ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ

Home/Birthday/ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ
Loading Events
This event has passed.

೧೨-೦೨-೧೮೯೦ ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮಲ್ಲಿ ಜನಿಸಿದರು. ತಂದೆ ರಾಮಕೃಷ್ಣ ಶಾಸ್ತ್ರಿಗಳು, ತಾಯಿ ವೆಂಕಮ್ಮ. ತಂದೆಯಿಂದಲೇ ಅಕ್ಷರಾಭ್ಯಾಸ, ಬಳುವಳಿಯಾಗಿ ಬಂದ ಸಂಸ್ಕೃತಪಾಠ. ನಂತರ ಮೈಸೂರು ಸಂಸ್ಕೃತ ಪಾಠಶಾಲೆಯಲ್ಲಿ ಕಲಿತದ್ದು ಸಂಸ್ಕೃತ. ಬೆಳೆದದ್ದು, ಓದಿದ್ದು ಮೈಸೂರಿನಲ್ಲಿ. ೧೯೧೩ರಲ್ಲಿ ಬಿ.ಎ. ಪದವಿ. ೧೯೧೫ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಕೆಲಕಾಲ ಅಠಾರಾ ಕಚೇರಿಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸಿ ೧೯೨೬ರಲ್ಲಿ ಅಧ್ಯಾಪಕ ವೃತ್ತಿಗೆ ಬಂದು ನಿವೃತ್ತರಾದರು. ನಂತರವೂ ನ್ಯಾಷನಲ್ ಕಾಲೇಜಿನ ಗೌರವ ಪ್ರಾಧ್ಯಾಪಕರಾಗಿ ಉಚಿತ ಸೇವೆ. ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಇವರು ಪ್ರಾರಂಭಿಸಿದ ಪ್ರಬುದ್ಧ ಕರ್ನಾಟಕ ಪತ್ರಿಕೆಯನ್ನು ೧೩ ವರ್ಷ ಸಂಪಾದಕರಾಗಿ ನಡೆಸಿದರು. ಗದ್ಯ ಸಾಹಿತ್ಯದಲ್ಲಿ ಶಾಸ್ತ್ರಿಗಳದ್ದು ಮಹತ್ತರ ಸಾಧನೆ. ಭಾಸನ ಕೃತಿ ದರ್ಶನವಾದ ‘ಭಾಸಕವಿ’, ಸಂಸ್ಕೃತ ನಾಟಕದ ಹುಟ್ಟು ಬೆಳವಣಿಗೆ ಪರಿಚಯಿಸುವ ‘ಸಂಸ್ಕೃತ ನಾಟಕ’ ಮುಂತಾದ ಅಪೂರ್ವ ಗ್ರಂಥಗಳು. ಶ್ರೀಪತಿಯ ಕಥೆಗಳು ಇವರ ಏಕೈಕ ಕಥಾಸಂಕಲನ. ‘ಕಥಾಮೃತ’ ಕಥಾ ಸರಿತ್ಸಾಗರದ ಸಂಗ್ರಹ ರೂಪ ಮತ್ತು ‘ನಿರ್ಮಲ ಭಾರತಿ’ ಅಥವಾ ‘ಮಕ್ಕಳ ಮಹಾಭಾರತ’-ಇವೆರಡೂ ಮಕ್ಕಳ ಸಾಹಿತ್ಯದ ಪ್ರಮುಖ ಕೃತಿಗಳು. ‘ಬಂಕಿಮ ಚಂದ್ರ’, ‘ಭಾಷಣಗಳು ಮತ್ತು ಲೇಖನಗಳು’ ಮತ್ತೆರಡು ಕೃತಿಗಳು ಪ್ರಕಟಿತ. ಕನ್ನಡದ ಅತ್ಯುತ್ತಮ ಗದ್ಯ ಬರವಣಿಗೆ ‘ವಚನ ಭಾರತ’ ವಯಸ್ಕರ ಶಿಕ್ಷಣ ಸಮಿತಿಗಾಗಿ ಬರೆದುದು. ಕಾರಣಾಂತರದಿಂದ ಪ್ರಕಟಗೊಳ್ಳಲಿಲ್ಲ. ಆದರೆ ಸುಮಾರು ಹನ್ನೊಂದು ಮುದ್ರಣ ಕಂಡಿರುವ ಚಿರಕೃತಿ. ಎ.ಆರ್.ಕೃ. ಎಂದರೆ ವಚನಭಾರತ ಎಂಬಷ್ಟೇ ಪ್ರಖ್ಯಾತಿ ತಂದ ಕೃತಿ. ಮಾತೃಭಾಷೆಗೆ ಮೊದಲ ಸ್ಥಾನ, ದೇಶ ಭಾಷೆ ಎರಡನೆಯದು, ಇಂಗ್ಲಿಷ್ ಮೂರನೆಯದು ಎಂದು ಸಾರಿದ ಧೀಮಂತರು. ನಾಡಿನ ಅನೇಕ ಮಹಾನ್ ವ್ಯಕ್ತಿಗಳಿಗೆ ಗುರುಗಳಾಗಿದ್ದರು. ಕುವೆಂಪು ಇವರ ವಿದ್ಯಾರ್ಥಿಗಳಲ್ಲೊಬ್ಬರು. ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿ, ಪರಿಷತ್ಪತ್ರಿಕೆಯ ಸಂಪಾದಕರ ಕೆಲಸ, ಪರಿಷತ್ತಿನ ನಿಘಂಟು ರಚನಾ ಸಮಿತಿ ಅಧ್ಯಕ್ಷರಾಗಿ, ಸಂಪಾದಕರಾಗಿ ಕಾರ‍್ಯ ನಿರ್ವಹಣೆ. ಸಂದ ಗೌರವಗಳು-ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಹೈದರಾಬಾದಿನಲ್ಲಿ ನಡದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೬೦ರಲ್ಲಿ  ಮೈಸೂರು ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಮುಂತಾದುವು. ನಿಧನರಾದದ್ದು ೧.೨.೧೯೬೮ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೃಷ್ಣಮೂರ್ತಿ ಕಿತ್ತೂರು – ೧೯೨೮ ನಾಗರಾಜ ಪೂವಣಿ – ೧೯೩೮ ನಾ. ಉಜಿರೆ – ೧೯೩೮ ವೈದೇಹಿ – ೧೯೪೫ ಹನುಮಂತಪ್ಪ ಗೋವಿಂದಪ್ಪ ದಡ್ಡಿ – ೧೯೫೧

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top