ಪ್ರೊ. ಎಲ್.ಎಸ್. ಶೇಷಗಿರಿರಾವ್

Home/Birthday/ಪ್ರೊ. ಎಲ್.ಎಸ್. ಶೇಷಗಿರಿರಾವ್
Loading Events
This event has passed.

೧೬-೨-೧೯೨೫ ಹುಟ್ಟಿದ್ದು ಬೆಂಗಳೂರಿನಲ್ಲಿ. ಮೂಲತಃ ಧಾರವಾಡದ ಹತ್ತಿರದ ಲಕ್ಷ್ಮೇಶ್ವರ ದೇಶಪಾಂಡೆ ಮನೆತನದವರು. ತಂದೆ ಲಕ್ಷ್ಮೇಶ್ವರ ಸ್ವಾಮಿರಾವ್, ತಾಯಿ ಕಮಲಾಬಾಯಿ. ತಂದೆ ಶಿಕ್ಷಕರಾಗಿದ್ದು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದವರು. ಸಾಹಿತ್ಯಾಸಕ್ತರು. ಮನೆಗೆ ಬಂದು ಹೋಗುತ್ತಿದ್ದ ಅನೇಕ ಸಾಹಿತಿಗಳ ಪರಿಚಯದಿಂದ ಸ್ವಾಭಾವಿಕವಾಗಿ ಶೇಷಗಿರಿ ರಾಯರಲ್ಲಿ ಬೆಳೆದ ಸಾಹಿತ್ಯಾಸಕ್ತಿ. ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಲ್ಲೇಶ್ವರದ ಶಾಲೆಯಲ್ಲಿ. ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕಗಳಿಸಿ ಎಂಜನಿಯರಿಂಗ್ ಸೀಟು ದೊರೆತರೂ ಸೇರಿದ್ದು ಇಂಟರ್ ಮೀಡಿಯೆಟ್‌ಗೆ. ಇಂಗ್ಲಿಷ್ ಆನರ್ಸ್ ಓದಿದ್ದು ಸೆಂಟ್ರಲ್ ಕಾಲೇಜಿನಲ್ಲಿ. ಬಿ.ಎಂ.ಶ್ರೀ.ಯವರ ಕಡೆತಂಡದ ವಿದ್ಯಾರ್ಥಿ. ಮೊದಲ ದರ್ಜೆಯಲ್ಲಿ ಪಾಸು ಮಾಡಿ ಚಿನ್ನದ ಪದಕ. ನಾಗಪುರ ವಿಶ್ವವಿದ್ಯಾಲಯದಿಂದ ಬಾಹ್ಯ ವಿದ್ಯಾರ್ಥಿಯಾಗಿ ಪಡೆದ ಎಂ.ಎ. ಪದವಿ. ಹತ್ತೊಂಬತ್ತರ ಹರೆಯದಲ್ಲೇ ಇಂಟರ್ ಮೀಡಿಯೆಟ್ ಕಾಲೇಜಿನ ಅಧ್ಯಾಪಕರ ಹುದ್ದೆ. ಕೋಲಾರ, ದಾವಣಗೆರೆ, ಮಡಿಕೇರಿ, ಬೆಂಗಳೂರು ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ. ಹಲವಾರು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಹಂಪಿ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಆರ್. ಗುಂಡೂರಾಯರ  ಪತ್ರಿಕಾ ಕಾರ‍್ಯದರ್ಶಿಯಾಗಿ, ಪುಸ್ತಕ ಪ್ರಾಕಾರದ ಪ್ರಥಮಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ‍್ಯದರ್ಶಿಯಾಗಿಯೂ ದುಡಿದಿದ್ದಾರೆ. ಉತ್ತಮ ವಿಮರ್ಶಕರು. ಕಾದಂಬರಿ-ಸಾಮಾನ್ಯ ಮನುಷ್ಯ, ಆಲಿವರ್ ಗೋಲ್ಡ್‌ಸ್ಮಿತ್, ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ, ಪಾಶ್ಚಾತ್ಯ ಸಾಹಿತ್ಯ ವಿಹಾರ, ಸಾಹಿತ್ಯ ವಿಶ್ಲೇಷಣೆ, ಇಂಗ್ಲಿಷ್ ಸಾಹಿತ್ಯ ಚರಿತ್ರೆ ಮುಂತಾದ ವಿಮರ್ಶಾ ಕೃತಿಗಳು. ಇದು ಜೀವನ, ಜಗದ ಜಾತ್ರೆಯಲ್ಲಿ, ಮುಟ್ಟಿದ ಗುರಿ ಮತ್ತು ಇತರ ಕಥೆಗಳು, ಮುಯ್ಯಿ-ಕಥಾಸಂಕಲನಗಳು. ಸಾರ್ಥಕ ಸುಬೋಧ, ಎಂ.ವಿಶ್ವೇಶ್ವರಯ್ಯ-ಜೀವನ ಚರಿತ್ರೆಗಳು. ಹಲವಾರು ಸಂಪಾದಿತ ಕೃತಿಗಳು. ರಾಷ್ಟ್ರೋತ್ಥಾನ ಪರಿಷತ್ತಿನ ಭಾರತ-ಭಾರತಿ ಪುಸ್ತಕ ಸಂಪದಕ್ಕಾಗಿ ೫೦೦ ಪುಸ್ತಿಕೆಗಳು. ಹಂಪಿ ವಿಶ್ವವಿದ್ಯಾಲಯದ ‘ಕಿರಿಯರ ಕರ್ನಾಟಕ’, ಇಂಗ್ಲಿಷ್-ಕನ್ನಡ, ಕನ್ನಡ ಕನ್ನಡ-ನಿಘಂಟು. ಸಪ್ನ ಪ್ರಕಾಶನ ಸಂಸ್ಥೆಗಾಗಿ ಹಲವಾರು ಕೃತಿಗಳು. ಸಂದ ಪ್ರಶಸ್ತಿಗಳು-ಮೈಸೂರು ಸರ್ಕಾರದ ದೇವರಾಜ ಬಹದ್ದೂರ್ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡಮಿ, ಸಾಹಿತ್ಯ ಪರಿಷತ್ತಿನ ವಜ್ರ ಮಹೋತ್ಸವ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಬಿ.ಎಂ.ಶ್ರೀ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ೨೦೦೭ರಲ್ಲಿ ಉಡುಪಿಯಲ್ಲಿ ನಡೆದ ೭೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು. ೧೯೯೧ರಲ್ಲಿ ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಸೌಜನ್ಯ’.   ಇದೇ ದಿನ ಹುಟ್ಟಿದ ಸಾಹಿತಿ : ಸೋಮಶೇಖರ ಗೌಡ – ೧೯೪೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top