. ಎಚ್.ಎಸ್. ಹರಿಶಂಕರ್

Home/Birthday/ಪ್ರೊ. ಎಚ್.ಎಸ್. ಹರಿಶಂಕರ್
Loading Events
This event has passed.

೦೮.೧೨.೧೯೪೦ ಲೇಖಕರಾಗಿ, ಉತ್ತಮ ಭಾಷಾಂತರಕಾರರಾಗಿ ಅದರಲ್ಲೂ ರಷ್ಯನ್ ಭಾಷೆಯಲ್ಲಿ ಪ್ರಭುತ್ವಸಾಧಿಸಿ, ನೇರವಾಗಿ ರಷ್ಯನ್ ಭಾಷೆಯಿಂದಲೇ ಹಲವಾರು ರಷ್ಯನ್ ಕೃತಿಗಳನ್ನು ಅನುವಾದಿಸಿ ಕನ್ನಡಿಗರಿಗೆ ನೀಡಿರುವ ಹರಿಶಂಕರರು ಹುಟ್ಟಿದ್ದು ಹರಿಹರದಲ್ಲಿ. ತಂದೆ ಪ್ರಸಿದ್ಧ ಸಾಹಿತಿಗಳು, ಶಾರದಾಮಂದಿರದ ಪ್ರಕಾಶಕರೂ ಆದ ಎಚ್.ಎಂ. ಶಂಕರನಾರಾಯಣ ರಾಯರು, ತಾಯಿ ಲಕ್ಷ್ಮೀ ದೇವಮ್ಮ. ಹರಿಹರದಲ್ಲಿ ಪ್ರಾರಂಭಿಕ ಶಿಕ್ಷಣ, ದಾವಣಗೆರೆಯ ಡಿ.ಆರ್.ಎಂ ಕಾಲೇಜಿನಲ್ಲಿ. ಇಂಟರ್‌ಮೀಡಿಯಟ್, ಸೀನಿಯರ್ ಇಂಟರ್‌ಮೀಡಿಯಟ್ ಹಾಗೂ ಪದವಿಗಾಗಿ ಓದಿದ್ದು ಮೈಸೂರಿನ ಯುವರಾಜ ಕಾಲೇಜು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರಷ್ಯನ್ ಭಾಷೆ, ಎಂ.ಎ.ಪದವಿಗಳು ಮತ್ತು ಎಂ.ಫಿಲ್ (ಭಾಷಾಂತರ) ಮೈಸೂರು ವಿಶ್ವವಿದ್ಯಾಲಯ; ಡಿಪ್ಲೊಮ ಇನ್ ರಷ್ಯನ್ (ಮೈಸೂರು ವಿಶ್ವವಿದ್ಯಾಲಯ), ಸರ್ಟಿಫಿಕೇಟ್ ಕೋರ್ಸ್ ಇನ್ ರಷ್ಯನ್- ಮಾಸ್ಕೊ ವಿಶ್ವವಿದ್ಯಾಲಯ, ಹೀಗೆ ರಷ್ಯನ್ ಭಾಷೆಯಲ್ಲಿ ಪಡೆದ ಪ್ರಭುತ್ವ. ಸಂಸ್ಕೃತ ಕಾವ್ಯ ಓದಿದ್ದು ಮೈಸೂರು ಸರಕಾರದ ಶಿಕ್ಷಣ ಇಲಾಖೆಯಿಂದ. ಎಂ.ಎ ಪದವಿಯ ನಂತರ ಅಧ್ಯಾಪಕರಾಗಿ ಸೇರಿದ್ದು ಹಾರ್ಡ್ವಿಕ್ ಹೈಸ್ಕೂಲಿನಲ್ಲಿ ಕೆಲಕಾಲ.ನಂತರ ೧೯೬೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಭಾಷಾಂತರಕಾರರಾಗಿ, ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ನಿವೃತ್ತಿ. ನಾಲ್ಕು ಮಂದಿ ಪಿಎಚ್.ಡಿ ಹಾಗೂ ೫ ಮಂದಿ ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು. ಸಂಶೋಧನ ವಿದ್ಯಾರ್ಥಿಯಾಗಿ ಕೆಲಸಮಾಡುತ್ತಿದ್ದಾಗ ರಷ್ಯನ್ ಭಾಷೆಯನ್ನು ಕಲಿಯಲು ಅವಕಾಶ. ರಷ್ಯನ್ ಭಾಷೆ ಕಲಿತು ಗೌರವ ಅಧ್ಯಾಪಕರಾಗಿ ರಷ್ಯನ್ ಭಾಷೆಯ ಬೋಧನೆ, ಮಾಸ್ಕೊದಲ್ಲಿ ನಡೆಯುವ ರಷ್ಯನ್ ಭಾಷಾ ಸಮ್ಮೇಳನದಲ್ಲಿ ಭಾಗಿ, ನಂತರ ಮಾಸ್ಕೊದಲ್ಲಿ ಎರಡು ವರ್ಷಕಾಲ ‘ರಾದುಗಾ’ (ಕಾಮನಬಿಲ್ಲು) ಪ್ರಕಟಣಾ ಸಂಸ್ಥೆಯಲ್ಲಿ ಕನ್ನಡ ಅನುವಾದಕರಾಗಿ ನಿರ್ವಹಿಸಿದ ಹುದ್ದೆ. ಹಲವಾರು ರಷ್ಯನ್ ಗ್ರಂಥಗಳ, ಮಕ್ಕಳ ಪುಸ್ತಕಗಳ ಕನ್ನಡ ಅನುವಾದ, ಇದೇ ಸಂದರ್ಭದಲ್ಲಿ ಮಾಸ್ಕೊ ರೇಡಿಯೋ ಕನ್ನಡ ವಿಭಾಗದಲ್ಲಿ ವಹಿಸಿಕೊಂಡ ಹೆಚ್ಚುವರಿ ಕೆಲಸ. ಪ್ರತಿದಿನವೂ ವಾರ್ತೆಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿ ಮಾಸ್ಕೊ ರೇಡಿಯೋ ಕೇಂದ್ರದಿಂದ ಪ್ರಸಾರ. ಹೀಗೆ ಹಲವಾರು ಬಾರಿ ರಷ್ಯನ್ ಹಾಗೂ ಕನ್ನಡ ಭಾಷೆಯ ಸೇತುವೆಯಾಗಿ ದುಡಿಯಲು ಭಾಷಾಂತರ ಕಾರ್ಯದಲ್ಲಿ ವಹಿಸಿಕೊಂಡ ಜವಾಬ್ದಾರಿಗಳು. ರಷ್ಯನ್ ಭಾಷೆಯ ಮೇಲಿನ ಪ್ರೌಢಿಮೆಯಿಂದ ಮೂಲದಿಂದಲೇ ಕನ್ನಡಕ್ಕೆ ಹಲವಾರು ಕೃತಿಗಳ ಅನುವಾದ. ಅವುಗಳಲ್ಲಿ ಚೆಕಾಫನ ಕಥೆಗಳು, ಕಜಾಕರು, ನರಿ ಮತ್ತು ಮೊಲ, ಷಿಲ್ತೂಹಿನ್, ಒಂದು-ಎರಡು-ಮೂರು, ಮಾನವ ಹೇಗೆ ಬಲಶಾಲಿಯಾದ, ಹಾರುವ ಕಂಬಳಿಹುಳು, ಋಷಿ ಮತ್ತು ಗುಲಾಬಿ, ಕವಿ ಜಿರೇನ್‌ಷೆ ಮತ್ತು ಸುಂದರಿ ಕರಾಪಷ್ ಮುಂತಾದ ೧೫ ಕ್ಕೂ ಹೆಚ್ಚು ಕೃತಿಗಳನ್ನು ಅನುವಾದಿಸಿದ್ದಾರೆ. ಇವರ ಇತರ ಸ್ವತಂತ್ರ ಕೃತಿಗಳೆಂದರೆ ಸುಂದರ ಮಾಸ್ಕೊ ಮತ್ತು ಸುಂದರ ರಷಿಯಾ (ಪ್ರವಾಸ ಕಥನ), ತಿರುಮಲಾರ್ಯ ಮತ್ತು ಸಿಂಗರಾರ್ಯ (ವಿಮರ್ಶೆ), ಸಿಂದಬಾದ್ ನಾವಿಕ ಮತ್ತು ಮೀನುಗಾರ ಖಲೀಫ (ಮಕ್ಕಳ ಕಥೆಗಳು), ಚಿಕ್ಕದೇವರಾಜ ಸಪ್ತಪದಿ, ಸರ್ವಜ್ಞನ ವಚನಗಳು (ಸಂಗ್ರಹ), ಆಧುನಿಕ ಯೂರೋಪಿನ ಇತಿಹಾಸ (ಭಾಗ ೧,೨) ಮತ್ತು ಮೈಸೂರು ಒಡೆಯರ ಕಾಲದ ಸಾಹಿತ್ಯ ಮುಂತಾದ ೧೫ಕ್ಕೂ ಹೆಚ್ಚು ಕೃತಿಗಳು. ಇಂಗ್ಲಿಷಿನಿಂದ ಅನುವಾದಿಸಿದ ಕೃತಿಗಳೆಂದರೆ ಸಾಮ್ರಾಜ್ಯಕ್ಕಾಗಿ ಹೋರಾಟ, ದೆಹಲಿ ಸುಲ್ತಾನರ ಆಧಿಪತ್ಯ, ಮುಘಲ್ ಸಾಮ್ರಾಜ್ಯ ದೆಹಲಿ ಸುಲ್ತಾನರ ಆಧಿಪತ್ಯ (ಭಾಗ ೨) ಮುಂತಾದ ೧೦ಕ್ಕೂ ಹೆಚ್ಚು ಚಾರಿತ್ರಿಕ ಗ್ರಂಥಗಳು ಹಲವಾರು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಗೋಷ್ಠಿ ಮತ್ತು ಸಮ್ಮೇಳನಗಳಲ್ಲಿ ಭಾಗಿ ಹಾಗೂ ಪ್ರಬಂಧ ಮಂಡನೆ, ಬೆಂಗಳೂರಿನ ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಸೈನ್ಸ್, ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ಹೈದರಾಬಾದಿನ ಸಿ.ಐ.ಇ.ಎಫ್.ಎಲ್., ಮಾಸ್ಕೋದ ಪ್ಯಾಟ್ರಿಸ್ ಲುಮುಂಬ ವಿಶ್ವವಿದ್ಯಾನಿಲಯ, ಚಳ್ಳಕೆರೆ, ದಾವಣಗರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳ ಅಧ್ಯಕ್ಷತೆ ಮುಂತಾದ ಸಮ್ಮೇಳನದ ಗೋಷ್ಠಿಗಳಲ್ಲಿ ಭಾಗಿ. ಹಿಂದಿ, ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಸಂಸ್ಕತ, ರಷ್ಯನ್ ಭಾಷೆಗಳ ಮೇಲೆ ಪಡೆದ ಪರಿಣತಿ. ಹಲವಾರು ಅಭಿನಂದನ ಗ್ರಂಥಗಳಿಗೆ ಬರೆದ ಲೇಖನಗಳು. ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನ, ಸೋವಿಯತ್ ಲ್ಯಾಂಡ್-ನೆಹರು ಪ್ರಶಸ್ತಿ, ಮೈಸೂರು ತ್ಯಾಗರಾಜ ಸಂಗೀತ ಸಭಾ, ಹುಣಸೂರು ತಾಲ್ಲೂಕು ಸಾಹಿತ್ಯ ಸಮ್ಮೇಳನ, ಮೈಸೂರು ವಿಭಾಗದ ಕನ್ನಡ ಸಾಹಿತ್ಯ ಪರಿಷತ್ತು ಮುಂತಾದವು  ಗಳಿಂದ ಸನ್ಮಾನಿತರಾದ ಪ್ರೊ. ಹರಿಶಂಕರ್‌ರವರಿಗೆ ಎಪ್ಪತ್ತು ವರ್ಷ ತುಂಬಿದ (೨೦೧೦) ಶುಭಸಂದರ್ಭದಲ್ಲಿ ಹಿತೈಷಿಗಳು, ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಹರಿಚಂದನ’

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top