೧೩-೩-೧೯೪೦ ಪ್ರಾಧ್ಯಾಪಕ, ಕವಿ, ಚಿಂತಕರಾದ ಪ್ರೊ. ಜಿ.ಎಚ್. ಹನ್ನೆರಡು ಮಠರವರು ಹುಟ್ಟಿದ್ದು ಹುಬ್ಬಳ್ಳಿಯ ಹನ್ನೆರಡು ಮಠದಲ್ಲಿ. ತಂದೆ ಹುಚ್ಚಯ್ಯ, ತಾಯಿ ಅನ್ನಪೂರ್ಣಮ್ಮ. ಪ್ರಾಥಮಿಕ, ಮಾಧ್ಯಮಿಕ, ಉಚ್ಚ ಶಿಕ್ಷಣ ಪಡೆದುದು ಹುಬ್ಬಳ್ಳಿಯಲ್ಲಿ. ಶ್ರೀ ಕಾಡ ಸಿದ್ದೇಶ್ವರ ಮಹಾ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪ್ರಥಮ ದರ್ಜೆ. ಅಂದಿನ ಗುರುಗಳು ಶ್ರೀ ಡಿ.ಎಸ್. ಕರ್ಕಿ, ಡಾ. ಎಸ್.ಎಲ್. ಭೈರಪ್ಪ, ಮುಂತಾದವರು. ಡಾ. ಆರ್.ಸಿ. ಹಿರೇಮಠರ ಶಿಷ್ಯತ್ವದಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಮುಖ ವಿಷಯವಾಗಿ ಸ್ನಾತಕೋತ್ತರ ಪದವಿ. ನಂತರ ಉದ್ಯೋಗದ ಬೇಟೆ. ಶ್ರೀ ವಿಜಯ ಮಹಾಂತ ಕಲೆ-ವಿಜ್ಞಾನ-ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ೧೯೬೪ರಿಂದ ಪ್ರಾಧ್ಯಾಪಕರ ಹುದ್ದೆ. ೧೯೮೦ರಿಂದ ಪ್ರಾಚಾರ್ಯರ ಸ್ಥಾನ. ಪೂರ್ಣಾವ ಸಾಹಿತ್ಯ ಸೇವೆಗಾಗಿ ಹುದ್ದೆ ತ್ಯಜಿಸಿ ನಿವೃತ್ತಿ ಬಯಸಿದ್ದು ೧೯೯೮ರಲ್ಲಿ. ಚಿಕ್ಕಂದಿನಿಂದಲೂ ಬರಹದ ಹುಚ್ಚು. ಎಡೆಬಿಡದ ಸಾಹಿತ್ಯ ರಚನೆ. ಉಪನ್ಯಾಸ ಕಾರ್ಯಕ್ರಮಗಳು. ಅಬುಪರ್ವತ, ದಿಲ್ಲಿ, ಮುಂಬೈ, ಮದರಾಸ್, ಕೊಲ್ಕತ, ಗೌಹಟಿ, ಡೆಹರಾಡೂನ್, ಡಾರ್ಜಲಿಂಗ್, ದಿಬ್ರೂಗಡ ಮುಂತಾದ ಕಡೆಗಳಲ್ಲಿ ಸಾಹಿತ್ಯ-ಜೀವನ-ಅಧ್ಯಾತ್ಮ, ಶಿಕ್ಷಣ, ರಾಜಯೋಗ ಕುರಿತು ಉಪನ್ಯಾಸ. ‘ಪರಂಜ್ಯೋತಿ’ ಪತ್ರಿಕೆಗೆ ಸುಮಾರು ೧೧ ವರ್ಷ ಸಂಪಾದಕರ ಹೊಣೆ. ಹುಬ್ಬಳ್ಳಿಯ ಮೂರು ಸಾವಿರ ಮಠ, ಇಳಕಲ್ಲ ಮಠದ ಈಶ್ವರಿ ವಿಶ್ವವಿದ್ಯಾಲಯ ಮುಂತಾದುವುಗಳಲ್ಲಿ ಸಂಪಾದನೆ, ಸಂಘಟನೆ, ಪ್ರಕಟಣಾ ವಿಭಾಗದಲ್ಲಿ ಮಹತ್ವದ ಸೇವೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿರಚನೆ. ಕಾದಂಬರಿ-ಕೂಗಿತ್ತು ಕೂಡಲ ಸಂಗಮ, ಯೋಗಿ ಕಂಡ ಯೌವನ, ಗುರುವೆಂದವರಾರು, ಕಲ್ಯಾಣ ಕೂಗೈತೊ, ದಾಸೋಹ ದೀಪ್ತಿ, ಕೈವಲ್ಯ ಕಾಶ್ಮೀರ ಮುಂತಾದುವು. ಕಾವ್ಯ-ಕಾವ್ಯಕಲಾಪಿ, ಚೈತ್ಯಪಕ್ಷ, ವಾಣಿಶ್ರೀ, ಬಸವ ಕಾವ್ಯ ದರ್ಶನಂ, ಶಿವನ ಕಂಡೆ, ಚಲುವಿ ಚಲುವಿ ಚಂಪಕ್ಕ, ಹೂವು ಕದ್ದಳು ಹುಡುಗಿ ಮೊದಲಾದುವು. ಕಥಾ ಸಂಕಲನ-ಸೀರೆಗೆ ಹುಟ್ಟಿದ ದೇವರ ಕೂಸು, ರಾಜಯೋಗಿಣಿ, ಪೂರ್ಣಜ್ಞ ಗಂಗಾಧರ, ಕರ್ಮಯೋಗಿ ವೀರಚಂದ, ಕನಕಾಂಬರಿಯೊಂದಿಗೆ, ನಂದಿಬೆಟ್ಟದ ನೀಲಿಹುಡುಗಿ ಮೊದಲಾದುವು. ಸಂಪಾದಿತ-ಚಿತ್ಪ್ರಭೆ, ರಜತ ದೀಪ್ತಿ, ಮಹಾಂತ, ವಿಶ್ವಪ್ರಭೆ ಮೂರು ಸಂಪುಟಗಳು, ಭಕ್ತ ವಿಜಯ, ಗಂಗಾಧರ ಲೀಲೆ, ಇದು ನಿಮ್ಮ ಮಠ ಮುಂತಾದುವು. ಧ್ವನಿಸುರುಳಿಗಳು-ಬಾರೆ ನೀರೆ-ತಾರೆ ತಂಗಿ, ಯಲ್ಲಾರ ಯಲ್ಲಮ್ಮ, ಮಹಾಂತೇಶ ಭಕ್ತಿಗೀತೆಗಳು, ಮೂರು ಸಾವಿರ ಮಠ ಭಕ್ತಿಗೀತೆಗಳು, ಪರಂಜ್ಯೋತಿ ಗೀತೆಗಳು ಮೊದಲಾದುವು. ಸಂದ ಪ್ರಶಸ್ತಿ ಗೌರವಗಳು-ಚಿತ್ತರಗಿಯಲ್ಲಿ, ಚಿತ್ತರಗಿ ಗ್ರಂಥಕ್ಕೆ ಅಡ್ಡ ಪಲ್ಲಕ್ಕಿ ಮೆರವಣಿಗೆ, ಕಾಡಿನಲ್ಲಿ ಕೈವಲ್ಯ ಗ್ರಂಥಕ್ಕೆ ಹುಬ್ಬಳ್ಳಿ ಮೂರು ಸಾವಿರ ಮಠ ವಿಶೇಷ ಬಹುಮಾನ, ದಾಸೋಹ ದೀಪ್ತಿಗೆ ಮುರುಘಮಠದ ಬಹುಮಾನ, ಇಳಕಲ್ಲ ವಿಜಯ ಮಹಾಂತೇಶ, ಬೆಳಗಾವಿ ಭಾಲ್ಕಿಮಠ ಮುಂತಾದುವುಗಳಿಂದ ಸನ್ಮಾನ, ವಿಜಾಪುರ ಜಿಲ್ಲಾ ರಾಜ್ಯೋತ್ಸವ ಸನ್ಮಾನ-ಸತ್ಕಾರ. ಇದೀಗಲೂ ಸಾಹಿತ್ಯ ರಚನೆಯಲ್ಲಿ ನಿರಂತರವಾಗಿ ತೊಡಗಿರುವವರು. ಇದೇ ದಿನ ಹುಟ್ಟಿದ ಸಾಹಿತಿಗಳು : ಕೇಶವಶರ್ಮ ಗಲಗಲಿ – ೧೮೯೩ ಮಾತೆ ಮಹಾದೇವಿ – ೧೯೪೯

