ಪ್ರೊ. ಎಸ್.ಕೆ. ರಾಮಚಂದ್ರರಾವ್

Home/Birthday/ಪ್ರೊ. ಎಸ್.ಕೆ. ರಾಮಚಂದ್ರರಾವ್
Loading Events
This event has passed.

೦೯..೧೯೨೭ ೦೨..೨೦೦೬ ಬಹುಭಾಷಾ ವಿದ್ವಾಂಸರು, ಸಂಗೀತಜ್ಞರು, ಕಲಾ ತಜ್ಞರು, ದಾರ್ಶನಿಕರೂ ಆಗಿದ್ದ ಸಾಲಿಗ್ರಾಮ ಕೃಷ್ಣರಾವ್‌ ರಾಮಚಂದ್ರರಾವ್‌ ರವರು ಹುಟ್ಟಿದ್ದು ಹಾಸನದಲ್ಲಿ. ತಂದೆ ಕೃಷ್ಣರಾವ್‌, ತಾಯಿ ಕಮಲಾಬಾಯಿ, ಪ್ರಾರಂಭಿಕ ಶಿಕ್ಷಣ ಬೆಂಗಳೂರು, ಹೈಸ್ಕೂಲಿಗೆ ಸೇರಿದ್ದು ನಂಜನಗೂಡಿನಲ್ಲಿ. ಕಾಲೇಜು ಶಿಕ್ಷಣ ಮೈಸೂರಿನ ಯುವರಾಜ ಕಾಲೇಜು ಹಾಗೂ ಮಹಾರಾಜ ಕಾಲೇಜುಗಳಲ್ಲಿ. ೧೯೪೭ರಲ್ಲಿ ಮನಃಶಾಸ್ತ್ರದಲ್ಲಿ ಎಂ.ಎ. ಪದವಿ. ವೈದಿಕ ಮನತನಸ್ಥರಾದ ರಾಮಚಂದ್ರರಾಯರು ಸಂಸ್ಕೃತ ಕಲಿತದ್ದು ತಂದೆಯಿಂದ. ಕಾಲೇಜಿನಲ್ಲಿ ಕಲಿತದ್ದಕ್ಕಿಂತ ಹೊರಗೆ ಕಲಿತದ್ದೇ ಹೆಚ್ಚು. ನಂಜನಗೂಡಿನ ಕನ್ನಂಬಾಡಿ ನಾರಾಯಣ ಶಾಸ್ತ್ರಿಗಳಿಂದ ಸಂಸ್ಕೃತ ಕಾವ್ಯ-ನಾಟಕಗಳು, ಉತ್ತರಾಧಿಮಠದ ದಿವಾನರಾಗಿದ್ದ ಅಗ್ನಿಹೋತ್ರಿ ಯಜ್ಞ ವಿಠಲಾಚಾರ್ಯರಿಂದ ತರ್ಕಶಾಸ್ತ್ರ, ಬೆಂಗಳೂರಿನ ಕೇಶವ ಶಿವಘನಪಾಠಿಗಳಲ್ಲಿ ಯಜುರ್ವೇದ, ನಂಜನಗೂಡಿನ ವೆಂಕಟೇಶ ಸೋಮಯಾಜಿಗಳಿಂದ ಪೂರ್ವ ಮೀಮಾಂಸೆ, ತಲಕಾಡು ಕೃಷ್ಣ ದೀಕ್ಷಿತರ ಮೂಲಕ ಶೈವ-ಶಾಕ್ತ-ಆಗಮಗಳ ಪಾಠ, ಶ್ರೀನಿವಾಸಭಟ್ಟಾಚಾರ್ಯರಿಂದ ವೈಖಾನಸ ಆಗಮ-ಹೀಗೆ ಕಲಿತದ್ದು ಹಲವಾರು ಶಾಸ್ತ್ರಾಭ್ಯಾಸಗಳು. ಮೈಸೂರು ವಿಶ್ವವಿದ್ಯಾಲಯದಲ್ಲಿದ್ದ ಪ್ರೊ. ಎಂ. ಹಿರಿಯಣ್ಣ ಹಾಗೂ ಲಕ್ಷ್ಮೀಪುರಂ ಶ್ರೀನಿವಾಸಚಾರ್ಯರು ಇವರ ನಿಕಟವರ್ತಿಗಳು. ರಾಳ್ಲಪಲ್ಲಿ ಅನಂತಕೃಷ್ಣಶರ್ಮ (ಮೈಸೂರಿನ ಮಹಾರಾಜ ಕಾಲೇಜಿನ ಅಧ್ಯಾಪಕರು) ರಿಂದ ಸಂಗೀತ, ಕೆ. ವೆಂಕಟಪ್ಪನವರಿಂದ ಚಿತ್ರಕಲೆ ಅಭ್ಯಾಸ ಮಾಡಿದರು. ಜೊತೆಗೆ ಬೌದ್ಧ, ಜೈನಧರ್ಮಗಳ ವಿಚಾರಗಳೂ ಇವರಿಗೆ ಅತ್ಯಂತ ಪ್ರಿಯವಾಗಿದ್ದು, ಬೌದ್ಧ ಧರ್ಮದ ಬಗ್ಗೆ ಜಿ.ಪಿ. ರಾಜರತ್ನಂ ರವರು ಮಾರ್ಗದರ್ಶಕರಾಗಿದ್ದರು. ಬಹುಮುಖ ಪ್ರತಿಭೆಯ ರಾಮಚಂದ್ರರಾಯರು ಉದ್ಯೋಗಕ್ಕೆ ಸೇರಿದ್ದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಶೋಧನ ಸಹಾಯಕರಾಗಿ (೧೯೪೯-೫೪). ನಂತರ ೧೯೫೪ರಲ್ಲಿ ಮಾನಸಿಕ ಆರೋಗ್ಯ ಸಂಸ್ಥೆ (ಈಗ NIMHANS) ಸೇರಿ ಕ್ಲಿನಿಕಲ್‌ ಸೈಕಾಲಜಿಯ ಮುಖ್ಯಸ್ಥರಾದರು. ಆದರೆ ಆರೋಗ್ಯ ಸಂಸ್ಥೆಯಲ್ಲಿ ವೈದ್ಯರಾಗಿರುವವರೇ ಅದರ ಮುಖ್ಯಸ್ಥರಾಗಿರಬೇಕೆಂಬ ಕಾನೂನನ್ನು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದಾಗ, ಸರಿಸಮಾನವಾದ ಹುದ್ದೆ ನೀಡುತ್ತೇವೆಂದು ಕೇಂದ್ರ ಸರಕಾರ ಆಶ್ವಾಸನೆ ನೀಡಿದರೂ ಒಪ್ಪದೆ, ಆದರ್ಶಕ್ಕೆ ಕಟ್ಟುಬಿದ್ದು ರಾಜೀನಾಮೆ ನೀಡಿದರು. ೧೯೬೫-೬೯ರವರೆಗೆ ಆರ್.ವಿ. ಟೀಚರ್ ಕಾಲೇಜು ಮತ್ತು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ಗಳಲ್ಲಿ ಕೆಲಕಾಲ ಮನಃಶಾಸ್ತ್ರವನ್ನು ಬೋಧಿಸಿದರು. ಇದೇ ಅವಧಿಯಲ್ಲಿ ಕಾಲೇಜ್‌ ಆಫ್‌ ಓರಿಯಂಟಲ್‌ ಸ್ಟಡೀಸ್‌ ಮುಖ್ಯಸ್ಥರಾಗಿ, ನಿರ್ದೇಶಕರಾಗಿಯೂ ದುಡಿದರು. ಇವರ ಸೇವೆಯನ್ನು ಬಯಸದ ಸಂಸ್ಥೆಗಳೇ ಇಲ್ಲವೆನ್ನಬಹುದು. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ಭಾರತೀಯ ವಿಜ್ಞಾನ ಮಂದಿರದಲ್ಲಿ ದರ್ಶನ ಶಾಸ್ತ್ರ ಬೋಧನೆ, ಮೈಸೂರು ವಿ.ವಿ.ದಲ್ಲಿ ವೇದಾಂತ ಬೋಧನೆ, ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶ ಯೋಜನೆ, ಎಂ.ಇ.ಎಸ್‌. ಹಾಗೂ ಎನ್‌.ಎಂ.ಕೆ. ಆರ್‌.ವಿ. ಕಾಲೇಜುಗಳು, ವಿವಿಧ ವಿಶ್ವವಿದ್ಯಾಲಯದ ಪರೀಕ್ಷಕರಾಗಿ – ಹೀಗೆ ಹಲವಾರು ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳ ಸಂದರ್ಶಕ ಪ್ರಾಧ್ಯಾಪಕರಾಗಿಯೂ ದುಡಿದರು. ವಯಸ್ಸಾದ ಕಾಲದಲ್ಲಿಯೂ ಪಾಠ ಪ್ರವಚನಗಳನ್ನು ನಿಲ್ಲಿಸದೆ ಮನೆಯಲ್ಲಿಯೇ ತರಗತಿಗಳನ್ನು ನಡೆಸುತ್ತಿದ್ದರು. ವಾಗ್ಮಿಯಾಗಿ, ಲೇಖಕರಾಗಿದ್ದ ರಾಮಚಂದ್ರರಾಯರಿಗೆ ಸಂಗೀತದಲ್ಲೂ ವಿಶೇಷ ಒಲವಿದ್ದು ಸ್ವತಃ ವೀಣಾ ವಾದಕರಾಗಿದ್ದು ಪ್ರಯೋಗಾತ್ಮಕ ಕಾರ್ಯಕ್ರಮಗಳಲ್ಲಿ ನೆರವು ನೀಡಿದರು. ಸಂಗೀತದಷ್ಟೆ ನೃತ್ಯ ಕಲೆಯಲ್ಲೂ ಅಪಾರ ಆಸಕ್ತಿ ಇದ್ದು ಆಳವಾದ ಅಭ್ಯಾಸ ನಡೆಸಿದ್ದರು. ಚಿತ್ರ-ಶಿಲ್ಪ ಕಲೆಗಳಲ್ಲೂ ಆಸಕ್ತರಾಗಿದ್ದು ಪ್ಲಾಸ್ಟರ್ ಆಫ್‌ ಪ್ಯಾರಿಸ್‌, ಟೆರಾಕೋಟಾ, ಜೇನುಮೇಣ, ಪಲ್ಪ್‌ ಮುಂತಾದವುಗಳಿಂದ ಶ್ರೀ  ಚಂದ್ರಶೇಖರ ಭಾರತೀ ಸ್ವಾಮಿಗಳು, ವೀಣೆ ಶೇಷಣ್ಣ, ರವೀಂದ್ರ ನಾಥ ಠಾಕೂರ್, ಚೆಂಬೈವೈದ್ಯನಾತ ಭಾಗವತರ್, ಮುಸಿರಿ ಸುಬ್ರಹ್ಮಣ್ಯ ಅಯ್ಯರ್ ಮುಂತಾದವರುಗಳ ಎದೆಮಟ್ಟದ ಶಿಲ್ಪಗಳನ್ನು ರಚಿಸಿದ್ದಾರೆ. ಚಿತ್ರಕಲೆಯಲ್ಲಿಯೂ ಆಸಕ್ತರಾಗಿದ್ದು ರೇಖಾಚಿತ್ರ, ಜಲವರ್ಣ, ತೈಲವರ್ಣ, ಬಾಟಿಕ್‌ ಮೊದಲಾದ ಕಲೆಗಳಲ್ಲಿ ಚಿತ್ರರಚಿಸಿದ್ದು ಹಲವಾರು ಬಾರಿ ಏಕವ್ಯಕ್ತಿ ಪ್ರದರ್ಶನಗಳನ್ನೂ ನಡೆಸಿದ್ದಾರೆ. ಪಾಲಿ, ಅರ್ಧಮಾಗಧಿ, ಅಪಭ್ರಂಶ, ಸಂಸ್ಕೃತ, ಪ್ರಾಕೃತ, ಗ್ರೀಕ್‌, ಲ್ಯಾಟಿನ್‌, ಜರ್ಮನ್‌, ಫ್ರೆಂಚ್‌, ಕನ್ನಡ, ತೆಲುಗು, ತಮಿಳು, ಬಂಗಾಳಿ, ಮರಾಠಿ, ಇಂಗ್ಲಿಷ್‌ ಭಾಷೆಗಳಲ್ಲಿ ಪ್ರೌಢಿಮೆ ಹೊಂದಿದ್ದು ಲೇಖಕರಾಗಿ ರಚಿಸಿರುವ ಕೃತಿಗಳ ಪಟ್ಟಿಯೂ ಬಹು ದೊಡ್ಡದೇ. ಕನ್ನಡಕ್ಕಿಂತ ಇಂಗ್ಲಿಷ್‌ನಲ್ಲಿ ಬರೆದಿರುವ ಕೃತಿಗಳೇ ಹೆಚ್ಚು. ಸಂಸ್ಕೃತ ಹಾಗೂ ಪಾಳಿ ಭಾಷೆಯಲ್ಲೂ ಗ್ರಂಥ ರಚಿಸಿದ್ದಾರೆ. ‘ಪೌರವ ದಿಗ್ವಿಜಯಂ’ (ಗ್ರೀಕ್‌ ವೀರ ಅಲೆಗ್ಸಾಂಡರನೊಂದಿಗೆ ಹೋರಾಡಿದ ಸ್ವಾತಂತ್ರ್ಯ ಪ್ರೇಮಿ ಪೌರವ-ಪೋರಸ್‌ನ ಕಥೆ) ಸಂಸ್ಕೃತ ನಾಟಕ. ‘ಸುಮಂಗಲ ಗಾಥಾ’ ಪಾಳಿ ಭಾಷೆಯ ಕಾವ್ಯ ಮತ್ತು ‘ವಿಸುದ್ಧ ಮಗ್ಗ ವಿಭಾವನೀ’ ಇದು ಪಾಳಿ ಭಾಷೆಯ ಠೀಕಾಗ್ರಂಥ. ಸಣ್ಣಕಥೆ, ಕಾದಂಬರಿ, ಜೀವನಚರಿತ್ರೆ, ಮನಃಶಾಸ್ತ್ರ, ಸಮಾಜ ಶಾಸ್ತ್ರ, ದೇವಾಲಯಗಳ ಇತಿಹಾಸ, ಶಿಲ್ಪಶಾಸ್ತ್ರ, ಆಯುರ್ವೇದ, ಲಲಿತಕಲೆ, ವೇದಾಂತ ಆಗಮ ಕೋಶಗಳು, ತತ್ತ್ವಮೀಮಾಂಸ ಕೃತಿಗಳು, ವೇದವೇದಾಂಗ ದರ್ಶನಗಳು-ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ಕೃತಿ ರಚಿಸಿದ್ದಾರೆ.  ಗೀತೆಯನ್ನು ಕುರಿತು ‘ಗೀತೆಗೊಂದು ಕೈಪಿಡಿ’, ತಿರುಪತಿ ತಿಮ್ಮಪ್ಪನನ್ನು ಕಲಿತು ‘ತಿರುಪತಿ ತಿಮ್ಮಪ್ಪ’ (ದಿ ಹಿಲ್‌ಶ್ರೈನ್‌ ಆಫ್‌ ವೇಂಗಡಂ), ತಂದೆಯಿಂದ ವೈದ್ಯಶಾಸ್ತ್ರ ಕುರಿತು ರಚಿಸಿದ ಆಯುರ್ವೇದ ಕೃತಿ ‘ಆಯುರ್ವೇದದಲ್ಲಿ ನಾಡಿವಿಜ್ಞಾನ’, ಮನಃಶಾಸ್ತ್ರ ಕುರಿತಂತೆ ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ಹಲವಾರು ಕೃತಿಗಳು, ಎರಡು ಸಂಪುಟಗಳಲ್ಲಿ ಸಂಸ್ಕೃತ ಕವಿ ಚರಿತ್ರೆ, ನಗುವಿನ ಬಗೆಗೆ ಮನಃ ಶಾಸ್ತ್ರೀಯ ಅಧ್ಯಯನದ ‘ನಗೆಯನೆಲೆ’, ಕರ್ನಾಟಕ ಸಂಗೀತಗಾರರಾದ ಹಿರಿಯ ಜೀವಿಗಳ ಕುರಿತ ‘ಹಿರಿಯ ಹೆಜ್ಜೆಗಳು’, ಅದ್ವೈತದಲ್ಲಿ  ಆಸಕ್ತಿತಳೆದು, ಅಧ್ಯಯನಮಾಡಿ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳ ಬದುಕಿನ ‘ಶಾರದಾ ಪೀಠದ ಮಾಣಿಕ್ಯ’, ಕೆ. ವೆಂಕಟಪ್ಪನವರನ್ನು ಕುರಿತು ‘ದಿ ಮ್ಯಾನ್‌ ಅಂಡ್‌ ಹಿಸ್‌ ಆರ್ಟ್’, ಶಿಲ್ಪಿ ಡಿ. ವಾದಿರಾಜ್‌ ಕುರಿತು ‘ದೇವಲ ಕುಂಡ ವಾದಿರಾಜ್‌’ ಮಧ್ವಾಚಾರ್ಯರನ್ನು ಕುರಿತು ‘ಪೂರ್ಣ ಪ್ರಜ್ಞ ಪ್ರಶಸ್ತಿ’, ಸಂಗೀತದ ಗುರುಗಳಾದ ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮರನ್ನೂ ಕುರಿತಾದ ಕೃತಿ ‘ಪುರುಷ ಸರಸ್ವತಿ’, ಜೆನ್‌ದರ್ಶನ ಕೃತಿ ‘ಜೆನ್‌ ಅಂಡ್‌ ಧ್ಯಾನ’, ಪ್ರಜಾವಾಣಿ ಪತ್ರಿಕೆಗೆ ಬರೆದ ಅಂಕಣ ಬರಹ ಸಂಗ್ರಹ ‘ಹಣ ಪ್ರಪಂಚ’, ಸುಧಾ ಪತ್ರಿಕೆಗೆ ದಾಸಯ್ಯ ಎಂಬ ಹೆಸರಿನಿಂದ ಬರೆದ ‘ವಿಚಾರಲಹರಿ’ ಪುರಂದರದಾಸರ ಐದನೆಯ ಶತಮಾನೋತ್ಸವ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಾಗಿ ಸಂಪಾದಿಸಿಕೊಟ್ಟ ‘ಪುರಂದರ ಸಾಹಿತ್ಯ ದರ್ಶನ’ (ನಾಲ್ಕು ಸಂಪುಟಗಳಲ್ಲಿ) – ಹೀಗೆ ಬರೆದ ಪುಸ್ತಕಗಳು ಹಲವಾರು. ಮಕ್ಕಳಿಗಾಗಿ ತ್ಯಾಗರಾಜರು, ಪುರಂದರದಾಸರು, ಕನಕದಾಸರು ಮುಂತಾದ ೧೨ ಕೃತಿಗಳು; ಇಂಗ್ಲಿಷ್‌ನಲ್ಲಿ ೭೭ ಕೃತಿಗಳು ಸೇರಿ ಒಟ್ಟು ೧೭೦ ಕೃತಿಗಳಾದರೆ ಅಡಕಪಟ್ಟಿಗಳ (ಸಿಡಿ) ಸಂಖ್ಯೆಯೇ ಕನ್ನಡದಲ್ಲಿ ಸುಮಾರು ೨೫ ಹಾಗೂ ಇಂಗ್ಲಿಷ್‌ನಲ್ಲಿ ೫. ಮೇರು ಸದೃಶ ಸಾಧನೆಯ ರಾಮಚಂದ್ರರಾಯರಿಗೆ ಬಂದ ಪ್ರಶಸ್ತಿ ಗೌರವಗಳಿಗೂ ಲೆಕ್ಕವಿಲ್ಲ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ೨ ಬಾರಿ; ಶಿಲ್ಪಕಲಾ ಅಕಾಡಮಿ, ಲಲಿತಕಲಾ ಅಕಾಡಮಿ, ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿಗಳು; ರಾಜ್ಯೋತ್ಸವ ಪ್ರಶಸ್ತಿ, ತಿರುಪತಿ ದೇವ ಸ್ಥಾನದಿಂದ ಸನ್ಮಾನ, ಕರ್ನಾಟಕ ಕಲಾಶ್ರೀ, ಶಿಲ್ಪಶ್ರೀ ಕಲಾ ಸನ್ಮಾನ, ಸಂಗೀತ ಕಲಾ ರತ್ನ ಪ್ರಶಸ್ತಿ, ಸಾಹಿತ್ಯಕ್ಕಾಗಿ ಅ.ನ.ಕೃ. ಪ್ರಶಸ್ತಿ, ಸೇಡಿಯಾವು ಪ್ರಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ; ಆಯುರ್ವೇದ ಸಮ್ಮೇಳನದಲ್ಲಿ ಶಾಸ್ತ್ರ ಚೂಡಾಮಣಿ ಪ್ರಶಸ್ತಿ; ಕರ್ನಾಟಕ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ತಿರುಪತಿ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ – ಹೀಗೆ ಹಲವಾರು ಪ್ರಶಸ್ತಿ ಗೌರವಗಳೂ ಬಂದರೂ ಹಿಗ್ಗದ, ಇತರರಿಗೆ ಸಂತೋಷವಾಗಿದೆ ಎಂದರೆ ಕೃತಾರ್ಥ ಎಂದು ಬಗೆದಿದ್ದ ಸುಸಂಸ್ಕೃತ ಹಿರಿಯ ವ್ಯಕ್ತಿಯಿಂದ ಕಲೆ ಸಂಸ್ಕೃತಿಗೆ ತುಂಬಲಾರದ ನಷ್ಟವುಂಟಾದದ್ದು ೨೦೦೬ ರ ಫೆಬ್ರವರಿ ೨ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top