Loading Events

« All Events

ಪ್ರೊ. ಎಸ್. ಆರ್. ಮಳಗಿ

July 8

..೧೯೧೦ ಕನ್ನಡ ಸಾರಸ್ವತ ಲೋಕದಲ್ಲಿ ವಿಮರ್ಶಕ, ಭಾಷಾಶಾಸ್ತ್ರಜ್ಞ, ಛಂದಸ್‌ಶಾಸ್ತ್ರಕಾರ, ಅನುವಾದಕ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ಮತ್ತು ಪಾಂಡಿತ್ಯದಿಂದ ಸಾಹಿತ್ಯಪ್ರಿಯರಿಗೆ ಚಿರಪರಿಚಿತರಾಗಿರುವ ಸೇತುರಾಮ ರಾಘವೇಂದ್ರ ಮಳಗಿಯವರು ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖ್ಯಾಡ ಎಂಬ ಹಳ್ಳಿಯಲ್ಲಿ. ೧೯೧೦ರ ಜುಲೈ ೮ರಂದು. ಮುಂಬಯಿ ವಿಶ್ವವಿದ್ಯಾಲಯದಿಂದ ಪದವಿ, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಟಿ. ಪದವಿಗಳನ್ನು ಪಡೆದ ನಂತರ ೧೯೩೮-೪೨ ರವರೆಗೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್‌ ಪ್ರೌಢಶಾಲೆಯ ಅಧ್ಯಾಪಕರಾಗಿ, ೧೯೪೨-೬೧ ರವರೆಗೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ರೀಡರಾಗಿ, ೧೯೬೧-೬೯ ರವರೆಗೆ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ರೀಡರಾಗಿದ್ದು ನಿವೃತ್ತರು. ನಿವೃತ್ತಿಯ ನಂತರವು ೧೯೭೧ರಲ್ಲಿ ಸಾಗರದ ಲಾಲ್‌ ಬಹದ್ದೂರ್ ಕಾಲೇಜಿನ ಪ್ರಾಂಶುಪಾಲರಾಗಿ, ೧೯೭೨-೭೩ ರಲ್ಲಿ ಸೇಂಟ್‌ ಜಾನ್‌ ಜ್ಯೂನಿಯರ್ ಕಾಲೇಜಿನ ಪ್ರಾಧ್ಯಾಪಕರಾಗಿ, ೧೯೭೫-೭೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಯು.ಜಿ.ಸಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಾಚೀನ, ನಡುಗನ್ನಡದಿಂದ ಹೊಸಗನ್ನಡದವರೆಗೆ ಸುಮರು ೩೦-೪೦ ಕೃತಿಗಳನ್ನೂ ರಚಿಸಿದ್ದು ಇವುಗಳಲ್ಲಿ ಹಲವು ಸಂಪಾದಿತ ಕೃತಿಗಳೂ ಸೇರಿವೆ. ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಅಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ನೂರಾರು ಪ್ರಬಂಧಗಳು, ವ್ಯಕ್ತಿಚಿತ್ರಗಳು, ಪಠ್ಯಗಳನ್ನು ರಚಿಸಿದ್ದಾರೆ. ಹಲವಾರು ಭಾಷಣಗಳು, ಚಿಂತನ ಕಾರ್ಯಕ್ರಮಗಳು ಮುಂಬಯಿ, ಧಾರವಾಡ, ಬೆಂಗಳೂರು ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ದ.ರಾ.ಬೇಂದ್ರೆಯವರ ಶಿಷ್ಯನೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಳಗಿಯವರೂ ಬೇಂದ್ರೆಯವರಂತೆ ಮಹರ್ಷಿ ಅರವಿಂದರ ತತ್ತ್ವಗಳ ಪರಿಪಾಲಕರೆ. ೧೯೭೧ರಿಂದಲೂ ಸುಮಾರು ೨೫ ವರ್ಷಗಳ ಕಾಲ ಮಹರ್ಷಿ ಅರವಿಂದ ಸೊಸೈಟಿಯ ಇಂಗ್ಲಿಷ್‌ ಪತ್ರಿಕೆಯಾದ ‘ಆಲ್‌ ಇಂಡಿಯಾ ಮ್ಯಾಗಝಿನ್‌’ನ ಕನ್ನಡ ಅವತರಣಿಕೆ’ ಅಖಿಲ ಭಾರತ ಪತ್ರಿಕೆಯ’ ಸಂಪಾದಕರಾಗಿದ್ದರು. ಬ್ರಹ್ಮರ್ಷಿ ದೈವರಾತರವರ ವೈದಿಕ ಸಂಸ್ಕೃತದ ಛಂದೋದರ್ಶನವನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದು ೧೯೬೮ರಲ್ಲಿ ಭಾರತೀಯ ವಿದ್ಯಾಭವನವು ಪ್ರಕಟಿಸಿದೆ. ಬೆಂಗಳೂರು ವಿ.ವಿ.ದ ಅಂಚೆ ತೆರಪಿನ ಕನ್ನಡ ಎಂ.ಎ. ತರಗತಿಗಳ ಅಧ್ಯಯನಕ್ಕಾಗಿ ಸಾಹಿತ್ಯವಿಮರ್ಶೆ, ವ್ಯಾಕರಣ , ಛಂದಸ್‌ಶಾಸ್ತ್ರ, ಕಾವ್ಯಮೀಮಾಂಸೆ, ಭಾಷಾಶಾಸ್ತ್ರ, ಗ್ರಂಥ ಸಂಪಾದನ ಶಾಸ್ತ್ರ ಮುಂತಾದ ಪಠ್ಯ ಪುಸ್ತಕಗಳನ್ನೂ ರಚಿಸಿದ್ದಾರೆ. ವಿಮರ್ಶಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಳಗಿಯವರು ಇತ್ತೀಚಿನ ಕೃತಿಗಳೆಮದರೆ ‘ಚಿಂತನ-ಮಂಥನ’ ವಿಮರ್ಶಾ ಲೇಖನಗಳ ಸಂಗ್ರಹ ಹಾಗೂ ‘ಬಾಳದಾರಿಯಲಿ…’ ಕವಿತೆಗಳ ಸಂಗ್ರಹಗಳು. ಇವರ ಇತರ ಕೃತಿಗಳೆಂದರೆ ಬಿಡುಗಡೆಯ ಬಳ್ಳಿ, ವಾಕ್ಯಮಾಣಿಕ್ಯಕೋಶ, ಹರಿಶ್ಚಂದ್ರಕಾವ್ಯಕಥೆ, ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ, ಭೃಂಗನಾದ, ಶಬ್ದಮಣಿದರ್ಪಣ ಸಂಗ್ರಹ,ಇಮ್ಮಾವು, ಗಾಳಿಪಟ, ದೇವಕನ್ಯೆ, ಕವಿಕಾವ್ಯದರ್ಶನ, ಬಾಳನಂದನ, ನುಡಿಸೋದರ, ಮುಂತಾದ ಕೃತಿಗಳು ಪ್ರಕಟಗೊಂಡಿವೆ. ಧಾರವಾಡದ ಅಖಿಲ ಕರ್ನಾಟಕ ವರ್ಥಪ್ರೈಜ್ (೧೯೩೨), ದ.ರಾ. ಬೇಂದ್ರೆ ಹುಟ್ಟು ಹಬ್ಬದ ಪ್ರಶಸ್ತಿ, ಬಿ.ಎಂ.ಶ್ರೀ. ಪ್ರತಿಷ್ಠಾನ ರಜತೋತ್ಸವ ಪ್ರಶಸ್ತಿ, ದ.ಕ. ಜಿಲ್ಲಾ ಮಂಗಳೂರು ಸಾಹಿತ್ಯ ಪರಿಷತ್ತಿನಿಂದ ಸನ್ಮಾನ, ಅರವಿಂದೊ ಸೊಸಯಟಿ ಡಿವೈನ್‌ ಕ್ರಾಸ್‌ ಆಫ್‌ ದಿ ಮದರ್ ಪ್ರಶಸ್ತಿ, ರಾಜಾಜಿನಗರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಕನ್ನಡ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿವೆ.

Details

Date:
July 8
Event Category: