೨-೨-೧೯೫೮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಹೆಜ್ಜಾಜಿಯಲ್ಲಿ ಹುಟ್ಟಿದ್ದು. ತಂದೆ ನಾರಾಯಣಸ್ವಾಮಿ, ತಾಯಿ ಲಕ್ಷ್ಮೀದೇವಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ದೊಡ್ಡ ಹೆಜ್ಜಾಜಿ. ಹೈಸ್ಕೂಲಿಗೆ ಸೇರಿದ್ದು ದೊಡ್ಡ ಬೆಳವಂಗಲ. ಕಾಲೇಜು ವಿದ್ಯಾಭ್ಯಾಸ ಬೆಂಗಳೂರು. ಕನ್ನಡ ಎಂ.ಎ. ಪಾಸು ಮಾಡಿದ ನಂತರ ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ. ಈಗ ಕನ್ನಡ ವಿಭಾಗದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಶಾಸನಗಳ ಭಾಷೆ ವಿಷಯದಲ್ಲಿ ಪಿಎಚ್.ಡಿ ಅಧ್ಯಯನ. ಹಲವಾರು ಸಂಘ ಸಂಸ್ಥೆಗಳ ಕಾರ್ಯದರ್ಶಿ. ಬಿ.ಎಂ.ಶ್ರೀ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ. ಹಸ್ತಪ್ರತಿ ಶಾಸ್ತ್ರ ತರಗತಿಯ ಗೌರವ ಅಧ್ಯಾಪಕರು. ಕವಿ, ಸಾಹಿತಿ, ಸಂಶೋಧಕರು. ಹರಿದಾಸ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ. ಕರ್ನಾಟಕ ಸರ್ಕಾರದ ದಾಸ ಸಾಹಿತ್ಯ ಯೋಜನೆಯಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ಪ್ರಕಟಿಸಿರುವ ದಾಸ ಸಾಹಿತ್ಯದ ಕೃತಿಗಳ-ಮಹಿಳಾ ಹರಿದಾಸರ ಕೀರ್ತನೆಗಳಲ್ಲಿ ನಾಡಿಗರ ಶಾಂತಿ ಬಾಯಿಯವರು ಮತ್ತು ವೆಂಕಟದಾಸರು, ಬೇಲೂರು ವೈಕುಂಠದಾಸರು, ಅಸೂರಿ ರಾಮಸ್ವಾಮಿ ದಾಸರು ಮುಂತಾದ ಕೃತಿಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ವಿಶಿಷ್ಟಾದ್ವೈತ ಚರ್ಚೆಗಾಗಿ ಹಲವಾರು ವಿಚಾರ ಸಂಕಿರಣಗಳನ್ನು ನಡೆಸಿದ್ದಾರೆ. ಕಾಣಿಕೆ, ಕನ್ನಡ ಬರುತಿದೆ ದಾರಿಬಿಡಿ, ಮೆಜೆಸ್ಟಿಕ್ನಲ್ಲಿ ಚಂದ್ರ-ಕವನ ಸಂಕಲನಗಳು ; ತುಮಕೂರು ಜಿಲ್ಲೆಯ ಕೀರ್ತನಕಾರರು, ಹಸ್ತಪ್ರತಿ ವಿವೇಚನೆ-ಸಂಶೋಧನಾ ಕೃತಿಗಳು ; ನವರತ್ನ ಮಾಲಿಕೆ, ತಿಮ್ಮಪ್ಪ ದಾಸರ ಕೃತಿಗಳು, ದಾಸ ಸಂಪುಟಗಳು-ಗ್ರಂಥ ಸಂಪಾದನೆ. ತಿರುಪ್ಪಾವೈ, ತಿರುಕ್ಕುರುಳ್-ಅನುವಾದ ; ಮಾಸ್ತಿ ಸ್ಮರಣೆ, ಎಂ.ವಿ.ಸೀ, ವನಸುಮ, ಕಲಾರಾಘವ ಎಂ.ವಿ.ಸೀ. ಸ್ಮರಣೆ, ಗೋಕಾಕರ ನವ್ಯಸೂರ್ತಿ, ಸೋಸಲೆ ಅಯ್ಯಾಶಾಸ್ತ್ರಿ ಸಾಹಿತ್ಯ, ಸಾಹಿತ್ಯೋಪಾಸಕರು, ಕಾರಂತ ಕಿರಣ, ರಜತ ಸಿರಿ ಮುಂತಾದ ಕೃತಿಗಳನ್ನೂ ಸಂಪಾದಿಸಿದ್ದಾರೆ. ಶ್ರೀವೈಷ್ಣವ ಹರಿದಾಸ ಸಾಹಿತ್ಯ ಶೋಧಕ್ಕಾಗಿ ಇವರು ಸ್ಥಾಪಿಸಿರುವ ‘ನಾರಾಯಣ ಶರ್ಮ ಸಂಸ್ಕೃತಿ ಕೇಂದ್ರ’ದ ಮೂಲಕ ಶ್ರೀವೈಷ್ಣವ ಹರಿದಾಸ ಮಾಲೆಯಲ್ಲಿ ನಾರಾಯಣ ಶರ್ಮರ ಕೀರ್ತನೆಗಳು, ರಂಗದಾಸರ ಕೀರ್ತನೆಗಳು, ಮೂವರು ಶ್ರೀ ವೈಷ್ಣವ ಹರಿದಾಸರ ಕೀರ್ತನೆಗಳು, ಲಕ್ಷ್ಮೀಶ ಕವಿಯ ಕೀರ್ತನೆಗಳು, ಬೇಲೂರು ವೈಕುಂಠ ದಾಸರ ಕೀರ್ತನೆಗಳು, ಯದುಗಿರಿಯಮ್ಮನ ಕೀರ್ತನೆಗಳು, ನಾರಾಯಣ ಕೀರ್ತನ, ತುಳಸೀದಾಸರ ಕೀರ್ತನೆಗಳು ಪ್ರಕಟಗೊಂಡಿವೆ. ಇದೇ ದಿನ ಹುಟ್ಟಿದ ಸಾಹಿತಿಗಳು : ಕೇಶವಭಟ್ಟ. ಟಿ – ೧೯೨೦ ಶಾರದಮ್ಮ – ೧೯೨೨ ಟಿ.ಎನ್. ಅಚ್ಯುತರಾವ್ – ೧೯೩೯ ಕಾಳೇಗೌಡ ನಾಗವಾರ – ೧೯೪೭ ಭೈರಪ್ಪ. ಕೆ. – ೧೯೪೭ ಲಲಿತಾ ಕೆರಿಮನಿ – ೧೯೫೦

